ಬರೋಬ್ಬರಿ 95 ದೇಶಗಳನ್ನ ಸುತ್ತಿದ ಫ್ಲೈಯಿಂಗ್ ಪಾಸ್‌ಪೋರ್ಟ್ ಜೋಡಿ... ಇನ್ನು ಬಾಕಿ ಇರೋದು 102 ದೇಶಗಳಷ್ಟೇ..!
ಜನಪ್ರಿಯ ಯೂಟ್ಯೂಬ್ ಚಾನೆಲ್ ಫ್ಲೈಯಿಂಗ್ ಪಾಸ್‌ಪೋರ್ಟ್ ಜೋಡಿಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡು ತಾವೀಗ 95 ದೇಶಗಳನ್ನು ಸುತ್ತಿ ಬಂದಿರೋದಾಗಿ ಹೇಳಿದ್ದಾರೆ.
ಕನ್ನಡದ ಮೊದಲ ಜೋಡಿ ಟ್ರಾವೆಲ್ ವ್ಲೋಗರ್ (Kannada travel vlogger couple) ಗಳಾದ ಹಾಗೂ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದ ಜೋಡಿ ಯೂಟ್ಯೂಬರ್ಸ್ ಅಂದ್ರೆ ಅದು ಫ್ಲೈಯಿಂಗ್ ಪಾಸ್‌ಪೋರ್ಟ್ ಜೋಡಿಗಳು. ಈ ಜೋಡಿಗಳ ಟ್ರಾವೆಲ್ ವಿಡಿಯೋಗಳಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ.
ಪ್ರಪಂಚದಲ್ಲಿರುವ ಒಟ್ಟು 197 ದೇಶಗಳಲ್ಲೂ ನಮ್ಮ ಕನ್ನಡ ಬಾವುಟವನ್ನು ಹಾರಿಸುತ್ತೇವೆ ಎಂದು ತಮ್ಮ ಟ್ರಾವೆಲ್ ಆರಂಭಿಸಿರುವ ಈ ಜೋಡಿ, ಈಗಾಗಲೇ ಬರೋಬ್ಬರಿ 95 ದೇಶಗಳನ್ನು ಸುತ್ತಿದ್ದು, ಇನ್ನೂ ನೂರು ದೇಶಗಳು ಬಾಕಿ ಇವೆ. ಆ ಬಗ್ಗೆ ಜೋಡಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದೆ.
ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಒಂದಷ್ಟು ಟ್ರಾವೆಲ್ ಫೋಟೊಗಳನ್ನು ಶೇರ್ ಮಾಡಿರುವ ಫ್ಲೈಯಿಂಗ್ ಪಾಸ್‌ಪೋರ್ಟ್ (flying passport) ಜೋಡಿ 95 ದೇಶಗಳನ್ನು ಪೂರ್ಣಗೊಳಿಸಲಾಗಿದೆ, ಇನ್ನೂ 102 ಇನ್ನೂ ಹೋಗಬೇಕಾಗಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಈ ಜೋಡಿ ಬಗ್ಗೆ ಹೇಳೋದಾದರೆ ಫ್ಲೈಯಿಂಗ್ ಪಾಸ್‌ಪೋರ್ಟ್ ಎನ್ನುವ ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಜನಪ್ರಿಯತೆ ಪಡೆದ ಇವರ ಹೆಸರು ಕಿರಣ್ ಹಾಗೂ ಆಶಾ. ಈ ಅಚ್ಚ ಕನ್ನಡ ಜೋಡಿಗಳು ಪ್ರಪಂಚ ಪರ್ಯಟನೆಗೆ ಇಳಿಸಿದಿದ್ದು, ವಿವಿಧ ದೇಶಗಳಿಗೆ ತೆರಳಿ ಅಲ್ಲಿಯ ಸಂಸ್ಕೃತಿಯನ್ನು ಅನಾವರಣ ಮಾಡುತ್ತಾರೆ.
ಯಾವುದೇ ದೇಶಕ್ಕೆ ಹೋದರೂ, ಅಲ್ಲಿನ ಸುಂದರ ಪ್ರಕೃತಿ, ಪರಿಸರ, ಆಹಾರ, ಸಂಸ್ಕೃತಿ ಹಾಗೂ ಅಲ್ಲಿ ಅವರು ಎಂಜಾಯ್ ಮಾಡಿದ ಕ್ಷಣಗಳು, ಅನುಭವಿಸಿದ ನೋವು ಎಲ್ಲವನ್ನೂ ಅಚ್ಚ ಕನ್ನಡದಲ್ಲಿ ಜನರಿಗೆ ತಿಳಿಸುತ್ತಿದ್ದರು, ಹಾಗಾಗಿಯೇ ಈ ಜೋಡಿ ಕನ್ನಡಿಗರಿಗೆ ತುಂಬಾನೆ ಹತ್ತಿರವಾದರು.
ವಿದೇಶ ಪ್ರವಾಸ ಕೈಗೊಳ್ಳುವ ಕಿರಣ್-ಆಶಾ ಅಲ್ಲಿಯ ಸಣ್ಣ ಸಣ್ಣ ಗ್ರಾಮಗಳಿಗೂ ಭೇಟಿ ನೀಡಿ, ಅಲ್ಲಿನ ಜನರ ಜೊತೆ ಮಾತನಾಡಿ ಅವರ ಸಂಸ್ಕೃತಿ, ಜೀವನಶೈಲಿ, ಆಹಾರ ಹೀಗೆ ಹಲವು ವಿಷಯಗಳನ್ನು ಕನ್ನಡಿಗರಿಗೆ ಪರಿಚಯ ಮಾಡಿಸುತ್ತಿರುತ್ತಾರೆ. ಜೊತೆಗೆ ಹೋದಲ್ಲೆಲ್ಲಾ ಕನ್ನಡದ ಬಾವುಟವನ್ನು ಹಾರಿಸುವ ಮೂಲಕ ಕನ್ನಡಾಭಿಮಾನ್ವನ್ನು ಮೆರೆಯುತ್ತಾರೆ ಈ ಜೋಡಿ.
ತಮ್ಮ ಪ್ರಪಂಚ ಪರ್ಯಟನೆಯ ಜೊತೆ ಜೊತೆಗೆ ಕೆಲಸವನ್ನೂ ಸಹ ಮಾಡುವ ಈ ಜೋಡಿ, ಪ್ರವಾಸದ ದಣಿವಿನ ನಡುವೆಯೂ ಕೆಲಸ ಮಾಡುದಾಗಿ ಹೇಳಿದ್ದಾರೆ. ಜೊತೆಗೆ ಟ್ರಾವೆಲ್ ಮಾಡ್ತಾನೆ ಇವರು ವಿಡೀಯೋ ಎಡಿಟ್ ಮಾಡಿ ಅದನ್ನ ಸೋಶಿಯಲ್ ಮೀಡಿಯಾದಲ್ಲೂ ಅಪ್ ಲೋಡ್ ಮಾಡ್ತಾರೆ.
ಈ ಜೋಡಿ ಸೋಶಿಯಲ್ ಮೀಡಿಯಾದ (social media) ಎಲ್ಲಾ ಪ್ಲ್ಯಾಟ್ ಫಾರ್ಮ್ ಗಳಲ್ಲೂ ಖಾತೆ ತೆರೆದಿದ್ದು, ಫ್ಲೈಯಿಂಗ್ ಪಾಸ್‌ಪೋರ್ಟ್ ಜೋಡಿಗಳ ಇನ್’ಸ್ಟಾಗ್ರಾಂ ಖಾತೆಯಲ್ಲಿ ಮೂರುವರೆ ಲಕ್ಷ ಫಾಲೋವರ್ಸ್ ಇದ್ದಾರೆ. ಅಷ್ಟೇ ಅಲ್ಲ ಯುಟ್ಯೂಬ್‌ನಲ್ಲಿ 5.85 ಲಕ್ಷ ಸಬ್‌ಸ್ಕ್ರೈಬರ್ ಹೊಂದಿದ್ದಾರೆ ಈ ಜೋಡಿ. ಇಲ್ಲಿವರೆಗೆ ಬರೋಬ್ಬರಿ 370 ವಿಡಿಯೋಗಳನ್ನ ಹಾಕಿದ್ದಾರೆ.