Sheikh Hasina verdict Bangladesh: ಬಾಂಗ್ಲಾದೇಶದ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಅವರು ಹಲವರ ಸಾವಿಗೆ ಕಾರಣವಾದ ವಿದ್ಯಾರ್ಥಿ ದಂಗೆ ಪ್ರಕರಣದಲ್ಲಿ ದೋಷಿ ಎಂದು ಅಲ್ಲಿನ ಢಾಕಾದ ವಿಶೇಷ ನ್ಯಾಯ ಮಂಡಳಿಯೂ ಘೋಷಿಸಿದ್ದು, ಮರಣದಂಡನೆ ಶಿಕ್ಷೆಗೆ ಆದೇಶಿಸಿದೆ.

ವಿದ್ಯಾರ್ಥಿ ದಂಗೆ ಪ್ರಕರಣದಲ್ಲಿ ದೋಷಿ: ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು

2024ರ ಜುಲೈ ಹಾಗೂ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ದಂಗೆಯ ವೇಳೆ 1400 ಜನ ವಿದ್ಯಾರ್ಥಿಗಳು ಸಾವಿಗೆ ಕಾರಣವಾದ ಪ್ರಕರಣದಲ್ಲಿ ಬಾಂಗ್ಲಾದೇಶದ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಅವರು ದೋಷಿ ಎಂದು ಅಲ್ಲಿನ ಢಾಕಾದ ವಿಶೇಷ ನ್ಯಾಯಾ ಮಂಡಳಿಯೂ ಘೋಷಿಸಿದ್ದು, ಮರಣದಂಡನೆ ಶಿಕ್ಷೆ ಘೋಷಿಸಿದೆ.

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧದ ಗಂಭೀರ ಆರೋಪಗಳ ವಿಚಾರಣೆ ನಡೆಸುತ್ತಿರುವ ಢಾಕಾದ ವಿಶೇಷ ನ್ಯಾಯ ಮಂಡಳಿಯೂ ಈ ತೀರ್ಪು ನೀಡಿದೆ. ಕಳೆದ ವರ್ಷ ದೇಶದಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಗರಿಷ್ಠ ಶಿಕ್ಷೆಗೆ ಅರ್ಹರು ಎಂದು ನ್ಯಾಯಾಲಯ ಹೇಳಿದೆ. ತೀರ್ಪಿಗೂ ಮುನ್ನ, ಹಸೀನಾ ತಮ್ಮ ವಿರುದ್ಧದ ಆರೋಪಗಳು ಸುಳ್ಳು ಮತ್ತು ಅಂತಹ ತೀರ್ಪುಗಳ ಬಗ್ಗೆ ಕೇರ್ ಮಾಡಲ್ಲ ಎಂದು ಹೇಳಿದ್ದರು.

ಭಾರತದ ಆಪ್ತ ಮಿತ್ರೆಯಾಗಿರುವ ಶೇಕ್ ಹಸೀನಾ, ಕಳೆದ ವರ್ಷ ತಮ್ಮ ದೇಶದಲ್ಲಿ ತಮ್ಮ ಸರ್ಕಾರದ ವಿರುದ್ಧ ದೇಶಾದ್ಯಂತ ನಡೆದ ವಿದ್ಯಾರ್ಥಿ ದಂಗೆ ಹಿಂಸೆಗೆ ತಿರುಗಿದ ನಂತರ ಭಾರತಕ್ಕೆ ಪಲಾಯನ ಮಾಡಿದ್ದರು. ಭಾರತ ಸರ್ಕಾರವು ಅವರಿಗೆ ಆಶ್ರಯ ನೀಡಿತ್ತು. ದೇಶ ತೊರೆಯುವುದಕ್ಕೂ ಮೊದಲೇ ಅವರು ರಾಜೀನಾಮೆ ನೀಡಿ ಭಾರತಕ್ಕೆ ಹಾರಿದ್ದರು. ಇದಾದ ನಂತರ ಅಲ್ಲಿ ನೊಬೇಲ್ ಪುರಸ್ಕೃತ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಜಾರಿಗೆ ಬಂದಿತ್ತು. ಈ ಸರ್ಕಾರವು ಅಧಿಕಾರ ವಹಿಸಿಕೊಂಡ ನಂತರ ವಿದ್ಯಾರ್ಥಿ ದಂಗೆಯ ಬಗ್ಗೆ ತನಿಖೆ ಮಾಡಿದ್ದು, ಢಾಕಾದಲ್ಲಿ ವಿಚಾರಣೆಗೆ ಹಾಜರಾಗುವಂತೆ ಶೇಖ್ ಹಸೀನಾಗೆ ಆದೇಶಿಸಿತು, ಆದರೆ ಅವರು ಬಾಂಗ್ಲಾದೇಶದ ಸಮನ್ಸ್ ಅನ್ನು ಧಿಕ್ಕರಿಸಿದರು.

ಢಾಕಾ ಕೋರ್ಟ್ ತೀರ್ಪಿನಲ್ಲಿ ಏನಿದೆ?

2024 ರಲ್ಲಿ ದೇಶದಲ್ಲಿ ನಡೆದ ಪ್ರತಿಭಟನೆಗಳಲ್ಲಿ 1,400 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿರುವುದರಿಂದ ರಾಷ್ಟ್ರ ಉದ್ವಿಗ್ನಗೊಂಡಿದೆ. ಜುಲೈ ಹಾಗೂ ಆಗಸ್ಟ್ 2024 ರ ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಸುಮಾರು 1,400 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಅಂದಾಜಿಸಿದೆ, ಇದರಲ್ಲಿ ಹೆಚ್ಚಿನವರು ಭದ್ರತಾ ಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಅಲ್-ಜಜೀರಾ ವರದಿ ಮಾಡಿತ್ತು. ವಿದ್ಯಾರ್ಥಿ ದಂಗೆಯನ್ನು ಹತ್ತಿಕಲು ಜೀವಕ್ಕೆ ಮಾರಕವಾದ ಬಲಪ್ರಯೋಗ ಮಾಡಲು ಶೇಕ್ ಹಸೀನಾ ನೇರವಾಗಿ ಆದೇಶ ನೀಡಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ತೀರ್ಪಿನಿಂದಾಗಿ ಬಾಂಗ್ಲಾದೇಶದಾದ್ಯಂತ ಉದ್ವಿಘ್ನತೆ ಹೆಚ್ಚಾಗಿದ್ದು, ಕನಿಷ್ಠ 30 ಕಚ್ಚಾಬಾಂಬ್‌ಗಳು ಸ್ಫೋಟಗೊಂಡಿದ್ದು, 26 ವಾಹನಗಳು ಸುಟ್ಟು ಭಸ್ಮವಾಗಿವೆ. 

ಢಾಕಾ ಟ್ರಿಬ್ಯೂನ್ ಪ್ರಕಾರ, ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ, ಅಲ್ಲಿನ ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಮತ್ತು ಮಾಜಿ ಐಜಿಪಿ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಅವರಿಗೆ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯೂ ಇಂದು ಶಿಕ್ಷೆ ವಿಧಿಸಿದೆ. ಜುಲೈ-ಆಗಸ್ಟ್ 2024 ರ ವಿದ್ಯಾರ್ಥಿಗಳ ದಂಗೆಯ ಸಮಯದಲ್ಲಿ ನಡೆದ ಹತ್ಯೆಗಳು, ಚಿತ್ರಹಿಂಸೆ, ಅನೇಕರಕಣ್ಮರೆಗಳು ಮತ್ತು ಬೆಂಕಿ ಹಚ್ಚುವಿಕೆಯಲ್ಲಿ ಈ ಮೂವರು ಕಮಾಂಡ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ನ್ಯಾಯಮಂಡಳಿ ಹೇಳಿದೆ ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಮತ್ತು ಮಾರಕ ಬಲಪ್ರಯೋಗ ಸೇರಿದಂತೆ ಹಸೀನಾ ಅವರ ಆದೇಶಗಳು ವ್ಯವಸ್ಥಿತ ಹಿಂಸಾಚಾರಕ್ಕೆ ಕಾರಣವಾಗಿವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ತಿಂಗಳುಗಳ ಕಾಲ ವಿಚಾರಣೆಗಳು ಮತ್ತು ಸಾವಿರಾರು ಪುಟಗಳ ಸಾಕ್ಷ್ಯಗಳ ಆಧಾರದ ಮೇಲೆ ಈ ತೀರ್ಪು ನೀಡಲಾಗಿದೆ.

ಹಸೀನಾ ತೀರ್ಪು ಪ್ರಕಟವಾಗುತ್ತಿದ್ದಂತೆ ಕಂಡಲ್ಲಿ ಗುಂಡು ಹಾರಿಸುವ ಆದೇಶ ಜಾರಿ

ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ, ಢಾಕಾದಲ್ಲಿ ಭಾರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾನುವಾರ ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಆಯುಕ್ತ ಶೇಖ್ ಮುಹಮ್ಮದ್ ಸಜ್ಜತ್ ಅಲಿ ಅವರು ಈ ಬಗ್ಗೆ ಮಾತನಾಡಿದ್ದು, ಬೆಂಕಿ ಹಚ್ಚುವ ದಾಳಿಗಳು, ಕಾಕ್‌ಟೇಲ್ ಸ್ಫೋಟಗಳು ಅಥವಾ ಪೊಲೀಸರು ಮತ್ತು ನಾಗರಿಕರಿಗೆ ಹಾನಿ ಮಾಡುವ ಪ್ರಯತ್ನಗಳಲ್ಲಿ ಭಾಗಿಯಾಗುವ ಯಾರಿಗೇ ಆದರೂ ಕಂಡಲ್ಲಿ ಗುಂಡು ಹಾರಿಸಿ ಆದೇಶ ಹೊರಡಿಸಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಇದನ್ನೂ ಓದಿ: ಮಗುವಿಗೆ ಆಟ ಅಮ್ಮನಿಗೆ ಸಂಕಟ: ರೂಮ್‌ ಒಳಗಿಂದ ಲಾಕ್ ಮಾಡ್ಕೊಂಡ ಹೊರಬರಲಾರದೇ ಅಳಲು ಶುರು ಮಾಡಿದ ಪುಟಾಣಿ

ಇದನ್ನೂ ಓದಿ: ಬೀದಿ ಬದಿ ಮೋಮೋಸ್ ಮಾರುವ ಈ ಯುವಕನ ದಿನದ ಗಳಿಕೆ 100000 ಲಕ್ಷ!