ಯೆಮೆನ್ನಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿದ್ದ ನರ್ಸ್ ನಿಮಿಷ ಪ್ರಿಯಾ ಅವರ ಶಿಕ್ಷೆ ರದ್ದಾಗಿರುವುದಾಗಿ ಧರ್ಮಗುರು ಕೆ.ಎ ಪಾಲ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಅವರು ನೀಡಿರೋ ಹೇಳಿಕೆ ಏನು?
ಯೆಮೆನ್ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಗಲ್ಲುಶಿಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಕ್ರೈಸ್ತ ಧರ್ಮಪ್ರಚಾರಕ ಕೆ.ಎ ಪಾಲ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ನಿಮಿಷಾ ಅವರ ಬಿಡುಗಡೆಗೆ, ಭಾರತ ಸರ್ಕಾರ ಇರಾನ್ ಸೇರಿದಂತೆ ಹಲವು ರಾಷ್ಟ್ರಗಳ ಜೊತೆ ಮಾತುಕತೆ ನಡೆದಿತ್ತು. ಅವರ ಮರಣದಂಡನೆಯನ್ನು ಮುಂದೂಡಿದ ನಂತರ ಬಿಡುಗಡೆಗೆ ರಾಜತಾಂತ್ರಿಕ ಪ್ರಯತ್ನಗಳು ಚುರುಕಾಗಿದ್ದವು. ಯೆಮೆನ್ ಜೊತೆ ಉತ್ತಮ ಸಂಬಂಧ ಹೊಂದಿರುವ ರಾಷ್ಟ್ರಗಳ ಜೊತೆ ಮಾತುಕತೆ ನಡೆಸಿ ನಿಮಿಷಾಳ ಬಿಡುಗಡೆಗೆ ಕೇಂದ್ರ ಸರ್ಕಾರ ಪ್ರಯತ್ನಿಸಿದ್ದರು. ಅದೀಗ ಸಫಲವಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪಾಲ್ ಅವರು ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಡಿಯೋದಲ್ಲಿ ಪಾಲ್ ಅವರು, ಯೆಮೆನ್ ರಾಜಧಾನಿ ಸನಾದಲ್ಲಿ ಜೈಲಿನಲ್ಲಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಯೆಮೆನ್ ನಾಯಕರಿಗೆ ಧನ್ಯವಾದ ಅರ್ಪಿಸಿದ ಅವರು ಪ್ರಧಾನಿ ಮೋದಿಯನ್ನು ಶ್ಲಾಘಿಸಿದ್ದಾರೆ. 'ಕಳೆದ 10 ದಿನಗಳಿಂದ ಯೆಮೆನ್ ನಾಯಕರು ಹಗಲಿರುಳು ಶ್ರಮಿಸಿದರು ಎಂದೂ ಅವರು ಹೇಳಿದ್ದಾರೆ. ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲು ಸಹಾಯ ಮಾಡಿದ ಎಲ್ಲ ನಾಯಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ದೇವರ ಆಶೀರ್ವಾದದಿಂದ ನಿಮಿಷಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಮತ್ತು ನಂತರ ಅವರು ಭಾರತಕ್ಕೆ ಹಿಂತಿರುಗಲಿದ್ದಾರೆ. ನಿಮಿಷಾ ಪ್ರಿಯಾ ಅವರನ್ನು ಕರೆದುಕೊಂಡು ಹೋಗಲು ರಾಜತಾಂತ್ರಿಕರನ್ನು ಕಳುಹಿಸುತ್ತಿರುವ ಪ್ರಧಾನಿ ಮೋದಿ ಅವರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದಿರುವ ಪಾಲ್ ಎಂದಿದ್ದಾರೆ.
ನಿಮಿಷಾ ಪ್ರಿಯಾ ಅವರ ಕುಟುಂಬಕ್ಕೆ ಸಹಾಯ ಮಾಡಲು ಸರ್ಕಾರ ವಕೀಲರನ್ನು ನೇಮಿಸಿದೆ, ಅವರು ಯೆಮೆನ್ ಕಾನೂನಿನ ಪ್ರಕಾರ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಇದರೊಂದಿಗೆ, ಷರಿಯಾ ಕಾನೂನಿನಡಿಯಲ್ಲಿ ನಿಮಿಷಾ ಕ್ಷಮಾದಾನ ಪಡೆಯುವ ಪ್ರಯತ್ನಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಕೆಲವು ದಿನಗಳ ಹಿಂದೆ ಭಾರತ ಸರ್ಕಾರವು, ನಾಲ್ವರು ಸದಸ್ಯರ ಮಧ್ಯಸ್ಥಿಕೆ ತಂಡವನ್ನು ಯೆಮೆನ್ಗೆ ಕಳುಹಿಸಲು ಅನುಮತಿ ನೀಡಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಯೆಮೆನ್ ಗೆ ಹೋಗಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವಂತೆ ಸೂಚಿಸಿತ್ತು. ಮಧ್ಯಸ್ಥಿಕೆ ತಂಡ ಯೆಮೆನ್ಗೆ ಹೋಗುವ ಬಗ್ಗೆ ಕೇಂದ್ರ ಪರಿಶೀಲಿಸಲಿ ಎಂದು ನ್ಯಾಯಾಲಯ ಹೇಳಿತ್ತು. ನಿಮಿಷಾ ಪ್ರಿಯಾ ತಾಯಿ ಯೆಮೆನ್‌ನಲ್ಲಿದ್ದಾರೆ. ಕೇಂದ್ರ ಸರ್ಕಾರ ಅರ್ಜಿಯನ್ನು ಪರಿಗಣಿಸುತ್ತದೆ ಎಂದು ಆಕ್ಷನ್ ಕೌನ್ಸಿಲ್ ನ ಕಾನೂನು ಸಲಹೆಗಾರ ಸುಭಾಷ್ ಚಂದ್ರನ್ ವಿಶ್ವಾಸ ವ್ಯಕ್ತಪಡಿಸಿದ್ದರು. ಈಗ ಇವೆಲ್ಲವೂ ಫಲ ಕೊಟ್ಟಿದೆ ಎನ್ನಲಾಗುತ್ತಿದ್ದು, ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆಯಷ್ಟೇ.
ನಿಮಿಷಾ ಪ್ರಿಯಾ ಅವರು 2017ರಲ್ಲಿ ಯೆಮೆನ್ ಪ್ರಜೆಯನ್ನು ಕೊಲೆ ಮಾಡಿದರು ಎಂಬ ಆರೋಪವಿದೆ. ಆಕೆ ತನ್ನ ಪಾಲುದಾರನಾಗಿದ್ದ ತಲಾಲ್ ಅಬ್ದುಲ್ ಮಹ್ದಿಯನ್ನು ಹತ್ಯೆಗೈದಿದ್ದಾರೆ ಎಂದು ಹೇಳಲಾಗಿತ್ತು. 2020ರಲ್ಲಿ ಯೆಮೆನ್ ನ್ಯಾಯಾಲಯವು ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಿತು. ಅವರ ಅಂತಿಮ ಮೇಲ್ಮನವಿಯನ್ನು ಸಹ 2023ರಲ್ಲಿ ತಿರಸ್ಕರಿಸಲಾಯಿತು. ನಿಮಿಷಾ ಪ್ರಿಯಾ ಅವರ ಬಿಡುಗಡೆಗಾಗಿ ಸಂತ್ರಸ್ತ ಕುಟುಂಬದ ಕ್ಷಮೆಯಾಚನೆ ಮತ್ತು ರಕ್ತದ ಹಣವನ್ನು (blood money) ಪಾವತಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಅದು ಕೂಡ ವಿಫಲವಾಯಿತುಎನ್ನಲಾಗಿತ್ತು. ಇದೀಗ ಎಲ್ಲವೂ ಸುಸೂತ್ರವಾಗಿ ಬಗೆಹರಿದಿದೆ ಎನ್ನಲಾಗುತ್ತಿದೆ.
