ಒಂಟೆಯನ್ನು ಸಾಗಾಣಿಕೆ, ಮಾಂಸಕ್ಕಾಗಿ ಬಳಸಲಾಗುತ್ತಿದೆ. ಅದರ ಹಾಲು ಕೂಡ ಅದ್ಭುತ ಶಕ್ತಿ ಹೊಂದಿದೆ. ಆದರೆ ಇದೀಗ ಒಂಟೆಯ ಕಣ್ಣೀರಿಗೆ ಕೋಟಿ ಕೋಟಿ ರೂ. ಬೆಲೆ ಬಂದಿದೆ. ಏನಿದು ಹೊಸ ಸಂಶೋಧನೆ?
‘ಮರುಭೂಮಿಯ ಹಡಗು’ ಎಂದೇ ಕರೆಯಲಾಗುವ ವಾಹನ ಎಂದರೆ ಒಂಟೆ. ಒಂಟೆಯಿಲ್ಲದೇ ಮರಭೂಮಿಯ ದಿನನಿತ್ಯದ ಕಾರ್ಯಗಳನ್ನು ಊಹಿಸಿಕೊಳ್ಳುವುದೇ ಅಸಾಧ್ಯ. ಸರಕು ಸಾಗಾಣೆಗೆ ಒಂಟೆ ಬೇಕೇ ಬೇಕು. ಇದರ ಜೊತೆಗೆ ಹಲವು ಕಡೆಗಳಲ್ಲಿ ಮಾಂಸಕ್ಕಾಗಿಯು ಒಂಟೆಗಳನ್ನು ಬಳಸಲಾಗುತ್ತದೆ. ಆದರೆ, ಇದೀಗ ಒಂಟೆಯ ಕಣ್ಣೀರು ಮತ್ತು ಮೂತ್ರಕ್ಕೆ ಕೋಟಿ ಕೋಟಿ ಬೆಲೆ ಬಂದಿದೆ. ಇದರ ಕಣ್ಣೀರಿನ ಸಂಗ್ರಹಕ್ಕೆ ಹಲವಾರು ರೀತಿಯ ಟೆಕ್ನಿಕ್ಗಳನ್ನು ಉಪಯೋಗಿಸಲಾಗುತ್ತಿದೆ. ಅಷ್ಟಕ್ಕೂ ಯಾಕಿಷ್ಟು ಬೇಡಿಕೆ ಎನ್ನುವುದನ್ನು ನೋಡುವುದಾದರೆ, ಒಂಟೆಯ ಒಂದು ಹನಿ ಕಣ್ಣೀರು 26 ಹಾವಿನ ವಿಷ ತಟಸ್ಥಗೊಳಿಸುವ ಶಕ್ತಿ ಹೊಂದಿದೆ ಎನ್ನುವ ಅಂಶ ತಿಳಿದುಬಂದಿದೆ. ಬಿಕಾನೇರ್‌ನಲ್ಲಿರುವ ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರ ನಡೆಸಿದ ಅಧ್ಯಯನ ಬಹಿರಂಗಪಡಿಸಿದೆ. ಇದರ ಜೊತೆಗೆ ಮೂತ್ರದಲ್ಲಿ ಕೂಡ ಔಷಧೀಯ ಶಕ್ತಿ ಇರುವುದಾಗಿ ತಿಳಿದುಬಂದಿದ್ದು, ಮೂತ್ರದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯುತ್ತಿದೆ.
ದುಬೈನಲ್ಲಿರುವ ಈ ಲ್ಯಾಬ್‌ನಲ್ಲಿ ಈ ಸಂಶೋಧನೆಯನ್ನು ಹಲವು ವರ್ಷಗಳ ಹಿಂದೆ ಮಾಡಲಾಗಿದ್ದರೂ, ಹಣದ ಕೊರತೆಯಿಂದ ಇದನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಸಿವಿಆರ್‌ಎಲ್‌ಗೆ ಹಣದ ವ್ಯವಸ್ಥೆ ಮಾಡಲಾಗುವುದು ಮತ್ತು ಅವರ ಯೋಜನೆಯು ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಸ್ಥಳೀಯ ಸಂಸ್ಥೆ ಭರವಸೆ ನೀಡಿದೆ. ಸದ್ಯ ಕಣ್ಣೀರಿನ ವಿಷಯಕ್ಕೆ ಬರುವುದಾದರೆ, ಅಪಾಯಕಾರಿ ಹಾವಿನ ವಿಷವವನ್ನು ನಿಷ್ಕ್ರೀಯಗೊಳಿಸುವ ಶಕ್ತಿ ಒಂಟೆಯ ಕಣ್ಣೀರಿನಲ್ಲಿ ಪತ್ತೆಯಾಗಿದ್ದು, ಭವಿಷ್ಯದಲ್ಲಿ ಜನರ ಜೀವ ಉಳಿಸಲು ಇದು ತುಂಬಾ ಉಪಯುಕ್ತವಾಗಿದೆ ಎಂದು ಹೇಳಲಾಗಿದೆ. ಪ್ರಪಂಚದಾದ್ಯಂತ, ಹಾವು ಕಡಿತದಿಂದ ಪ್ರತಿ ವರ್ಷ ಸುಮಾರು 1.25 ಲಕ್ಷ (1,25,000) ಜನರು ಸಾಯುತ್ತಾರೆ. ಹಾವು ತುಂಬಾ ವಿಷಕಾರಿಯಾಗಿದ್ದರೆ ಅದರಿಂದ ಕಚ್ಚಿದ ಯಾವುದೇ ವ್ಯಕ್ತಿ ಬದುಕಲು ಸಾಧ್ಯವಿಲ್ಲ.
ಸಂಶೋಧನೆಯ ಬಳಿಕ, ಈ ಸಂಸ್ಥೆ, ಒಂಟೆ ಕಣ್ಣೀರಿನ ಮೂಲಕ ಹಾವಿನ ವಿಷವನ್ನು ನಿಷ್ಕ್ರೀಯಗೊಳಿಸಲು ಪ್ರತಿವಿಷವನ್ನು ತಯಾರಿಸಬಹುದು ಎಂದಿದೆ. ಈ ಕುರಿತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ವಾರ್ನರ್ ಮಾತನಾಡಿದ್ದು, ಜಗತ್ತಿನಲ್ಲಿ, ಹಾವಿನ ವಿಷವನ್ನು ಕಡಿಮೆ ಮಾಡಲು ಔಷಧವನ್ನು ಕುದುರೆ ಮತ್ತು ಕುರಿಗಳಿಂದ ತಯಾರಿಸಲಾಗುತ್ತದೆ. ಆದರೆ, ಅದಕ್ಕಿಂತಲೂ ಬಲವಾದ ಔಷಧ ಒಂಟೆಯ ಕಣ್ಣೀರಿನಲ್ಲಿ ಇದೆ ಎಂದಿದ್ದಾರೆ. ಇದರಲ್ಲಿ ಅನೇಕ ರೀತಿಯ ಪ್ರೋಟೀನ್‌ಗಳು ಕಂಡುಬರುತ್ತವೆ. ಇವು ಸೋಂಕಿನಿಂದ ರಕ್ಷಿಸುತ್ತವೆ.
ಒಂಟೆ ಕಣ್ಣೀರಿನ ಕುರಿತು ಭಾರತದಲ್ಲಿಯೂ ಸಂಶೋಧನೆ ನಡೆಯುತ್ತಿದೆ. ಮಾನವನ ಅನೇಕ ರೀತಿಯ ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹ ಒಂಟೆಯ ಕಣ್ಣೀರು ಸಹಕಾರಿಯಾಗಿದೆ. ಇದಾಗಲೇ ಒಂಟೆ ಹಾಲಿಗೆ ಸಾಕಷ್ಟು ಬೇಡಿಕೆ ಇದ್ದು, ಹೆಚ್ಚಿನ ಬೆಲೆಗೆ ಮಾರಾಟವಾಗುವುದಲ್ಲದೆ ಲಾಭದಾಯಕವೂ ಆಗಿದೆ. ಒಂಟೆ ಕಣ್ಣೀರು ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಕೀಟಗಳನ್ನು ತಡೆಯುವ ಲೈಸೋಜೈಮ್‌ಗಳನ್ನು ಹೊಂದಿರುತ್ತದೆ. ಕಣ್ಣೀರು ಮಾತ್ರವಲ್ಲ, ಮೂತ್ರಕ್ಕೂ ಔಷಧೀಯ ಶಕ್ತಿ ಇದೆ, ಅದನ್ನು ಸಹ ಔಷಧಕ್ಕೆ ಬಳಸಲಾಗುತ್ತದೆ. ಅದಕ್ಕಾಗಿಯೇ ಇದೀಗ ಒಂಟೆಯ ಕಣ್ಣೀರಿಗೆ ಕೋಟಿ ಕೋಟಿ ಬೆಲೆ ಬಂದಿದೆ.
