ಮರಿಯೊಂದಿಗೆ ಬಂದ ಆನೆಯೊಂದು ಮೊಸಳೆಯನ್ನು ಜಿರಳೆಯನ್ನು ತುಳಿದಂತೆ ತುಳಿದು ಕೆರೆಯಿಂದ ಓಡಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆನೆಗಳು ತಮ್ಮ ಮರಿಗಳೊಂದಿಗೆ ಇದ್ದರೆ ಸದಾ ಜಾಗರೂಕರಾಗಿರುತ್ತವೆ. ತಮ್ಮ ಮರಿಗಳನ್ನು ಬಹಳ ಜತನದಿಂದ ಕಾಪಾಡುವ ಆನೆಗಳು ತಮ್ಮ ಮರಿಗಳ ಸುದ್ದಿಗೆ ಯಾರಾದರೂ ಬಂದರೆ ಅವರ ಕತೆ ಫಿನಿಶ್ ಮಾಡೋದ್ರಲ್ಲಿ ಡೌಟೇ ಇಲ್ಲ. ಹಿಂಡಿನಲ್ಲಿ ಮರಿಗಳಿವೆ ಎಂದಾದರೆ ಆನೆಗಳು ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಎಚ್ಚರದಿಂದ ಇರುತ್ತವೆ. ಮರಿ ಆನೆಗಳನ್ನು ನಡುವೆ ಬಿಟ್ಟು ಅಕ್ಕಪಕ್ಕ ಹಿಂದೆ ಮುಂದೆ ದೊಡ್ಡಾನೆಗಳು ಹೆಜ್ಜೆ ಹಾಕುತ್ತವೆ.

ಅಪಾಯವನ್ನು ಬಹಳ ಬೇಗನೇ ಗೃಹಿಸುವ ಆನೆಗಳು ಭೂಮಿಯ ಬುದ್ಧಿವಂತ ಪ್ರಾಣಿಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ತಾಯಿ ಆನೆಗಳು ಮರಿ ಆನೆಗಳ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಸ್ವಲ್ಪ ಅಪಾಯ ಕಂಡರು ಕೂಡಲೇ ಜಾಗೃತವಾಗಿ ಬಿಡುತ್ತವೆ. ಅದಕ್ಕೊಂದು ಉತ್ತಮ ಉದಾಹರಣೆ ಎಂಬಂತೆ ಇಲ್ಲೊಂದು ವೀಡಿಯೋ ವೈರಲ್ ಆಗಿದೆ.

The Wild Savior ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋದಲ್ಲಿ ಕಾಣುವಂತೆ ಕಾಡಿನ ಮಧ್ಯೆ ಮಳೆ ನೀರು ನಿಂತ ಸಣ್ಣ ಕೃತಕ ಕೆರೆಯಂತಹ ಜಾಗಕ್ಕೆ ಆನೆಯೊಂದು ತನ್ನ ಮರಿಯ ಜೊತೆ ಬಂದಿದೆ. ತಾಯಿಯ ಜೊತೆ ಬಂದ ಮರಿ ಆನೆ ನೀರು ಕಂಡಂತೆ ಪುಟ್ಟ ಮಕ್ಕಳಂತೆ ನೀರಿನ ಮೇಲೆ ಬಿದ್ದುಕೊಂಡಿದೆ. ಅಷ್ಟರಲ್ಲಿ ತಾಯಿ ಆನೆಗೆ ಕೆಸರಿನ ನೀರಿನೊಳಗೆ ದೊಡ್ಡ ಗಾತ್ರದ ಮೊಸಳೆ ಇರುವುದು ಗಮನಕ್ಕೆ ಬಂದಿದ್ದು, ಮರಿಯೂ ಜೊತೆಗಿರುವುದರಿಂದ ಅಪಾಯವರಿತ ಆನೆ ಕೂಡಲೇ ಆ ಹೊಂಡದಲ್ಲಿದ್ದ ಮೊಸಳೆಯನ್ನು ಕಾಲಿನಲ್ಲಿ ಒದ್ದಿದೆ.

ವೀಡಿಯೋ ಇಲ್ಲಿದೆ ನೋಡಿ

ಆನೆಯ ಒಂದೇ ಒಂದು ಕಿಕ್‌ಗೆ ಮೊಸಳೆ ಕೆಸರು ನೀರಿನಿಂದ ಎದ್ದು, ಮೆಲ್ಲನೆ ಮೇಲೆ ಹತ್ತಿ ದಡಕ್ಕೆ ಓಡುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ತಾಯಿಯ ರೌದ್ರತೆ ನೋಡಿದ ಮರಿಯಾನೆಯೂ ಕೂಡ ನೀರಿನಿಂದ ಒಮ್ಮೆಲೇ ಮೇಲೆದ್ದು, ತಾಯಿಯ ಕೆಳಗೆ ಅಡಗಿಕೊಂಡಿರುವುದನ್ನು ನೋಡಬಹುದಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ತಾಯಿಯ ಸೂಕ್ಷ್ಮತೆ ಹಾಗೂ ಮರಿಯನ್ನು ರಕ್ಷಿಸುವುದಕ್ಕೆ ಸದಾ ಜಾಗೃತವಾದ ಸ್ಥಿತಿಗೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆ ಆದ ದೃಶ್ಯ ಇದಾಗಿದೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ The Wild Savior ಪೇಜ್ ಹೀಗೆ ಬರೆದುಕೊಂಡಿದೆ. ತಾಯಿ ಆನೆ ಕೊಳದಿಂದ ಮೊಸಳೆಯನ್ನು ಹೊರಗೆಸೆದಿದ್ದಾಳೆ. ತಾಯಿ ಆನೆ ಭೂಮಿಯ ಮೇಲಿನ ಅತ್ಯಂತ ರಕ್ಷಣಾತ್ಮಕ ಪ್ರಾಣಿಗಳಲ್ಲಿ ಒಂದಾಗಿದೆ. ಅಧ್ಯಯನಗಳಲ್ಲಿ ತಿಳಿದಂತೆ ಅವು ತಮ್ಮ ಮರಿಗಳ ಬಳಿ, ವಿಶೇಷವಾಗಿ ನೀರಿನ ಸುತ್ತಲೂ, ಮರಿ ಆನೆಗಳಿದ್ದಾಗ ಹೆಚ್ಚು ದುರ್ಬಲವಾಗಿರುವ ಸ್ಥಳಗಳಲ್ಲಿ ಯಾವುದೇ ಬೆದರಿಕೆಯ ಸೂಚನೆಗೆ ತಕ್ಷಣ ಪ್ರತಿಕ್ರಿಯಿಸುತ್ತವೆ.

ಕ್ರುಗರ್ ರಾಷ್ಟ್ರೀಯ ಉದ್ಯಾನವನದಂತಹ ಪ್ರದೇಶಗಳಲ್ಲಿ, ನೇರ ಮುಖಾಮುಖಿಯಿಲ್ಲದೆ ಸಂಭಾವ್ಯ ಪರಭಕ್ಷಕಗಳನ್ನು ಬೆದರಿಸಲು ಹೆಣ್ಣಾನೆಗಳು ನೆಲ ಅಥವಾ ನೀರಿನ ಮೇಲ್ಮೈಯನ್ನು ತುಳಿಯುವುದನ್ನು ಸಂಶೋಧಕರು ಗಮನಿಸಿದ್ದಾರೆ. ಆನೆಗಳ ಈ ಸೂಕ್ಷ್ಮತೆ ಹೆಚ್ಚಾಗಿ ಕೆಲಸ ಮಾಡುತ್ತದೆ. ಮತ್ತೊಂದೆಡೆ, ಮೊಸಳೆಗಳು ಹೆಚ್ಚು ಅವಕಾಶವಾದಿಗಳಾಗಿವೆ. ಅವು ಸಾಮಾನ್ಯವಾಗಿ ದೊಡ್ಡ ಪ್ರಾಣಿಗಳ ದಾಳಿ ತಪ್ಪಿಸುತ್ತವೆಯಾದರೂ, ಕಾವಲು ಇಲ್ಲದೆ ಇದ್ದರೆ ಆನೆಯ ಮರಿಗಳ ಮೇಲೆ ದಾಳಿ ಮಾಡುತ್ತವೆ. ಅವುಗಳ ಶಕ್ತಿಯ ಹೊರತಾಗಿಯೂ, ಹೆಚ್ಚಿನ ಮೊಸಳೆಗಳಿಗೆ ದೈತ್ಯ ಗಾತ್ರದ ಆನೆಗಳನ್ನು ಎದುರಿಸಲಾಗುವುದಿಲ್ಲ ಎಂದು ಬರೆದುಕೊಂಡಿವೆ.

ವೀಡಿಯೋ ನೋಡಿದ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಜಿರಳೆಯನ್ನು ತುಳಿದಂತೆ ಆನೆ ಮೊಸಳೆಯ ಬಾಲವನ್ನು ತುಳಿಯಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

YouTube video player