ರಾಜಸ್ಥಾನದ ಅಜ್ಮೀರ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ನೀರಿನಲ್ಲಿ ಪ್ರವಾಸಿಗರೊಬ್ಬರು ಕೊಚ್ಚಿಹೋದ ಘಟನೆ ನಡೆದಿದೆ. ಹಾಗೆಯೇ ಗುಜರಾತ್‌ನಲ್ಲಿ ಮೊಸಳೆಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ.
ರಾಜಸ್ಥಾನ/ಗುಜರಾತ್: ರಾಜ್ಯದ ಕರಾವಳಿ ಹಾಗೂ ಮಲೆನಾಡಿ ಭಾಗದಲ್ಲಿ ಧಾರಕಾರ ಮಳೆಯಾಗುತ್ತಿದ್ದು, ಮನೆಯಿಂದ ಹೊರಗೆ ಕಾಲಿಡೋದಕ್ಕೂ ಸಾಧ್ಯವಾಗ್ತಿಲ್ಲ, ಒಗೆದ ಬಟ್ಟೆ ಒಣಗುತ್ತಿಲ್ಲ ಎಂದು ಅಲ್ಲಿನ ಜನ ಗೋಳಾಡುತ್ತಿದ್ದಾರೆ. ಇತ್ತ ದೇಶದ ಹಲವು ಭಾಗಗಳಲ್ಲೂ ಇದೇ ರೀತಿ ಮಳೆ ಸುರಿಯುತ್ತಿದ್ದು, ಕೆಲವು ಕಡೆ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗೆಯೇ ರಾಜಸ್ಥಾನ ಮುಸ್ಲಿಂ ತೀರ್ಥಕ್ಷೇತ್ರ ಅಜ್ಮೀರ್‌ನಲ್ಲೂ ಧಾರಕಾರ ಮಳೆ ಸುರಿದಿದ್ದು, ರಸ್ತೆಯಲ್ಲೇ ನದಿಯಂತೆ ನೀರು ಹರಿದು ಬಂದಿದೆ. ಹೀಗೆ ಅಲ್ಲಿನ ಮಾರ್ಕೆಟ್ ಗಲ್ಲಿಯೊಂದರ ರಸ್ತೆಯಲ್ಲಿ ರಭಸವಾಗಿ ನೀರು ಹರಿದು ಬಂದಿದ್ದು, ಅಲ್ಲಿದ್ದ ಪ್ರವಾಸಿಗರೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಕೆಲ ಮೀಟರ್ ದೂರ ಹೋದ ಘಟನೆ ನಡೆದಿದೆ. ಆದರೆ ಆ ಗಲ್ಲಿಯಲ್ಲಿದ್ದ ಕೆಲವರು ಅವರನ್ನು ಹಿಡಿದು ರಕ್ಷಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಅಜ್ಮೀರ್‌ನ ಖ್ವಾಜಾ ಗರೀಬ್ ನವಾಜ್ ದರ್ಗಾದ ಬಳಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಹರಿಯುವ ಪ್ರವಾಹದ ನೀರಿನಲ್ಲಿ ಕಾಲು ಜಾರಿ ಬಿದ್ದು ನಿಯಂತ್ರಣ ಕಳೆದುಕೊಂಡಿದ್ದು, ಆ ಗಲ್ಲಿಯಲ್ಲಿದ್ದ ಕೆಲ ವ್ಯಪಾರಿಗಳು ಆತನನ್ನು ರಕ್ಷಿಸಿದ್ದಾರೆ. ರಾಜಸ್ಥಾನದ ಕೆಲವು ಸ್ಥಳಗಳಲ್ಲಿ ಕಳೆದ 24ಗಂಟೆಯಿಂದಲೂ ಧಾರಕಾರ ಮಳೆ ಸುರಿಯುತ್ತಿದ್ದು, ಪ್ರವಾಹ ಸ್ಥಿತಿ ನಿರ್ಮಾಣ ಮಾಡಿದೆ. ಅಜ್ಮೀರ್, ಬುಂಡಿ, ಪುಷ್ಕರ್, ಸವಾಯಿ ಮಾಧೋಪುರ್ ಮತ್ತು ಪಾಲಿಯಂತಹ ನಗರಗಳು ನೀರಿನಿಂದ ಆವರಿಸಿದ್ದು, ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಇಲ್ಲಿನ ಅನಾ ಸಾಗರ್ ಸರೋವರದ ನೀರಿನ ಮಟ್ಟವು ಅಪಾಯದ ಮಟ್ಟ ಮೀರಿದೆ.
ವಿಶೇಷವಾಗಿ ಅಜ್ಮೀರ್‌ನಲ್ಲಿ ಮಳೆ ತೀವ್ರ ಪರಿಣಾಮ ಬೀರಿದ್ದು,. ಜನಪ್ರಿಯ ಪ್ರವಾಸಿ ತಾಣವಾದ ಖ್ವಾಜಾ ಗರೀಬ್ ನವಾಜ್ ದರ್ಗಾ ಸೇರಿದಂತೆ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ದರ್ಗಾದ ಸುತ್ತಲಿನ ಲೇನ್‌ಗಳು ಮುಳುಗಿಹೋಗಿದ್ದು, ನೀರು ವೇಗವಾಗಿ ಹರಿಯುತ್ತಿದ್ದು, ಗಲ್ಲಿಗಳ ಮಧ್ಯೆ ಹೊಳೆಗಳಂತೆ ಕಾಣುತ್ತಿದೆ. ಅಜ್ಮೀರ್‌ನ ಲಖನ್ ಕೊಟ್ಡಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಿರಂತರ ಮಳೆಯಿಂದಾಗಿ ಮನೆ ಕುಸಿದಿದೆ. ಆದರೆ ಮನೆ ಮಂದಿ ಮೊದಲೇ ಅಪಾಯ ಗಮನಿಸಿ ಮನೆ ಖಾಲಿ ಮಾಡಿದ್ದರಿಂದ ಅನಾಹುತ ತಪ್ಪಿದೆ.
ರಾಜಸ್ಥಾನದ ವಿಪತ್ತು ನಿರ್ವಹಣಾ ವಿಭಾಗವೂ ಅಜ್ಮೇರ್‌ನಲ್ಲಿ ಈಗಾಗಲೇ 170ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಜೂನ್ 1 ರಂದು ಮಾನ್ಸೂನ್ ಆರಂಭವಾದಾಗಿನಿಂದ ರಾಜಸ್ಥಾನದಲ್ಲಿ ಸರಾಸರಿಗಿಂತ ಶೇ. 126 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದಾಗ್ಯೂ, ಭಾನುವಾರದಿಂದ ರಾಜ್ಯಾದ್ಯಂತ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಜೈಪುರ ಹವಾಮಾನ ಇಲಾಖೆಯ ನಿರ್ದೇಶಕ ರಾಧೇ ಶ್ಯಾಮ್ ಶರ್ಮಾ ಹೇಳಿದ್ದಾರೆ.
ರಸ್ತೆಯಲ್ಲಿ ನಡೆದುಕೊಂಡು ಬಂದ ಮೊಸಳೆ
ಗುಜರಾತ್‌ನ ವಡೋದರಾದಲ್ಲಿ ಆರು ಅಡಿ ಉದ್ದದ ಮೊಸಳೆಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಾಹನಗಳು ಸಾಗುತ್ತಿರುವಾಗಲೇ ಜೊತೆಗೆ ಮೊಸಳೆಯೂ ನಡೆದುಕೊಂಡು ಹೋಗುತ್ತಿದೆ. ಈ ಮೊಸಳೆ ಇಲ್ಲಿನ ವಿಶ್ವಾಮಿತ್ರಿ ನದಿಯಿಂದ ಹೊರಬಂದಿದ್ದು, ಸಮೀಪದ ನರಹರಿ ಆಸ್ಪತ್ರೆ ಬಳಿಯ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಫತೇಗುಂಜ್ ಮುಖ್ಯರಸ್ತೆಯಲ್ಲಿ ಇದರಿಂದ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು.
ವಾಹನ ಸವಾರರು ರಸ್ತೆಯಲ್ಲಿ ಮೊಸಳೆ ಓಡಾಡುವುದನ್ನು ನೋಡಿ ಗಾಬರಿಗೊಂಡಿದ್ದಾರೆ. ನಂತರ ರಕ್ಷಣಾ ತಂಡವನ್ನು ಸ್ಥಳಕ್ಕೆ ಕರೆಸಿ ಮೊಸಳೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ಬೇರೆ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಇತ್ತೀಚಿನ ಮಳೆಯ ನಂತರ ವಿಶ್ವಾಮಿತ್ರಿ ನದಿಯಲ್ಲಿ ನೀರಿನ ಮಟ್ಟ ಏರಿದ್ದರಿಂದ ಮೊಸಳೆ ಹೊರಗೆ ಬಂದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
