ಮಣ್ಣಲ್ಲಿ ಆಡಿ ಮಗುವಿನಂತೆ ಸುಸ್ತಾಗಿ ಮಲಗಿದ ಮರಿಯಾನೆ: ವೀಡಿಯೋ ವೈರಲ್
ಮಣ್ಣಿನಲ್ಲಿ ಆಟವಾಡುವ ಪುಟಾಣಿ ಆನೆ ಮರಿಯ ಮುದ್ದಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುಟಾಣಿ ಮರಿಯಾನೆಗಳು ಪುಟ್ಟ ಮಕ್ಕಳಂತೆ ತುಂಟಾಟವಾಡುವ ಸಾಕಷ್ಟು ವೀಡಿಯೋಗಳನ್ನು ನೀವು ನೋಡಿರಬಹುದು. ಆನೆ ಕ್ಯಾಂಪ್‌ಗಳಲ್ಲಿ ಆನೆಮರಿಗಳು ತಮ್ಮನ್ನು ಸಾಕುವ ಮಾವುತ ಹಾಗೂ ಕವಾಡಿಗರ ಕುಟುಂಬದ ಜೊತೆ ಅವಿನಾಭಾವ ಸಂಬಂಧ ಹೊಂದಿರುತ್ತವೆ. ಅವರ ಜೊತೆ ತರಲೆ ತುಂಟಾಟಗಳನ್ನು ಮಾಡುತ್ತಿರುತ್ತಾರೆ. ಅವರ ಮೇಲೆ ಮಲಗಿ ಬಿಡುವುದು, ಸೊಂಡಿಲಿನಿಂದ ಕಾಲನ್ನು ಹಿಡಿದು ಎಳೆಯುವುದು, ಮಲಗಿದ್ದಾಗ ಸೊಂಡಿಲಿನಿಂದ ತಲೆಗೆ ಮೊಟಕುವುದು ಹೀಗೆ ತರಲೆಗಳನ್ನು ಮಾಡುತ್ತಿರುತ್ತವೆ ಪುಟಾಣಿ ಆನೆಗಳು. ಅದೇ ರೀತಿ ಇಲ್ಲೊಂದು ಆನೆ ಮರಿಯ ವೀಡಿಯೋವೊಂದು ಸಖತ್ ವೈರಲ್ ಆಗಿದೆ. ಮಕ್ಕಳಂತೆ ಮಣ್ಣಲ್ಲಿ ಆಡಿ ಆಡಿ ಸುಸ್ತಾದ ಮರಿಯಾನೆ ಹಾಗೆಯೇ ಮಣ್ಣಿನ ಮೇಲೆ ಬಿದ್ದುಕೊಂಡಿದೆ. ಇದರ ವೀಡಿಯೋ ಈಗ ವೈರಲ್ ಆಗಿದೆ.
ಆನೆಗಳು ಮಣ್ಣಿನ ಸ್ನಾನ ಹಾಗೂ ಕೆಸರಿನ ಸ್ನಾನವನ್ನು ತುಂಬಾ ಇಷ್ಟಪಡುತ್ತವೆ. ಬೇಸಿಗೆಯಲ್ಲಿ ಬಿಸಿಲಿನತಾಪವನ್ನು ಕಡಿಮೆ ಮಾಡಲು ಹಾಗೂ ಚರ್ಮವನ್ನು ಕೀಟಾಣುಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಈ ಮಣ್ಣಿನ ಸ್ನಾನವನ್ನು ಮಾಡುತ್ತವೆ. ಅಂದಹಾಗೆ ಆನೆ ಮರಿ ಹಾಗೂ ಆನೆಗಳ ಗುಂಪು ಮಣ್ಣಿನ ಸ್ನಾನ ಮಾಡುತ್ತಿರುವ ಈ ವೀಡಿಯೋ ಕೀನ್ಯಾದ್ದಾಗಿದೆ. ಆಫ್ರಿಕಾದ ಕೀನ್ಯಾದ ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅನೇಕ ಪ್ರಾಣಿಪ್ರಿಯರು ಈ ಮುದ್ದು ಮರಿಯ ವೀಡಿಯೋಗೆ ಸಖತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
48 ಸೆಕೆಂಡ್‌ನ ವೀಡಿಯೋದಲ್ಲಿ ಪುಟಾಣಿ ಆನೆ ಕೊರ್ಬೆಸ್ಸಾ ತನ್ನ ಮೈ ತುಂಬಾ ಸೊಂಡಿಲಿನಿಂದ ಮಣ್ಣು ಸುರಿದುಕೊಂಡು ಮಣ್ಣಿನಲ್ಲಿ ಆಟವಾಡುತ್ತಿದೆ. ತಲೆಯಿಂದ ಬಾಲದವರೆಗೆ ಸಂಪೂರ್ಣವಾಗಿ ಮಣ್ಣು ಸುರುವಿಕೊಂಡ ಕೊರ್ಬೆಸ್ಸಾ ನಂತರ ಮಣ್ಣಿನಲ್ಲೇ ಬಿದ್ದುಕೊಂಡು ಖುಷಿಯಿಂದ ಹೊರಳಾಡುವುದನ್ನು ಕಾಣಬಹುದಾಗಿದೆ.
ಕೊರ್ಬೆಸ್ಸಾ ನಮ್ಮ ಪ್ರಿತಿಯ ಪುಟ್ಟ ಕಪ್ಪೆ ಮಣ್ಣಿನಲ್ಲಿ ಹೀಗೆ ಬಿದ್ದು ಹೊರಳಾಡುವ ಮೂಲಕ ತನ್ನ ಅಡ್ಡ ಹೆಸರನ್ನು ಶಾಶ್ವತವಾಗಿ ಮಾಡಿಕೊಳ್ಳುತ್ತಿದೆ. ಈಕೆ ತನ್ನ ಕಾಲುಗಳನ್ನು ಮಣ್ಣಿನಲ್ಲಿ ಅದ್ದುವುದಿಲ್ಲ, ಆದರೆ ತಲೆಯಿಂದ ಬಾಲದವರೆಗೆ ತನ್ನನ್ನು ಮಣ್ಣಿನಲ್ಲಿ ಮುಳುಗಿಸಿಕೊಂಡು ಬಿಡುತ್ತಾಳೆ. ಈಕೆ ಕಲುಕು ಕ್ವಾರ್ಟೆಟ್‌ನ ಕಿರಿಯ ಹಾಗೂ ಏಕೈಕ ಮಹಿಳಾ ಸದಸ್ಯೆ, ಅಲ್ಲದೇ ಈಕೆ ಆನೆಗಳ ಬ್ಯಾಂಡ್‌ನ ಕಂಡಕ್ಟರ್ ಹಾಗೂ ಪ್ರಮುಖ ಗಾಯಕಳಾಗಿದ್ದಾರೆ ಎಂದು ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ. ಮರಿಯಾನೆಗಳು ಮಣ್ಣಿನ ಸ್ನಾನವನ್ನು ತುಂಬಾ ಇಷ್ಟಪಡುತ್ತವೆ. ಏಕೆಂದರೆ ಮಣ್ಣು ಅವರನ್ನು ತಂಪಾಗಿಸಿ ದೇಹದ ತಾಪವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಅವುಗಳ ಸೂಕ್ಷ್ಮವಾದ ಚರ್ಮವನ್ನು ಬಿಸಿಲಿನಿಂದ ರಕ್ಷಿಸುತ್ತವೆ.