ಪ್ರವಾಸಿಗರಿದ್ದಾಗಲೇ ಸಫಾರಿ ವಾಹನವನ್ನು ಮೇಲೆತ್ತಿದ್ದ ಒಂಟಿ ಸಲಗ: ವೀಡಿಯೋ ವೈರಲ್

ದಕ್ಷಿಣ ಆಫ್ರಿಕಾದಲ್ಲಿ ಸಫಾರಿ ವಾಹನದ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಘಟನೆ ನಡೆದಿದೆ. ಸಫಾರಿ ಗೈಡ್‌ನ ಸಮಯಪ್ರಜ್ಞೆಯಿಂದ ಪ್ರವಾಸಿಗರ ಪ್ರಾಣ ಉಳಿದಿದೆ.

Elephant lift up tourist s Safari Vehicle watch video

ಆಫ್ರಿಕನ್ ಮೂಲದ ದೊಡ್ಡ ಕಿವಿಗಳ ಬುಶ್ ಆನೆಗಳು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಗಾತ್ರದ ಪ್ರಾಣಿಗಳು ಎಂದು ಪ್ರಸಿದ್ಧಿ ಪಡೆದಿವೆ. ಒಂದು ಸಧೃಡವಾದ ಆನೆಯೂ ಅಂದಾಜು 6 ಸಾವಿರ ಕೇಜಿ ತೂಕವಿರುತ್ತದೆ. ಬಹಳ ಶಕ್ತಿಶಾಲಿಯಾಗಿರುವ ಈ ಆನೆಗಳು ತಮ್ಮ ದೇಹದ ತೂಕದಷ್ಟೇ ತೂಗುವ ವಸ್ತುಗಳನ್ನು ಸುಲಭವಾಗಿ ಮೇಲೆತ್ತಬಲ್ಲವು. ಇವು ಅಸಾಮಾನ್ಯವೇನಲ್ಲ, ಅದರಲ್ಲೂ ಗಂಡು ಆನೆ ಮದವೇರಿದ ಸ್ಥಿತಿಯಲ್ಲಿದ್ದರೆ ಕತೆ ಮುಗಿದೆ ಹೋಯ್ತು. ಅದು ಈ ಸಮಯದಲ್ಲಂತೂ ತನ್ನ ಸಾಮರ್ಥ್ಯಕ್ಕಿಂತ  ಹೆಚ್ಚೆ ಶಕ್ತಿಯನ್ನು ತೋರಿಸುವುದಲ್ಲದೇ ದೊಡ್ಡ ದೊಡ್ಡ ಮರಗಳನ್ನು ಕೂಡ ಎಗರಿ ಬೀಳಿಸಬಲ್ಲದು. ಇಂತಹ ಆನೆಗಳಿರುವ ಪ್ರದೇಶಕ್ಕೆ ಸಫಾರಿ ಹೋದರೆ ಹೇಗಿರುತ್ತದೆ ಎಂಬುದು ಇಲ್ಲೊಂದು ವೀಡಿಯೋದಲ್ಲಿ ಸೆರೆಯಾಗಿದ್ದು, ಎದೆ ಝಲ್ಲೆನಿಸುತ್ತಿದೆ. 

ಹೌದು ಪೇಟೆಯಲ್ಲಿ ವಾಸ ಮಾಡುವ ಜನ ರಜೆ ಬಂದರೆ ಸಾಕು ಅರಣ್ಯ, ರಾಷ್ಟ್ರೀಯ ಉದ್ಯಾನವನ, ರಕ್ಷಿತಾರಣ್ಯಗಳಲ್ಲಿ ಸಫಾರಿ ಹೋಗುತ್ತಾರೆ. ಇಂತಹ ಪ್ರವಾಸಿಗರಿಗೆ ಕೆಲವೊಮ್ಮೆ ಕಾಡುಪ್ರಾಣಿಗಳ ದರ್ಶನವಾಗುತ್ತದೆ. ಕೆಲವು ಪ್ರಾಣಿಗಳು ತಮ್ಮಷ್ಟಕ್ಕೆ ತಾವಿದ್ದರೆ ಮತ್ತೆ ಕೆಲವು ಪ್ರಾಣಿಗಳು ದಾಳಿ ನಡೆಸಲು ಮುಂದಾಗುತ್ತವೆ. ಇದೇ ಕಾರಣಕ್ಕೆ ಸಫಾರಿ ವಾಹನಗಳ ಕಿಟಕಿಗಳಿಗೆ ಕಬ್ಬಿಣದ ನೆಟ್ ಅಳವಡಿಸುವುದನ್ನು ನೀವು ಗಮನಿಸಿರಬಹುದು. ಅದೇ ರೀತಿ ಇಲ್ಲೊಂದು ಕಡೆ ಸಫಾರಿಗೆ ಬಂದ ನಾಡಿನ ಜನರಿಗೆ ಕಾಡಿನಲ್ಲಿದ್ದ ಗಜರಾಜ ತನ್ನ ಉಗ್ರ ರೂಪ ತೋರಿಸಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ಘಟನೆ ಆಫ್ರಿಕಾದಲ್ಲಿ ನಡೆದಿದೆ.

ದಕ್ಷಿಣ ಆಫ್ರಿಕಾದ ಪಿಲನೆಸ್‌ಬರ್ಗ್‌ ಗೇಮ್ ರಿಸರ್ವ್‌ ಪ್ರದೇಶಕ್ಕೆ  ಸಫಾರಿ ವಾಹನದಲ್ಲಿ ಪ್ರವಾಸಿಗರು ಬಂದಿದ್ದು, ಅವರಿಗೆ ಅಲ್ಲಿ ಒಂಟಿ ಸಲಗವೊಂದು ಎದುರು ಸಿಕ್ಕಿದೆ. ಬೊಂಗಾನಿ ಯೆಂಡೆ ಎಂಬ ಸಫಾರಿ ಗೈಡ್ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾಗ ಒಂಟಿ ಸಲಗವೊಂದು ಎದುರಾಗಿದ್ದು, ಇವರಿದ್ದ ವಾಹನವನ್ನು ತನ್ನ ಸೊಂಡಿಲಿನ ಮೂಲಕ ಅರ್ಧದವರೆಗೆ ಮೇಲೆತ್ತಿ ಕೆಳಗೆ ಬಿಟ್ಟಿದೆ.

ಘಟನೆ ನಡೆಯುವ ವೇಳೆ ಹೆಚ್ಚಿನ ಪ್ರವಾಸಿಗರು ವಾಹನ ನಿಲುಗಡೆ ಪ್ರದೇಶದಲ್ಲಿದ್ದರು, ಆರಂಭದಲ್ಲೇ ಆಣೆ ತಮ್ಮತ್ತ ಬರುವುದನ್ನು ಗಮನಿಸಿದ ಅವರು ವಾಹನದಲ್ಲೇ ಮುದುಡಿ ಕುಳಿತಿದ್ದಾರೆ. ಇತ್ತ ಸಫಾರಿ ಗೈಡ್ ಬೊಂಗಾನಿ ಯೆಂಡೆ ಅವರಿಗೂ ಆನೆ ಉಗ್ರರೂಪದಲ್ಲಿರುವುದರ ಅರಿವಾಗಿದ್ದು, ಪ್ರವಾಸಿಗರನ್ನು ಸದ್ದು ಗದ್ದಲವಿಲ್ಲದೇ ಸುಮ್ಮನಿರುವಂತೆ ಹೇಳಿದ್ದಾರೆ. ಇದಾದ ನಂತರ ಬೊಂಗಾನಿ ಅವರು ಆನೆಯನ್ನು ಅದರ ಗುಂಪಿನತ್ತ ಓಡಿಸುವುದಕ್ಕಾಗಿ ಆನೆಯತ್ತ ವಾಹನ ಓಡಿಸಿದ್ದಾರೆ. ಆದರೆ ಸ್ಥಿರವಾಗಿ ನಿಂತ ಆನೆ ಇದ್ಯಾವುದಕ್ಕೂ ಸೊಪ್ಪು ಹಾಕದೇ ತನ್ನತ್ತ ಬಂದ ಸಫಾರಿ ವಾಹನವನ್ನೇ ಮೇಲೆತ್ತಲು ನೋಡಿದೆ. ಇದರಿಂದ ಬೊಗಾನಿ ಜೋರಾಗಿ ಕಿರುಚಿದ್ದಾರೆ. ವೀಡಿಯೋದಲ್ಲಿ ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ಗಪ್‌ಚುಪ್ ಆಗಿ ಕುಳಿತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದಾದ ನಂತರ ಆನೆ ಸುಮ್ಮನಾಗಿದ್ದು, ಪ್ರವಾಸಿಗರ ಪ್ರಾಣ ಉಳಿದಿದೆ. ಒಂದು ವೇಳೆ ಆನೆ ಸಂಪೂರ್ಣವಾಗಿ ಪ್ರವಾಸಿ ವಾಹನವನ್ನು ಮಗುಚಿ ಹಾಕಿದ್ದರೆ ದೊಡ್ಡ ಅನಾಹುತವೇ ಸಂಭವಿಸುವುದರಲ್ಲಿತ್ತು. 


 

Latest Videos
Follow Us:
Download App:
  • android
  • ios