ಒಂದು ಕಾಲದಲ್ಲಿ ಆಪ್ತ ಮಿತ್ರರಾಗಿದ್ದ ಸೌದಿ ಅರೇಬಿಯಾ ಮತ್ತು ಯುಎಇ ನಡುವಿನ ಸಂಬಂಧವು ಈಗ ಸಂಘರ್ಷಕ್ಕೆ ತಿರುಗಿದೆ. ಯೆಮೆನ್‌ನಲ್ಲಿನ ಮಿಲಿಟರಿ ಭಿನ್ನಾಭಿಪ್ರಾಯ, ಆರ್ಥಿಕ ಪೈಪೋಟಿ ಮತ್ತು ಪ್ರಾದೇಶಿಕ ನಾಯಕತ್ವಕ್ಕಾಗಿನ ಹೋರಾಟವು ಈ ಎರಡು ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ಶತ್ರುಗಳನ್ನಾಗಿ ಮಾರ್ಪಡಿಸಿದೆ.
ಮಧ್ಯಪ್ರಾಚ್ಯದ (Middle East) ಅತ್ಯಂತ ಪ್ರಭಾವಶಾಲಿ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಯುಎಇ (UAE) ನಡುವಿನ ದೀರ್ಘಕಾಲದ ಸ್ನೇಹ ಈಗ ಸಂಘರ್ಷಕ್ಕೆ ತಿರುಗಿದೆ. ಒಂದು ಕಾಲದಲ್ಲಿ ಪರಸ್ಪರ ಬೆಂಬಲವಾಗಿ ನಿಲ್ಲುತ್ತಿದ್ದ ಈ ಎರಡು ರಾಷ್ಟ್ರಗಳು ಈಗ ಶತ್ರುಗಳಂತೆ ವರ್ತಿಸುತ್ತಿರುವುದರ ಹಿಂದಿನ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಮಿತ್ರ ರಾಷ್ಟ್ರಗಳ ನಡುವೆ ವೈಮಾನಿಕ ದಾಳಿ: ಯೆಮೆನ್ ನೆಲದಲ್ಲಿ ಸಂಘರ್ಷ
ಡಿಸೆಂಬರ್ 30, 2025ರಂದು ನಡೆದ ಇತ್ತೀಚಿನ ಬೆಳವಣಿಗೆಯು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ಯೆಮೆನ್‌ನ ದಕ್ಷಿಣ ಬಂದರು ನಗರವಾದ ಮುಕಲ್ಲಾ ಮೇಲೆ ಸೌದಿ ಅರೇಬಿಯಾದ ಸೈನ್ಯವು ವೈಮಾನಿಕ ದಾಳಿ ನಡೆಸಿದೆ. ಯುಎಇಗೆ ಸೇರಿದ ಶಸ್ತ್ರಾಸ್ತ್ರಗಳ ಸಾಗಣೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಸೌದಿ ಹೇಳಿಕೊಂಡರೆ, ಅಲ್ಲಿ ಶಸ್ತ್ರಾಸ್ತ್ರಗಳಿರಲಿಲ್ಲ ಎಂದು ಯುಎಇ ವಾದಿಸಿದೆ. ಈ ಘಟನೆಯ ಬೆನ್ನಲ್ಲೇ, ಯೆಮೆನ್‌ನಲ್ಲಿರುವ ಸೌದಿ ಬೆಂಬಲಿತ ಸರ್ಕಾರವು ಯುಎಇ ಸೈನ್ಯಕ್ಕೆ 24 ಗಂಟೆಗಳ ಗಡುವು ನೀಡಿದ್ದು, ಯುಎಇ ಕೂಡ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಮಿಲಿಟರಿ ಸಂಬಂಧ ಕಡಿದುಕೊಂಡಿದೆ.
ಒಂದು ಕಾಲದ ಬಲಗೈ-ಎಡಗೈಯಂತಿದ್ದಸ್ನೇಹ
ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (MBS) ಮತ್ತು ಯುಎಇ ಆಡಳಿತಗಾರ ಮೊಹಮ್ಮದ್ ಬಿನ್ ಜಾಯೆದ್ (MBZ) ಒಂದು ಕಾಲದಲ್ಲಿ ಅತ್ಯಂತ ಆಪ್ತ ಮಿತ್ರರಾಗಿದ್ದರು. ಇಬ್ಬರೂ ಸುನ್ನಿ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ನಾಯಕರಾಗಿದ್ದು, ಇರಾನ್‌ನ ಹೆಚ್ಚುತ್ತಿರುವ ಪ್ರಭಾವ ಮತ್ತು ಇಸ್ಲಾಮಿಕ್ ಮೂಲಭೂತವಾದದ ವಿರುದ್ಧ ಒಗ್ಗಟ್ಟಾಗಿ ನಿಂತಿದ್ದರು. 2011ರ ಬಹ್ರೇನ್ ದಂಗೆ ನಿಗ್ರಹ ಮತ್ತು 2013ರ ಈಜಿಪ್ಟ್ ರಾಜಕೀಯ ಬದಲಾವಣೆಯಲ್ಲಿ ಈ ಎರಡೂ ದೇಶಗಳು ಜಂಟಿಯಾಗಿ ಕೆಲಸ ಮಾಡಿದ್ದವು. ಇವರ ಸ್ನೇಹವು ಗಲ್ಫ್ ರಾಷ್ಟ್ರಗಳ ಶಕ್ತಿಯ ಸಂಕೇತವಾಗಿತ್ತು.
ಎರಡು ಮುಸ್ಲಿಂ ರಾಷ್ಟ್ರಗಳು ಹೇಗೆ ಶತ್ರುಗಳಾದವು,
ಶತ್ರು ರಾಷ್ಟ್ರಗಳ ವಿರುದ್ಧ ಒಟ್ಟಾಗಿ ಹೋರಾಡುತ್ತಿದ್ದ ಈ ದೇಶಗಳು ಈಗ ಯೆಮೆನ್‌ನಲ್ಲಿ ಪರಸ್ಪರರ ವಿರುದ್ಧ ನಿಂತಿವೆ. ಸೌದಿ ಅರೇಬಿಯಾ ಯೆಮೆನ್‌ನ ಅಧಿಕೃತ ಸರ್ಕಾರವನ್ನು ಬೆಂಬಲಿಸುತ್ತಿದ್ದರೆ, ಯುಎಇ ಅಲ್ಲಿನ ಪ್ರತ್ಯೇಕತಾವಾದಿ ಗುಂಪುಗಳಿಗೆ ಬೆಂಬಲ ನೀಡುತ್ತಿದೆ. ಮುಕಲ್ಲಾ ಬಂದರಿನ ದಾಳಿಯು ಈ ಭಿನ್ನಾಭಿಪ್ರಾಯವನ್ನು ಬೀದಿಗೆ ತಂದಿದೆ. ಯುಎಇ ತನ್ನ ಮಿಲಿಟರಿ ಉಪಸ್ಥಿತಿಯನ್ನು ಕೊನೆಗೊಳಿಸುವುದಾಗಿ ಘೋಷಿಸಿರುವುದು ಈ ಬಿಕ್ಕಟ್ಟು ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ.
ಆರ್ಥಿಕ ಪೈಪೋಟಿ: ದುಬೈಗೆ ಸವಾಲು ಹಾಕುತ್ತಿರುವ ರಿಯಾದ್
ಈ ದೇಶಗಳ ವೈಷಮ್ಯಕ್ಕೆ ಕೇವಲ ಯುದ್ಧ ಕಾರಣವಲ್ಲ, ಬದಲಿಗೆ ಆರ್ಥಿಕ ಅಧಿಪತ್ಯದ ಹಪಾಹಪಿಯೂ ಕಾರಣವಾಗಿದೆ. ಯುಎಇ ತನ್ನ 'ವಿಷನ್ 2021' ಮೂಲಕ ದುಬೈ ನಗರವನ್ನು ಜಾಗತಿಕ ವಾಣಿಜ್ಯ ಕೇಂದ್ರವನ್ನಾಗಿ ಮಾಡಿತು. ಈಗ ಸೌದಿ ಅರೇಬಿಯಾ 'ವಿಷನ್ 2030' ಅಡಿಯಲ್ಲಿ 'ನಿಯೋಮ್' ಎಂಬ ಅತ್ಯಾಧುನಿಕ ನಗರವನ್ನು ನಿರ್ಮಿಸುತ್ತಿದ್ದು, ದುಬೈಗೆ ಪೈಪೋಟಿ ನೀಡುತ್ತಿದೆ. ಸೌದಿ ಅರೇಬಿಯಾವು ಯುಎಇಯ ಆಮದುಗಳ ಮೇಲೆ ನಿರ್ಬಂಧ ವಿಧಿಸಿರುವುದು ಮತ್ತು ತನ್ನ ದೇಶದಲ್ಲಿ ಜಾಗತಿಕ ಕಂಪನಿಗಳ ಪ್ರಧಾನ ಕಚೇರಿಗಳನ್ನು ಹೊಂದುವ ಹಠಕ್ಕೆ ಬಿದ್ದಿರುವುದು ಈ ಸ್ನೇಹದ ಕೊಂಡಿಯನ್ನು ಸಡಿಲಗೊಳಿಸಿದೆ.
ಪ್ರಾದೇಶಿಕ ನಾಯಕತ್ವದ ಸಂಘರ್ಷ
ಗಲ್ಫ್ ರಾಷ್ಟ್ರಗಳ ನಾಯಕ ಯಾರು? ಎಂಬ ಪ್ರಶ್ನೆಯೇ ಈ ಇಬ್ಬರು ನಾಯಕರ ನಡುವಿನ ಅಸಲಿ ಯುದ್ಧ. ಯೆಮೆನ್ ಮಾತ್ರವಲ್ಲದೆ ಸುಡಾನ್, ಲಿಬಿಯಾ ಮತ್ತು ಈಜಿಪ್ಟ್ ದೇಶಗಳ ಆಂತರಿಕ ಕಲಹಗಳಲ್ಲಿ ಸೌದಿ ಒಂದು ಬಣವನ್ನು ಬೆಂಬಲಿಸಿದರೆ, ಯುಎಇ ಮತ್ತೊಂದು ಬಣವನ್ನು ಬೆಂಬಲಿಸುತ್ತಿದೆ. ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಮೊಹಮ್ಮದ್ ಬಿನ್ ಜಾಯೆದ್ ನಡುವಿನ ಈ ಪ್ರತಿಷ್ಠೆಯ ಹೋರಾಟವು ಮಧ್ಯಪ್ರಾಚ್ಯದ ಭದ್ರತೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.


