ಊಟ, ತಿಂಡಿ ತಿಂದು ಅಳಿದು ಉಳಿದಿದ್ದನ್ನು ಉದ್ಯಾನದಲ್ಲಿ ಚೆಲ್ಲುತ್ತಿದ್ದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಜೊತೆಗೆ ಇಲಿ, ಹೆಗ್ಗಣಗಳ ಕಾಟವೂ ಜಾಸ್ತಿಯಾಗಿದೆ. 

ಬೆಂಗಳೂರು(ಸೆ.18): ಕಬ್ಬನ್‌ಪಾರ್ಕ್‌ನಲ್ಲಿ ಶ್ವಾನ, ಇಲಿ, ಹೆಗ್ಗಣಗಳ ಕಾಟ ನಿಯಂತ್ರಣಕ್ಕೆ ಮುಂದಾಗಿರುವ ತೋಟಗಾರಿಕೆ ಇಲಾಖೆ ಉದ್ಯಾನದಲ್ಲಿ ಸಾರ್ವಜನಿಕರು, ಪ್ರವಾಸಿಗರ ಆಹಾರ ಸೇವನೆಗೆ ನಿಷೇಧ ಹೇರಿರುವ ಕುರಿತು ಫಲಕಗಳನ್ನು ಪ್ರವೇಶ ದ್ವಾರಗಳಲ್ಲಿ ತೂಗು ಹಾಕಿದೆ.

ಕಬ್ಬನ್‌ಪಾರ್ಕ್‌ನಲ್ಲಿ ಆಹಾರ ಸೇವನೆ ನಿಷೇಧಿಸಿ ಐದಾರು ವರ್ಷಗಳು ಕಳೆದಿವೆ. ಆರಂಭದಲ್ಲಿ ಈ ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಲಾಗಿತ್ತು. ಆದರೆ ಕ್ರಮೇಣ ಮತ್ತೆ ಯಥಾಸ್ಥಿತಿಯಂತೆ ಉದ್ಯಾನದ ಸುತ್ತಮುತ್ತಲ ಕಚೇರಿಗಳ ನೌಕರ, ಸಿಬ್ಬಂದಿಗಳು, ಸಾರ್ವಜನಿಕರು ಉದ್ಯಾನದಲ್ಲೇ ಊಟ, ತಿಂಡಿ ಮಾಡುವುದನ್ನು ಮುಂದುವರೆಸಿದ್ದರು. ಊಟ, ತಿಂಡಿ ತಿಂದು ಅಳಿದು ಉಳಿದಿದ್ದನ್ನು ಉದ್ಯಾನದಲ್ಲಿ ಚೆಲ್ಲುತ್ತಿದ್ದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಜೊತೆಗೆ ಇಲಿ, ಹೆಗ್ಗಣಗಳ ಕಾಟವೂ ಜಾಸ್ತಿಯಾಗಿದೆ.

ಸಂಜೆ 6.30 ನಂತರ ಕಬ್ಬನ್‌ ಪಾರ್ಕ್‌ನಲ್ಲಿ ಜನರ ಪ್ರವೇಶ ನಿಷೇಧಿಸಿ ಆದೇಶ

ಊಟ, ತಿಂಡಿ ತಂದು ತಿಂದ ನಂತರ ಪ್ಲಾಸ್ಟಿಕ್‌ ಕವರ್‌ಗಳು, ಪೇಪರ್‌ಗಳು, ಮೂಳೆಗಳನ್ನು ಹುಲ್ಲು ಹಾಸಿನ ಮೇಲೆಯೇ ಎಸೆದು ಹೋಗುತ್ತಿದ್ದರು. ಇದರಿಂದ ಪರಿಸರಕ್ಕೂ ಧಕ್ಕೆಯಾಗುತ್ತಿತ್ತು. ಹುಲ್ಲು ಹಾಸಿನ ಮೇಲೆ ಚೆಲ್ಲುವ ತ್ಯಾಜ್ಯವನ್ನು ಸ್ವಚ್ಛಗೊಳಿಸುವವರು ಯಾರು? ಇತರರಿಗೂ ಕೂಡ ಇಂತಹ ಸ್ಥಳಗಳಲ್ಲಿ ಕುಳಿತುಕೊಳ್ಳಲು ಹೇಸಿಗೆ ಪಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಹಾಗೆಯೇ ಶ್ವಾನಗಳ ಹಾವಳಿಯಿಂದ ಮಕ್ಕಳು, ಮಹಿಳೆಯರು ಓಡಾಡುವುದಕ್ಕೂ ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಹಾಗಾಗಿ ಹುಲ್ಲು ಹಾಸಿನ ಮೇಲೆ ಆಹಾರ ಸೇವನೆಯನ್ನು 2015ರಲ್ಲೇ ನಿಷೇಧಿಸಲಾಗಿತ್ತು ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶ್ವಾನಗಳು, ಇಲಿ, ಹೆಗ್ಗಣ ಕಾಟ ನಿಯಂತ್ರಣ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ಉದ್ಯಾನದೊಳಗೆ ಆಹಾರ ಸೇವನೆ ನಿಷೇಧಿಸಲಾಗಿದೆ ಎಂದು ಪ್ರವೇಶ ದ್ವಾರಗಳಲ್ಲಿ ಫಲಕಗಳನ್ನು ಹಾಕಲಾಗಿದೆ. ಭದ್ರತಾ ಸಿಬ್ಬಂದಿಗಳು ಕೂಡ ಸಾರ್ವಜನಿಕರು ಅಥವಾ ಪ್ರವಾಸಿಗಳು ಉದ್ಯಾನಕ್ಕೆ ತರುವ ಬ್ಯಾಗ್‌ಗಳನ್ನು ಪರಿಶೀಲಿಸಿ, ಊಟ, ತಿಂಡಿ ಕೊಂಡೊಯ್ಯುವುದಕ್ಕೆ ಅನುಮತಿ ನೀಡುತ್ತಿಲ್ಲ. ನಿಯಮ ಉಲ್ಲಂಘಿಸಿ ಆಹಾರ ತೆಗೆದುಕೊಂಡು ಹೋಗುವವರಿಗೆ ಒಳಗೆ ಪ್ರವೇಶಿಸಲು ತಡೆಯೊಡ್ಡುತ್ತಿದ್ದಾರೆ. ಇದರಿಂದಾಗಿ ಆಗಾಗ ಸಾಕಷ್ಟುಜನರು ಭದ್ರತಾ ಸಿಬ್ಬಂದಿಗಳ ಜೊತೆಗೆ ಜಗಳಕ್ಕೆ ಮುಂದಾಗುತ್ತಿದ್ದಾರೆ. ಆದರೂ ಉದ್ಯಾನದ ಸ್ವಚ್ಛತೆ ದೃಷ್ಟಿಯಿಂದ ಆಹಾರ ಸೇವನೆಗೆ ಅವಕಾಶ ಕಲ್ಪಿಸುತ್ತಿಲ್ಲ ಎನ್ನಲಾಗಿದೆ.

ಆಹಾರ ನಿಷೇಧಕ್ಕೆ ವಿರೋಧ: 

ರಾಜ್ಯದ ಹಲವೆಡೆಯಿಂದ ವಿಧಾನಸೌಧ, ಹೈಕೋರ್ಟ್‌, ಕಬ್ಬನ್‌ಪಾರ್ಕ್ ವೀಕ್ಷಣೆಗೆಂದೇ ಸಾವಿರಾರು ಜನರು ಬೆಂಗಳೂರಿಗೆ ಬರುತ್ತಾರೆ. ಅವರು ಉದ್ಯಾನದಲ್ಲಿ ವಿಶ್ರಾಂತಿ ಪಡೆದು ಆಹಾರ ಸೇವಿಸುವುದು ಸಹಜ. ಆದರೆ, ಆಹಾರ ಸೇವನೆಗೆ ನಿಷೇಧ ಹೇರುವುದು ಸರಿಯಲ್ಲ. ಅದರ ಬದಲು ಉದ್ಯಾನದಲ್ಲಿಯೇ ಊಟ, ತಿಂಡಿ ಸೇವನೆಗೆ ಪ್ರತ್ಯೇಕ ಸ್ಥಳಗಳನ್ನು ಗುರುತು ಮಾಡಿ ಅವಕಾಶ ಕಲ್ಪಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

Bengaluru: ಸಾಕು ನಾಯಿಗಳಿಗೆ ಕಬ್ಬನ್‌ ಪಾರ್ಕ್‌ ಪ್ರವೇಶವಿಲ್ಲ!

ಉದ್ಯಾನಕ್ಕೆ ಏಳು ಪ್ರವೇಶ ದ್ವಾರಗಳಿವೆ. ಎಲ್ಲಾ ದಾರಗಳಲ್ಲೂ ಭದ್ರತಾ ಸಿಬ್ಬಂದಿಯಿರುವುದಿಲ್ಲ. ಜೊತೆಗೆ ಉದ್ಯಾನದೊಳಗೇ ಸಾಕಷ್ಟುವ್ಯಾಪಾರಿಗಳು ತಿಂಡಿ, ತಿನಿಸುಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಕೆಲವು ಸಸ್ಯಾಹಾರಿ ಹಾಗೂ ಮಾಂಸಹಾರಿ ಹೋಟೆಲ್‌ಗಳು ಕೂಡ ಇವೆ. ಇವುಗಳಿಂದ ಸ್ವಚ್ಛತೆಗೆ ಧಕ್ಕೆಯಾಗುವುದಿಲ್ಲವೇ? ಎಂದು ಕೆಲವರು ಕಿಡಿಕಾರಿದ್ದಾರೆ.

ಹುಲ್ಲು ಹಾಸಿನ ಮೇಲೆ ಆಹಾರ ಸೇವನೆ ಮಾಡಬಾರದು ಎಂದು ನಿಷೇಧ ಹೇರಿದ್ದರು. ಮಾಂಸಹಾರ ಸೇವನೆ ಬಳಿಕ ಮೂಳೆಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಇದರಿಂದ ನಾಯಿಗಳ ಹಾವಳಿ ಜಾಸ್ತಿಯಾಗುತ್ತದೆ. ಇಲಿ, ಹೆಗ್ಗಣಗಳ ಕಾಟವು ಹೆಚ್ಚು. ಸ್ವಚ್ಛತೆಗೆ ಧಕ್ಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ದೂರುಗಳು ಬಂದ ಕಾರಣ ತೋಟಗಾರಿಕೆ ಕ್ರಮಕೈಗೊಂಡಿತ್ತು ಅಂತ ಕಬ್ಬನ್‌ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಡಾ.ಉಮೇಶ್‌ ತಿಳಿಸಿದ್ದಾರೆ.