ರಷ್ಯಾದಿಂದ ತೈಲ ಖರೀದಿ ಮೂಲಕ ಉಕ್ರೇನ್ ಯುದ್ಧದ ಬೆಂಕಿಗೆ ಭಾರತ ತುಪ್ಪ ಸುರಿಯುತ್ತಿದೆ ಎಂದು ಆರೋಪಿಸುತ್ತಿದ್ದ ಅಮೆರಿಕ, ಇದೀಗ ಉಕ್ರೇನ್‌ ಯುದ್ಧವನ್ನೇ ಮೋದಿ ಯುದ್ಧ ಎಂದು ಬಣ್ಣಿಸಿದೆ.

ನ್ಯೂಯಾರ್ಕ್‌/ವಾಷಿಂಗ್ಟನ್‌: ರಷ್ಯಾದಿಂದ ತೈಲ ಖರೀದಿ ಮೂಲಕ ಉಕ್ರೇನ್ ಯುದ್ಧದ ಬೆಂಕಿಗೆ ಭಾರತ ತುಪ್ಪ ಸುರಿಯುತ್ತಿದೆ ಎಂದು ಆರೋಪಿಸುತ್ತಿದ್ದ ಅಮೆರಿಕ, ಇದೀಗ ಉಕ್ರೇನ್‌ ಯುದ್ಧವನ್ನೇ ಮೋದಿ ಯುದ್ಧ ಎಂದು ಬಣ್ಣಿಸಿದೆ. ಜೊತೆಗೆ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ನಾಳೆಯೇ ನಾವು ಹೆಚ್ಚುವರಿ ತೆರಿಗೆ ಕಡಿತಕ್ಕೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ವ್ಯಾಪಾರ ನೀತಿಯ ಸಲಹೆಗಾರ ಪೀಟರ್‌ ನವಾರೋ ಹೇಳಿದ್ದಾರೆ.

ಇನ್ನೊಂದೆಡೆ, ‘ ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಟ್ರಂಪ್‌ ಕೂಡ ಭಾರತದ ವಿರುದ್ಧದ ಕ್ರಮಗಳಿಂದ ಹಿಂದೆ ಸರಿಯುವುದಿಲ್ಲ. ಅಮೆರಿಕದ ಉತ್ಪನ್ನಗಳಿಗೆ ತನ್ನ ಮಾರುಕಟ್ಟೆ ತೆರೆಯುವ ವಿಚಾರದಲ್ಲಿ ಭಾರತ ತನ್ನ ಬಿಗಿಪಟ್ಟು ಮುಂದುವರಿಸಿದೆ. ಭಾರತದ ಜತೆಗಿನ ವ್ಯಾಪಾರ ಒಪ್ಪಂದ ಜಟಿಲವಾಗುತ್ತಿದೆ ಎಂದು ಟ್ರಂಪ್‌ರ ಮತ್ತೊಬ್ಬ ಆರ್ಥಿಕ ಸಲಹೆಗಾರ ಕೆವಿನ್‌ ಹಸ್ಸೆಟ್‌ ಕೂಡ ಭಾರತಕ್ಕೆ ಕಟು ಎಚ್ಚರಿಕೆ ನೀಡಿದ್ದಾರೆ.

ಆಫರ್‌, ಎಚ್ಚರಿಕೆ:

ಬ್ಲೂಮ್‌ಬರ್ಗ್‌ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಪೀಟರ್‌ ನವಾರೋ ‘ಭಾರತವು ರಷ್ಯಾದ ಯುದ್ಧೋನ್ಮಾದಕ್ಕೆ ಬೆಂಬಲ ನೀಡುತ್ತಿದೆ. ಒಂದು ವೇಳೆ ಭಾರತ, ಚೀನಾ, ಯುರೋಪ್‌ ದೇಶಗಳು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ಉಕ್ರೇನ್‌ ಯುದ್ಧ ನಿಲ್ಲಲು ಹೆಚ್ಚಿನ ದಿನ ಬೇಕಿಲ್ಲ. ಅಮೆರಿಕದಲ್ಲಿರುವ ಪ್ರತಿಯೊಬ್ಬರೂ ಭಾರತದಿಂದಾಗಿ ನಷ್ಟದಲ್ಲಿದ್ದಾರೆ. ಗ್ರಾಹಕರು ಮತ್ತು ಉದ್ದಿಮೆಗಳು ಎಲ್ಲರೂ ನಷ್ಟ ಎದುರಿಸುತ್ತಿದ್ದಾರೆ. ಭಾರತದ ಭಾರೀ ತೆರಿಗೆಯಿಂದಾಗಿ ನಮ್ಮಲ್ಲಿ ನೌಕರಿ, ಫ್ಯಾಕ್ಟರಿಗಳಿಗೆ ನಷ್ಟ ಆಗುತ್ತಿದೆ. ಅಂತಿಮವಾಗಿ ಇದರಿಂದ ತೆರಿಗೆದಾರರಿಗೆ ನಷ್ಟ ಆಗುತ್ತಿದೆ. ಇದಕ್ಕೆಲ್ಲ ನಾವು ‘ಮೋದಿಯವರ ಯುದ್ಧ’ಕ್ಕೆ ನಿಧಿ ಒದಗಿಸುತ್ತಿರುವುದೇ ಕಾರಣ’ ಎಂದು ಆರೋಪಿಸಿದ್ದಾರೆ.

‘ಮೋದಿಯವರ ಯುದ್ಧ’ ಎಂದಾಗ ಸಂದರ್ಶನಕಾರ ನಿಮ್ಮ ಮಾತಿನ ಅರ್ಥ ‘ಪುಟಿನ್ ಅವರ ಯುದ್ಧ’ವೇ ಎಂದು ಸರಿಪಡಿಸಲು ಪ್ರಯತ್ನಿಸಿದಾಗ, ನವಾರೋ ಮಾತ್ರ ‘ಮೋದಿಯವರ ಯುದ್ಧ’ ಎಂದು ಪುನರುಚ್ಚರಿಸಿದ್ದಾರೆ.

ಇದು ಮೋದಿ ಅವರ ಯುದ್ಧ ಯಾಕೆಂದರೆ, ಉಕ್ರೇನ್‌ ಶಾಂತಿಯ ಮಾರ್ಗ ಭಾಗಶಃ ನವದೆಹಲಿ ಮೂಲಕವೇ ಹಾದುಹೋಗುತ್ತದೆ ಎಂದು ಆರೋಪಿಸಿದರು.

ರಷ್ಯಾದಿಂದ ತೈಲ ಖರೀದಿಸುತ್ತಿರುವ ಕಾರಣ ಅಮೆರಿಕವು ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿದೆ. ರಷ್ಯಾ ತೈಲ ಖರೀದಿ ನಿಲ್ಲಿಸಿದರೆ ಮತ್ತು ಅವರ ಯುದ್ಧೋನ್ಮಾದಕ್ಕೆ ನೆರವು ನೀಡುವುದನ್ನು ಸ್ಥಗಿತಗೊಳಿಸಿದರೆ ನಾಳೆಯೇ ಭಾರತದ ಮೇಲೆ ಹೇರಲಾಗಿರುವ ಹೆಚ್ಚುವರಿ ಶೇ.25ರಷ್ಟು ಹೆಚ್ಚುವರಿ ಶುಲ್ಕ ಕಡಿತಗೊಳಿಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಇದೇ ವೇಳೆ ನರೇಂದ್ರ ಮೋದಿ ಅವರನ್ನು ‘ಮಹಾನ್‌ ನಾಯಕ’ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಭಾರತ ಒಂದು ಪ್ರಬುದ್ಧ ಪ್ರಜಾಪ್ರಭುತ್ವ. ಆ ದೇಶವನ್ನು ಬುದ್ಧಿವಂತರು ಸೇರಿಕೊಂಡು ಮುನ್ನಡೆಸುತ್ತಿದ್ದಾರೆ. ಅವರು ತೆರಿಗೆ ವಿಚಾರದಲ್ಲಿ ಅಹಂಕಾರದಿಂದ ವರ್ತಿಸುತ್ತಿದ್ದಾರೆ. ನಾವು ವಿಶ್ವದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರವಲ್ಲ ಎಂದು ನಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಿದ್ದಾರೆ. ನಿಜ ಏನೆಂದರೆ ಅವರು ಹೆಚ್ಚಿನ ತೆರಿಗೆ ಹಾಕುತ್ತಿದ್ದಾರೆ. ಇದರ ಜತೆಗೆ ನಾವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಿಲ್ಲ ಎಂದೂ ಹೇಳುತ್ತಿದ್ದಾರೆ. ಇದರ ಅರ್ಥವೇನು? ಎಂದು ಪ್ರಶ್ನಿಸಿದರು.

ಭಾರತವು ಕಡಿಮೆ ದರದಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತದೆ. ಆ ತೈಲವನ್ನು ಭಾರತೀಯ ರಿಫೈನರಿಗಳು ರಷ್ಯಾದ ರಿಫೈನರಿಗಳ ಸಹಭಾಗಿತ್ವದಲ್ಲಿ ಸಂಸ್ಕರಣೆ ಮಾಡಿ ವಿಶ್ವಕ್ಕೇ ಮಾರಾಟ ಮಾಡಲಾಗುತ್ತದೆ. ನಂತರ ರಷ್ಯಾವು ಈ ಹಣವನ್ನು ಉಕ್ರೇನ್‌ ಯುದ್ಧಕ್ಕೆ, ಹೆಚ್ಚೆಚ್ಚು ಉಕ್ರೇನಿಯರನ್ನು ಕೊಲ್ಲಲು ಬಳಸುತ್ತದೆ. ತರುವಾಯ ಉಕ್ರೇನ್‌ ನಮ್ಮ ಬಳಿ ಬರುತ್ತದೆ. ಯುರೋಪ್‌ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಮನವಿ ಮಾಡುತ್ತದೆ ಎಂದು ನವಾರೋ ಹೇಳಿದ್ದಾರೆ.

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದ್ದು, ಅದರಂತೆ ನಡೆದುಕೊಳ್ಳಬೇಕು. ಸರ್ವಾಧಿಕಾರಿಗಳ ಜತೆಗೆ ಸೇರಿಕೊಳ್ಳಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ಚೀನಾ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ರಷ್ಯಾದಿಂದ ಭಾರತ ಮತ್ತು ಚೀನಾ ತೈಲ ಖರೀದಿಸುವುದನ್ನು ನಿಲ್ಲಿಸಬೇಕು. ನಾಳೆಯೇ ನೀವು ಇದನ್ನು ಮಾಡಿದರೆ ಯುದ್ಧ ನಿಂತೇ ಬಿಡುತ್ತದೆ. ಇನ್ನು ಯುರೋಪ್‌ ಕೂಡ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ಯುದ್ಧಕ್ಕೆ ಹೋಗಲು ಪುಟಿನ್ ಬಳಿ ಹಣವೇ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಬಗ್ಗೆ ಕಿಡಿ

- ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುವಾಗ ಉಕ್ರೇನ್‌ ಸಮರವನ್ನು ‘ಮೋದಿಯವರ ಯುದ್ಧ’ ಎಂದ ಟ್ರಂಪ್‌ ಸಲಹೆಗಾರ

- ಹೇಳಿದ್ದು ತಪ್ಪಿರಬಹುದು ಎಂದು ‘ಪುಟಿನ್‌ ಯುದ್ಧವೇ’ ಎಂದು ಪ್ರಶ್ನಿಸಿದ ಸಂದರ್ಶನಕಾರ. ಆದರೆ ಮೋದಿ ಯುದ್ಧ ಎಂದ ಸಲಹೆಗಾರ

- ಭಾರತ ರಷ್ಯಾದಿಂದ ಅಗ್ಗದ ತೈಲ ಖರೀದಿಸಿ, ಸಂಸ್ಕರಿಸಿ, ವಿಶ್ವಕ್ಕೆ ಮಾರಾಟ ಮಾಡುತ್ತಿದೆ. ಇದರಿಂದ ರಷ್ಯಾಕ್ಕೆ ಹಣ ಸಿಗುತ್ತಿದೆ

- ಆ ಹಣ ಬಳಸಿ ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡುತ್ತದೆ. ಉಕ್ರೇನ್‌ ಹಣಕ್ಕಾಗಿ ಅಮೆರಿಕ ಬಳಿ ಬರುತ್ತದೆ: ಪೀಟರ್‌ ನವಾರೋ

- ಭಾರತ- ಚೀನಾ ದೇಶಗಳು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ಪುಟಿನ್‌ ಬಳಿ ಹಣ ಇರಲ್ಲ. ಯುದ್ಧ ಕೂಡಲೇ ನಿಲ್ಲುತ್ತೆಂದು ವಾದ