ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಮಹಾನ್ ನಾಯಕ' ಮತ್ತು 'ಅತ್ಯಂತ ಕಠಿಣ ವ್ಯಕ್ತಿ' ಎಂದು ಶ್ಲಾಘಿಸಿದ್ದಾರೆ. ಭಾರತಕ್ಕೆ ರಾಜಕೀಯ ಸ್ಥಿರತೆ ತಂದ ಮೋದಿ, ವಿಶ್ವದ ಇಬ್ಬರು ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಟ್ರಂಪ್ ಬಣ್ಣಿಸಿದ್ದಾರೆ.

ವಾಷಿಂಗ್ಟನ್ (ಜೂ.20): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮೋದಿ ಅವರನ್ನು ಒಬ್ಬ "ಮಹಾನ್ ನಾಯಕ" ಮತ್ತು "ಅತ್ಯಂತ ಕಠಿಣ ವ್ಯಕ್ತಿ" (Very tough guy) ಎಂದು ಬಣ್ಣಿಸಿರುವ ಟ್ರಂಪ್, ವರ್ಷಗಳ ರಾಜಕೀಯ ಅಸ್ಥಿರತೆಯ ನಂತರ ಭಾರತಕ್ಕೆ ಸ್ಥಿರತೆಯನ್ನು ತಂದುಕೊಟ್ಟ ನಾಯಕ ಪ್ರಧಾನಿ ಮೋದಿ ಎಂದು ಕೊಂಡಾಡಿದ್ದಾರೆ. ‘ಆಕ್ಸಿಯೋಸ್’ (Axios) ಮಾಧ್ಯಮ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಭಾರತದ ರಾಜಕೀಯ ಇತಿಹಾಸವನ್ನು ಸ್ಮರಿಸಿದ ಟ್ರಂಪ್, ಪ್ರಧಾನಿ ಮೋದಿ ಅವರು ಸುದೀರ್ಘ ಅವಧಿಗೆ ನಾಯಕರಾಗಿ ಹೊರಹೊಮ್ಮುವ ಮೊದಲು ಭಾರತದಲ್ಲಿ ಸರ್ಕಾರಗಳು ಬಂದು ಹೋಗುತ್ತಿದ್ದನ್ನು ತಾವು ಸೂಕ್ಷ್ಮವಾಗಿ ಗಮನಿಸಿದ್ದಾಗಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೋದಿ ನಾಯಕತ್ವದಲ್ಲಿ ಭಾರತಕ್ಕೆ ಸ್ಥಿರತೆ

"ನಾನು ನನ್ನ ಇಡೀ ಜೀವನದಲ್ಲಿ ಭಾರತವನ್ನು ಗಮನಿಸಿದ್ದೇನೆ. ಅಲ್ಲಿ ಸರ್ಕಾರಗಳು ಮತ್ತು ಪ್ರಧಾನಿಗಳು ಬದಲಾಗುತ್ತಲೇ ಇದ್ದರು. ಯಾರೋ ಒಬ್ಬರು ಆರು ತಿಂಗಳು ಇರುತ್ತಿದ್ದರು, ಇನ್ನೊಬ್ಬರು ಒಂದು ವರ್ಷ ಇರುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಪ್ರಧಾನಿ ಮೋದಿ ಅಲ್ಲಿಗೆ ಬಂದರು. ಅವರು ಈಗ 12 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಅತ್ಯಂತ ದೃಢವಾಗಿ ಮತ್ತು ಸ್ಥಿರವಾಗಿ ಅಧಿಕಾರದಲ್ಲಿದ್ದಾರೆ" ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಅವರ ಪ್ರಕಾರ, ಮೋದಿ ಅವರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಶಾಂತ ಸ್ವಭಾವದ ಸಮತೋಲನವನ್ನು ಹೊಂದಿದ್ದಾರೆ. "ಅವರು ಅತ್ಯಂತ ಶಾಂತವಾಗಿ ಕೆಲಸಗಳನ್ನು ಮಾಡುತ್ತಾರೆ. ಹಾಗಂತ ಅವರೇನು ಮೃದು ಸ್ವಭಾವದವರಲ್ಲ. ಅವರು ತುಂಬಾ ಕಠಿಣ ವ್ಯಕ್ತಿ. ಅವರು ನನಗೆ ತುಂಬಾ ಹತ್ತಿರದಿಂದ ಗೊತ್ತು" ಎಂದು ಟ್ರಂಪ್ ತಿಳಿಸಿದ್ದಾರೆ.

ಜಗತ್ತಿನ ಇಬ್ಬರು ಶ್ರೇಷ್ಠ ನಾಯಕರಲ್ಲಿ ಮೋದಿ ಒಬ್ಬರು!

ಸಂದರ್ಶನದ ವೇಳೆ ಪತ್ರಕರ್ತರು, "ಜಗತ್ತಿನ ಇಬ್ಬರು ಅತ್ಯಂತ ಶ್ರೇಷ್ಠ ನಾಯಕರು ಯಾರು?" ಎಂದು ಪ್ರಶ್ನಿಸಿದರು. ಅಲ್ಲದೆ, ಅವರಲ್ಲಿ ಒಬ್ಬರು ಖಂಡಿತವಾಗಿಯೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇರಬಹುದು ಎಂದು ಪತ್ರಕರ್ತರೇ ಊಹಿಸಿ, ಮತ್ತೊಬ್ಬ ನಾಯಕ ಯಾರು ಎಂದು ಕೇಳಿದರು.

ಈ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ತೆಗೆದುಕೊಂಡರು. "ಮೋದಿ ಅತ್ಯಂತ ಸಮರ್ಥ ನಾಯಕ. ಭಾರತದ ಆರ್ಥಿಕ ಪ್ರಗತಿಯ ಅಂಕಿ-ಅಂಶಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಮೋದಿ ಅವರು ಅನಗತ್ಯ ಯುದ್ಧಗಳಿಂದ ದೂರವಿರುತ್ತಾರೆ, ಅದು ಅವರ ಜಾಣ್ಮೆ. ಭಾರತ ಜಗತ್ತಿನಲ್ಲೇ ಅತ್ಯಂತ ದೊಡ್ಡ ದೇಶ" ಎಂದರು. ನಾಯಕತ್ವದ ಬಗ್ಗೆ ತಮ್ಮದೇ ಆದ ವಿಶ್ಲೇಷಣೆ ನೀಡಿದ ಟ್ರಂಪ್, "ನಾಯಕತ್ವ ಎಂದರೆ ಅದು ಅಧಿಕಾರ, ಪ್ರಭಾವ ಮತ್ತು ಆ ಅಧಿಕಾರವನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯವಾಗಿದೆ. ಮೋದಿ ತುಂಬಾ ಒಳ್ಳೆಯ ವ್ಯಕ್ತಿ ಮತ್ತು ಭಾರತದ ಆರ್ಥಿಕತೆ ಅತ್ಯುತ್ತಮವಾಗಿದೆ. ಅವರು ಯುದ್ಧಗಳಿಂದ ದೂರ ಇರುತ್ತಾರೆ, ಇದು ಸ್ಮಾರ್ಟ್ ನಿರ್ಧಾರ. 150 ಕೋಟಿ ಜನಸಂಖ್ಯೆ ಹೊಂದಿರುವ ಭಾರತವೇ ಸದ್ಯ ಜಗತ್ತಿನ ಅತಿ ದೊಡ್ಡ ದೇಶವಾಗಿದೆ" ಎಂದು ಹೇಳಿದರು.

ವ್ಯಾಪಾರ ಸಂಬಂಧಗಳ ಬದಲಾವಣೆ

ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳ ಬಗ್ಗೆಯೂ ಮಾತನಾಡಿದ ಟ್ರಂಪ್, ಈಗ ಉಭಯ ದೇಶಗಳ ನಡುವಿನ ಬಿಸಿನೆಸ್ ಸಂಪೂರ್ಣ ಬದಲಾಗಿದೆ ಎಂದಿದ್ದಾರೆ. "ಮೋದಿ ಮಹಾನ್ ನಾಯಕ, ನಾವು ಅವರೊಂದಿಗೆ ಸಾಕಷ್ಟು ವ್ಯಾಪಾರ ಮಾಡುತ್ತೇವೆ. ಆದರೆ ಈಗ ನಾವು ನ್ಯಾಯಯುತವಾದ ವ್ಯಾಪಾರ ಮಾಡುತ್ತಿದ್ದೇವೆ. ಈ ಹಿಂದೆ ಭಾರತ ನಮ್ಮನ್ನು ಲೂಟಿ ಮಾಡುತ್ತಿತ್ತು (Rip us off). ಅದಕ್ಕಾಗಿ ನಾನು ಭಾರತವನ್ನು ದೂಷಿಸುವುದಿಲ್ಲ, ನಮ್ಮಲ್ಲಿದ್ದ ಮೂರ್ಖ ರಾಜಕಾರಣಿಗಳು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಈಗ ನಮ್ಮ ನಡುವೆ ದೊಡ್ಡ ಮಟ್ಟದ ಬಿಸಿನೆಸ್ ನಡೆಯುತ್ತಿದೆ. ಅವರು (ಭಾರತ) ಈ ಬಗ್ಗೆ ಅಷ್ಟೇನೂ ಸಂತೋಷವಾಗಿಲ್ಲ, ಏಕೆಂದರೆ ಹಿಂದೆ ಅವರಿಗೆ ಇನ್ನೂ ಹೆಚ್ಚಿನ ಲಾಭ ಸಿಗುತ್ತಿತ್ತು" ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದರು.

ಹಾಲಿವುಡ್‌ನಲ್ಲೂ ಸಿಗದಂತಹ ನಾಯಕರು!

ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಬ್ಬರನ್ನೂ ಹೋಲಿಸಿದ ಟ್ರಂಪ್, ಅವರಿಬ್ಬರೂ ಅಪ್ರತಿಮ ರಾಜಕೀಯ ವ್ಯಕ್ತಿಗಳು ಎಂದು ಹೊಗಳಿದರು. "ಅಧ್ಯಕ್ಷ ಜಿನ್‌ಪಿಂಗ್ ಅದ್ಭುತ ನಾಯಕ, ಕ್ಲಾಸಿಕ್ ವ್ಯಕ್ತಿತ್ವ ಅವರದ್ದು. ಒಂದು ವೇಳೆ ನೀವೇನಾದರೂ ಈ ಇಬ್ಬರ ಮೇಲೆ ಸಿನಿಮಾ ಮಾಡಲು ಹೊರಟರೆ, ಇಂತಹ ಪಾತ್ರಗಳನ್ನು ಮಾಡಲು ನಿಮಗೆ ಹಾಲಿವುಡ್‌ನಲ್ಲೂ ನಟರು ಸಿಗುವುದಿಲ್ಲ" ಎಂದು ಟ್ರಂಪ್ ತಮಾಷೆ ಮಾಡಿದರು.

ಜಿನ್‌ಪಿಂಗ್ ಅವರ ಗಾಂಭೀರ್ಯ ಮತ್ತು ಆತ್ಮವಿಶ್ವಾಸವನ್ನು ಶ್ಲಾಘಿಸಿದ ಟ್ರಂಪ್, ಮೋದಿ ಅವರು ವಿಭಿನ್ನ ರೀತಿಯಲ್ಲಿ ಗೌರವವನ್ನು ಸಂಪಾದಿಸುತ್ತಾರೆ ಎಂದರು. "ಮೋದಿ ಅವರ ಶೈಲಿಯೇ ಬೇರೆ, ಅವರು ಜಗತ್ತಿನಲ್ಲಿ ಅಪಾರ ಗೌರವ ಹೊಂದಿದ್ದಾರೆ. ನಿಜವಾದ ಮೋದಿ ಯಾರೆಂದು ನನಗೆ ಗೊತ್ತು, ಅವರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ‘ಟಫ್ ಕುಕ್ಕಿ’ (Tough Cookie)" ಎಂದು ಟ್ರಂಪ್ ಕೊಂಡಾಡಿದ್ದಾರೆ.

ಕಳೆದ ಒಂದು ವರ್ಷದಿಂದ ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಕೊಂಚ ಬಿರುಕು ಮೂಡಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ರಾನ್ಸ್‌ನಲ್ಲಿ ನಡೆದ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಬುಧವಾರ ಪರಸ್ಪರ ಭೇಟಿಯಾಗಿ, ಉಭಯ ದೇಶಗಳ ನಡುವಿನ ಸಂಬಂಧವನ್ನು ಹಳಿಗೆ ತರಲು ಸುದೀರ್ಘ ಚರ್ಚೆ ನಡೆಸಿದ ಬೆನ್ನಲ್ಲೇ ಟ್ರಂಪ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.