ಧುರಂಧರ್ ಸಿನಿಮಾದಲ್ಲಿ ಉಝೈರ್ ಬಲೂಚ್ ಪಾತ್ರದ ಬಗ್ಗೆ ಬಹುತೇಕರು ನೋಡಿದ್ದೀರಿ. ಇದೀಗ ರಿಯಲ್ ಉಝೈರ್ ಬಲೂಚ್ ಸಹೋದರನ ಮೇಲೆ ಅಪರಿಚಿತನ ಗುಂಡಿನ ದಾಳಿಯಾಗಿದೆ. ಸದ್ಯ ಜುಬೈರ್ ಬಲೂಚ್ ಆರೋಗ್ಯ ಗಂಭೀರವಾಗಿದೆ.

ಕರಾಚಿ (ಜು.31) ರಣವೀರ್ ಸಿಂಗ್ ನಾಯಕನಾಗಿ, ಆದಿತ್ಯ ಧಾರ್ ನಿರ್ದೇಶನದ ಧುರಂಧರ್ ಸಿನಿಮಾ ಭಾರತದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಗಳಿಕೆಯಲ್ಲೂ ದಾಖಲೆ ಬರೆದಿದೆ. ರಹೆಮಾನ್ ಡಕಾಯಿತ್, ಉಜೈರ್ ಬಲೂಚ್, ಪೀಪಲ್ ಅಮನ್ ಕಮಿಟಿ, ಬಡೇ ಸಾಬ್ (ದಾವುದ್ ಇಬ್ರಾಹಿಂ) ಸೇರಿದಂತೆ ಹಲವು ಪಾತ್ರಗಳನ್ನು ತೋರಿಸಲಾಗಿದೆ.ಅಸಲಿ ಪಾತ್ರಗಳನ್ನೇ ಆದಿತ್ಯ ಧರ್ ತೆರೆ ಮೇಲೆ ತಂದಿದ್ದರು. ಈ ಪೈಕಿ ರೆಹಮಾನ್ ಡಕಾಯಿತ್ ಆಪ್ತಸಂಬಂಧಿ ಹಾಗೂ ಪೀಪಲ್ ಅಮನ್ ಕಮಿಟಿ ಮುಖ್ಯಸ್ಥ ಉಝೈರ್ ಬಲೂಚ್ ಸಹೋದರನ ಮೇಲೆ ಅಪರಿಚಿತನ ಗುಂಡಿನ ದಾಳಿಯಾಗಿದೆ. ಕರಾಚಿಯ ಲ್ಯಾರಿ ಕಿಂಗ್ ಎಂದೇ ಗುರುತಿಸಿಕೊಂಡಿದ್ದ ಉಝೈರ್ ಬಲೂಚ್ ಸಹೋದರ ಜುಬೈರ್ ಬಲೂಚ್ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿ ಅಪರಿಚಿತರು ಪರರಾಯಾಗಿದ್ದಾರೆ.

ಮನೆ ಮುಂದೆ ಕುಳಿತಿದ್ದ ಜುಬೈರ್ ಬಲೂಚ್ ಮೇಲೆ ದಾಳಿ

ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಪ್ರಕಾರ, ಜುಬೈರ್ ಬಲೂಚ್ ತಮ್ಮ ಸಿಂಗು ಲೇನ್‌ನಲ್ಲಿರುವ ನಿವಾಸದಲ್ಲಿದ್ದಾಗ ದಾಳಿಯಾಗಿದೆ. ಮನೆ ಮುಂದೆ ಕುಳಿತಿದ್ದ ಸಂದರ್ಭದಲ್ಲಿ ಅಪರಿಚಿತರು ದಾಳಿ ನಡೆಸಿದ್ದಾರೆ. ಜುಬೈರ್ ಬಲೂಚ್ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದೆ. ಬೈಕ್‌ನಲ್ಲಿ ಬಂದ ಅಪರಿಚಿತರು ಕುಳಿತಿದ್ದ ಜುಬೈರ್ ಬಲೂಚ್ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾರೆ. ಇತ್ತ ಕುಟುಂಬಸ್ಥರು ಹಾಗೂ ಸ್ಥಳೀಯರು ತಕ್ಷಣವೇ ಜುಬೈರ್ ಬಲೂಚ್‌ನ ಆಸ್ಪತ್ರೆ ದಾಖಲಿಸಿದ್ದಾರೆ. ಸದ್ಯ ಜುಬೈರ್ ಬಲೂಚ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಇತ್ತೀಚೆಗೆ ರಾಜಕೀಯ ಪಕ್ಷ ಸೇರಿಕೊಂಡಿದ್ದ ಜುಬೈರ್

ಹಲವು ಕ್ರಿಮಿನಲ್ ಪ್ರಕರಣಗಳಿಂದ ಜೈಲಿನಲ್ಲಿದ್ದ ಜುಬೈರ್ ಬಲೂಚ್ 2025ರಲ್ಲಿ ಜಾಮೀನು ಪಡೆದು ಹೊರಬಂದಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ರಾಜಕೀಯ ಪಕ್ಷ ಸೇರಿಕೊಂಡಿದ್ದರು. ಇತ್ತೀಚೆಗಷ್ಟೇ ಪಾರ್ಟಿಯ ಧ್ವಜವನ್ನು ತಮ್ಮ ಮನೆ ಹಾಗೂ ಸ್ಥಳೀಯ ಮಟ್ಟದಲ್ಲಿ ಕಟ್ಟಿ ಪ್ರಚಾರ ಮಾಡಿದ್ದರು. ಉಝೈರ್ ಬಲೂಚ್ ಸದ್ಯ ಜೈಲು ವಾಸದಲ್ಲಿದ್ದರೆ, ಜುಬೈರ್ ಬಲೂಚ್ ಜಾಮೀನಿನ ಮೇಲೆ ಹೊರಗಡೆ ಇದ್ದರು.

ಧುರಂಧರ್ ಸಿನಿಮಾದಲ್ಲಿ ಉಝೈರ್ ಬಲೂಚ್ ಪಾತ್ರವನ್ನು ನಟ ದಿನೇಶ್ ಪಂಡೋರ ನಿರ್ವಹಿಸಿದ್ದರು. ರೆಹಮಾನ್ ಡಕಾಯಿತ್ ಸಾವಿನ ಬಳಿಕ ಲ್ಯಾರಿ ಗ್ಯಾಂಗ್‌ನ ಪ್ರಮುಖನಾಗಿ ಗುರುತಿಸಿಕೊಂಡಿದ್ದರು. ಭಯೋತ್ಪಾದನೆ ಸೇರಿದಂತೆ ಹಲವು ಕ್ರಮಿನಲ್ ಪ್ರಕರಣಗಲ್ಲಿ ಉಜೈರ್ ಬಲೂಚ್ ಶಿಕ್ಷೆ ಅನುಭವಿಸುತ್ತಿದ್ದಾನೆ. ಇತ್ತ ಜುಬೈರ್ ಬಲೂಚ್ ಕರಾಚಿಯಲ್ಲಿ ಮತ್ತೆ ಗ್ಯಾಂಗ್‌ಸ್ಟರ್ ಅಧಿಪತ್ಯ ಸಾಧಿಸಲು ರಾಜಕೀಯ ಪಾರ್ಟಿ ಮೂಲಕ ಎಲ್ಲಾ ತಯಾರಿ ನಡೆಸುತ್ತಿದ್ದ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಈ ದಾಳಿಯಾಗಿದೆ.

ಕರಾಚಿ ಆಪರೇಶನ್ ಬಳಿಕ ಲ್ಯಾರಿಯ ಹಲವು ಗ್ಯಾಂಗ್‌ಸ್ಟರ್‌ಗಳು ದುಬೈ ಹಾಗೂ ಇರಾನ್‌ಗೆ ಪರಾರಿಯಾಗಿದ್ದರು. ಆದರೆ ಅಮೆರಿಕ ಹಾಗೂ ಇರಾನ್ ಸಂಘರ್ಷದಿಂದ ಪರಾರಿಯಾಗಿದ್ದ ಹಲವು ಗ್ಯಾಂಗ್‌ಸ್ಟರ್‌ಗಳು ಪಾಕಿಸ್ತಾನಕ್ಕೆ ಮರಳಿದ್ದಾರೆ. ಇದರಿಂದ ಹಲವೆಡೆ ಘರ್ಷಗಳು ನಡೆಯುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಲ್ಯಾರಿ ವಿರೋಧಿ ಗ್ಯಾಂಗ್‌ಸ್ಟರ್‌ನಿಂದ ಬೆದರಿಕೆ ಎದುರಿಸಿದ್ದರು ಎಂದಿದ್ದಾರೆ.