ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಟ್ರಂಪ್ ಸ್ವಾಗತ. ಪಹಲ್ಗಾಮ್ ದಾಳಿ ನಂತರ ಉದ್ವಿಗ್ನತೆ ಹೆಚ್ಚಿದ್ದರಿಂದ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆಯಾಯಿತು. "ಸಾವಿರ ವರ್ಷಗಳ" ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್, ಎರಡೂ ದೇಶಗಳ ನಾಯಕತ್ವವನ್ನು ಶ್ಲಾಘಿಸಿದರು. ಡ್ರೋಣ್ ದಾಳಿಗಳ ಹೊರತಾಗಿಯೂ ಕದನ ವಿರಾಮ ಒಪ್ಪಂದ ಮುಂದುವರಿಯುವ ಸೂಚನೆಗಳಿವೆ.
ನವದೆಹಲಿ: ಕಾಶ್ಮೀರ ವಿವಾದ ಎಂದಿಗೂ ಮುಗಿಯದ ಸಮಸ್ಯೆ, ಅದರೂ ಅದಕ್ಕೂ ಒಂದು ಪರಿಹಾರವಿದೆ. ಕಾಶ್ಮೀರಕ್ಕೆ ವಿವಾದಕ್ಕೆ "ಸಾವಿರ ವರ್ಷಗಳ ನಂತರ" ಪರಿಹಾರ ಸಿಗುತ್ತದೆಯೇ ಎಂದು ನೋಡೋಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ 26 ನಾಗರಿಕರು ಸಾವನ್ನಪ್ಪಿದ ನಂತರ ಭಾರತೀಯ ಸಶಸ್ತ್ರ ಪಡೆಗಳು ತೆಗೆದುಕೊಂಡ ಮಿಲಿಟರಿ ಕಾರ್ಯಚರಣೆ ಬಳಿಕ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಕದನ ವಿರಾಮಕ್ಕಾಗಿ ಪಾಕಿಸ್ತಾನ ಮೊದಲಿಗೆ ಕರೆ ಮಾಡಿ ಮನವಿ ಮಾಡಿತ್ತು. ಅದಾದ ನಂತರ ಅಮೆರಿಕದ ಮದ್ಯಸ್ಥಿಕೆಯಲ್ಲಿ ಭಾರತ ಒಪ್ಪಿಕೊಂಡ ಒಂದು ದಿನದ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುಥ್ ಎಂಬ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಬಲಿಷ್ಠ ಮತ್ತು ಅಚಲವಾದ ನಾಯಕತ್ವದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ, ಏಕೆಂದರೆ ಈಗಿನ ಆಕ್ರಮಣವನ್ನು ನಿಲ್ಲಿಸುವ ಸಮಯ ಬಂದಿದೆ, ಇದು ಅನೇಕರ ಸಾವು ಮತ್ತು ವಿನಾಶಕ್ಕೆ ಕಾರಣವಾಗಬಹುದಿತ್ತು. ಲಕ್ಷಾಂತರ ಒಳ್ಳೆಯ ಮತ್ತು ಮುಗ್ಧ ಜನರು ಸಾಯಬಹುದಿತ್ತು! ನಿಮ್ಮ ಕೆಚ್ಚೆದೆಯ ಕ್ರಮಗಳಿಂದ ನಿಮ್ಮ ಪರಂಪರೆ ಮತ್ತಷ್ಟು ವೃದ್ಧಿಯಾಗಿದೆ. ಈ ಐತಿಹಾಸಿಕ ಮತ್ತು ವೀರೋಚಿತ ನಿರ್ಧಾರ ತೆಗೆದುಕೊಳ್ಳಲು ಯುಎಸ್ಎ ನಿಮಗೆ ಸಹಾಯ ಮಾಡಲು ಶ್ರಮಿಸಿತು ಎಂದು ನನಗೆ ಹೆಮ್ಮೆ ಇದೆ. ಮಾತುಕತೆ ನಡೆಸದಿದ್ದರೂ ಈ ಎರಡೂ ಮಹಾನ್ ದೇಶಗಳೊಂದಿಗೆ ನಾನು ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ. ಹೆಚ್ಚುವರಿಯಾಗಿ, "ಸಾವಿರ ವರ್ಷಗಳ" ನಂತರ ಕಾಶ್ಮೀರದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದೇ ಎಂದು ನಾನು ಎರಡೂ ದೇಶಗಳ ಜೊತೆಗೆ ಕೆಲಸ ಮಾಡುತ್ತೇನೆ. ಉತ್ತಮ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಭಾರತ ಮತ್ತು ಪಾಕಿಸ್ತಾನದ ಲೀಡರ್‌ಶಿಪ್ ಅನ್ನು ದೇವರು ಆಶೀರ್ವದಿಸಲಿ!!! ಎಂದು ಬರೆದುಕೊಂಡಿದ್ದಾರೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ಗಡಿಯಲ್ಲಿ ಭಾರತ ಮೇ 7 ರಂದು ಉಗ್ರರ ವಿರುದ್ಧ ಆಪರೇಶನ್ ಸಿಂದೂರ್ ಸೇನಾ ಕಾರ್ಯಚರಣೆ ನಡೆಸಿತು. ಇದಾದ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ತೀವ್ರವಾಗಿ ಹೆಚ್ಚಾದ ನಂತರ ಭಾರತ ಮತ್ತು ಪಾಕಿಸ್ತಾನ ಶನಿವಾರ ತಕ್ಷಣ ದನ ವಿರಾಮವನ್ನು ಘೋಷಿಸಿದವು. ಅಮೆರಿಕ ಎರಡೂ ದೇಶಗಳ ಮಧ್ಯಸ್ಥಿಕೆ ವಹಿಸಿತು.
ಉಗ್ರರ ವಿರುದ್ಧದ ದಾಳಿ ಬಳಿಕ ಪಾಕಿಸ್ತಾನವು ಭಾರತದ ಗಡಿ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿತು. ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ದಾಳಿಗಳನ್ನು ಯಶಸ್ವಿಯಾಗಿ ತಡೆದವು, ಆದರೆ ಈ ಸಂಘರ್ಷವು ಪರಮಾಣು ಶಸ್ತ್ರಸಜ್ಜಿತ ಉಭಯ ದೇಶಗಳ ನಡುವೆ ಮುಖಾಮುಖಿಯ ಭಯವನ್ನು ಹೆಚ್ಚಿಸಿತು.
ಅಮೆರಿಕದ ಮಧ್ಯಸ್ಥಿಕೆಯಿಂದ ಭಾರತ ಮತ್ತು ಪಾಕಿಸ್ತಾನ ತಕ್ಷಣಕ್ಕೆ ಒಪ್ಪಿಕೊಂಡರೂ ಮೇ 10 ರ ರಾತ್ರಿ ಭಾರತದ ಮೇಲೆ ಪಾಕಿಸ್ತಾನವು ಸರಣಿ ಡ್ರೋಣ್ ದಾಳಿ ನಡೆಸಿ ಶಾಂತಿಯನ್ನು ಕದಡಿ ಕದನ ವಿರಾಮವನ್ನು ಉಲ್ಲಂಘಿಸಿತು. ಮೇ 12ರಂದು ಎರಡೂ ದೇಶಗಳ ಮುಖ್ಯಸ್ಥರ ಜೊತೆಗೆ ಸಭೆ ನಡೆಯಲಿದೆ.

