ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ವಿಮಾನ ಲ್ಯಾಂಡಿಂಗ್ ಆಗುವಾಗ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ಏರ್ ಟ್ರಾಫಿಕ್ ಕಂಟ್ರೋಲ್ ಸೂಚನೆ ಮೇರೆಗೆ ಪೈಲಟ್ ಲ್ಯಾಂಡಿಂಗ್ ರದ್ದುಗೊಳಿಸಿದ್ದಾರೆ. ಈ ಶಾಕಿಂಗ್ ದೃಶ್ಯದ ವಿಡಿಯೋ ವೈರಲ್ ಆಗುತ್ತಿದೆ.

ದಕ್ಷಿಣ ಕ್ಯಾಲಿಫೋರ್ನಿಯಾ: ಭೂಮಿ ಕಂಪಿಸುತ್ತಿರುವಾಗ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ ಲೈನ್ಸ್ ವಿಮಾನ ಲ್ಯಾಂಡಿಂಗ್ ರದ್ದುಗೊಳಿಸಿದೆ. ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯ ಪ್ರಬಲ ಕಂಪನ ಉಂಟಾದ ಹಿನ್ನೆಲೆಯಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ವಿಮಾನಕ್ಕೆ ಆಕಾಶದಲ್ಲಿಯೇ ಸುತ್ತಲು ಸೂಚಿಸಿದೆ. ಭೂಕಂಪನ ಸಂದರ್ಭದಲ್ಲಿ ವಿಮಾನ ಲ್ಯಾಂಡಿಂಗ್‌ಗೆ ಪ್ರಯತ್ನಿಸುತ್ತಿರುವ ಶಾಕಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.3

ಭೂಕಂಪ ಆಗ್ತಿದೆ, ಲ್ಯಾಂಡಿಂಗ್ ಬೇಡ!

ಡೆಲ್ಟಾ ಏರ್ ಲೈನ್ಸ್ ವಿಮಾನ ರನ್‌ವೇಗೆ ಬರುತ್ತಿದ್ದಂತೆ ಏರ್ ಟ್ರಾಫಿಕ್ ಕಂಟ್ರೋಲರ್ ಮತ್ತು ಪೈಲಟ್‌ಗಳ ನಡುವಿನ ಸಂಭಾಷಣೆ LAX ನ ಲೈವ್ ಸ್ಟ್ರೀಮ್ ವಿಡಿಯೋದಲ್ಲಿ ಸೆರೆಯಾಗಿದೆ. ಭೂಕಂಪನ ಸಂಭವಿಸಿದಾಗ ಕ್ಯಾಮೆರಾ ಅಲುಗಾಡುವುದು ಮತ್ತು ಕಾರುಗಳ ಅಲಾರಂ ಶಬ್ದ ಹಿನ್ನೆಲೆಯಲ್ಲಿ ಕೇಳಿಬರುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. "ಡೆಲ್ಟಾ 1972, ಗೋ ಅರೌಂಡ್. ಇಲ್ಲಿ ದೊಡ್ಡ ಭೂಕಂಪನ ಸಂಭವಿಸಿದೆ" ಎಂದು ಏರ್ ಟ್ರಾಫಿಕ್ ಕಂಟ್ರೋಲರ್ ಪೈಲಟ್‌ಗಳಿಗೆ ಸೂಚನೆ ನೀಡಿದರು.

ಲ್ಯಾಂಡ್ ಆಗಲು ಸಿದ್ಧವಾಗಿದ್ದ ಡೆಲ್ಟಾ ಫ್ಲೈಟ್ 1972 ಇದರಿಂದ ಲ್ಯಾಂಡಿಂಗ್ ಅನ್ನು ರದ್ದುಗೊಳಿಸಿ ಮೇಲಕ್ಕೆ ಹಾರಿತು. ತದನಂತರ ಒಂದು ಗಂಟೆ 13 ನಿಮಿಷ ತಡವಾಗಿ ವಿಮಾನ ಲ್ಯಾಂಡ್ ಆಯಿತು.

ಬೆಳಗ್ಗೆ 9.30ಕ್ಕೆ ಕಂಪಿಸಿದ ಭೂಮಿ

ಪೆಸಿಫಿಕ್ ಸಮಯದ ಪ್ರಕಾರ ಬೆಳಗ್ಗೆ ಸುಮಾರು 9.30ಕ್ಕೆ ಭೂಕಂಪನ ಸಂಭವಿಸಿದೆ. ಮ್ಯಾನ್‌ಹ್ಯಾಟನ್ ಬೀಚ್‌ನಿಂದ ಸುಮಾರು 5 ಕಿಲೋಮೀಟರ್ ನೈಋತ್ಯ ದಿಕ್ಕಿನಲ್ಲಿ ಸಾಂತಾ ಮೋನಿಕಾ ಕೊಲ್ಲಿಯ ಕೆಳಗೆ ಭೂಕಂಪನದ ಕೇಂದ್ರ ಬಿಂದುವಿದೆ ಎಂದು ಯು.ಎಸ್. ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಭೂಕಂಪನವು ಸುಮಾರು 12 ರಿಂದ 13 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಒಂದರೊಳಗೆ ಸೀಲಿಂಗ್ ಟೈಲ್ಸ್ ಬಿದ್ದಿರುವ ಬಗ್ಗೆ ವರದಿಗಳಾಗಿವೆ.

Scroll to load tweet…

ಸೀಲಿಂಗ್ ಫಿಕ್ಚರ್‌ಗಳು ಮತ್ತು ಇತರ ವಸ್ತುಗಳು ಅಲುಗಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಂಭವನೀಯ ಪರಿಣಾಮಗಳನ್ನು ನಿರ್ಣಯಿಸಲು ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ 106 ಅಗ್ನಿಶಾಮಕ ಠಾಣೆಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದೆ. ಪ್ರಾಥಮಿಕವಾಗಿ ಯಾವುದೇ ರಚನಾತ್ಮಕ ಹಾನಿ ಅಥವಾ ಗಾಯಗಳು ವರದಿಯಾಗಿಲ್ಲ ಎಂದು ಎಲ್‌ಎಎಫ್‌ಡಿ ವಕ್ತಾರ ಲಿಂಡ್ಸೆ ಲ್ಯಾಂಟ್ಸ್ ತಿಳಿಸಿದ್ದಾರೆ.

ಯಾವುದೇ ಅಪಾಯ ಸಂಭವಿಸಿಲ್ಲ

ಮತ್ತೆ ಭೂಕಂಪನ ಸಂಭವಿಸುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಸ್ಥಳೀಯ ಅಧಿಕಾರಿಗಳ ಜೊತೆಗೂಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವುದಾಗಿ ಕ್ಯಾಲಿಫೋರ್ನಿಯಾ ಗವರ್ನರ್ ಅವರ ಕಚೇರಿ ಆಫ್ ಎಮರ್ಜೆನ್ಸಿ ಸರ್ವೀಸಸ್ ತಿಳಿಸಿದೆ. ಪ್ರಸ್ತುತ ಭೂಕಂಪನದಿಂದ ಸುನಾಮಿ ಭೀತಿ ಅಥವಾ ಅಪಾಯವಿಲ್ಲ ಎಂದು ಯು.ಎಸ್. ನ್ಯಾಷನಲ್ ಸುನಾಮಿ ವಾರ್ನಿಂಗ್ ಸೆಂಟರ್ ಸ್ಪಷ್ಟಪಡಿಸಿದೆ.

LAX ಬಳಿಯಿರುವ ಶೆವ್ರಾನ್‌ನ ಎಲ್ ಸೆಗುಂಡೊ ರಿಫೈನರಿಯಿಂದ ಜ್ವಾಲೆಗಳು ಎದ್ದಿರುವುದು ಆತಂಕಕ್ಕೆ ಕಾರಣವಾಯಿತು. ಆದರೆ, ಕಾರ್ಯದಲ್ಲಿ ಅಡಚಣೆಯಾದ ಸಂದರ್ಭದಲ್ಲಿ ಹೆಚ್ಚುವರಿ ಅನಿಲವನ್ನು ನಿಯಂತ್ರಿತವಾಗಿ ಸುಡುವ "ಸೇಫ್ಟಿ ಫ್ಲೇರಿಂಗ್" ಪ್ರಕ್ರಿಯೆ ಇದಾಗಿದ್ದು, ಇದು ಭೂಕಂಪನದಿಂದಲ್ಲ ಎಂದು ಎಲ್ ಸೆಗುಂಡೊ ನಗರದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮುಂದಿನ 45 ನಿಮಿಷಗಳಲ್ಲಿ ಕರಾವಳಿ ಪ್ರದೇಶದಲ್ಲಿ 3.7 ತೀವ್ರತೆಯ ಕಂಪನ ಸೇರಿದಂತೆ ಕನಿಷ್ಠ 19 ಬಾರಿ ಕಂಪನಗಳು ಸಂಭವಿಸಿವೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.