ಇರಾನ್ ದಾಳಿಯ ಭೀತಿ ಮತ್ತು ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಅಮೆರಿಕದ ಪ್ರಮುಖ ಸಚಿವರು ಸುರಕ್ಷಿತ ಸೇನಾ ನಿವಾಸಗಳಿಗೆ ಸ್ಥಳಾಂತರಗೊಂಡಿದ್ದಾರೆ. ಈ ಮಿಲಿಟರಿ ವಸತಿಗಳಿಗೆ ಅವರು ತಿಂಗಳಿಗೆ ೪ ಲಕ್ಷ ರೂ. ಬಾಡಿಗೆ ಪಾವತಿಸುತ್ತಿದ್ದು, ಡೆಮಾಕ್ರಟಿಕ್ ನಾಯಕರು ಈ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
US Security threats: ಇರಾನ್(Iran) ವಿರುದ್ಧ ಸಮರ ಮುಂದುವರಿಸಬೇಕೋ ಅಥವಾ ಸಂಧಾನದ ಹಾದಿ ಹಿಡಿಯಬೇಕೋ ಎಂಬ ಗೊಂದಲ ಮುಂದುವರಿದಿರುವ ಹೊತ್ತಿನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(US President Donald Trump) ಅವರ ಸರ್ಕಾರದ ಪ್ರಮುಖ ಸಚಿವರು ಅತಿ ಸುರಕ್ಷಿತವೆಂದು ಪರಿಗಣಿಸಲ್ಪಡುವ ಸೇನಾ ನಿವಾಸಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ. ಇವು ಅಮೆರಿಕ ಸೇನೆಯ ಹಿರಿಯ ಅಧಿಕಾರಿಗಳಿಗಾಗಿ ದಶಕದ ಹಿಂದೆಯೇ ನಿರ್ಮಿಸಲಾದ ಮನೆಗಳಾಗಿವೆ.
ಇರಾನ್ ಪ್ರತಿಕಾರಕ್ಕೆ ಹೆದರಿತಾ ಅಮೆರಿಕ?
ಕಳೆದ ತಿಂಗಳಷ್ಟೇ, ಇರಾನ್ ಅಮೆರಿಕದ ಮೇಲೆ ಡರ್ಟಿ ಬಾಂಬ್ (ಸಾಮಾನ್ಯ ಸ್ಫೋಟಕದ ಮೂಲಕ ವಿಕಿರಣಶೀಲ ವಸ್ತುಗಳನ್ನು ಹರಡುವ ಬಾಂಬ್) ಬಳಸಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿತ್ತು. ಇನ್ನೊಂದೆಡೆ ಟ್ರಂಪ್ ಆಡಳಿತದ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶ ಮಡುಗಟ್ಟುತ್ತಿದೆ. ಇವುಗಳಿಂದ ರಕ್ಷಣೆ ಪಡೆಯಲು ವಿತ್ತ ಸಚಿವ ಸ್ಕಾಟ್ ಬೆಸೆಂಟ್, ರಕ್ಷಣಾ ಸಚಿವ ಪೀಟ್ ಹೆಗ್ಸೆತ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ, ವೈಟ್ ಹೌಸ್ ಮುಖ್ಯ ಸಿಬ್ಬಂದಿ ಸ್ಟೀಫನ್ ಮಿಲ್ಲರ್ ಸೇರಿದಂತೆ ಹಲವು ಸಚಿವರು ಈ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಅಮೆರಿಕದ ಪ್ರಮುಖ ಸಚಿವರ ಸ್ಥಳಾಂತರಕ್ಕೆ ಕಾರಣವೇನು?
ಇತ್ತೀಚೆಗಷ್ಟೇ ಬೆಸೆಂಟ್, ಜಾರ್ಜ್ಟೌನ್ನಲ್ಲಿರುವ ತಮ್ಮ ನಿವಾಸ ಬಿಟ್ಟು ಸೇನಾಧಿಕಾರಿಗಳ ನಿವಾಸಗಳಿರುವ ಸ್ಥಳಕ್ಕೆ ಶಿಫ್ಟ್ ಆಗಿದ್ದರು. ಈ ಬಗ್ಗೆ ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿದ್ದ ಅವರು, ‘ಇರಾನ್ನ ಶಕ್ತಿಯನ್ನು ಕುಗ್ಗಿಸಲೆಂದು ಅದರ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಹೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ನನಗೆ ಆ ದೇಶದಿಂದ ಜೀವಬೆದರಿಕೆ ಒಡ್ಡಲಾಗಿದೆ. ಸಂಸತ್ತಿನ ಹಲವು ಸದಸ್ಯರಿಗೂ ಇಂಥ ಬೆದರಿಕೆಗಳು ಬಂದಿವೆಯಾದ್ದರಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಂಡಿದ್ದೇವೆ. ಆದರೆ ಇದರಿಂದ ನಾವು ಕುಗ್ಗುವುದಿಲ್ಲ’ ಎಂದು ಹೇಳಿದರು.
ಸೇನಾಧಿಕಾರಿಗಳಿದ್ದ ನಿವಾಸಕ್ಕೆ ಶಿಫ್ಟ್, ತಿಂಗಳಿಗೆ ₹4 ಲಕ್ಷ ಬಾಡಿಗೆ
ಸೇನಾಧಿಕಾರಿಗಳು ಇರುವ ಜಾಗಗಳಿಗೆ ಸ್ಥಳಾಂತರಗೊಂಡಿರುವ ಅಮೆರಿಕದ ಟಾಪ್ ಸಚಿವರನ್ನು ಅಲ್ಲಿನ ಮನೆಗಳಲ್ಲಿ ವಾಸಿಸಲು ತಿಂಗಳಿಗೆ ಸುಮಾರು 4 ಲಕ್ಷ ರು. ಬಾಡಿಗೆ ಪಾವತಿಸಬೇಕು. ಮಿಲಿಟರಿ ವಸತಿಗಳಲ್ಲಿ ವಾಸಿಸುತ್ತಿರುವ ಸಚಿವರು, ಅವರ ಸ್ಥಳಾಂತರಕ್ಕೆ ಕಾರಣವಾದ ಭದ್ರತಾ ಬೆದರಿಕೆಗಳು, ಈ ವ್ಯವಸ್ಥೆಗಳಿಗೆ ಇರುವ ಕಾನೂನು ಆಧಾರ ಮತ್ತು ಅವರು ಪಾವತಿಸುವ ಬಾಡಿಗೆಯ ಕುರಿತಾದ ವರದಿಯನ್ನು ಸಲ್ಲಿಸುವಂತೆ ಪೆಂಟಗನ್ಗೆ ಸೂಚಿಸಲಾಗಿದೆ.
ಡೆಮಾಕ್ರಟ್ಸ್ ಟೀಕೆ
ಜೀವ ಉಳಿಸಿಕೊಳ್ಳಲೆಂದು ಟ್ರಂಪ್ ಸರ್ಕಾರದ ಸಚಿವರು ಇಟ್ಟಿರುವ ಹೆಜ್ಜೆಗೆ ಡೆಮಾಕ್ರಟಿಕ್ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸೇನೆಗಾಗಿ ಮಾಡಲಾಗಿರುವ ವ್ಯವಸ್ಥೆಯ ಬಳಕೆಯನ್ನು ಟೀಕಿಸಿದ್ದಾರೆ.












