Asianet Suvarna News Asianet Suvarna News

ಆಫ್ರಿಕಾದ ಮೊರಾಕ್ಕೋದಲ್ಲಿ ಸಾವಿನ ಸಂಖ್ಯೆ 1050ಕ್ಕೆ ಏರಿಕೆ: ಎಲ್ಲಾ ನೆರವು ನೀಡಲು ಸಿದ್ಧ: ಪ್ರಧಾನಿ ಘೋಷಣೆ

ಅಟ್ಲಾಂಟಿಕ್‌ ಹಾಗೂ ಮೆಡಿಟರೇನಿಯನ್‌ ಸಮುದ್ರ ತೀರದಲ್ಲಿರುವ ಉತ್ತರ ಆಫ್ರಿಕಾ ಖಂಡದ ಮೊರಾಕ್ಕೊ (Morocco) ದೇಶದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯ ಅತ್ಯಂತ ಶಕ್ತಿಶಾಲಿ ಭೂಕಂಪ ಸಂಭವಿಸಿದ್ದು, 1050 ಮಂದಿ ಸಾವಿಗೀಡಾಗಿದ್ದಾರೆ.

Deadly earthquake in Morocco Africa death toll rises to 1050 Ready to provide all assistance to morocco PM Modi akb
Author
First Published Sep 10, 2023, 7:24 AM IST

ಮ್ಯಾರಕೇಶ್‌: ಅಟ್ಲಾಂಟಿಕ್‌ ಹಾಗೂ ಮೆಡಿಟರೇನಿಯನ್‌ ಸಮುದ್ರ ತೀರದಲ್ಲಿರುವ ಉತ್ತರ ಆಫ್ರಿಕಾ ಖಂಡದ ಮೊರಾಕ್ಕೊ (Morocco) ದೇಶದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯ ಅತ್ಯಂತ ಶಕ್ತಿಶಾಲಿ ಭೂಕಂಪ ಸಂಭವಿಸಿದ್ದು, 1050 ಮಂದಿ ಸಾವಿಗೀಡಾಗಿದ್ದಾರೆ. 750ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 205 ಜನರ ಸ್ಥಿತಿ ಗಂಭೀರವಾಗಿದೆ. ಅವಶೇಷಗಳಡಿ ಜನರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆಗೆ ಹಲವು ಅಡ್ಡಿಗಳು ಎದುರಾಗಿವೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಭೂಕಂಪದಿಂದಾಗಿ (earthquake) ಅಟ್ಲಾಸ್‌ ಪರ್ವತಶ್ರೇಣಿಯಿಂದ (Atlas Mountain) ಐತಿಹಾಸಿಕ ನಗರಿ ಮ್ಯಾರಕೇಶ್‌ವರೆಗೆ ಇರುವ ನಗರ, ಹಳ್ಳಿಗಳ ಹಲವಾರು ಕಟ್ಟಡಗಳು ಸಂಪೂರ್ಣ ಅಥವಾ ಭಾಗಶಃ ಕುಸಿದಿವೆ. ವಿದ್ಯುತ್‌ ಹಾಗೂ ರಸ್ತೆ ಸಂಪರ್ಕ ಹಲವು ಪ್ರದೇಶಗಳಲ್ಲಿ ಕಡಿತಗೊಂಡಿದೆ. ಗಾಯಾಳುಗಳನ್ನು ಸಾಗಣೆ ಮಾಡುವುದಕ್ಕೆ ಆ್ಯಂಬುಲೆನ್ಸ್‌ ಸಂಚರಿಸುವುದಕ್ಕೂ ಆಗದಷ್ಟು ರಸ್ತೆಗಳ ಮೇಲೆ ಬಂಡೆಗಳು ಕುಸಿದಿದ್ದು, ರಕ್ಷಣಾ ತಂಡಗಳು ರಸ್ತೆ ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ.

ಮೊರಾಕ್ಕೋದಲ್ಲಿ ಭೀಕರ ಭೂಕಂಪಕ್ಕೆ 600 ಕ್ಕೂ ಹೆಚ್ಚು ಬಲಿ: ಪ್ರಧಾನಿ ಮೋದಿ ಸಂತಾಪ

45 ಲಕ್ಷ ಜನರು ನೆಲೆಸಿರುವ ಮೊರಾಕ್ಕೊದ (Morocco) ವಾಣಿಜ್ಯ ನಗರ ಮ್ಯಾರಕೇಶ್‌ನಿಂದ (Marrakesh) ದಕ್ಷಿಣ ದಿಕ್ಕಿಗೆ 70 ಕಿ.ಮೀ. ದೂರದಲ್ಲಿರುವ ಅಲ್‌ ಹೌಜ್‌ ಪ್ರಾಂತ್ಯದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಮಿಯ ಮೇಲಿನ ಪದರದಿಂದ 18 ಕಿ.ಮೀ. ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದ್ದರೆ, 11 ಕಿ.ಮೀ. ಆಳದಲ್ಲಿ ಕಂಪನ ಉಂಟಾಗಿದೆ ಎಂದು ಮೊರೊಕ್ಕೊದ ಭೂಕಂಪನ ಸಂಸ್ಥೆ (seismological agency) ತಿಳಿಸಿದೆ. ಇಷ್ಟೊಂದು ಆಳದಲ್ಲಿ ಸಂಭವಿಸುವ ಭೂಕಂಪಗಳು ಅಪಾಯಕಾರಿಯಾಗಿಯೇ ಇರುತ್ತವೆ ಎಂದು ತಜ್ಞರು ತಿಳಿಸಿದ್ದಾರೆ. ಸಾಮಾನ್ಯವಾಗಿ ಉತ್ತರ ಆಫ್ರಿಕಾದಲ್ಲಿ ಭೂಕಂಪನಗಳೇ ಬಲು ಅಪರೂಪ ಎಂಬುದು ಗಮನಾರ್ಹ.

ಮೃತರಲ್ಲಿ ಹೆಚ್ಚಿನವರು ಮ್ಯಾರಕೇಶ್‌ ಹಾಗೂ ಭೂಕಂಪನದ ಕೇಂದ್ರ ಬಿಂದು ಇರುವ ಐದು ಪ್ರಾಂತ್ಯಗಳಿಗೆ ಸೇರಿದವರಾಗಿದ್ದಾರೆ. ಮೊರೊಕ್ಕೊ ದುರಂತಕ್ಕೆ ಜಗತ್ತಿನಾದ್ಯಂತ ಹಲವಾರು ದೇಶಗಳು ಕಂಬನಿ ಮಿಡಿದಿದ್ದು, ನೆರವು ನೀಡಲು ಮುಂದೆ ಬಂದಿವೆ.

ಮಲಗಿದ್ದವರು ಎದ್ದೋಡಿದರು

ಶುಕ್ರವಾರ ರಾತ್ರಿ 11.11ರ ವೇಳೆಗೆ ಮೊರಾಕ್ಕೊದಲ್ಲಿ ಭೂಕಂಪನ ಸಂಭವಿಸಿದೆ. ಅಷ್ಟೊತ್ತಿಗಾಗಲೇ ಮಲಗಿದ್ದವರು ಕಂಪನದಿಂದ ಹೆದರಿ, ಗಾಬರಿಗೆ ಒಳಗಾಗಿ ಬೀದಿಗಳಿಗೆ ಓಡಿ ಬಂದಿದ್ದಾರೆ. ಮ್ಯಾರಕೇಶ್‌ನ ರಸ್ತೆಗಳಲ್ಲಿ ತಡರಾತ್ರಿಯಾದರೂ ಜನರು ಗುಂಪುಗುಂಪಾಗಿ ನಿಂತಿರುವ, ಮನೆಯೊಳಕ್ಕೆ ವಾಪಸ್‌ ಹೋಗಲು ಹಿಂಜರಿಯುತ್ತಿರುವ ದೃಶ್ಯಗಳು ಕಂಡುಬಂದಿವೆ.

ಮಾಡಿಟ್ಟಅಡುಗೆ ಹಾಗೂ ಗೋಡೆಗೆ ನೇತು ಹಾಕಿದ್ದ ವಸ್ತುಗಳೆಲ್ಲಾ ನೆಲಕ್ಕೆ ಬಿದ್ದವು. ಕುರ್ಚಿ ಮೇಲೆ ಕೂತಿದ್ದವರೆಲ್ಲ ಕೆಳಕ್ಕೆ ಬಿದ್ದರು. ಇಡೀ ಮನೆಯೇ ಅಲುಗಾಡಿತು ಎಂದು - ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ 5.4 ತೀವ್ರತೆಯ ಭೂಕಂಪ, ದೆಹಲಿಯಲ್ಲೂ ಕಂಪಿಸಿದ ಭೂಮಿ!

ಮೊರಾಕ್ಕೊದ ಕೌಟೌಬಿಯಾ ಮಸೀದಿಗೂ ಹಾನಿ

ಮೊರಾಕ್ಕೊದ ವಾಣಿಜ್ಯ ನಗರಿ ಮ್ಯಾರಕೇಶ್‌ನಲ್ಲಿರುವ 12ನೇ ಶತಮಾನದ ಕೌಟೌಬಿಯಾ ಮಸೀದಿಗೂ ಭೂಕಂಪನದಿಂದ ಹಾನಿಯಾಗಿದೆ. ಆದರೆ ಎಷ್ಟು ಹಾನಿಯಾಗಿದೆ ಎಂಬುದು ತಿಳಿದುಬಂದಿಲ್ಲ. ಈ ಮಸೀದಿಯಲ್ಲಿ 226 ಅಡಿ ಎತ್ತರದ ಸ್ತಂಭವಿದ್ದು, ಅದನ್ನು ‘ಮ್ಯಾರಕೇಶ್‌ನ ಸೂರು’ ಎಂದೇ ಕರೆಯಲಾಗುತ್ತದೆ.

ಭೀಕರ ಭೂಕಂಪ

ಉತ್ತರ ಆಫ್ರಿಕಾದಲ್ಲಿ ಭೂಕಂಪಗಳೇ ಬಲು ಅಪರೂಪ. ಮೊರಾಕ್ಕೊದ ಅಗದೀರ್‌ ನಗರದಲ್ಲಿ 1960ರಲ್ಲಿ 5.8 ತೀವ್ರತೆಯ ಕಂಪನ ಸಂಭವಿಸಿ ಸಹಸ್ರಾರು ಮಂದಿ ಸಾವಿಗೀಡಾಗಿದ್ದರು. 2004ರಲ್ಲಿ 6.4 ತೀವ್ರತೆಯ ಕಂಪನದಿಂದ 600 ಮಂದಿ ಸಾವಿಗೀಡಾಗಿದ್ದರು. ಈಗ ಅದಕ್ಕಿಂತಲೂ ಭೀಕರವಾದ ಕಂಪನ ಉಂಟಾಗಿದೆ.

ಎಲ್ಲ ನೆರವು ನೀಡಲು  ಸಿದ್ಧ: ಪ್ರಧಾನಿ ಮೋದಿ

ನವದೆಹಲಿ: ಉತ್ತರ ಆಫ್ರಿಕಾದ ಮೊರಾಕ್ಕೊ ದೇಶದಲ್ಲಿ ಭೂಕಂಪ ಸಂಭವಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ಮೊರೊಕ್ಕೊಗೆ ಸಾಧ್ಯವಿರುವ ಎಲ್ಲ ನೆರವು ನೀಡಲೂ ಭಾರತ ಸಿದ್ಧವಿದೆ ಎಂದು ಘೋಷಿಸಿದ್ದಾರೆ. ಜಿ20 ಶೃಂಗಸಭೆಯಲ್ಲಿ ಶನಿವಾರ ಪ್ರಾಸ್ತಾವಿಕ ಭಾಷಣ ಮಾಡಿದ ಮೋದಿ ಅವರು, ಭೂಕಂಪದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದರು. ‘ಈ ಸಂಕಷ್ಟದ ಸಂದರ್ಭದಲ್ಲಿ ಇಡೀ ವಿಶ್ವ ಸಮುದಾಯ ಮೊರಾಕ್ಕೊ ಜತೆಗಿದೆ. ಸಾಧ್ಯವಿರುವ ಎಲ್ಲ ನೆರವು ನೀಡಲು ನಾವು ಸಿದ್ಧವಿದ್ದೇವೆ’ ಎಂದು ತಿಳಿಸಿದರು.

ಮತ್ತೊಂದೆಡೆ ಟ್ವೀಟ್‌ ಮಾಡಿರುವ ಮೋದಿ ಅವರು, ‘ಮೊರಾಕ್ಕೊ ಭೂಕಂಪದಿಂದ ಜೀವಹಾನಿಯಾಗಿರುವುದಕ್ಕೆ ಅತೀವ ನೋವಾಗಿದೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

Follow Us:
Download App:
  • android
  • ios