Covid 19 Variant Outbreak: ಡೆಲ್ಟಾಗಿಂತ 70 ಪಟ್ಟು ವೇಗವಾಗಿ ಹರಡುತ್ತೆ ಒಮಿಕ್ರೋನ್!
*ಸೋಂಕಿನ ತೀವ್ರತೆ ಡೆಲ್ಟಾಗಿಂತ 10 ಪಟ್ಟು ಕಮ್ಮಿ?
*ಹಾಂಕಾಂಗ್ ವಿವಿ ಸಂಶೋಧಕರ ಅಧ್ಯಯನದಲ್ಲಿ ಪತ್ತೆ
*ವೇಗ ಹೆಚ್ಚು, ತೀವ್ರತೆ ಕಡಿಮೆ: ಸಾವಿನ ಆತಂಕವೂ ಇದೆ
ಬೀಜಿಂಗ್(ಡಿ. 17): ಜಗತ್ತನ್ನೇ ತುದಿಗಾಲಿನಲ್ಲಿ ನಿಲ್ಲಿಸಿರುವ ಕೊರೋನಾದ ಹೊಸ ರೂಪಾಂತರಿ ತಳಿ ಒಮಿಕ್ರೋನ್ (Covid 19 Variant Omicron) ಈ ಹಿಂದಿನ ಡೆಲ್ಟಾಅಥವಾ ಮೂಲ ಸಾರ್ಸ್-ಕೋವ್-2 ವೈರಸ್ ತಳಿಗಿಂತ 70 ಪಟ್ಟು ವೇಗವಾಗಿ ಹರಡುತ್ತದೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಸಮಾಧಾನದ ವಿಚಾರವೆಂದರೆ ಒಮಿಕ್ರೋನ್ ಸೋಂಕಿನಿಂದ ಉಂಟಾಗುವ ಅನಾರೋಗ್ಯದ ತೀವ್ರತೆ ಡೆಲ್ಟಾಗಿಂತ 10 ಪಟ್ಟು ಕಡಿಮೆಯಿರಬಹುದು ಎಂದೂ ತಿಳಿದುಬಂದಿದೆ.
ಹಾಂಗ್‌ಕಾಂಗ್ ವಿಶ್ವವಿದ್ಯಾಲಯದ ( University of Hong Kong) ಸಂಶೋಧಕರು ನಡೆಸಿರುವ ಒಮಿಕ್ರೋನ್ ಸೋಂಕಿತ ಶ್ವಾಸನಾಳಗಳ ಅಧ್ಯಯನ ಮತ್ತು ಈ ಹಿಂದಿನ ಕೋವಿಡ್ ರೂಪಾಂತರಿಗಳ ಜೊತೆ ಒಮಿಕ್ರೋನ್‌ನ ಹೋಲಿಕೆಯ ಅಧ್ಯಯನದಲ್ಲಿ ಈ ಸಂಗತಿಗಳು ವ್ಯಕ್ತವಾಗಿವೆ. ಅಧ್ಯಯನದ ಫಲಿತಾಂಶ ಇನ್ನೂ ತಜ್ಞರಿಂದ ಪರಿಶೀಲಿಸಲ್ಪಟ್ಟಿಲ್ಲ.
ವೇಗ ಹೆಚ್ಚು, ತೀವ್ರತೆ ಕಡಿಮೆ:
ಒಮಿಕ್ರೋನ್ ತಳಿಯು ಒಬ್ಬರಿಂದ ಒಬ್ಬರಿಗೆ ಡೆಲ್ಟಾಗಿಂತ 70 ಪಟ್ಟು ಹೆಚ್ಚು ವೇಗದಲ್ಲಿ ಹರಡುತ್ತದೆ. ನಂತರ ಶ್ವಾಸನಾಳದಲ್ಲೂ ಬಹಳ ವೇಗವಾಗಿ ಸಂಚರಿಸುತ್ತದೆ. ಆದರೆ ಅದರಿಂದ ಕಂಡುಬರುವ ಕೊರೋನಾದ ಲಕ್ಷಣಗಳು ಬಹಳ ಸೌಮ್ಯವಾಗಿರುತ್ತವೆ. ಡೆಲ್ಟಾಗಿಂತ 10 ಪಟ್ಟು ತೀವ್ರತೆ ಕಡಿಮೆಯಿರಬಹುದು ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.
ಸಂಶೋಧಕರು ಎಕ್ಸ್-ವಿವೋ ಕಲ್ಚರ್ ವಿಧಾನ ಬಳಸಿ ಒಮಿಕ್ರೋನ್ ಹೇಗೆ ಹರಡುತ್ತದೆ ಮತ್ತು ಶ್ವಾಸಕೋಶದಲ್ಲಿ ಹೇಗೆ ಹರಡುತ್ತದೆ ಎಂಬ ಬಗ್ಗೆ ಅಧ್ಯಯನ ನಡೆಸಿದ್ದಾರೆ. ನಂತರ ಕೋವಿಡ್‌ನ ಹಳೆಯ ತಳಿಗಳ ಜೊತೆಗೆ ಅದನ್ನು ಹೋಲಿಸಿ ನೋಡಿದ್ದಾರೆ. ಆಗ ಒಮಿಕ್ರೋನ್‌ನ ವೈರಾಣುಗಳು ಬೇರೆಲ್ಲ ತಳಿಗಳ ವೈರಾಣುವಿಗಿಂತ ಹೆಚ್ಚಿನ ವೇಗದಲ್ಲಿ ಮನುಷ್ಯನ ಶ್ವಾಸಕೋಶದಲ್ಲಿ ದ್ವಿಗುಣಗೊಳ್ಳುತ್ತವೆ ಎಂಬುದು ಪತ್ತೆಯಾಗಿದೆ. ಒಮಿಕ್ರೋನ್ ಸೋಂಕು ತಗಲಿದ 24 ಗಂಟೆಗಳಲ್ಲಿ ಈ ವೈರಾಣು ಡೆಲ್ಟಾಅಥವಾ ಮೂಲ ಸಾರ್ಸ್-ಕೋವ್-2 ವೈರಸ್‌ಗಿಂತ 70 ಪಟ್ಟು ವೇಗವಾಗಿ ದ್ವಿಗುಣಗೊಂಡಿರುವುದು ತಿಳಿದುಬಂದಿದೆ.
ಸಾವಿನ ಆತಂಕವೂ ಇದೆ:
ಒಮಿಕ್ರೋನ್ ಬಹಳ ವೇಗದಲ್ಲಿ ಹರಡುವುದರಿಂದ ಇದರಿಂದ ಸೋಂಕಿತರಾಗುವವರ ಸಂಖ್ಯೆಯೂ ಬಹಳ ಹೆಚ್ಚಾಗಬಹುದು. ಸೋಂಕಿನ ಲಕ್ಷಣ ಸೌಮ್ಯವಾಗಿದ್ದರೂ ಸೋಂಕಿತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುವುದರಿಂದ ಸಾವಿನ ಸಂಖ್ಯೆಯೂ ಹೆಚ್ಚಬಹುದು. ಹೀಗಾಗಿ ಒಮಿಕ್ರೋನ್ ಬಗ್ಗೆ ಎಚ್ಚರ ವಹಿಸಲೇಬೇಕು ಎಂದೂ ಅಧ್ಯಯನ ನಡೆಸಿರುವ ಸಂಶೋಧಕರು ಹೇಳಿದ್ದಾರೆ.
ಬ್ರಿಟನ್: ಮತ್ತೆ ಮಹಾ ಕೊರೋನಾ ಸ್ಫೋಟ!
ಲಂಡನ್: ಡೆಲ್ಟಾಮತ್ತು ಒಮಿಕ್ರೋನ್ ವೈರಸ್‌ನ ಹಾವಳಿಗೆ ತೀವ್ರವಾಗಿ ತತ್ತರಿಸಿರುವ ಬ್ರಿಟನ್‌ನಲ್ಲಿ ಗುರುವಾರವೂ ಭಾರೀ ಪ್ರಮಾಣದಲ್ಲಿ ಹೊಸ ಕೇಸುಗಳು ಪತ್ತೆಯಾಗಿವೆ. ಗುರುವಾರ ದೇಶದಲ್ಲಿ 88376 ಕೇಸು ಪತ್ತೆಯಾಗಿದ್ದು, 146 ಸಾವು ದಾಖಲಾಗಿದೆ. ಈ ಸೋಂಕಿನ ಪ್ರಮಾಣ, ಬ್ರಿಟನ್‌ನ ಇತಿಹಾಸದಲ್ಲೇ ದೈನಂದಿನ ಗರಿಷ್ಠ ಪ್ರಮಾಣವಾಗಿದೆ. ಬುಧವಾರ ಕೂಡಾ ದೇಶದಲ್ಲಿ 78610 ಕೇಸು ದಾಖಲಾಗಿತ್ತು. ದೇಶದ 6.7 ಕೋಟಿ ಜನಸಂಖ್ಯೆ ಪೈಕಿ ಈಗಾಗಲೇ 1.1 ಕೋಟಿ ಜನ ಸೋಂಕಿಗೆ ತುತ್ತಾಗಿದ್ದು, 1.47 ಲಕ್ಷ ಜನರು ಸಾವನ್ನಪ್ಪಿದ್ದಾರೆ.
2 ದಿನಕ್ಕೊಮ್ಮೆ ಸೋಂಕಿತರ ಸಂಖ್ಯೆ ದ್ವಿಗುಣ: ಅಮೆರಿಕ
ನ್ಯೂಯಾರ್ಕ್: ವಿಶ್ವದ 75ಕ್ಕೂ ಹೆಚ್ಚು ದೇಶಗಳನ್ನು ಆವರಿಸಿರುವ ಒಮಿಕ್ರೋನ್, ಅಮೆರಿಕದ 51ರ ಪೈಕಿ 35 ರಾಜ್ಯಗಳಿಗೆ ವ್ಯಾಪಿಸಿದೆ. ಡೆಲ್ಟಾಸೇರಿದಂತೆ ಇತರೆ ರೂಪಾಂತರಿಗಳಿಗೆ ಹೋಲಿಸಿದರೆ ಇದರ ಪ್ರಸರಣ ಪ್ರಮಾಣ ಭಾರೀ ಹೆಚ್ಚಿದೆ. ದೇಶದಲ್ಲಿ ಸೋಂಕಿತರ ಪ್ರಮಾಣ 2 ದಿನಕ್ಕೆ ದ್ವಿಗುಣವಾಗುತ್ತಿದೆ. ಇದು ಆತಂಕಕಾರಿ ವಿಚಾರ ಎಂದು ಅಮೆರಿಕದ ಸೋಂಕು ನಿಯಂತ್ರಣಾ ಕೇಂದ್ರದ ಹಿರಿಯ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇತ್ತೀಚೆಗೆ ಬ್ರಿಟನ್ ಸರ್ಕಾರ ಕೂಡಾ ದೇಶದಲ್ಲಿ ಸೋಂಕಿತರ ಪ್ರಮಾಣ 2-3 ದಿನಕ್ಕೆ ದ್ವಿಗುಣವಾಗುತ್ತಿದೆ ಎಂದು ಹೇಳಿತ್ತು.
ಇದನ್ನೂ ಓದಿ:
1) Omicron Outbreak: ಈ ಲಸಿಕೆ ಪಡೆದವರಿಗೆ ಪಡೆದವರಿಗೆ ಮೊದಲು ಬೂಸ್ಟರ್ ಡೋಸ್!
2) Omicron Threat : ವಿದೇಶದಿಂದ ಬಂದವರಿಗೆ ನೆಗೆಟಿವ್ ಇದ್ದರೂ ಕ್ವಾರಂಟೈನ್?
3) Omicron In Karnataka: 2ನೇ ಅಲೆಯಲ್ಲಿ ಸೋಂಕು ತಗಲಿತ್ತು, 2 ಡೋಸ್ ಲಸಿಕೆ ಪಡೆದಿದ್ದೆ. ಆದರೂ ಒಮಿಕ್ರಾನ್ ಬಂತು!