ಕುಸಿದ ಚಿನ್ನದ ಗಣಿ: ತನ್ನ ಜೀವದ ಹಂಗು ತೊರೆದು ಸಹೋದ್ಯೋಗಿಗಳ ರಕ್ಷಿಸಿದ ಕಾರ್ಮಿಕ
ದಕ್ಷಿಣ ಆಫ್ರಿಕಾದ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಚಿನ್ನದ ಗಣಿಯಲ್ಲಿ ಸಿಲುಕಿದ 9 ಕಾರ್ಮಿಕರನ್ನು ವ್ಯಕ್ತಿಯೊಬ್ಬ ರಕ್ಷಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗೋ: ದಕ್ಷಿಣ ಆಫ್ರಿಕಾದ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಚಿನ್ನದ ಗಣಿಯಲ್ಲಿ ಸಿಲುಕಿದ 9 ಕಾರ್ಮಿಕರನ್ನು ವ್ಯಕ್ತಿಯೊಬ್ಬ ರಕ್ಷಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಚಿನ್ನದ ಗಣಿಯಲ್ಲಿ ಭೂಕುಸಿತವಾಗಿದ್ದು, ಹಲವು ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಮಣ್ಣನ್ನು ಕೈಯಲ್ಲಿ ಹೊರಗೆ ತೆಗೆದು ಒಳಗೆ ಸಿಲುಕಿದರಿಗೆ ಹೊರಗೆ ಬರಲು ದಾರಿ ಮಾಡಿಕೊಡುತ್ತಿದ್ದಾರೆ. ಹೀಗೆ ಒಬ್ಬರಾದ ಮೇಲೆ ಒಬ್ಬರಂತೆ ಒಳಗಿದ್ದ 9 ಜನರು ಹೊರಗೆ ಬಂದು ಜೀವ ಉಳಿಸಿಕೊಂಡಿದ್ದಾರೆ.
Nicolas Niarchos ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ. 'ನಿನ್ನೆ ಮಧ್ಯಾಹ್ನ 2.30ರ ಸುಮಾರಿಗೆ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬರುವ ಮುವುಂಬೊಕೊ ಸಮೀಪದ ಲುವೊವೊದಲ್ಲಿ ಗಣಿಯಲ್ಲಿ ಸಿಲುಕಿದ್ದ ಗಣಿ ಕಾರ್ಮಿಕರನ್ನು ಮತ್ತೊಬ್ಬ ಕಾರ್ಮಿಕ ರಕ್ಷಿಸುತ್ತಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಮಾರ್ಚ್ 24 ರಂದು ನಡೆದ ಘಟನೆ ಇದಾಗಿದ್ದು, ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಚೀನಾಗೆ ಸಿಕ್ತು ಭರ್ಜರಿ ಖಜಾನೆ: 50 ಟನ್ ಉತ್ತಮ ಗುಣಮಟ್ಟದ ಬಂಗಾರದ ಗಣಿ ಪತ್ತೆ; ಬೆಲೆ ಎಷ್ಟು ನೋಡಿ..
ವಿಡಿಯೋದಲ್ಲಿ ಕಾಣಿಸುವಂತೆ ಇಳಿಜಾರಿನ ಈ ಗಣಿಯಲ್ಲಿ ಮೇಲಿನಿಂದ ಮಣ್ಣು ಕುಸಿಯುತ್ತಿದ್ದರೆ ವ್ಯಕ್ತಿಯೊಬ್ಬ ಕುಸಿಯುತ್ತಿರುವ ಮಣ್ಣನ್ನು ಲೆಕ್ಕಿಸದೇ ಗಣಿಯಿಂದ ಹೊರಗೆ ಬರಲು ಒಳಗೆ ಸಿಲುಕಿದ ಕಾರ್ಮಿಕರಿಗೆ ದಾರಿ ಮಾಡಿಕೊಡುವುದನ್ನು ಕಾಣಬಹುದಾಗಿದೆ. 2 ನಿಮಿಷದ ವಿಡಿಯೋದಲ್ಲಿ ಗಣಿ ಕುಸಿತದ ನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಗಣಿ ಕಾರ್ಮಿಕರು ಅಲ್ಲಿಂದ ಬೇರೆಡೆ ಸಾಗುತ್ತಿರುವುದನ್ನು ನೋಡಬಹುದಾಗಿದೆ.
ಮಣ್ಣಿನ ಕುಸಿತವೂ ಗಣಿಯ ಪ್ರವೇಶ ದ್ವಾರವನ್ನು ಮುಚ್ಚುತ್ತಿತ್ತು. ಅವುಗಳನ್ನು ತಡೆಯಲು ನಾವು ಕೂಡಲೇ ಜನರನ್ನು ಸಜ್ಜುಗೊಳಿಸಿದ್ದೆವು ಶನಿವಾರ ಅವರು ಒಂಭತ್ತು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾದರು ಎಂದು ಸ್ಥಳೀಯ ನಾಗರಿಕ ಸಮಾಜದ ಪ್ರತಿನಿಧಿ ಕ್ರಿಸ್ಪಿನ್ ಕಯುಕಾ ಎಂಬುವವರು ಹೇಳಿರುವುದನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
Bengaluru news: ಅಕ್ರಮ ಗಣಿಗಾರಿಕೆ ಪ್ರಕರಣ: 5.21 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ
ಈ ವಿಡಿಯೋ ವೈರಲ್ ಆಗಿದ್ದು, ತನ್ನ ಸಹೋದ್ಯೋಗಿಗಳನ್ನು ರಕ್ಷಿಸಲು ತನ್ನ ಪ್ರಾಣವನ್ನು ಲೆಕ್ಕಿಸದೇ ಕಾರ್ಯಾಚರಣೆಗೆ ಇಳಿದ ಗಣಿ ಕಾರ್ಮಿಕನ ಕಾರ್ಯಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅನೇಕರು ಆತನನ್ನು ಕಾಂಗೋದ ಸೂಪರ್ ಹೀರೋ ಎಂದು ಕರೆದಿದ್ದಾರೆ. ಸುರಕ್ಷತಾ ಕಾರ್ಯವಿಧಾನಗಳು ಮತ್ತು ಸರಿಯಾದ ಸಲಕರಣೆಗಳ ಕೊರತೆಯು ಕಾಂಗೋಲೀಸ್ ಗಣಿಗಳಲ್ಲಿ ಆಗಾಗ್ಗೆ ಸುರಂಗ ಕುಸಿತಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಗಣಿ ಕಾರ್ಮಿಕರು ಬದುಕುಳಿಯುವ ಕನಿಷ್ಠ ಅವಕಾಶಗಳೊಂದಿಗೆ ನೆಲದಡಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.