ಹಣದುಬ್ಬರದ ಬಿಸಿ : ತಾತನ ಜೇಬಿನಿಂದ ಕಾಸು ಎತ್ತಿಕೊಂಡು ಹೋದ ಕಾಗೆ
ಕಾಗೆಯೊಂದು ವೃದ್ಧರ ಜೇಬಿನಿಂದ ಹಣ ಎತ್ತಿಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಕ್ಕಿ ಹಣವನ್ನು ಕಟ್ಟಡದ ವೈರ್‌ಗಳ ಮೇಲಿಟ್ಟು ಅಣಕಿಸುವಂತೆ ನೋಡುತ್ತಿರುವುದು ವಿಡಿಯೋದಲ್ಲಿದೆ.

ಕಾಗೆಗಳು ಅತ್ಯಂತ ಬುದ್ಧಿವಂತೆ ಹಕ್ಕಿಗಳು, ಎರಡು ವರ್ಷ ಪ್ರಾಯದ ಮಗುವಿನ ಬುದ್ಧಿವಂತಿಕೆ ಕಾಗೆಗಿವೆ ಎಂಬುದು ಅನೇಕ ಸಂಶೋಧನೆಗಳಿಂದ ಸಾಬೀತಾಗಿದೆ. ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಈ ಕಾಗೆಗಳನ್ನು ಕೆಲ ದೇಶಗಳಲ್ಲಿ ಸಿಗರೇಟು ತುಂಡುಗಳನ್ನು ಹೆಕ್ಕುವುದಕ್ಕೆ ತರಬೇತಿ ನೀಡಿ ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಹೀಗಿರುವಾಗ ಕಾಗೆಯೊಂದು ವೃದ್ಧರೊಬ್ಬರ ಜೇಬಿನಿಂದ ಹಣ ಎತ್ತಿಕೊಂಡು ಹೋಗುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಜನ ಹಲವು ಕಾಮೆಂಟ್ ಮಾಡಿದ್ದಾರೆ.
WORLD OF BUZZ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಕಳ್ಳ ಹಕ್ಕಿಯೊಂದು ಪರ್ಫೆಕ್ಟ್ ಆಗಿ ಕಳ್ಳತನ ಮಾಡಿದೆ. ವ್ಯಕ್ತಿಯೊಬ್ಬರ ಜೇಬಿನಿಂದ ಹಣ ಕದ್ದಿದೆ ಎಂದು ವೀಡಿಯೋದ ಮೇಲೆ ಕ್ಯಾಪ್ಷನ್ ನೀಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಕಾಗೆ ವ್ಯಕ್ತಿಯೊಬ್ಬರ ಜೇಬಿನಿಂದ ಮೆಲ್ಲನ್ನೇ ಹಣವನ್ನು ಎಬ್ಬಿಸಿದ್ದು ನಂತರ ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡು ಮುಂದೆ ಸಾಗಿದೆ. ಅದರ ಕೊಕ್ಕಿನಲ್ಲಿದ್ದ ಹಣವನ್ನು ವಾಪಸ್ ಪಡೆಯಲು ಆ ವೃದ್ಧ ಮಾತ್ರವಲ್ಲದೇ ಮತ್ತೊಬ್ಬರು ಯುವತಿ ಹಲವು ಪ್ರಯತ್ನ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.
ತಪಕ್ ತಪಕ್ ಅಂತ ಸ್ವಲ್ಪ ಸ್ವಲ್ಪವೇ ದೂರ ಹಾರುತ್ತಿದ್ದ ಹಕ್ಕಿ, ಹಕ್ಕಿಯನ್ನು ಹಿಡಿಯಲು ಹಿಂದೆ ಹಿಂದೆ ಹೋಗುತ್ತಿರುವ ವೃದ್ಧ ಹಾಗೂ ಮಹಿಳೆಯ, ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ತನ್ನ ಬಳಿ ಇರುವ ನೋಟನ್ನು ಕಸಿಯಲು ಮನುಷ್ಯರು ಹತ್ತಿರ ಬರುತ್ತಿದ್ದಂತೆ, ಹಕ್ಕಿ ಮುಂದೆ ಮುಂದೆ ಸ್ವಲ್ಪ ಸ್ವಲ್ಪ ದೂರ ಹಾರಿ ಬಳಿಕ ಕೈಗೆ ಸಿಗದಂತೆ ಎತ್ತರಕ್ಕೆ ಹಾರಿದೆ. ಅಲ್ಲದೇ ತನ್ನ ಬಳಿ ಇದ್ದ ನೋಟನ್ನು ಕಟ್ಟಡವೊಂದರ ಹಲವು ದಪ್ಪನೆಯ ವೈರ್‌ಗಳಿರುವ ಸೆಟ್‌ನ ಮೇಲೆ ಇಟ್ಟಿದೆ. ಅಲ್ಲದೇ ಅಲ್ಲೇ ಕುಳಿತು ತನ್ನನ್ನು ನೋಟಿಗಾಗಿ ಹಿಂಬಾಲಿಸಿಕೊಂಡು ಬಂದವರನ್ನು ಅಣಕಿಸುವಂತೆ ಮೇಲಿನಿಂದಲೇ ನೋಡುತ್ತಾ ನಿಂತಿದೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ವೀಡಿಯೋ ಪೋಸ್ಟ್ ಮಾಡಿದ WORLD OF BUZZ, ಬಡ ವ್ಯಕ್ತಿ ಹಕ್ಕಿಯಿಂದ ದರೋಡೆಗೊಳಗಾದ ಎಂದು ಬರೆದಿದೆ. ಎಲ್ಲೆಡೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಹಕ್ಕಿಯೂ ದರೋಡೆ ಮಾಡುವಂತಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕಾಗೆಯ ಹಗಲು ದರೋಡೆ ಬಗ್ಗೆ ನಿಮಗೇನನಿಸ್ತಿದೆ ಕಾಮೆಂಟ್ ಮಾಡಿ