ಐಎಂಎಫ್‌ ಹಿಂಜರಿದರೂ ಚೀನಾ 18,000 ಕೋಟಿ ರೂ. ಸಾಲ ನೀಡುತ್ತಿದ್ದು, ಈ ಮೂಲಕ ಪಾಕ್‌ಗೆ ಭಾರೀ ಸಾಲ ನೀಡಿ ದಿವಾಳಿ ಆಗದಂತೆ ಚೀನಾ ಬಚಾವ್‌ ಮಾಡಿದೆ. 

ಇಸ್ಲಾಮಾಬಾದ್‌ (ಫೆಬ್ರವರಿ 23, 2023): ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಬಿದ್ದು, ನಿತ್ಯದ ವಿದೇಶಿ ಖರೀದಿಗೂ ಹಿಂದುಮುಂದು ನೋಡುವ ಪರಿಸ್ಥಿತಿಯಲ್ಲಿದ್ದ ಪಾಕಿಸ್ತಾನಕ್ಕೆ ‘ನೆರೆಮನೆಯ ಗೆಳೆಯ’ ಚೀನಾ ನೆರವಿನ ಹಸ್ತ ಚಾಚಿದೆ. ಹಣದ ಕೊರತೆ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಚೀನಾ ಸರ್ಕಾರ 70 ಕೋಟಿ ಡಾಲರ್‌ (ಅಂದಾಜು 18000 ಕೋಟಿ ಪಾಕಿಸ್ತಾನ ರುಪಾಯಿ) ಸಾಲದ ನೆರವು ಪ್ರಕಟಿಸಿದೆ. ‘ಚೀನಾದಿಂದ ಅಗತ್ಯ ಸಾಲ ಪಡೆಯಲು ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಚೀನಾ ಅಭಿವೃದ್ಧಿ ಬ್ಯಾಂಕ್‌ ಇದೇ ವಾರ ಈ ಸಾಲದ ನೆರವು ಒದಗಿಸಲಿದೆ’ ಎಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್‌ ಧರ್‌ ಬುಧವಾರ ಮಾಹಿತಿ ನೀಡಿದ್ದಾರೆ. 

ದೇಶದ ಆರ್ಥಿಕತೆಯನ್ನು ಸುಧಾರಿಸಲು ಎಎಂಎಫ್‌ನ ಸಲಹೆಯಂತೆ ಪಾಕ್‌ ಸರ್ಕಾರ ಹಲವು ತೆರಿಗೆ ಹೇರಿದ ಬೆನ್ನಲ್ಲೇ ಚೀನಾ ಈ ಸಾಲದ ಘೋಷಣೆ ಮಾಡಿದೆ. ಐಎಂಎಫ್‌ನ 1 ಶತಕೋಟಿ ಡಾಲರ್‌ ಸಾಲದ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಚೀನಾದ ಈ ನೆರವು ದೊಡ್ಡ ಆಸರೆಯಾಗಿ ಹೊರಹೊಮ್ಮಿದೆ.

ಇದನ್ನು ಓದಿ: ಟರ್ಕಿಗೆ ನೆರವು ನೀಡಿದ ವ್ಯಕ್ತಿಗೆ ಪಾಕ್‌ ಪ್ರಧಾನಿ ಮೆಚ್ಚುಗೆ; ಪಾಕ್‌ಗೇಕೆ ಸಹಾಯ ಮಾಡಿಲ್ಲ ಎಂದು ನೆಟ್ಟಿಗರ ವ್ಯಂಗ್ಯ

ಸದ್ಯ ಪಾಕಿಸ್ತಾನದ ವಿದೇಶಿ ವಿನಿಮಯ 3.2 ಶತಕೋಟಿ ಡಾಲರ್‌ಗೆ ಇಳಿದಿದ್ದು, ಇದು ಕೇವಲ 3 ವಾರ ಆಮದಿಗೆ ಸಾಕಾಗಲಿದೆ. ಹೀಗಾಗಿಯೇ ತೀರಾ ಅಗತ್ಯವೆನ್ನಿಸಿದ ವಸ್ತುಗಳನ್ನು ಹೊರತುಪಡಿಸಿ ಉಳಿದ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಪಾಕಿಸ್ತಾನ ಸರ್ಕಾರ ಸ್ಥಗಿತಗೊಳಿಸಿದೆ. ಜೊತೆಗೆ ಸರಕುಗಳು ದೇಶದ ಬಂದರಿಗೆ ಬಂದು ಹಲವು ತಿಂಗಳಾದರೂ ಅವುಗಳನ್ನು ಬಿಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ.

ಸರ್ಕಾರದ ವೆಚ್ಚ ಕಡಿತ:
ಈ ನಡುವೆ ವೆಚ್ಚ ಕಡಿತದ ನಿಟ್ಟಿನಲ್ಲಿ ವಿದೇಶಗಳಲ್ಲಿನ ರಾಯಭಾರ ಕಚೇರಿಗಳ ಸಂಖ್ಯೆ, ಅಲ್ಲಿ ನಿಯೋಜಿಸಲಾದ ಅಧಿಕಾರಿಗಳು, ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡುವಂತೆ ಪ್ರಧಾನಿ ಶೆಹಬಾಜ್‌ ಶರೀಫ್‌ ವಿದೇಶಾಂಗ ಸಚಿವಾಲಯಕ್ಕೆ ಸೂಚಿಸಿದ್ದಾರೆ. ಸಾಲದ ಹೊರೆಯಲ್ಲಿರುವ ರಾಷ್ಟ್ರದ ವೆಚ್ಚ ಪ್ರಮಾಣವನ್ನು ಶೇ.15 ರಷ್ಟು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಹದಗೆಟ್ಟಿರುವ ಪಾಕಿಸ್ತಾನದ ಆರ್ಥಿಕತೆ..! ಮುಳುಗುತ್ತಿರುವ ದೇಶವನ್ನು ರಕ್ಷಿಸಬೇಕಾ ಭಾರತ..?

ಆರ್ಥಿಕತೆ ನಿರ್ವಹಿಸಿ:
ಇದೇ ವೇಳೆ ತನ್ನ ಆರ್ಥಿಕತೆಯನ್ನು ಸುಧಾರಿಸಲು ಪಾಕಿಸ್ತಾನ ಇನ್ನಷ್ಟುಕ್ರಮಗಳ ಮೂಲಕ ಭದ್ರ ಬುನಾದಿ ಹಾಕಬೇಕು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಎಂಡಿ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ. ತನ್ನ ಆರ್ಥಿಕತೆಯ ಸದೃಢವಾಗಿ ಬೆಳೆಯುತ್ತದೆ ಎಂದು ತೋರಿಸಲು ಕೇವಲ ತೆರಿಗೆ ಹೆಚ್ಚಿಸಿದರೆ ಸಾಲದು ಅದನ್ನು ಸರಿಯಾಗಿ ಹಂಚಬೇಕು, ಯಾರ ಬಳಿ ಹೆಚ್ಚು ಹಣ ಇದೆಯೋ ಅವರು ಹೆಚ್ಚು ತೆರಿಗೆ ಪಾವತಿಸಬೇಕು, ಇಲ್ಲದವರಿಗೆ ಅದು ನೆರವಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ದಿವಾಳಿ ಪಾಕ್‌ಗೆ ಐಎಂಎಫ್‌ ಸಾಲವಿಲ್ಲ..! ಪಾಕ್‌ ಬಳಿ ಈಗ ಬರೀ 3 ವಾರಕ್ಕಾಗುವಷ್ಟು ಹಣ