ನವದೆಹಲಿ(ಜೂ.19): ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಸಂಘರ್ಷ ಸಂಭವಿಸಿ 20 ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ಭಾರತ- ಚೀನಾ ಗಡಿಯಲ್ಲಿ ಯುದ್ಧ ರೀತಿಯ ರೋಷಾವೇಶ ಕಂಡುಬರುತ್ತಿದೆ. ಉಭಯ ದೇಶಗಳು ಸಹಸ್ರಾರು ಯೋಧರನ್ನು ಗಡಿಯಲ್ಲಿ ನಿಯೋಜನೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.

ಸೋಮವಾರದ ಘಟನೆ ಹಿನ್ನೆಲೆಯಲ್ಲಿ ಇಡೀ ಲಡಾಖ್‌ ಕಣಿವೆಯಲ್ಲಿ ಭಾರತೀಯ ಸೇನೆ ಭಾರೀ ಕಟ್ಟೆಚ್ಚರ ವಹಿಸಿದೆ. ಲೇಹ್‌ನ ಕೋರ್‌ ಕಮಾಂಡರ್‌ ಪ್ರತಿ ಗಂಟೆಗೊಮ್ಮೆ ಪರಿಸ್ಥಿತಿಯ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಿದ್ದಾರೆ. ಲಡಾಖ್‌ನಿಂದ ಅರುಣಾಚಲಪ್ರದೇಶದವರೆಗಿನ 3488 ಕಿ.ಮೀ. ಉದ್ದದ ಗಡಿಗುಂಟ ಯುದ್ಧ ಸಂದರ್ಭದಲ್ಲಿ ಇರುವಂತಹ ಅಲರ್ಟ್‌ ಅನ್ನು ಭಾರತ ಘೋಷಿಸಿದೆ.

ಟಿಕ್‌ಟಾಕ್ ಸೇರಿ ಚೀನಾದ 52 ಆ್ಯಪ್ ಬ್ಯಾನ್‌; ಕೇಂದ್ರಕ್ಕೆ ಭಾರತ ಗುಪ್ತಚರ ಇಲಾಖೆ ಸೂಚನೆ!

ಗಲ್ವಾನ್‌ ಕಣಿವೆ, ದೌಲತ್‌ ಬೇಗ್‌ ಓಲ್ಡಿ, ದೆಪ್‌ಸಾಂಗ್‌, ಚೂಸುಲ್‌ನಂತಹ ಲಡಾಖ್‌ ಭೂಭಾಗಗಳು ಸೇರಿದಂತೆ ಗಡಿಯುದ್ದಕ್ಕೂ ಚೀನಾ ಸಹಸ್ರಾರು ಯೋಧರನ್ನು ಹಾಗೂ ದೈತ್ಯ ಯಂತ್ರೋಪಕರಣಗಳನ್ನು ಮರು ನಿಯೋಜನೆ ಮಾಡಿದೆ. ಇದಕ್ಕೆ ತಿರುಗೇಟು ನೀಡಿರುವ ಭಾರತ, ಲಡಾಖ್‌ನ ಗಡಿಯ ಮುಂಚೂಣಿ ಪ್ರದೇಶವೊಂದರಲ್ಲೇ 15 ಸಾವಿರ ಯೋಧರನ್ನು ರವಾನಿಸಿದೆ. ಗಡಿಯಲ್ಲಿ ಪಹರೆ ಕಾಯುವ ಈ ಯೋಧರ ಹಿಂದೆ ಭಾರಿ ಪ್ರಮಾಣದಲ್ಲಿ ಸೇನೆಯನ್ನು ಯುದ್ಧಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಏನೇ ಅಹಿತಕರ ಘಟನೆಗಳು ನಡೆದರೂ ಸೇನಾಪಡೆ ತೀಕ್ಷ$್ಣ ತಿರುಗೇಟು ನೀಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ಇದಲ್ಲದೆ ಅರುಣಾಚಲಪ್ರದೇಶದವರೆಗೂ ಯೋಧರನ್ನು ಜಮಾವಣೆ ಮಾಡಿದೆ ಎಂದು ವರದಿಗಳು ತಿಳಿಸಿವೆ.

ಭಾರತ ಯುದ್ಧಕ್ಕೆ ಸನ್ನದ್ಧವಾಗ್ತಿದ್ದಂತೆ ಎಚ್ಚೆತ್ತ ಕುತಂತ್ರಿ ಚೀನಾ!

ಇದೇ ವೇಳೆ, 45 ವರ್ಷಗಳಿಂದ ಚೀನಾ ಗಡಿಯಲ್ಲಿ ಶಾಂತಿ ಮಂತ್ರ ಜಪಿಸುತ್ತಿದ್ದ ಭಾರತ ಇದೀಗ ತನ್ನ ನಿಲುವಿನಲ್ಲಿ ಭಾರಿ ಬದಲಾವಣೆ ಮಾಡಿಕೊಂಡಿದ್ದು, ಚೀನಿ ಸೈನಿಕರು ಗಡಿಯೊಳಗೆ ಕಾಲಿಟ್ಟರೆ ತೀಕ್ಷ$್ಣ ತಿರುಗೇಟು ನೀಡಲು ನಿರ್ಧರಿಸಿದೆ. ಚೀನಾದ ಭೂದಾಹಕ್ಕೆ ತಕ್ಕ ಪಾಠ ಕಲಿಸುವ ಈ ನಿರ್ಧಾರವನ್ನು ಗಲ್ವಾನ್‌ ಕಣಿವೆಯಲ್ಲಿ ಭಾರತದ ಯೋಧರನ್ನು ಚೀನಾ ಹತ್ಯೆಗೈದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸರಣಿ ಸಭೆಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.

ಲಡಾಖ್ ಲಡಾಯಿ; ಚೀನಾ ಟೆಲಿ ಗೇರ್ ಬಳಕೆ ನಿಷೇಧಿಸಿದ BSNL!

ಗಡಿಯಲ್ಲಿ ಶಾಂತಿ ಕಾಪಾಡಲು ಪೂರ್ವ ಲಡಾಖ್‌ನ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಿಂದ ಎರಡೂ ದೇಶಗಳ ಸೈನಿಕರು ಹಿಂದೆ ಸರಿಯಬೇಕು ಎಂದು ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿತ್ತು. ಈ ವೇಳೆಯಲ್ಲೇ ಚೀನಾ ಅಮಾನುಷ ದಾಳಿ ನಡೆಸಿರುವುದರಿಂದ ಗಡಿಯಿಂದ ಹಿಂದೆ ಸರಿಯದಿರಲೂ ಭಾರತ ನಿರ್ಧರಿಸಿದೆ ಎನ್ನಲಾಗಿದೆ.

603 ಬಾರಿ ಗಡಿ ಉಲ್ಲಂಘಿಸಿದ ಚೀನಾ!

ಚೀನಾ ಪದೇಪದೇ ಭಾರತದ ಗಡಿಯೊಳಗೆ ನುಸುಳಿ ಟೆಂಟ್‌ಗಳನ್ನು ನಿರ್ಮಿಸುವುದು, ತನ್ನ ಧ್ವಜ ನೆಡುವುದು ಮುಂತಾದ ಕುಚೋದ್ಯಗಳನ್ನು ನಡೆಸುತ್ತಾ ಬಂದಿದೆ. ಆಗೆಲ್ಲಾ ಭಾರತ ಶಾಂತಿಯುತವಾಗಿಯೇ ಪ್ರತಿಕ್ರಿಯಿಸಿದೆ. ಆದರೆ, 2017ರಲ್ಲಿ ಭೂತಾನ್‌ನ ಡೋಕ್ಲಾಂನಲ್ಲಿರುವ ಸಿಕ್ಕಿಂ-ಭೂತಾನ್‌-ಟಿಬೆಟ್‌ನ ಗಡಿಗಳು ಸಂಧಿಸುವ ಜಾಗದಲ್ಲಿ ಭಾರತ-ಚೀನಾದ ನಡುವೆ 73 ದಿನಗಳ ಘರ್ಷಣೆ ನಡೆದ ನಂತರ ಚೀನಾದ ಒಳನುಸುಳುವಿಕೆ ಹೆಚ್ಚಾಗಿದೆ. 2016ರಲ್ಲಿ 296 ಬಾರಿ, 2017ರಲ್ಲಿ 473 ಬಾರಿ, 2018ರಲ್ಲಿ 404 ಬಾರಿ ಮತ್ತು 2019ರಲ್ಲಿ 603 ಬಾರಿ ಚೀನಾ ಗಡಿ ಉಲ್ಲಂಘಿಸಿ ಒಳನುಸುಳಿದೆ. ಹೀಗಾಗಿ ಇನ್ನುಮುಂದೆ ಭಾರತ ತೀಕ್ಷ$್ಣ ತಿರುಗೇಟು ನೀಡಲಿದೆ ಎಂದು ಮೂಲಗಳು ಹೇಳಿವೆ.

ಇನ್ನು ಚೀನಾ ಕಳ್ಳಾಟ ಸಹಿಸೋದಿಲ್ಲ-ಭಾರತ

‘ನಮ್ಮ ಯೋಧರು ಗಡಿಯಿಂದ ಹಿಂದೆ ಸರಿಯುವುದಿಲ್ಲ. ನಮ್ಮ ದೇಶಕ್ಕೆ ಸೇರಿದ ಸಾರ್ವಭೌಮ ಪ್ರದೇಶಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಚೀನಾ ಬಹಳ ವರ್ಷಗಳಿಂದ ಈ ಪ್ರದೇಶಗಳಲ್ಲಿ ಒಳನುಸುಳುವುದು, ನಂತರ ಈ ಭೂಭಾಗವೇ ತನ್ನದು ಎಂದು ಸುಳ್ಳು ಹೇಳುವುದು, ಭಾರತ ತಿರುಗೇಟು ನೀಡಿದಾಗ ಭಾರತವೇ ತನ್ನ ಗಡಿಯೊಳಗೆ ನುಸುಳಿದೆ ಎಂದು ಬಣ್ಣ ಕಟ್ಟಿಹೇಳುವುದು ಹೀಗೆ ಕಳ್ಳಾಟ ಆಡುತ್ತಲೇ ಬಂದಿದೆ. ಇನ್ನುಮುಂದೆ ಈ ಆಟ ನಡೆಯುವುದಿಲ್ಲ. ಚೀನಾದ ಸೇನೆ ತಕ್ಕ ಬೆಲೆ ತೆರುವಂತೆ ಮಾಡಲಾಗುವುದು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಸ್ತ್ರ ಬಳಸಲ್ಲ ಒಪ್ಪಂದ ಮರುಪರಿಶೀಲನೆ?

3488 ಕಿ.ಮೀ. ಉದ್ದದ ಎಲ್‌ಎಸಿಯಲ್ಲಿ ಸೈನಿಕರು ಶಸ್ತ್ರಾಸ್ತ್ರಗಳನ್ನು ಹಿಡಿದು ಗಡಿ ಕಾಯುವಂತಿಲ್ಲ ಎಂದು ಉಭಯ ದೇಶಗಳ ನಡುವೆ ಹಳೆಯ ಒಪ್ಪಂದವಿದೆ. ಆದರೆ, ಸೋಮವಾರ ರಾತ್ರಿ ಚೀನಾ ಈ ಒಪ್ಪಂದ ಉಲ್ಲಂಘಿಸಿ ಗನ್‌ ಹಾಗೂ ಚಾಕು ಹಿಡಿದು ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದೆ. ಹೀಗಾಗಿ ಶಸ್ತಾ್ರಸ್ತ್ರ ಬಳಸುವಂತಿಲ್ಲ ಎಂಬ ನೀತಿಯನ್ನು ಮರುಪರಿಶೀಲನೆ ನಡೆಸಲೂ ಭಾರತ ಚಿಂತನೆ ನಡೆಸಿದೆ.