ನ್ಯೂಫೌಂಡ್‌ಲ್ಯಾಂಡ್‌ಗೆ ಪರಿಚಯಿಸಲಾದ ಕೆಲವೇ ಮೂಸ್‌ಗಳು, ನೈಸರ್ಗಿಕ ಶತ್ರುಗಳ ಅನುಪಸ್ಥಿತಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೆಳೆದು ದ್ವೀಪದ ಅರಣ್ಯಗಳಿಗೆ ಕಂಟಕವಾದವು. ಈ ಪರಿಸರ ಅಸಮತೋಲನವನ್ನು ನಿಯಂತ್ರಿಸಲು ಮತ್ತು ಕಾಡುಗಳನ್ನು ರಕ್ಷಿಸಲು, ಇಂದು ಬೇಟೆಯನ್ನು ಒಂದು ಪ್ರಮುಖ ನಿರ್ವಹಣಾ ಸಾಧನವಾಗಿ ಬಳಸಲಾಗುತ್ತಿದೆ. ಪ್ರಸ್ತುತ, ಅರಣ್ಯ ರಕ್ಷಿಸಲು ಬೇಟೆ ಮೂಲಕ ಅವುಗಳ ಸಂಖ್ಯೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ.

ನ್ಯೂಫೌಂಡ್‌ಲ್ಯಾಂಡ್ ದ್ವೀಪದಲ್ಲಿ ಕೇವಲ ಆರೇ ಆರು ಮೂಸ್‌ಗಳು (ಒಂದು ಜಾತಿಯ ಬೃಹತ್ ಜಿಂಕೆ) ಕಾಲಿಟ್ಟಾಗ, ಅದು ಮುಂಬರುವ ದಿನಗಳಲ್ಲಿ ಇಡೀ ದ್ವೀಪದ ನೈಸರ್ಗಿಕ ಚಿತ್ರಣವನ್ನೇ ಬುಡಮೇಲು ಮಾಡುತ್ತದೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. 1878 ರಲ್ಲಿ ಮೊದಲ ಬಾರಿಗೆ ಈ ಜಿಂಕೆಗಳನ್ನು ಇಲ್ಲಿಗೆ ಪರಿಚಯಿಸಲಾಯಿತು. ತದನಂತರ 1904 ರಲ್ಲಿ ಬೇಟೆಯಾಡಲು ಹಾಗೂ ತಾಜಾ ಮಾಂಸದ ಲಭ್ಯತೆಗಾಗಿ ಅಧಿಕಾರಿಗಳು ಇನ್ನೂ ನಾಲ್ಕು ಮೂಸ್‌ಗಳನ್ನು ತಂದು ದ್ವೀಪಕ್ಕೆ ಬಿಟ್ಟರು. ಆರಂಭದಲ್ಲಿ ಆಹಾರದ ಅತ್ಯುತ್ತಮ ಮೂಲವಾಗಿ ಕಂಡ ಈ ಸಣ್ಣ ಹೆಜ್ಜೆ, ಕಾಲಕ್ರಮೇಣ ದ್ವೀಪದ ಪರಿಸರ ವ್ಯವಸ್ಥೆಗೆ ಕಂಠಕವಾಗಿ ಪರಿಣಮಿಸಿತು.

ನ್ಯೂಫೌಂಡ್‌ಲ್ಯಾಂಡ್‌ನ ಮೂಲ ತಳಿಯಲ್ಲದ ಈ ಸಸ್ಯಹಾರಿ ಪ್ರಾಣಿಗಳಿಗೆ ದ್ವೀಪದಲ್ಲಿದ್ದ ವಾತಾವರಣವು ವರವಾಗಲ್ಪಟ್ಟಿತು. ಪ್ರಮುಖವಾಗಿ ಇವುಗಳನ್ನು ಬೇಟೆಯಾಡಿ ತಿನ್ನುತ್ತಿದ್ದ 'ನ್ಯೂಫೌಂಡ್‌ಲ್ಯಾಂಡ್ ತೋಳಗಳು' 1930 ರ ಸುಮಾರಿಗೆ ಸಂಪೂರ್ಣವಾಗಿ ಅಳಿದುಹೋದವು. ನೈಸರ್ಗಿಕ ಶತ್ರುಗಳೇ ಇಲ್ಲದಾಗಿದ್ದರಿಂದ ಮೂಸ್‌ಗಳಿಗೆ ದ್ವೀಪದಲ್ಲಿ ಸಂಪೂರ್ಣ ರಕ್ಷಣೆ ಸಿಕ್ಕಂತಾಯಿತು. ಇದೇ ಸಮಯದಲ್ಲಿ, ವಾಣಿಜ್ಯ ಮರ ಕಡಿತ ಮತ್ತು ನೈಸರ್ಗಿಕ ಬದಲಾವಣೆಗಳಿಂದಾಗಿ ದ್ವೀಪದಾದ್ಯಂತ ಎಳೆಯ ಕಾಡುಗಳು ಬೆಳೆಯತೊಡಗಿದವು. ಈ ಎಳೆಯ ಗಿಡ-ಮರಗಳ ಚಿಗುರೆಲೆಗಳು ಮೂಸ್‌ಗಳಿಗೆ ಅತ್ಯಂತ ನೆಚ್ಚಿನ ಆಹಾರವಾಗಿದ್ದವು. ಆಹಾರದ ಹೇರಳ ಲಭ್ಯತೆ ಮತ್ತು ನೈಸರ್ಗಿಕ ಬೆದರಿಕೆಗಳ ಅಭಾವದಿಂದಾಗಿ ಇವುಗಳ ಜನಸಂಖ್ಯೆ ದಿಢೀರ್ ಸ್ಫೋಟಗೊಂಡಿತು. 1950 ರ ಹೊತ್ತಿಗೆ ಇವುಗಳ ಸಂಖ್ಯೆ ಬೃಹತ್ ಮಟ್ಟಕ್ಕೇರಿ ಬರೋಬ್ಬರಿ 2,00,000 ಕ್ಕೆ ತಲುಪಿತು.

ಸಸ್ಯರಾಶಿಯನ್ನು ಆಹುತಿ ತೆಗೆದುಕೊಳ್ಳುತ್ತಿರುವ ಅತಿಯಾದ ಹಸಿವು

ಮೂಸ್‌ಗಳ ಅತಿಯಾದ ಹಸಿವೇ ದ್ವೀಪದ ಕಾಡುಗಳಿಗೆ ಮೃತ್ಯುಪಾಶವಾಗಿ ಪರಿಣಮಿಸಿತು. ವನ್ಯಜೀವಿ ಮಾಹಿತಿಯ ಪ್ರಕಾರ, ಒಂದು ಮೂಸ್ ಚಳಿಗಾಲದಲ್ಲಿ ದಿನಕ್ಕೆ 40 ರಿಂದ 50 ಪೌಂಡ್ ಹಾಗೂ ಬೇಸಿಗೆಯಲ್ಲಿ ದಿನಕ್ಕೆ 50 ರಿಂದ 60 ಪೌಂಡ್ ಸಸ್ಯವರ್ಗವನ್ನು ತಿಂದು ಮುಗಿಸುತ್ತದೆ. ಪ್ರಸ್ತುತ ದ್ವೀಪದಲ್ಲಿರುವ ಸುಮಾರು 1,10,000 ಮೂಸ್‌ಗಳ ಹಿಂಡು ವರ್ಷಕ್ಕೆ ಸರಿಸುಮಾರು 7.2 ಲಕ್ಷದಿಂದ 10 ಲಕ್ಷ ಮೆಟ್ರಿಕ್ ಟನ್ ಸಸ್ಯರಾಶಿಯನ್ನು ಆಹುತಿ ತೆಗೆದುಕೊಳ್ಳುತ್ತಿದೆ. ಬೋರಿಯಲ್ ಅರಣ್ಯಗಳು ಪುನರುಜ್ಜೀವನಗೊಳ್ಳಲು ಅಗತ್ಯವಿರುವ ಎಳೆಯ ಸಸಿಗಳನ್ನೇ ಇವು ಹೆಚ್ಚಾಗಿ ತಿನ್ನುವುದರಿಂದ, ಕಾಡಿನ ಮರುಜೀವಿಸುವ ಸಾಮರ್ಥ್ಯವೇ ಉರುಳುತ್ತಿದೆ. ಪರಿಣಾಮವಾಗಿ, ದಟ್ಟವಾದ ಅರಣ್ಯ ಪ್ರದೇಶಗಳು ನಿಧಾನವಾಗಿ ಬರಿ ಹುಲ್ಲು ಮತ್ತು ಜರೀಗಿಡಗಳಿಂದ ಕೂಡಿದ ಬಯಲು ಸೀಮೆಗಳಾಗಿ ಬದಲಾಗುತ್ತಿವೆ.

ಜನಸಂಖ್ಯಾ ಏರಿಳಿತ ಮತ್ತು ಕೋಟಾ ವ್ಯವಸ್ಥೆಯ ಜಾರಿ

1950 ರ ದಶಕದ ಅಂತ್ಯದ ವೇಳೆಗೆ ಆವಾಸಸ್ಥಾನಗಳ ಹಾನಿ ಮತ್ತು ಬೇಟೆಯಿಂದಾಗಿ ಮೂಸ್‌ಗಳ ಸಂಖ್ಯೆ ಇಳಿಕೆಯಾಗಿ, 1970 ರ ವೇಳೆಗೆ 50,000 ಕ್ಕಿಂತ ಕಡಿಮೆಯಾಯಿತು. ಇದನ್ನು ನಿಯಂತ್ರಿಸಲು ನ್ಯೂಫೌಂಡ್‌ಲ್ಯಾಂಡ್ ಆಡಳಿತವು 1973 ರಲ್ಲಿ "ಪ್ರದೇಶ ಆಧಾರಿತ ಕೋಟಾ ವ್ಯವಸ್ಥೆ" ಜಾರಿಗೆ ತಂದಿತು. ಜಿಂಕೆಗಳ ದಟ್ಟಣೆ ಹೆಚ್ಚಿದ್ದಲ್ಲಿ ಹೆಚ್ಚಿನ ಬೇಟೆಗೆ ಮತ್ತು ಕಡಿಮೆಯಿದ್ದಲ್ಲಿ ಬೇಟೆ ನಿಷೇಧಕ್ಕೆ ಅವಕಾಶ ನೀಡಲಾಯಿತು. ಈ ಯೋಜನೆಯಿಂದ 1990 ರ ಹೊತ್ತಿಗೆ ಇವುಗಳ ಸಂಖ್ಯೆ ಮತ್ತೆ 1,50,000 ದಾಟಿತು. ಆದರೆ 1990 ರ ಮಧ್ಯಭಾಗದಿಂದ 2012 ರ ವೇಳೆಗೆ ಸಂಖ್ಯೆ ಮತ್ತೆ ಶೇ. 25 ರಷ್ಟು ಕುಸಿತ ಕಂಡಾಗ, ವಿಜ್ಞಾನಿಗಳು ಇದು ಬೇಟೆಯಿಂದಲ್ಲ, ಬದಲಿಗೆ ಆಹಾರ ಮತ್ತು ಆವಾಸಸ್ಥಾನಗಳ ಕೊರತೆಯಿಂದಾದ ನೈಸರ್ಗಿಕ ಮಿತಿ ಎಂದು ಗುರುತಿಸಿದರು.

ಗ್ರೋಸ್ ಮೋರ್ನೆ ರಾಷ್ಟ್ರೀಯ ಉದ್ಯಾನವನದ ಎಚ್ಚರಿಕೆ

ಗ್ರೋಸ್ ಮೋರ್ನೆ ರಾಷ್ಟ್ರೀಯ ಉದ್ಯಾನವನದಲ್ಲಂತೂ ಪರಿಸ್ಥಿತಿ ತೀರಾ ಹಾಯ್ಕಿತ್ತು. 1998 ರ ವೇಳೆಗೆ ಪ್ರತಿ ಚದರ ಕಿಲೋಮೀಟರ್‌ಗೆ 4 ಕ್ಕೂ ಹೆಚ್ಚು ಮೂಸ್‌ಗಳಿದ್ದು, ಇಡೀ ಉದ್ಯಾನವನವು ಕೇವಲ ಹುಲ್ಲುಗಾವಲಾಗಿ ಮಾರ್ಪಟ್ಟಿತ್ತು. ಅಂತಿಮವಾಗಿ 'ಪಾರ್ಕ್ಸ್ ಕೆನಡಾ' ಸಂಸ್ಥೆಯು 2011 ರಲ್ಲಿ ವಿಶೇಷ ನಿಯಂತ್ರಣ ಕಾರ್ಯಕ್ರಮ ನಡೆಸಿ, ಮೂಸ್‌ಗಳ ಸಂಖ್ಯೆಯನ್ನು 2,00,000 ಕ್ಕೆ ಸೀಮಿತಗೊಳಿಸಿತು. ಇದರಿಂದ ಕಾಡುಗಳು ಮತ್ತೆ ಚಿಗುರಲು ಪ್ರಾರಂಭಿಸಿದರೂ, ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಇಂದಿಗೂ ಕೃತಕ ಗಿಡ ನೆಡುವ ಅಗತ್ಯವಿದೆ.

ಅರಣ್ಯ ರಕ್ಷಣೆಗಾಗಿ ಬೇಟೆ ನಿರ್ವಹಣೆ

ಇಂದು ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ಮೂಸ್‌ಗಳನ್ನು ಬೇಟೆಯಾಡುವುದು ಕೇವಲ ವಿನೋದಕ್ಕಾಗಿ ಅಲ್ಲ, ಬದಲಾಗಿ ಅರಣ್ಯವನ್ನು ರಕ್ಷಿಸುವ ಅನಿವಾರ್ಯತೆಯಾಗಿದೆ. ನೈಸರ್ಗಿಕ ಪರಭಕ್ಷಕಗಳು ಇಲ್ಲದಿರುವುದರಿಂದ, ವಾಯುಪಡೆ ಸಮೀಕ್ಷೆಗಳು ಮತ್ತು ಪರಿಸರ ಅಧ್ಯಯನಗಳ ಆಧಾರದ ಮೇಲೆ ಬೇಟೆಯ ಕೋಟಾಗಳನ್ನು ನಿಗದಿಪಡಿಸಲಾಗುತ್ತಿದೆ. 2026-27 ರ ಬೇಟೆ ಮಾರ್ಗದರ್ಶಿಯ ಪ್ರಕಾರ ದ್ವೀಪದ ಬೇಟೆ ಕೋಟಾವನ್ನು 1,090 ಪರವಾನಗಿಗಳಿಂದ 28,705 ಕ್ಕೆ ಹೆಚ್ಚಿಸಲಾಗಿದೆ.

1878 ರಲ್ಲಿ ತೆಗೆದುಕೊಂಡ ಒಂದು ಸಣ್ಣ ನಿರ್ಧಾರವು ಶತಮಾನದ ನಂತರ ಇಡೀ ದ್ವೀಪದ ಪರಿಸರ ವ್ಯವಸ್ಥೆಯನ್ನೇ ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ನ್ಯೂಫೌಂಡ್‌ಲ್ಯಾಂಡ್‌ನ ಮೂಸ್‌ಗಳ ಕಥೆಯೇ ಅತ್ಯುತ್ತಮ ಉದಾಹರಣೆ. ವಿದೇಶಿ ತಳಿಯೊಂದನ್ನು ಸೂಕ್ತ ಯೋಜನೆಯಿಲ್ಲದೆ ಪರಿಚಯಿಸಿದರೆ ಉಂಟಾಗುವ ಧೀರ್ಘಾವಧಿಯ ಅಡ್ಡಪರಿಣಾಮಗಳನ್ನು ತಡೆಯಲು ನಿರಂತರ ಮೇಲ್ವಿಚಾರಣೆ ಎಷ್ಟು ಮುಖ್ಯ ಎಂಬುದನ್ನು ಇದು ನೆನಪಿಸುತ್ತದೆ.