Asianet Suvarna News Asianet Suvarna News

ಸ್ವತಂತ್ರ, ಮುಕ್ತ ಪೆಸಿಫಿಕ್‌ ದ್ವೀಪ ವಲಯಕ್ಕೆ ಕರೆ: ಪೆಸಿಫಿಕ್‌ ದೇಶಗಳಿಗೆ ಮೋದಿ ಭರ್ಜರಿ ಕೊಡುಗೆ

ಇಂಡೋ- ಪೆಸಿಫಿಕ್‌ ದ್ವೀಪ ವಲಯವನ್ನು ಸ್ವತಂತ್ರ ಮತ್ತು ಮುಕ್ತವಾಗಿಡುವುದರ ಬಗ್ಗೆ ಮತ್ತೊಮ್ಮೆ ಬಲವಾಗಿ ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ದೇಶಗಳ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಭಾರತ ಬೆಂಬಲಿಸಲಿದೆ ಎಂದು ಹೇಳಿದ್ದಾರೆ.

Call for independent, free Pacific Island Zone Modi announces huge contribution to Pacific Island countries akb
Author
First Published May 23, 2023, 7:45 AM IST

ಪೋರ್ಟ್‌ ಮೋರ್ಸ್‌ಬೈ: ಇಂಡೋ- ಪೆಸಿಫಿಕ್‌ ದ್ವೀಪ ವಲಯವನ್ನು ಸ್ವತಂತ್ರ ಮತ್ತು ಮುಕ್ತವಾಗಿಡುವುದರ ಬಗ್ಗೆ ಮತ್ತೊಮ್ಮೆ ಬಲವಾಗಿ ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ದೇಶಗಳ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಭಾರತ ಬೆಂಬಲಿಸಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ವಿಶ್ವಾಸಾರ್ಹರು ಎನ್ನಿಸಿಕೊಂಡವರು ಅಗತ್ಯದ ಸಮಯದಲ್ಲಿ ನಮಗೆ ನೆರವಾಗಲಿಲ್ ಎನ್ನುವ ಮೂಲಕ ಪರೋಕ್ಷವಾಗಿ ಚೀನಾ ವಿರುದ್ಧ ಕಿಡಿಕಾರಿದರು.

ಇಲ್ಲಿ 14 ಪೆಸಿಫಿಕ್‌ ದ್ವೀಪ ದೇಶಗಳ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪೆಸಿಫಿಕ್‌ ದ್ವೀಪ ದೇಶಗಳ ಸವಾಲಿನ ಸಮಯಲ್ಲಿ ಭಾರತ ಅವರ ಬೆಂಬಲಕ್ಕೆ ನಿಂತಿತ್ತು ಮತ್ತು ದೆಹಲಿಯನ್ನು ನೀವು ನಿಮ್ಮ ಅಭಿವೃದ್ಧಿಯಲ್ಲಿ ವಿಶ್ವಾಸಾರ್ಹ ಪಾಲುದಾರ ಎಂಬ ಸಂದೇಶವನ್ನು ರವಾನಿಸಿತ್ತು. ಏಕೆಂದರೆ ನಾವು ನಿಮ್ಮ ಆದ್ಯತೆಯನ್ನು ಗೌರವಿಸುತ್ತೇವೆ ಮತ್ತು ನಿಮ್ಮೆಡೆಗಿನ ನಮ್ಮ ಸಹಕಾರವು ಮಾನವೀಯ ಮೌಲ್ಯಗಳನ್ನು ಆಧರಿಸಿದ್ದಾಗಿದೆ. ನಾವು ಯಾರನ್ನು ವಿಶ್ವಾಸಾರ್ಹರು ಎಂದುಕೊಂಡಿದ್ದೆವೋ ಅವರು ನಮಗೆ ಅಗತ್ಯವಿದ್ದಾಗ ನೆರವಾಗಲಿಲ್ಲ. ಈ ಹಂತದಲ್ಲಿ ಸಮಯಕ್ಕಾದವನೇ ನೆಂಟ ಎಂಬ ನಾಣ್ಣುಡಿ ನಮಗೆ ನೆನಪಾಗುತ್ತಿದೆ ಎಂದರು.

ಈ ಮೂಲಕ ಕೋವಿಡ್‌ ಸಂದರ್ಭದಲ್ಲಿ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ದ್ವೀಪ ದೇಶಗಳಿಗೆ ಭಾರತ ನೀಡಿದ ನೆರವು ಮತ್ತು ಚೀನಾ ಕೈಕೊಟ್ಟ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

ಪೆಸಿಫಿಕ್‌ ದ್ವೀಪ ದೇಶಗಳಿಗೆ ಕೊಡುಗೆ:

ಇದೇ ವೇಳೆ ನಮ್ಮ ಎಲ್ಲಾ ಸಾಮರ್ಥ್ಯ ಮತ್ತು ಅನುಭವವನ್ನು ನಾವು ಯಾವುದೇ ಹಿಂಜರಿಕೆ ಇಲ್ಲದೇ ನಿಮಗೆ ನೀಡಲು ಸಿದ್ಧ. ಪ್ರತಿ ಕ್ಷೇತ್ರದಲ್ಲೂ ನಿಮ್ಮೊಂದಿಗಿರಲು ನಾವು ಬದ್ಧ ಎಂದು ಮೋದಿ ಹೇಳಿದರು. ಜೊತೆಗೆ, ಎಲ್ಲಾ ದ್ವೀಪ ದೇಶಗಳಿಗೆ ಭಾರತ ತಲಾ ಒಂದೊಂದು ಸಮುದ್ರ ಆ್ಯಂಬುಲೆನ್ಸ್‌ ಒದಗಿಸಲಿದೆ. ಫಿಜಿ ದೇಶದಲ್ಲಿ ಅತ್ಯಾಧುನಿಕ ಹೃದ್ರೋಗ ಆಸ್ಪತ್ರೆ ನಿರ್ಮಿಸಲಿದೆ. ಎಲ್ಲಾ 14 ದೇಶಗಳಲ್ಲಿ ಡಯಾಲಿಸಿಸ್‌ ಕೇಂದ್ರ ಸ್ಥಾಪಿಸಲು ನೆರವು ನೀಡಲಿದೆ. ಇಡೀ ವಲಯದಲ್ಲಿ ಭಾರತ ಜನೌಷಧಿ ಕೇಂದ್ರದ ರೀತಿಯ ಕೇಂದ್ರಗಳನ್ನು ಸ್ಥಾಪನೆ ಮಾಡಲಿದೆ. ಜನರ ಆರೋಗ್ಯ ವೃದ್ಧಿಗಾಗಿ ಯೋಗ ಕೇಂದ್ರಗಳನ್ನು ಭಾರತ ತೆರೆಯಲಿದೆ ಎಂದರು.

ಪಪುವಾ ನ್ಯೂ ಗಿನಿಯಾದಲಿನ ಐಟಿ ಕ್ಷೇತ್ರದ ಉತ್ಕೃಷ್ಟತಾ ಕೇಂದ್ರವನ್ನು ಪ್ರಾಂತೀಯ ಮಾಹಿತಿ ತಂತ್ರಜ್ಞಾನ ಮತ್ತು ಸೈಬರ್‌ ಭದ್ರತಾ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು, ಎಲ್ಲಾ 14 ದೇಶಗಳಲ್ಲಿ ದಿನದ 24 ಗಂಟೆಯೂ ಸೇವೆ ಸಲ್ಲಿಸುವ ತುರ್ತು ಸಹಾಯವಾಣಿ ಆರಂಭಿಸಲಾಗುವುದು, ಪ್ರತಿ ದೇಶದಲ್ಲೂ ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕಾ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗುವುದು, ಪ್ರತಿ ದೇಶದಲ್ಲೂ ಒಂದೊಂದು ಸರ್ಕಾರಿ ಕಟ್ಟಡವನ್ನು ಸೌರಶಕ್ತಿಯಿಂದ ನಡೆಸಲ್ಪಡುವ ಕಟ್ಟಡವಾಗಿ ಅಭಿವೃದ್ಧಿಪಡಿಸಲಾಗುವುದು, ಜೈಪುರ ಕೃತಕ ಕಾಲು ಅಳವಡಿಕೆ ಕ್ಯಾಂಪ್‌ ಆಯೋಜನೆ, ಪ್ರತಿ ವರ್ಷ 1000 ವಿದ್ಯಾರ್ಥಿಗಳಿಗೆ ಸಾಗರ ಅಮೃತ್‌ ಸ್ಕಾಲರ್‌ಶಿಪ್‌ ನೀಡಲಾಗುವುದು ಎಂದು ಘೋಷಿಸಿದರು.

Follow Us:
Download App:
  • android
  • ios