Asianet Suvarna News Asianet Suvarna News

Brahmos Missiles: ಮೊದಲ ಬಾರಿ ವಿದೇಶಕ್ಕೆ ಭಾರತದ ಕ್ಷಿಪಣಿ ರಫ್ತು..!

*   ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ಫಿಲಿಪ್ಪೀನ್ಸ್‌ ಒಪ್ಪಂದ
*   ಎರಡೂ ದೇಶದ ನಡುವೆ 2600 ಕೋಟಿ ರು. ಡೀಲ್‌
*   ಕರಾರುವಾಕ್ಕಾಗಿ ಶತ್ರುಪಡೆಗಳನ್ನು ಸಂಹಾರ ಮಾಡುವ ಸ್ವದೇಶಿ ನಿರ್ಮಿತ ಬ್ರಹ್ಮೋಸ್‌ ಕ್ಷಿಪಣಿ
 

Brahmos Missiles Export to Philippines for the First Time in Indian History grg
Author
Bengaluru, First Published Jan 29, 2022, 4:45 AM IST

ನವದೆಹಲಿ(ಜ.29):  ಸೇನಾ ಪರಿಕರಗಳಿಗಾಗಿ ದಶಕಗಳಿಂದ ವಿದೇಶಗಳ ಮೇಲೆ ಅವಲಂಬಿತವಾಗಿದ್ದ ಭಾರತ(India) ಈಗ ರಕ್ಷಣಾ ಸಾಧನಗಳ ರಫ್ತುದಾರ ರಾಷ್ಟ್ರವಾಗುವತ್ತ ದಾಪುಗಾಲು ಇಟ್ಟಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶಿ ನಿರ್ಮಿತ ಕ್ಷಿಪಣಿಗಳನ್ನು ರಫ್ತು ಮಾಡಲು ಭಾರತ ಮುಂದಾಗಿದ್ದು, ಫಿಲಿಪ್ಪೀನ್ಸ್‌(Philippines) ಜತೆ ಶುಕ್ರವಾರ ಐತಿಹಾಸಿಕ ಒಪ್ಪಂದವೊಂದಕ್ಕೆ(Agreement) ಸಹಿ ಹಾಕಿದೆ.

ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ಮುನ್ನುಗ್ಗಿ ಶೇ.99.99ರಷ್ಟು ಕರಾರುವಾಕ್ಕಾಗಿ ಶತ್ರುಪಡೆಗಳನ್ನು ಸಂಹಾರ ಮಾಡುವ ಸ್ವದೇಶಿ ನಿರ್ಮಿತ ಬ್ರಹ್ಮೋಸ್‌ ಕ್ಷಿಪಣಿಗಳನ್ನು(Brahmos Missiles) ಫಿಲಿಪ್ಪೀನ್ಸ್‌ಗೆ ರಫ್ತು ಮಾಡುವ ಸಂಬಂಧ ಎರಡೂ ದೇಶಗಳ ನಡುವೆ ಒಪ್ಪಂದವೇರ್ಪಟ್ಟಿದೆ. ಇದು 2600 ಕೋಟಿ ರು. ಮೊತ್ತದ ಒಪ್ಪಂದವಾಗಿದ್ದು, ಎಷ್ಟು ಕ್ಷಿಪಣಿಗಳನ್ನು ಫಿಲಿಪ್ಪೀನ್ಸ್‌ಗೆ ನೀಡಲಾಗುತ್ತದೆ ಎಂಬುದು ಬಹಿರಂಗವಾಗಿಲ್ಲ.

BrahMos Test Fire: ನೌಕಾ ಮಾದರಿ ಬ್ರಹ್ಮೋಸ್‌ ಕ್ಷಿಪಣಿ ಉಡಾವಣೆ ಯಶಸ್ವಿ!

ಬ್ರಹ್ಮೋಸ್‌ ಎಂಬುದು ಭಾರತ- ರಷ್ಯಾ(India-Russia) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿರುವ ಕ್ಷಿಪಣಿಯಾಗಿದೆ. ಈ ಕ್ಷಿಪಣಿ ಖರೀದಿ ಸಂಬಂಧ ಫಿಲಿಪ್ಪೀನ್ಸ್‌ ರಕ್ಷಣಾ ಸಚಿವಾಲಯವು(Ministry of Defense of the Philippines) ಭಾರತದ ಬ್ರಹ್ಮೋಸ್‌ ಏರೋಸ್ಪೇಸ್‌ ಖಾಸಗಿ ಕಂಪನಿಯೊಂದಿಗೆ(Brahmos Aerospace Private Company ಒಪ್ಪಂದ ಮಾಡಿಕೊಂಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ರಕ್ಷಣಾ ಸಚಿವಾಲಯ, ‘ಭಾರತ ಸರ್ಕಾರ(Government of India) ರಕ್ಷಣಾ ಸರಕುಗಳ ರಫ್ತನ್ನು ಉತ್ತೇಜಿಸುವಲ್ಲಿ ಮಹತ್ವಪೂರ್ಣ ಹೆಜ್ಜೆಯನ್ನಿಟ್ಟಿದೆ’ ಎಂದಿದೆ. ಕ್ಷಿಪಣಿ ಅಭಿವೃದ್ಧಿಪಡಿಸಿದ ಡಿಆರ್‌ಡಿಒ(DRDO) ಕೂಡ ಸಂತಸ ವ್ಯಕ್ತಪಡಿಸಿದೆ.

ಬ್ರಹ್ಮೋಸ್‌ ಕ್ಷಿಪಣಿಯು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಬ್ರಹ್ಮೋಸ್‌ ಏರೋಸ್ಪೇಸ್‌ನ ಜಂಟಿ ಉತ್ಪನ್ನವಾಗಿದೆ. ಬ್ರಹ್ಮೋಸ್‌ ಎಂಬುದು ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಯಾಗಿದ್ದು, ಇವುಗಳನ್ನು ಜಲಾಂತರ್ಗಾಮಿ ನೌಕೆ, ಹಡಗು, ವಿಮಾನ, ಭೂಭಾಗದಿಂದಲೂ ಉಡಾವಣೆ ಮಾಡಬಹುದಾಗಿದೆ. ಭಾರತ ಈಗಾಗಲೇ ಸಾಕಷ್ಟುಬ್ರಹ್ಮೋಸ್‌ ಕ್ಷಿಪಣಿಗಳನ್ನು ಹೊಂದಿದ್ದು ಲಡಾಖ್‌ನ ಗಡಿಭಾಗದಲ್ಲಿ ಇವುಗಳನ್ನು ನಿಯೋಜಿಸಲಾಗಿದೆ.

ಕ್ಷಿಪಣಿ ವಿಶೇಷತೆ:

ಸಬ್‌ಮರೀನ್‌, ಹಡಗು, ಯುದ್ಧ ವಿಮಾನ ಅಥವಾ ನೆಲದ ಮೇಲಿಂದಲೂ ಈ ಕ್ಷಿಪಣಿಗಳನ್ನು ಉಡಾವಣೆ ಮಾಡಬಹುದು. 300 ಕೇಜಿ ಸಿಡಿತಲೆ ಹೊತ್ತೊಯ್ಯುವಷ್ಟುಸಾಮರ್ಥ್ಯ ಹೊಂದಿದ್ದು, ಕನಿಷ್ಠ 400 ಕಿ.ಮೀ. ವ್ಯಾಪ್ತಿಯಲ್ಲಿನ ನೆಲೆಗಳ ಮೇಲೆ ದಾಳಿ ನಡೆಸಬಲ್ಲದು. ಗಂಟೆಗೆ 4300 ಕಿ.ಮೀ. ವೇಗದಲ್ಲಿ (ಶಬ್ದದ ಸರಿಸುಮಾರು 3 ಪಟ್ಟು ವೇಗ) ಸಂಚಾರ ಮಾಡುತ್ತದೆ. ಕ್ಷಿಪಣಿಗೆ ಶೇ. 99.99ರಷ್ಟುನಿಖರತೆ ಇದ್ದು, ಶತ್ರು ನೆಲೆ ಕರಾರುವಾಕ್ಕಾಗಿ ನಾಶ ಮಾಡುವ ಸಾಮರ್ಥ್ಯವಿದೆ. ಭೂಮಿಗೆ 75 ಡಿಗ್ರಿ ಸಮಾನಾಂತರದಲ್ಲಿ ಸಾಗಿ ವೈರಿ ನೆಲೆಗೆ ಅಪ್ಪಳಿಸುವ ಶಕ್ತಿ ಹೊಂದಿದೆ.

2,800 ಕೋಟಿ ವೆಚ್ಚದಲ್ಲಿ 3 ಬ್ರಹ್ಮೋಸ್‌ ಕ್ಷಿಪಣಿ ಖರೀದಿ: ಫಿಲಿಪ್ಪೀನ್ಸ್‌

ಮನಿಲಾ: ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್‌ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಫಿಲಿಪ್ಪೀನ್ಸ್‌ ಸರ್ಕಾರ ನಿರ್ಧರಿಸಿದೆ. ಅಂದಾಜು 2800 ಕೋಟಿ ರು. ವೆಚ್ಚದಲ್ಲಿ ಯುದ್ಧ ನೌಕೆಗಳ ಮೇಲೆ ದಾಳಿ ನಡೆಸಬಲ್ಲ ನೌಕಾ ಮಾದರಿಯ 3 ಬ್ರಹ್ಮೋಸ್‌ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸರ್ಕಾರ ನಿರ್ಧರಿಸಿದೆ ಎಂದು ಜ.16 ರಂದು ವರದಿಗಳು ತಿಳಿಸಿದ್ದವು. 

New Ballistic Missile : ಪ್ರಳಯ ಪರೀಕ್ಷೆ ಮಾಡಿದ ಭಾರತ, 500 ಕಿಮೀ ಟಾರ್ಗೆಟ್!

ಇದೀಗ ಒಪ್ಪಂದ ಜಾರಿಗೊಂಡಿದ್ದು, ಬ್ರಹ್ಮೋಸ್‌ ಏರೋಸ್ಪೇಷ್‌ ಪ್ರೈ.ಲಿ. ಯಾವುದೇ ದೇಶವೊಂದರಿಂದ ಕ್ಷಿಪಣಿ ವ್ಯವಸ್ಥೆ ಪೂರೈಕೆಗೆ ಮಾಡಿಕೊಂಡ ದೊಡ್ಡ ಒಪ್ಪಂದ ಎನ್ನಿಸಿಕೊಂಡಿದೆ.  ಹಾಲಿ ಫಿಲಿಪ್ಪೀನ್ಸ್‌ ಬಳಿ, 2ನೇ ವಿಶ್ವ ಮಹಾಯುದ್ಧದ ವೇಳೆ ಅಮೆರಿಕ ಬಳಸಿದ ಯುದ್ಧ ನೌಕೆಗಳು ಮತ್ತು ಶಸ್ತ್ರಾಸ್ತ್ರಗಳಿಗೆ. ಅದನ್ನು ಅಧುನೀಕರಗೊಳಿಸಲು ಸರ್ಕಾರ ನಿರ್ಧರಿಸಿದ್ದು ಅದರಂತೆ ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದವು.

ಚೀನಾ(China) ಜೊತೆಗೆ ಫಿಲಿಪ್ಪೀನ್ಸ್‌ ಉತ್ತಮ ಸಂಬಂಧ ಹೊಂದಿದ್ದರೂ, ದಕ್ಷಿಣ ಸಮುದ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಚೀನಾ ಜೊತೆ ಭಿನ್ನಾಭಿಪ್ರಾಯ ಹೊಂದಿದೆ. ಅದರ ಬೆನ್ನಲ್ಲೇ ಸರ್ಕಾರ ಕ್ಷಿಪಣಿ ಖರೀದಿಗೆ ಮುಂದಾಗಿದೆ. ಬ್ರಹ್ಮೋಸ್‌ ಕ್ಷಿಪಣಿಗಳು ಫಿಲಿಪ್ಪೀನ್ಸ್‌ನ 200 ನಾಟಿಕಲ್‌ ಮೈಲು ವ್ಯಾಪ್ತಿಯ ಆರ್ಥಿಕ ವಲಯವನ್ನು ಯಾವುದೇ ನೌಕೆಗಳ ದಾಳಿಯಿಂದ ರಕ್ಷಿಸಬಲ್ಲ ಸಾಮರ್ಥ್ಯ ಹೊಂದಿವೆ.
 

Follow Us:
Download App:
  • android
  • ios