ಪಾಕಿಸ್ತಾನದ ಇಸ್ಲಾಮಾಬಾದ್‌ನ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ನಡೆದ ಬಾಂಬ್ ಸ್ಫೋಟದಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಇದೊಂದು ಭಯೋತ್ಪಾದಕ ದಾಳಿ ಎಂದು ಪೊಲೀಸರು ಶಂಕಿಸಿದ್ದಾರೆ. 

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಹೊರವಲಯದಲ್ಲಿರುವ ಶಿಯಾ ಸಮುದಾಯದ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ವೇಳೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಕನಿಷ್ಠ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡು ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ರಕ್ಷಣಾ ಅಧಿಕಾರಿಗಳು ಹಾಗೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಸ್ಲಾಮಾಬಾದ್‌ನ ಆಗ್ನೇಯ ಭಾಗದಲ್ಲಿರುವ ತರ್ಲೈ ಕಲಾನ್ ಪ್ರದೇಶದ ಖದೀಜಾ ತುಲ್ ಕುಬ್ರಾ ಮಸೀದಿಯಲ್ಲಿ ಶುಕ್ರವಾರದ ಜುಮಾ ಪ್ರಾರ್ಥನೆಯ ವೇಳೆ ಈ ಸ್ಫೋಟ ಸಂಭವಿಸಿದೆ. ಪ್ರಾರ್ಥನೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದ ಸಮಯದಲ್ಲೇ ಸ್ಫೋಟ ಸಂಭವಿಸಿದ್ದು, ಸಾವು ಹೆಚ್ಚುವ ಸಾಧ್ಯತೆ ಇದೆ.

Add Asianetnews Kannada as a Preferred SourcegooglePreferred

ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳ ಆಸ್ಪತ್ರೆಗೆ ರವಾನೆ

ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆಯೇ ರಕ್ಷಣಾ ಪಡೆಗಳು, ಪೊಲೀಸ್ ಸಿಬ್ಬಂದಿ ಹಾಗೂ ತುರ್ತು ವೈದ್ಯಕೀಯ ತಂಡಗಳು ಸ್ಥಳಕ್ಕೆ ಧಾವಿಸಿದವು. ಗಾಯಗೊಂಡವರನ್ನು ಸಮೀಪದ ವಿವಿಧ ಆಸ್ಪತ್ರೆಗಳಿಗೆ ತಕ್ಷಣವೇ ದಾಖಲಿಸಲಾಗಿದೆ. ದೂರದರ್ಶನ ದೃಶ್ಯಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯಗಳು ವೈರಲ್ ಆಗಿದೆ. ರಕ್ಷಣಾ ಕಾರ್ಯಕರ್ತರ ಪ್ರಕಾರ, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಇಸ್ಲಾಮಾಬಾದ್ ಪೊಲೀಸರು, ಮಸೀದಿಯಲ್ಲಿ ನಡೆದ ಸ್ಫೋಟ ಆಕಸ್ಮಿಕವಲ್ಲ, ಇದು ಉದ್ದೇಶಪೂರ್ವಕವಾಗಿ ನಡೆಸಲಾದ ಭಯೋತ್ಪಾದಕ ದಾಳಿ ಎಂಬುದನ್ನು ಪ್ರಾಥಮಿಕ ತನಿಖೆಯಲ್ಲೇ ದೃಢಪಡಿಸಿದ್ದಾರೆ. ಸ್ಫೋಟದ ಸ್ವರೂಪ ಮತ್ತು ತೀವ್ರತೆ ಗಮನಿಸಿದರೆ ಇದು ಬೃಹತ್ ಬಾಂಬ್ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಳಿಯ ಕುರಿತು ಸಮಗ್ರ ತನಿಖೆ ಆರಂಭಿಸಲಾಗಿದೆ.

ಕೇಂದ್ರ ಸಚಿವರಿಂದ ಖಂಡನೆ

ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಈ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಗಾಯಾಳುಗಳಿಗೆ ಯಾವುದೇ ಕೊರತೆ ಇಲ್ಲದಂತೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ, ದಾಳಿಯ ಹಿಂದಿರುವ ದುಷ್ಕರ್ಮಿಗಳನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

ಉಗ್ರ ಸಂಘಟನೆಗಳ ಮೇಲೆ ಅನುಮಾನ

ಈ ದಾಳಿಯ ಹೊಣೆಗಾರಿಕೆಯನ್ನು ಈವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಪಾಕಿಸ್ತಾನದಲ್ಲಿ ಈ ಹಿಂದೆ ಶಿಯಾ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಿರುವ ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ಅಥವಾ ಇಸ್ಲಾಮಿಕ್ ಸ್ಟೇಟ್ (ಐಎಸ್) ಸೇರಿದಂತೆ ಉಗ್ರ ಸಂಘಟನೆಗಳ ಮೇಲೆ ಶಂಕೆ ವ್ಯಕ್ತವಾಗಿದೆ. ಭದ್ರತಾ ಸಂಸ್ಥೆಗಳು ಈ ದಾಳಿಯ ಹಿಂದೆ ಇರುವ ಸಂಘಟನೆ ಮತ್ತು ಉದ್ದೇಶ ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಿವೆ.