ಬೆಂಗಳೂರಿನ ಹಲಸೂರಿನಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಇದು ಭದ್ರತಾ ಏಜೆನ್ಸಿಗಳಲ್ಲಿ ಆತಂಕ ಸೃಷ್ಟಿಸಿತ್ತು. ತನಿಖೆಯ ನಂತರ ಇದು ಹುಸಿ ಬೆದರಿಕೆ ಎಂದು ದೃಢಪಟ್ಟಿದ್ದು, ಈ ಹಿಂದೆ ಇದೇ ರೀತಿ ಕೃತ್ಯ ಎಸಗಿದ್ದ 'ರಾಜಗಿರಿ' ಎಂಬ ಶಂಕಿತನ ಕೈವಾಡ ಶಂಕೆ
ಬೆಂಗಳೂರು(ಜ.21): ನಗರದ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಅನಾಮಧೇಯ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಕಚೇರಿ ಆವರಣದಲ್ಲಿ ಭಾರೀ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಬಂದ ಸಂದೇಶವು ಭದ್ರತಾ ಏಜೆನ್ಸಿಗಳನ್ನು ಬೆಚ್ಚಿಬೀಳಿಸಿದೆ.
ಆರ್‌ಡಿಎಕ್ಸ್ ಸ್ಫೋಟದ ಎಚ್ಚರಿಕೆ
ಇಸ್ರೇಲ್ ರಾಯಭಾರಿ ಕಚೇರಿಯ ಅಧಿಕೃತ ಇ-ಮೇಲ್ ಐಡಿಗೆ ಬಂದ ಸಂದೇಶದಲ್ಲಿ, 'ಕಚೇರಿ ಹಾಗೂ ಅದರ ಆವರಣದಲ್ಲಿ ಆರ್‌ಡಿಎಕ್ಸ್ (RDX) ಬಾಂಬ್ ಇಡಲಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಭೀಕರ ಸ್ಫೋಟ ಸಂಭವಿಸಲಿದೆ ಎಂದು ಬೆದರಿಕೆ ಹಾಕಲಾಗಿತ್ತು. ಕಚೇರಿಯ ಅಧಿಕಾರಿಗಳು ಇ-ಮೇಲ್ ಪರಿಶೀಲಿಸಿದ ತಕ್ಷಣ ಎಚ್ಚೆತ್ತುಕೊಂಡು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ.
ಡಾಗ್ ಸ್ಕ್ವಾಡ್‌ನಿಂದ ತೀವ್ರ ತಪಾಸಣೆ
ಮಾಹಿತಿ ತಿಳಿಯುತ್ತಿದ್ದಂತೆ ಹಲಸೂರು ಪೊಲೀಸರು, ಬಾಂಬ್ ಪತ್ತೆ ದಳ (Bomb Squad) ಮತ್ತು ಶ್ವಾನ ದಳದೊಂದಿಗೆ ಸ್ಥಳಕ್ಕೆ ಧಾವಿಸಿದರು. ಇಡೀ ಕಚೇರಿ ಆವರಣವನ್ನು ಸುತ್ತುವರಿದ ಪೊಲೀಸರು ಮೂಲೆ ಮೂಲೆಯನ್ನೂ ತಪಾಸಣೆ ನಡೆಸಿದರು. ಆದರೆ, ಗಂಟೆಗಳ ಕಾಲ ನಡೆದ ಸುದೀರ್ಘ ಪರಿಶೀಲನೆಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಅಂತಿಮವಾಗಿ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.
ಹಳೆಯ ಆರೋಪಿ 'ರಾಜಗಿರಿ' ಕೈವಾಡ?
ಈ ಬೆದರಿಕೆ ಮೇಲ್ ಹಿಂದೆ 'ರಾಜಗಿರಿ' ಎಂಬ ವ್ಯಕ್ತಿಯ ಕೈವಾಡ ಇರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈತ ಈ ಹಿಂದೆಯೂ ಇಂತಹ ಕೃತ್ಯಗಳನ್ನು ಎಸಗಿದ್ದ ಎನ್ನಲಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಹಲಸೂರಿನ ಪ್ರಸಿದ್ಧ 'ಗುರುಸಿಂಗ್ ಸಭಾ ಸಿಖ್ ಗುರುದ್ವಾರ'ಕ್ಕೂ ಇದೇ ರೀತಿ ಬಾಂಬ್ ಬೆದರಿಕೆ ಕಳಿಸಿ ಆತಂಕ ಸೃಷ್ಟಿಸಿದ್ದ. ಈಗ ಅದೇ ವ್ಯಕ್ತಿಯಿಂದ ಇಸ್ರೇಲ್ ರಾಯಭಾರಿ ಕಚೇರಿಗೂ ಮೇಲ್ ಬಂದಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಮಾನಸಿಕ ಅಸ್ವಸ್ಥನ ಕೃತ್ಯ ಎಂದು ಶಂಕೆ
ಪೊಲೀಸರು ಕಲೆಹಾಕಿದ ಮಾಹಿತಿಯ ಪ್ರಕಾರ, ಆರೋಪಿ ರಜಗಿರಿ ಓರ್ವ ಮಾನಸಿಕ ಅಸ್ವಸ್ಥ ಎನ್ನಲಾಗುತ್ತಿದೆ. ಮಾನಸಿಕ ಸ್ಥಿಮಿತ ಇಲ್ಲದ ಕಾರಣಕ್ಕೆ ಈ ರೀತಿ ಪದೇ ಪದೇ ಬೆದರಿಕೆ ಮೇಲ್ ಕಳುಹಿಸುತ್ತಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಸಿಸಿಬಿ (CCB) ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಹಲಸೂರು ಮತ್ತು ಸಿಸಿಬಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.


