ಬಾಂಗ್ಲಾ: ಮತ್ತೆ ಹಿಂದೂ ದೇಗುಲ ಮೇಲೆ ದಾಳಿ, ಮೂರ್ತಿಗೆ ಬೆಂಕಿ, ಇಸ್ಕಾನ್ ದೇವಸ್ಥಾನ ಕರಕಲು
ಈ ಘಟನೆಗಳನ್ನು ಮಧ್ಯಂತರ ಸರ್ಕಾರದ ಗಮನಕ್ಕೆ ತಂದರೂ ಸಹ ಪೊಲೀಸರು ಹಾಗೂ ಆಡಳಿತದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸುತ್ತಿಲ್ಲ ಎಂದು ಆರೋಪಿಸಿದ ದಾಸ್
ಢಾಕಾ/ಕೋಲ್ಕತಾ(ಡಿ.08): ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ, ದೇಗುಲ ದಾಳಿ ಹಾಗೂ ಇಸ್ಕಾನ್ ಸನ್ಯಾಸಿ ಬಂಧನ ಪ್ರಕರಣದ ಬೆನ್ನಲ್ಲೇ, ಮತ್ತೊಂದು ದೇಗುಲ ಮೇಲೆ ದಾಳಿ ಘಟನೆ ನಡೆದಿದೆ. ಈ ಸಲ ಢಾಕಾದಲ್ಲಿರುವ ಇಸ್ಕಾನ್ ಕೇಂದ್ರಕ್ಕೆ ಬೆಂಕಿ ಹಚ್ಚಲಾಗಿದ್ದು, ಅದರಲ್ಲಿದ್ದ 2 ದೇಗುಲಗಳು ಹಾಗೂ ದೇವರ ಮೂರ್ತಿಗಳು ಭಾಗಶಃ ಸುಟ್ಟಿವೆ.
ಈ ಕುರಿತು ಕೋಲ್ಕತಾ ಇಸ್ಕಾನ್‌ನ ಉಪಾಧ್ಯಕ್ಷ ರಾಧಾರಮಣ ದಾಸ್ ಹಾಗೂ ಬಾಂಗ್ಲಾ ಇಸ್ಕಾನ್ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರದಾಸ ಬ್ರಹ್ಮಚಾರಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಬಾಂಗ್ಲಾದ ಢಾಕಾ ಜಿಲ್ಲೆಯಲ್ಲಿರುವ ನಮ್ಮಟ್ಟಾ ಇಸ್ಕಾನ್ ಕೇಂದ್ರವನ್ನು ಸುಡಲಾಗಿದೆ. ಅದರಲ್ಲಿನ ಶ್ರೀ ಶ್ರೀ ರಾಧಾ ಕೃಷ್ಣ ದೇವಸ್ಥಾನ ಹಾಗೂ ಶ್ರೀ ಶ್ರೀ ಮಹಾಭಾಗ್ಯ ಲಕ್ಷ್ಮೀ ನಾರಾಯಣ ದೇವಸ್ಥಾನಗಳಿಗೆ ಬೆಂಕಿ ಹಚ್ಚಲಾಗಿದೆ. ಬೆಳಗಿನ ಜಾವ 2ರಿಂದ 3 ಗಂಟೆಯ ನಡುವೆ ಮೇಲ್ಬಾವಣಿಯ ಮೂಲಕ ಪೆಟ್ರೋಲ್ ಹಾಗೂ ಆಕ್ಟೇನ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಲಕ್ಷ್ಮೀ ನಾರಾಯಣಮೂರ್ತಿ ಸೇರಿದಂತೆ ಕೆಲವು ಮೂರ್ತಿಗಳಿಗೆ ಹಾನಿಯಾಗಿದೆ. ದೇಗುಲದ ಒಳಗಿನ ಕರ್ಟನ್ ಸುಟ್ಟಿದೆ. ಕೂಡಲೇ ಅಗ್ನಿಶಾಮಕ ಕಾರ್ಯ ನಡೆದಿದ್ದರಿಂದ ಹೆಚ್ಚಿನ ಹಾನಿ ತಪ್ಪಿದೆ' ಎಂದು ತಿಳಿಸಿದ್ದಾರೆ.
ಭಾರತ ಗಡಿ ಮುಚ್ಚಿದರೆ ಪತನವಾಗೋದೇಕೆ ಬಾಂಗ್ಲಾ: ಮೌನವಾಗಿದ್ದ ಶೇಖ್ ಹಸೀನಾ ಸಿಡಿದೇಳೋಕೆ ಕಾರಣ ಯಾರು?
'ಈ ಘಟನೆಗಳನ್ನು ಮಧ್ಯಂತರ ಸರ್ಕಾರದ ಗಮನಕ್ಕೆ ತಂದರೂ ಸಹ ಪೊಲೀಸರು ಹಾಗೂ ಆಡಳಿತದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸುತ್ತಿಲ್ಲ' ಎಂದೂ ದಾಸ್ ಆರೋಪಿಸಿದ್ದಾರೆ. ಈ ನಡುವೆ, ಪೊಲೀಸರು ಪ್ರತಿಕ್ರಿಯೆ ನೀಡಿ, ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಕಳೆದ ವಾರವೂ 3 ದೇಗುಲಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಈ ಮೊದಲು, ದಾಳಿಯಿಂದ ತಪ್ಪಿಸಿಕೊಳ್ಳಲು ತಮ್ಮ ಧರ್ಮ ಪ್ರದರ್ಶಿಸುವ ತಿಲಕ ಧರಿಸದಂತೆ ಇಸ್ಕಾನ್ ಸನ್ಯಾಸಿಗಳು ಹಾಗೂ ಅನುಯಾಯಿಗಳಿಗೆ ಅವರು ಕರೆ ನೀಡಿದ್ದರು. ಘಟನೆಯನ್ನು ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಸುಕಾಂತ್ ಮಜುಂದಾರ್ ಖಂಡಿಸಿದ್ದು, ಇದು ಪೂಜಾ ಸ್ಥಳದ ವಿರುದ್ಧ ದ್ವೇಷ ಸಾಧಿಸುವ ಕೆಲಸವಾಗಿದೆ ಎಂದು ಕಿಡಿ ಕಾರಿದ್ದಾರೆ.
ಅಕ್ರಮ ಬಾಂಗ್ಲಾ ನಾಗರಿಕರನ್ನು ಗುರುತಿಸಿ ಹೊರದಬ್ಬಲು ಮುಸ್ಲಿಂ ಸಮುದಾಯದಿಂದ ಮನವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಒಂದರ ನಂತರ ಒಂದರಂತೆ ದೇವಾಲಯಗಳನ್ನು ಧ್ವಂಸ ಮಾಡಲಾಗುತ್ತಿದೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಕಣ್ಣುಮುಚ್ಚಿ ಕುಳಿತಿದ್ದಾರೆ. ಈ ಪರಿಸ್ಥಿತಿಯಲ್ಲಿ, ದೇಶದಲ್ಲಿರುವ ಅಕ್ರಮ ಬಾಂಗ್ಲಾದೇಶಿಗಳನ್ನು ಗುರುತಿಸಿ ಅವರನ್ನು ಬಾಂಗ್ಲಾದೇಶಕ್ಕೆ ಹಿಂದಿರುಗಿಸುವಂತೆ ಒತ್ತಾಯಿಸಲಾಗಿದೆ. ದೆಹಲಿಯಲ್ಲಿ ಈ ಬೇಡಿಕೆಯೊಂದಿಗೆ ಹಜರತ್ ನಿಜಾಮುದ್ದೀನ್ ದರ್ಗಾ ಪ್ರದೇಶದ ಮುಸ್ಲಿಂ ಧರ್ಮಗುರುಗಳು ಮತ್ತು ಸ್ಥಳೀಯ ನಿವಾಸಿಗಳ ಪ್ರತಿನಿಧಿಗಳು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರನ್ನು ಭೇಟಿ ಮಾಡಿದರು.
ಶನಿವಾರ ರಾಜ್ ನಿವಾಸ್‌ನಿಂದ ಹೊರಡಿಸಿದ ಹೇಳಿಕೆಯಲ್ಲಿ ಮುಸ್ಲಿಂ ಸಮುದಾಯದ ಬೇಡಿಕೆಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮುಸ್ಲಿಂ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಅವರು ಒಂದು ಪತ್ರವನ್ನೂ ನೀಡಿದ್ದಾರೆ. ಲೆಫ್ಟಿನೆಂಟ್ ಗವರ್ನರ್‌ಗೆ ಬರೆದ ಪತ್ರದಲ್ಲಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಮತ್ತು ದೇಶದ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ಈ ಪರಿಸ್ಥಿತಿಯಲ್ಲಿ, ದೆಹಲಿಯಲ್ಲಿ ಅಕ್ರಮವಾಗಿ ವಾಸಿಸುವ ಬಾಂಗ್ಲಾದೇಶಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ. ಬಾಂಗ್ಲಾದೇಶಿಗಳಿಗೆ ಮನೆ ಬಾಡಿಗೆಗೆ ನೀಡಬಾರದು ಎಂದು ಪ್ರತಿನಿಧಿಗಳು ಒತ್ತಾಯಿಸಿದ್ದಾರೆ. ಅವರಿಗೆ ಯಾವುದೇ ಸಂಸ್ಥೆಯಲ್ಲಿ ಉದ್ಯೋಗ ನೀಡಬಾರದು.
30 ಲಕ್ಷ ಜನರನ್ನ ಮುಗಿಸಿದ ಪಾಕ್ ಮಿತ್ರವಾಯ್ತು, ಸಹಾಯ ಮಾಡಿದ ಭಾರತ ಶತ್ರುವಾಯ್ತು! ತಸ್ಲೀಮಾ ನಸ್ರೀನ್
ದೆಹಲಿಯಲ್ಲಿ ಅಕ್ರಮವಾಗಿ ವಾಸಿಸುವ ಬಾಂಗ್ಲಾದೇಶಿಗಳು ಸರ್ಕಾರಿ ಭೂಮಿ, ಪಾದಚಾರಿ ಮಾರ್ಗಗಳು, ಉದ್ಯಾನವನಗಳು ಮತ್ತು ಇತರ ಸ್ಥಳಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಮುಸ್ಲಿಂ ಪ್ರತಿನಿಧಿಗಳು ಹೇಳಿದ್ದಾರೆ. ಅವರನ್ನು ತಕ್ಷಣವೇ ಅಲ್ಲಿಂದ ಖಾಲಿ ಮಾಡಬೇಕು. ಈ ಬಗ್ಗೆ ಪೊಲೀಸ್ ಮತ್ತು ಪುರಸಭೆಗೆ ತುರ್ತು ಸೂಚನೆ ನೀಡುವಂತೆ ಒತ್ತಾಯಿಸಲಾಗಿದೆ. ಅಕ್ರಮವಾಗಿ ವಾಸಿಸುವ ಬಾಂಗ್ಲಾದೇಶಿಗಳಿಗೆ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ನೀಡಬಾರದು ಎಂದು ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಅಲ್ಲದೆ, ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಅವರಿಗೆ ಆಶ್ರಯ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಧಾರ್ಮಿಕ ಸ್ಥಳಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ಇಸ್ಕಾನ್ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ. ಈ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಡೆಯಲು ಮೊಹಮ್ಮದ್ ಯೂನಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.