ಪಾಕ್ ಮಸೀದಿಯಲ್ಲಿ ಬಾಂಬ್ ದಾಳಿ: 46 ಜನ ಬಲಿ, ಸುಮಾರು 150 ಮಂದಿಗೆ ಗಾಯ; ಹೊಣೆ ಹೊತ್ತ ತಾಲಿಬಾನ್..!
ಅಫ್ಘಾನಿಸ್ತಾನದ ಗಡಿಯಲ್ಲಿರುವ ಹಿಂದಿನ ಬುಡಕಟ್ಟು ಪ್ರದೇಶಗಳಿಗೆ ಸಮೀಪವಿರುವ ಪ್ರಾಂತೀಯ ರಾಜಧಾನಿ ಪೇಶಾವರದಲ್ಲಿ ಸೋಮವಾರ ಮಧ್ಯಾಹ್ನದ ಪ್ರಾರ್ಥನೆಯ ವೇಳೆ ಈ ದಾಳಿ ಸಂಭವಿಸಿದೆ.

ಪೇಶಾವರ (ಜನವರಿ 30, 2023): ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಆಘಾತವಾಗಿದೆ. ಪಾಕಿಸ್ತಾನದ ಪೇಶಾವರದಲ್ಲಿ ಮಸೀದಿಯಲ್ಲ ಬಾಂಬ್ ದಾಳಿಯಾಗಿದ್ದು, ಈ ಸ್ಫೋಟದಲ್ಲಿ ಕನಿಷ್ಠ 46 ಜನರು ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿಯೂ ಇದೆ. ಅತ್ಯಂತ ಸೂಕ್ಷ್ಮ ಪಾಕಿಸ್ತಾನಿ ಪೊಲೀಸ್ ಪ್ರಧಾನ ಕಚೇರಿಯೊಳಗಿನ ಮಸೀದಿಯಲ್ಲಿ ಈ ಸ್ಫೋಟ ನಡೆದಿದ್ದು, ಈ ಹಿನ್ನೆಲೆ ಪೊಲೀಸರು ಸಹ ಈ ಘಟನೆಯಲ್ಲಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಹಿಂದಿನ ಬುಡಕಟ್ಟು ಪ್ರದೇಶಗಳಿಗೆ ಸಮೀಪವಿರುವ ಪ್ರಾಂತೀಯ ರಾಜಧಾನಿ ಪೇಶಾವರದಲ್ಲಿ ಸೋಮವಾರ ಮಧ್ಯಾಹ್ನದ ಪ್ರಾರ್ಥನೆಯ ವೇಳೆ ಈ ದಾಳಿ ಸಂಭವಿಸಿದೆ. ಈ ಪ್ರದೇಶದಲ್ಲಿ, ಉಗ್ರಗಾಮಿತ್ವವು ಸ್ಥಿರವಾಗಿ ಹೆಚ್ಚುತ್ತಿದೆ ಎಂದೂ ತಿಳಿದುಬಂದಿದೆ. ಇನ್ನು, ಮಸೀದಿಯಲ್ಲಿ ನಡೆದ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್‌ನ ಕಮಾಂಡರ್ ಸರ್ಬಕಾಫ್ ಮೊಹಮದ್ ಹೊತ್ತುಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಎಪಿ ವರದಿ ಮಾಡಿದೆ.
ಇದನ್ನು ಓದಿ: ಪಾಕಿಸ್ತಾನದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಪ್ರಬಲ ಬಾಂಬ್ ಸ್ಫೋಟ
ಸ್ಫೋಟದ ತೀವ್ರತೆಗೆ ಗೋಡೆ ಹಾಗೂ ಛಾವಣಿಯ ಕೆಲ ಭಾಗ ಹಾರಿಹೋಗಿದ್ದು, ಮಸೀದಿಯಲ್ಲಿ ತೀವ್ರಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದೂ ತಿಳಿದುಬಂದಿದೆ. ಅಲ್ಲದೆ, ಅನೇಕ ಪೊಲೀಸರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಪೇಶಾವರ ಪೊಲೀಸ್ ಮುಖ್ಯಸ್ಥ ಮುಹಮ್ಮದ್ ಇಜಾಜ್ ಖಾನ್ ಹೇಳಿದ್ದಾರೆ. ಸಾಮಾನ್ಯವಾಗಿ 300 ರಿಂದ 400 ಅಧಿಕಾರಿಗಳು ಮಸೀದಿಯಲ್ಲಿ ಪ್ರಾರ್ಥನೆಗೆ ಹಾಜರಾಗುತ್ತಾರೆ ಎಂದೂ ಅವರು ಅಂದಾಜಿಸಿದ್ದಾರೆ.
ಈ ಹಿನ್ನೆಲೆ ಅವರನ್ನು ಸುರಕ್ಷಿತವಾಗಿ ಹೊರತರಲು ಪ್ರಯತ್ನ ನಡೆಸಲಾಗುತ್ತಿದೆ. ರಕ್ತಸಿಕ್ತ ಸ್ಥೀತಿಯಲ್ಲಿದ್ದ ಬದುಕುಳಿದವರು ಅವಶೇಷಗಳಿಂದ ಕುಂಟುತ್ತಾ ಹೊರಬಂದರು. ಆದರೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ದೇಹಗಳನ್ನು ಆಂಬ್ಯುಲೆನ್ಸ್‌ಗಳಲ್ಲಿ ಸಾಗಿಸಲಾಯಿತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರು: ತಪ್ಪೊಪ್ಪಿಗೆ ಪತ್ರ ನೀಡಿದ್ದಕ್ಕೆ ಶಂಕಿತ ಉಗ್ರನಿಗೆ ಜೈಲಲ್ಲೇ ಹಲ್ಲೆ
ಇದು ತುರ್ತು ಪರಿಸ್ಥಿತಿ ಎಂದು ಪೇಶಾವರದ ಮುಖ್ಯ ಆಸ್ಪತ್ರೆಯ ವಕ್ತಾರ ಮೊಹಮ್ಮದ್ ಅಸಿಮ್ ಖಾನ್ ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದು, ಅವರು 33 ಜನ ಮೃತಪಟ್ಟ ಬಗ್ಗೆ ಅಧಿಕೃತಗೊಳಿಸಿದ್ದಾರೆ. ಇನ್ನು, ಖೈಬರ್ ಪಖ್ತುಂಖ್ವಾ ಗವರ್ನರ್ ಗುಲಾಂ ಅಲಿ ಅವರು ಸಾವಿನ ಸಂಖ್ಯೆಯನ್ನು 28 ಮತ್ತು 150 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದು, ಈ ಪೈಕಿ ಹೆಚ್ಚಿನವರು ಪೊಲೀಸರು ಎಂದು ತಿಳಿದುಬಂದಿದೆ.
ಪೇಶಾವರದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯು ನಗರದ ಅತ್ಯಂತ ಬಿಗಿಯಾಗಿ ನಿಯಂತ್ರಿತ ಪ್ರದೇಶಗಳಲ್ಲಿ ಒಂದಾಗಿದೆ. ಇದು ಗುಪ್ತಚರ ಮತ್ತು ಭಯೋತ್ಪಾದನಾ ನಿಗ್ರಹ ಬ್ಯೂರೋಗಳನ್ನು ಹೊಂದಿದೆ ಮತ್ತು ಪ್ರಾದೇಶಿಕ ಕಾರ್ಯದರ್ಶಿಯ ಪಕ್ಕದಲ್ಲಿದೆ.
ಇದನ್ನೂ ಓದಿ: ಜಮ್ಮುವಿನಲ್ಲಿ 2 ಕಡೆ ಬಾಂಬ್ ಸ್ಫೋಟ: ಕನಿಷ್ಠ 6 ಜನರಿಗೆ ಗಾಯ
ಬಾಂಬ್ ಸ್ಫೋಟದ ನಂತರ ಪಾಕಿಸ್ತಾನ ಸರ್ಕಾರ ಹೈ ಅಲರ್ಟ್ ಘೋಷಿಸಿದ್ದು, ಚೆಕ್‌ಪೋಸ್ಟ್‌ಗಳನ್ನು ಹೆಚ್ಚಿಸಲಾಯಿತು ಮತ್ತು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಯಿತು. ಇನ್ನೊಂದೆಡೆ, ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸ್ನೈಪರ್‌ಗಳನ್ನು ಕಟ್ಟಡಗಳ ಮೇಲೆ ಮತ್ತು ನಗರದ ಪ್ರವೇಶ ಬಿಂದುಗಳಲ್ಲಿ ನಿಯೋಜಿಸಲಾಗಿದೆ. ಪಾಕಿಸ್ತಾನವನ್ನು ರಕ್ಷಿಸುವ ಕರ್ತವ್ಯ ನಿರ್ವಹಿಸುವವರನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕರು ಭಯವನ್ನು ಸೃಷ್ಟಿಸಲು ಬಯಸುತ್ತಾರೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದ ವಿರುದ್ಧ ಹೋರಾಡುವವರನ್ನು ಭೂಮಿಯಿಂದಲೇ ಅಳಿಸಿಹಾಕಲಾಗುತ್ತದೆ ಎಂದೂ ಅವರು ಕೆಂಡ ಕಾರಿದ್ದಾರೆ.
ಆತ್ಮಾಹುತಿ ದಾಳಿಯ ಸಾಧ್ಯತೆಯನ್ನು ಬಾಂಬ್ ವಿಲೇವಾರಿ ತಂಡಗಳು ತನಿಖೆ ನಡೆಸುತ್ತಿದ್ದು, ಎರಡನೇ ಸಾಲಿನಲ್ಲಿದ್ದವರಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಮಾಮ್ ಪ್ರಾರ್ಥನೆಯನ್ನು ಪ್ರಾರಂಭಿಸಿದ ಕೆಲವೇ ಸೆಕೆಂಡುಗಳ ನಂತರ ಸ್ಫೋಟ ಸಂಭವಿಸಿದೆ ಎಂದೂ ಪ್ರತಯ್ಕ್ಷದರ್ಶಿ ಪೊಲೀಸ್ ಅಧಿಕಾರಿ ಶಾಹಿದ್ ಅಲಿ ಹೇಳಿದ್ದಾರೆ. ಆಕಾಶಕ್ಕೆ ಕಪ್ಪು ಹೊಗೆ ಏರುತ್ತಿರುವುದನ್ನು ನಾನು ನೋಡಿದೆ. ನನ್ನ ಜೀವವನ್ನು ಉಳಿಸಿಕೊಳ್ಳಲು ನಾನು ಓಡಿಹೋದೆ. ಜನರ ಕಿರುಚಾಟವು ನನ್ನ ಮನಸ್ಸಿನಲ್ಲಿ ಇನ್ನೂ ಪ್ರತಿಧ್ವನಿಸುತ್ತಿದೆ, ಜನರು ಸಹಾಯಕ್ಕಾಗಿ ಕಿರುಚುತ್ತಿದ್ದರು ಎಂದೂ 47 ವರ್ಷದ ಈ ಅಧಿಕಾರಿ ಎಎಫ್‌ಪಿಗೆ ತಿಳಿಸಿದರು.
ಇದನ್ನೂ ಓದಿ: ಹುಸಿ ಬಾಂಬ್ ಬೆದರಿಕೆ: ಗೋವಾ- ಮಾಸ್ಕೋ ವಿಮಾನ ಗುಜರಾತ್‌ನಲ್ಲಿ ತುರ್ತು ಭೂಸ್ಪರ್ಶ