ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ ವಿಚಾರಣಾಧೀನ ಕೈದಿ ಸಯ್ಯದ್‌ ಅಲಿ ಮೇಲೆ ಹಲ್ಲೆ. ಡಿ.16ರಂದು ಘಟನೆ ನಡೆದಿದ್ದು, ಶಂಕಿತ ಉಗ್ರ ಸಯ್ಯದ್‌ ಅಲಿಯನ್ನು ಪ್ರತ್ಯೇಕ ಸೆಲ್‌ಗೆ ಸ್ಥಳಾಂತರ. 

ಬೆಂಗಳೂರು(ಜ.28): ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಪತ್ರ ನೀಡಿದ್ದ ಶಂಕಿತ ಉಗ್ರನ ಮೇಲೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಐವರು ಸಹಚರರು ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ ವಿಚಾರಣಾಧೀನ ಕೈದಿ ಸಯ್ಯದ್‌ ಅಲಿ ಹಲ್ಲೆಗೆ ಒಳಗಾದ ಶಂಕಿತ. ಡಿ.16ರಂದು ಘಟನೆ ನಡೆದಿದ್ದು, ಶಂಕಿತ ಉಗ್ರ ಸಯ್ಯದ್‌ ಅಲಿಯನ್ನು ಪ್ರತ್ಯೇಕ ಸೆಲ್‌ಗೆ ಸ್ಥಳಾಂತರಿಸಲಾಗಿದೆ. ಘಟನೆ ಸಂಬಂಧ ಕಾರಾಗೃಹದ ಜೈಲರ್‌ ಪ್ರಭು ಖಂಡ್ರೆ ನೀಡಿದ ದೂರಿನ ಮೇರೆಗೆ ವಿಚಾರಣಾಧಿನ ಕೈದಿಗಳಾದ ಕಿಚನ್‌ ಬುಹಾರಿ, ಜುಲ್ಫಿಕರ್‌ ಅಲಿ, ಶಿಯಾವುದ್ದೀನ್‌, ಸಜಾ ಕೈದಿಗಳಾದ ಅಹಮ್ಮದ್‌ ಬಾವಾ ಅಬೂಬಕರ್‌, ಬಿಲಾಲ್‌ ಅಹ್ಮದ್‌ ಕ್ಯುಟಾ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru: ಜಡ್ಜ್ ಮನೆಯನ್ನೂ ಬಿಡದ ಖದೀಮರು: 60ಕ್ಕೂ ಹೆಚ್ಚು ಬಾರಿ ಕಳ್ಳತನ ಮಾಡಿದ್ದ ಮನೆಗಳ್ಳರು ಅರೆಸ್ಟ್‌!

ಬೆಂಗಳೂರಿನಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್‌ ನಾಸೀರ್‌ ಮದನಿಯನ್ನು ಬಂಧಿಸಿದ್ದಕ್ಕೆ ನಿಷೇಧಿತ ಉಗ್ರ ಸಂಘಟನೆ ‘ಅಲ್‌-ಉಮಾ’ ಸದಸ್ಯರು ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ದ್ವೇಷ ಸಾಧಿಸುತ್ತಿದ್ದರು. ಬಿಜೆಪಿ ಕಚೇರಿಯನ್ನು ಗುರಿಯಾಗಿಸಿ 2013ರ ಏಪ್ರಿಲ್‌ 13ರಂದು ಬಿಜೆಪಿ ಕಚೇರಿ ಸಮೀಪ ಬೈಕ್‌ನಲ್ಲಿ ‘ಐಇಡಿ’ ಬಾಂಬ್‌ ಸ್ಫೋಟಿಸಿದ್ದರು. ಈ ದುರ್ಘಟನೆಯಲ್ಲಿ 12 ಪೊಲೀಸರು ಮತ್ತು 6 ನಾಗರಿಕರು ಗಾಯಗೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ಬೆಂಗಳೂರು ಪೊಲೀಸರು ಆರು ಮಂದಿ ಶಂಕಿತರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಈ ನಡುವೆ ಶಂಕಿತ ಉಗ್ರ ಸಯ್ಯದ್‌ ಅಲಿ, ಕೋರ್ಚ್‌ಗೆ ತಪ್ಪೊಪ್ಪಿಗೆ ಪತ್ರವನ್ನು ಕಳುಹಿಸಿದ್ದ. ಇತ್ತೀಚೆಗೆ ನ್ಯಾಯಾಲಯ ಆ ತಪ್ಪೊಪ್ಪಿಗೆ ಪತ್ರವನ್ನು ಒಪ್ಪಿಕೊಂಡಿತ್ತು.

ಸಯ್ಯದ್‌ ಅಲಿ ತಪ್ಪೊಪ್ಪಿಗೆ ಪತ್ರ ನೀಡಿದ ವಿಚಾರ ತಿಳಿದು ಆರೋಪಿತರು ಡಿ.16ರಂದು ಸೈಯದ್‌ ಅಲಿ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಜೈಲಾಧಿಕಾರಿಗೆ ದೂರು ನೀಡಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು. ಈ ಹಲ್ಲೆ ಬೆಳಕಿಗೆ ಬಂದ ಬೆನ್ನಲ್ಲೇ ಜೈಲಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಿದ್ದೇನು?

*ಬಾಂಬ್‌ ಸ್ಫೋಟ ಕೇಸ್‌ನಲ್ಲಿ ಕೋರ್ಚ್‌ಗೆ ಓರ್ವ ತಪ್ಪೊಪ್ಪಿಗೆ
*ಇದಕ್ಕೆ ಆಕ್ರೋಶಗೊಂಡು ಇತರ ಶಂಕಿತ ಉಗ್ರರಿಂದ ಹಲ್ಲೆ
*ಜೈಲಾಧಿಕಾರಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ
*ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಶಂಕಿತನ ಸ್ಥಳಾಂತರ

ಪ್ರಕರಣ ಹಿನ್ನೆಲೆ

*2008ರ ಸರಣಿ ಬಾಂಬ್‌ ಸ್ಫೋಟದ ರುವಾರಿ ಮದನಿ ಬಂಧನಕ್ಕೆ ಆಕ್ರೋಶ
*ಇದೇ ಸಿಟ್ಟಿನಲ್ಲಿ ಬಿಜೆಪಿಯ ಮಲ್ಲೇಶ್ವರ ಕಚೇರಿ ಬಳಿ ಬಾಂಬ್‌ ಸ್ಫೋಟ
*ಈ ಬಾಂಬ್‌ ಸ್ಫೋಟದಲ್ಲಿ 12 ಪೊಲೀಸರು, 6 ನಾಗರಿಕರಿಗೆ ಗಾಯ
*ಈ ಕೇಸ್‌ನಲ್ಲಿ ಆರು ಮಂದಿಯನ್ನು ಬಂಧಿಸಿದ ಜೈಲಿಗಟ್ಟಿದ್ದ ಪೊಲೀಸರು