ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರ ಲಾಹೋರ್‌ನ ಜಮಾನ್‌ ಪಾರ್ಕ್ನಲ್ಲಿರುವ ನಿವಾಸದ ಮೇಲೆ ಶನಿವಾರ ದಾಳಿ ನಡೆಸಿರುವ ಪಂಜಾಬ್‌ ಪೊಲೀಸ್‌ ಪಡೆಯ 10000 ಪೊಲೀಸರು, ಅನೇಕ ಶಸ್ತ್ರಾಸ್ತ್ರ , ಪೆಟ್ರೋಲ್‌ ಬಾಂಬ್‌ ವಶಪಡಿಸಿಕೊಂಡಿದ್ದಾರೆ.

ಲಾಹೋರ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರ ಲಾಹೋರ್‌ನ ಜಮಾನ್‌ ಪಾರ್ಕ್ನಲ್ಲಿರುವ ನಿವಾಸದ ಮೇಲೆ ಶನಿವಾರ ದಾಳಿ ನಡೆಸಿರುವ ಪಂಜಾಬ್‌ ಪೊಲೀಸ್‌ ಪಡೆಯ 10000 ಪೊಲೀಸರು, ಅನೇಕ ಶಸ್ತ್ರಾಸ್ತ್ರ , ಪೆಟ್ರೋಲ್‌ ಬಾಂಬ್‌ ವಶಪಡಿಸಿಕೊಂಡಿದ್ದಾರೆ. ಇಮ್ರಾನ್‌ ಖಾನ್‌ ಕೋರ್ಟ್ ವಿಚಾರಣೆಗೆ ತೆರಳುತ್ತಲೇ, ಪೊಲೀಸರು ಏಕಾಏಕಿ ಅವರ ಮನೆಗೆ ನುಗ್ಗಿದರು. ಈ ವೇಳೆ ಪೊಲೀಸರು ಮತ್ತು ಇಮ್ರಾನ್‌ರ ಪಿಟಿಐ (PTI) ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು. ಆದರೆ ಭಾರೀ ಸಂಖ್ಯೆಯಲ್ಲಿದ್ದ ಪೊಲೀಸರು, ಮನೆಯೊಳಗೆ ನುಗ್ಗಿ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದರೆ. ಮತ್ತೊಂದೆಡೆ ಗದ್ದಲ ಪ್ರಕರಣ ಸಂಬಂಧ ಪಿಟಿಐ ಪಕ್ಷದ 60 ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಈ ನಡುವೆ ಪ್ರಧಾನಿಯಾಗಿದ್ದ ವೇಳೆ ಸಿಕ್ಕಿದ್ದ ಉಡುಗೊರೆಗಳನ್ನು ಅಕ್ರಮವಾಗಿ ಮಾರಿದ ಪ್ರಕರಣದಲ್ಲಿ ಇಮ್ರಾನ್‌ ವಿರುದ್ಧ ಹೊರಡಿಸಿದ್ದ ಬಂಧನದ ವಾರಂಟ್‌ (Arrest Warrent) ಅನ್ನು ಸ್ಥಳೀಯ ಕೋರ್ಟ್‌ ಶನಿವಾರ ದ್ದುಪಡಿಸಿದೆ. ಇಮ್ರಾನ್‌ ಭಾರೀ ಬೆಂಬಲಿಗರ ಜೊತೆಗೂಡಿ ಶನಿವಾರ ಕೋರ್ಟ್‌ಗೆ ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರಿಂದ ಕೋರ್ಟ್‌ ಹೊರಗೇ ದಾಖಲೆ ಪತ್ರಕ್ಕೆ ಸಹಿ ಹಾಕಿಸಿ ಕಳುಹಿಸಿಕೊಡಲಾಯಿತು. ಜೊತೆಗೆ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ಕೋರ್ಟ್‌ ಮಾಜಿ ಪ್ರಧಾನಿಗೆ ಸೂಚಿಸಿತು.

ತೋಶಾಖಾನಾ ಕೇಸ್‌ನಲ್ಲಿ ಬುಲಾವ್‌

ತೋಶಾಖಾನಾ ಪ್ರಕರಣದಲ್ಲಿ ( toshakhana scam) ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಇಸ್ಲಾಮಾಬಾದ್‌ನ ಜಿಲ್ಲಾ ಹಾಗೂ ಸೆಶನ್ಸ್‌ ನ್ಯಾಯಾಧೀಶರಾದ ಜಾಫರ್‌ ಇಕ್ಬಾಲ್‌ ಫೆ.28ರಂದು ಇಮ್ರಾನ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಜಾರಿ ಮಾಡಿದ್ದರು. ಪ್ರಧಾನಿಯಾಗಿದ್ದ ಸಮಯದಲ್ಲಿ ದೊರೆತ ಉಡುಗೊರೆಗಳ ಲೆಕ್ಕವನ್ನು ಖಜಾನೆ ನೀಡದೇ ಸ್ವಂತಕ್ಕೆ ಮಾರಿಕೊಂಡಿದ್ದಾರೆ ಎಂಬ ಆರೋಪ ಇಮ್ರಾನ್‌ ವಿರುದ್ಧ ಕೇಳಿಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಇಮ್ರಾನ್‌ರನ್ನು ಮಾ.20ರವರೆಗೂ ಬಂಧಿಸಬಾರದು ಎಂದು ಲಾಹೋರ್‌ ಕೋರ್ಟ್‌ ಆದೇಶಿಸಿದೆ. ಇದರ ನಡುವೆಯೇ ಇಮ್ರಾನ್‌ ಖಾನ್‌ (Imran khan) ನಿವಾಸದ ಬಳಿ ಪೊಲೀಸರು ಹಾಗೂ ಇಮ್ರಾನ್‌ ಬೆಂಬಲಿಗರ ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು ಹೊಸ ಪ್ರಕರಣ ದಾಖಲಿಸಿದ್ದಾರೆ.

ಹೈಡ್ರಾಮಾ 
ಮೊದಲು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ರನ್ನು ಬಂಧಿಸದಂತೆ ಲಾಹೋರ್‌ ಹೈಕೋರ್ಟ್ ತಡೆ ನೀಡಿತ್ತು. ಇದಕ್ಕೂ ಮೊದಲು ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲು ಪೊಲೀಸರು ಲಾಹೋರ್‌ನಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದರು. ಆದರೆ ಪೊಲೀಸರ ಈ ನಡೆಯನ್ನು ಪ್ರಶ್ನಿಸಿ ತೆಹ್ರೀಕ್‌-ಎ-ಇನ್ಸಾಫ್‌ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಲಾಹೋರ್‌ ಹೈಕೋರ್ಟ್‌ (Lahore Highcourt) ಗುರುವಾರ ಬೆಳಗ್ಗೆ 10 ಗಂಟೆವರೆಗೆ ಇಮ್ರಾನ್‌ರನ್ನು ಬಂಧಿಸದಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಅಲ್ಲದೇ ಇಮ್ರಾನ್‌ ನಿವಾಸದ ಬಳಿ ಇರುವ ಪ್ಯಾರಾಮಿಲಿಟರಿ ಪಡೆಯನ್ನು ತೆರವು ಮಾಡುವಂತೆ ಸೂಚಿಸಿತ್ತು.

ಮತ್ತೊಂದಡೆ ತೋಶಖಾನ ಪ್ರಕರಣದಲ್ಲಿ ಇಮ್ರಾನ್‌ ವಿರುದ್ಧ ಜಾರಿ ಮಾಡಲಾಗಿದ್ದ ಜಾಮೀನು ರಹಿತ ಬಂಧನ (Non bailable warrant)ವಾರೆಂಟ್‌ ಪ್ರಶ್ನಿಸಿ ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿತ್ತು. ಇದಕ್ಕೂ ಮೊದಲು ಖಾನ್‌ ನಿವಾಸದ ಎದುರು ಜಮಾಯಿಸಿದ್ದ ಅವರ ಬೆಂಬಲಿಗರು, ಬಂಧಿಸಲು ಮುಂದಾದ ಪೊಲೀಸರನ್ನು ತಡೆದು ಖಾನ್‌ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಘರ್ಷಣೆಗಳು ನಡೆದಿದ್ದು, 54 ಪೊಲೀಸ್‌ ಸಿಬ್ಬಂದಿ ಸೇರಿ 60 ಮಂದಿ ಗಾಯಗೊಂಡಿದ್ದಾರೆ.

ನನ್ನ ಹತ್ಯೆಗೆ ಯತ್ನ 
ಪ್ರಕರಣಗಳಲ್ಲಿ ನನ್ನನ್ನು ಬಂಧಿಸಲು ಪೊಲೀಸರು ನಡೆಸುತ್ತಿರುವುದು ಬರೀ ನಾಟಕವಾಗಿದೆ. ಇದರ ಹಿಂದೆ ನನ್ನನ್ನು ಅಪಹರಣ ಮಾಡಿ, ಕೊಲೆ ಮಾಡುವ ಉದ್ದೇಶವನ್ನು ಅವರು ಹೊಂದಿದ್ದಾರೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆರೋಪಿಸಿದ್ದಾರೆ. ಈ ಕುರಿತಾಗಿ ಟ್ವೀಟ್‌ ಮಾಡಿದ್ದ ಅವರು, ‘ನನ್ನನ್ನು ಕೊಲ್ಲುವ ಉದ್ದೇಶ ಹೊಂದಿರುವುದರಿಂದಲೇ ಪೊಲೀಸರು, ನನ್ನ ಬೆಂಬಲಿಗರನ್ನು ಚದುರಿಸಲು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗ ಮಾಡುತ್ತಿದ್ದಾರೆ. ನಾನು ಜಾಮೀನು ಪತ್ರಕ್ಕೆ ಸಹಿ ಹಾಕಿದರೂ ಸಹ ಇದನ್ನು ಒಪ್ಪಿಕೊಳ್ಳಲು ಡಿಐಜಿ ಸಿದ್ಧರಾಗಿಲ್ಲ. ಹಾಗಾಗಿ ಬಂಧನದ ಹಿಂದಿರುವ ನಿಜವಾದ ಉದ್ದೇಶದ ಬಗ್ಗೆ ಅನುಮಾನಗಳು ಮೂಡುತ್ತಿವೆ’ ಎಂದು ಹೇಳಿದ್ದರು.