ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಮಿತ್ರ ರಾಷ್ಟ್ರಗಳು ತಮ್ಮ ದೇಶದ ಭಿಕ್ಷಾಟನೆಯನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. 

ಇಸ್ಲಾಮಾಬಾದ್‌: ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ ಒಂದೆಡೆ ಭಾರತದ ಮೇಲೆ ಉಗ್ರವಾದ ಸಾರುತ್ತಾ ಮತ್ತೊಂದೆಡೆ ವಿದೇಶಗಳ ಮುಂದೆ ಹಣಕ್ಕಾಗಿ ಭಿಕ್ಷೆಯ ಪಾತ್ರೆ ಹಿಡಿದುಕೊಂಡು ತಿರುಗಾಡುವ ಪಾಕಿಸ್ತಾನ, ಇದೀಗ ನಮ್ಮ ಮಿತ್ರ ದೇಶಗಳು ನಮ್ಮ ಇಂಥ ವರ್ತನೆಯನ್ನು ಬಯಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದೆ.

ಇಂಥ ಮಾತನ್ನು ಸ್ವತಃ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ. ಸೇನಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಷರೀಫ್‌, ನಮ್ಮ ಮಿತ್ರ ದೇಶಗಳಾದ ಚೀನಾ, ಕತಾರ್‌, ಸೌದಿ ಅರೇಬಿಯಾ, ಟರ್ಕಿ, ಯುಎಇ ಮೊದಲಾದ ದೇಶಗಳು, ನಾವು ಅವರೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬೇಕೆಂದು ಬಯಸುತ್ತವೆಯೇ ಹೊರತೂ ನಾವು ಭಿಕ್ಷೆಯ ಪಾತ್ರೆ ಹಿಡಿದುಕೊಂಡು ಬರುವುದನ್ನು ಬಯಸುವುದಿಲ್ಲ.

ನಾನು ಮತ್ತು ಆಸಿಂ ಮುನೀರ್‌ (ಪಾಕ್‌ ಸೇನಾ ಮುಖ್ಯಸ್ಥ) ಇರುವವರೆಗೂ ನಾವು ಹೀಗೆ ಆಗಲು ಬಿಡುವುದಿಲ್ಲ ಎಂದು ಷರೀಫ್‌ ಹೇಳಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ಎಲ್ಲ 7 ಎನ್ಸಿಪಿ ಶಾಸಕರು ಎನ್‌ಡಿಪಿಪಿಗೆ ಸೇರ್ಪಡೆ

ಕೊಹಿಮಾ: ನಾಗಾಲ್ಯಾಂಡ್ ವಿಧಾನಸಭೆಯ ಎಲ್ಲಾ 7 ಎನ್‌ಸಿಪಿ ಶಾಸಕರು, ಶನಿವಾರ ಆಡಳಿತಾರೂಢ ಎನ್‌ಡಿಪಿಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಹೀಗಾಗಿ 60 ಸ್ಥಾನಬದಲ ವಿಧಾನಸಭೆಯಲ್ಲಿ ಇದುವರೆಗೂ 25 ಶಾಸಕ ಬಲ ಹೊಂದಿದ್ದ ಮುಖ್ಯಮಂತ್ರಿ ನೇಪಿಯೋ ರಿಯೋ ಅವರ ಸರ್ಕಾರದ ಬಲ ಇದೀಗ 32ಕ್ಕೆ ಏರಿದ್ದು ಸ್ಪಷ್ಟ ಬಹುಮತ ಪಡೆದಂತೆ ಆಗಿದೆ.

ಈ ಹಿಂದೆ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ವಿಭಜನೆಯಾದಾಗ ರಾಜ್ಯದಲ್ಲಿನ ಎನ್‌ಸಿಪಿ ಶಾಸಕರು, ಅಜಿತ್‌ ಪವಾರ್ ಬಣದೊಂದಿಗೆ ಗುರುತಿಸಿಕೊಂಡಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿ 3ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ರಾಜ್ಯದ 104 ಶಾಲೆಗಳು ಡ್ರಗ್ಸ್‌ ಹಾಟ್‌ಸ್ಪಾಟ್: ಕೇರಳ ಸರ್ಕಾರ

ತಿರುವನಂತಪುರ: ಕೇರಳದಲ್ಲಿ 104 ಶಾಲೆಗಳು ಮಾದಕ ವಸ್ತುಗಳ ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿದೆ. ಈ ಶಾಲೆಗಳ ಸಮೀಪ ಮಕ್ಕಳು ಅತಿಯಾ ಡ್ರಗ್ಸ್‌ ಸೇವನೆಯಲ್ಲಿ ತೊಡಗಿರುವ ಕಾರಣ ಇವುಗಳನ್ನು ಹಾಟ್‌ಸ್ಪಾಟ್‌ ಎಂದು ರಾಜ್ಯ ಸರ್ಕಾರ ಗುರುತಿಸಿವೆ. ಈ ಪೈಕಿ ಹೈಸ್ಕೂಲ್‌, ಹೈಯರ್‌ ಪ್ರೈಮರಿ ಸ್ಕೂಲ್‌ಗಳು ಹೆಚ್ಚಿವೆ.

ಈ ಶಾಲೆಗಳ ಸಮೀಪದ ಅಂಗಡಿಗಳು ಮಕ್ಕಳಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿವೆ ಎನ್ನಲಾಗಿದ್ದು, ಅವುಗಳ ಮೇಲೆ ನಿಗಾವಹಿಸಲು ರಾಜ್ಯ ಸರ್ಕಾರ ಸೂಚಿಸಿದೆ. 104 ಶಾಲೆಗಳ ಪೈಕಿ ತಿರುವನಂತಪುರ ಜಿಲ್ಲೆ ಒಂದರಲ್ಲಿಯೇ 43 ಶಾಲೆಗಳು ಹಾಟ್‌ಸ್ಪಾಟ್‌ ಪಟ್ಟಿಯಲ್ಲಿದ್ದು, ಇದರ ನಂತರದಲ್ಲಿ ಎರ್ನಾಕುಲಂ, ಕಲ್ಲಿಕೋಟೆ ಇವೆ. ಡ್ರಗ್ಸ್‌ ಜಾಲ ಪತ್ತೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಅಬಕಾರಿ ಇಲಾಖೆ, ಪೊಲೀಸರು ಗಸ್ತು ಇರುವಂತೆ ಆದೇಶ ಹೊರಡಿಸಿದೆ.