ಆಫ್ಘಾನಿಸ್ತಾನ ಸ್ವಾತಂತ್ರ್ಯ ದಿನಾಚರಣೆ; ಧ್ವಜ ಹಿಡಿದವರ ಮೇಲೆ ತಾಲಿಬಾನ್ ಗುಂಡಿನ ದಾಳಿ!
- ಆಗಸ್ಟ್ 19 ಆಫ್ಘಾನಿಸ್ತಾನಕ್ಕೆ ಸ್ವಾತಂತ್ರ್ಯ ದಿನಾಚರಣೆ ದಿನ
- ಹೆಸರಿಗೆ ಮಾತ್ರ ಸ್ವಾತಂತ್ರ್ಯ, ತಾಲಿಬಾನ್ ಕಪಿಮುಷ್ಠಿಯಲ್ಲಿ ಆಫ್ಘಾನ್
- ಸ್ವಾತಂತ್ರ್ಯ ದಿನಾಚರಣೆಗೆ ಧ್ವಜ ಹಿಡಿದವರ ಮೇಲೆ ಗುಂಡಿನ ದಾಳಿ
ಕಾಬೂಲ್(ಆ.19): ಆಫ್ಘಾನಿಸ್ತಾನದಲ್ಲಿಂದು ಸ್ವಾತಂತ್ರ್ಯ ದಿನಾಚರಣೆ. 1919 ಆಗಸ್ಟ್ 19 ರಂದು ಬ್ರಿಟೀಷ್ ಆಳ್ವಿಕೆ ಅಂತ್ಯಗೊಂಡು ಆಫ್ಘಾನಿಸ್ತಾನ ಸ್ವತಂತ್ರಗೊಂಡಿತು. ಭಾರತಕ್ಕಿಂತ 28 ವರ್ಷಗಳ ಮುಂಚೆ ಆಫ್ಘಾನಿಸ್ತಾನ ಸ್ವತಂತ್ರಗೊಂಡಿದೆ. ಆದರೆ ಇಂದು ಆಫ್ಘಾನಿಸ್ತಾನದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಬಿಡಿಸಿಹೇಳಬೇಕಾದ ಅಗತ್ಯವಿಲ್ಲ. ಅದರಲ್ಲೂ ಈ ಬಾರಿಯ ಆಫ್ಘಾನಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಕರಾಳದಿನವಾಗಿ ಮಾರ್ಪಟ್ಟಿದೆ. ದೇಶಭಕ್ತಿ ಮೆರೆದ ಹಲವರ ಮೇಲೆ ತಾಲಿಬಾನ್‌ಗಳು ಗುಂಡಿನ ಸುರಿಮಳೆಗೆರೆದಿದ್ದಾರೆ.
ತಾಲಿಬಾನ್ ಧ್ವಜ ಬೇಡ, ಆಫ್ಘಾನ್ ಧ್ವಜ ಬೇಕು ಎಂದು ಪ್ರತಿಭಟಿಸಿದವರ ಮೇಲೆ ಗುಂಡಿನ ಸುರಿಮಳೆ!ತಾಲಿಬಾನ್ ಉಗ್ರರ ಕೈವಶವಾಗಿರುವ ಆಫ್ಘಾನಿಸ್ತಾನದಲ್ಲಿ ಜನ ಭಯದಿಂದ, ಉಸಿರಗಟ್ಟಿ ಜೀವಿಸುವಂತಾಗಿದೆ. ಆಫ್ಘಾನಿಸ್ತಾನದಿಂದ ಹೊರಹೋಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಸ್ವಾತಂತ್ರ್ಯ ದಿನಾಚರಣೆಗೆ ದೇಶಭಕ್ತಿ ಮೆರೆಯಲು ರಾಷ್ಟ್ರಧ್ವಜ ಹಿಡಿದು ಜಯಘೋಷ ಮೊಳಗಿಸಿದ ಆಫ್ಘಾನಿಸ್ತಾನಿಯರ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿದ್ದಾರೆ.
ತಾಲಿಬಾನ್ ಉಗ್ರರು ಈಗಾಗಲೇ ಆಫ್ಘಾನಿಸ್ತಾನ ರಾಷ್ಟ್ರಧ್ವಜದ ಬದಲು ತಾಲಿಬಾನ್ ಉಗ್ರ ಸಂಘಟನೆಯ ಧ್ವಜವನ್ನು ಅಧೀಕೃತಗೊಳಿಸಿದ್ದಾರೆ. ನಿನ್ನೆ(ಆ.18) ತಾಲಿಬಾನ್ ಧ್ವಜ ವಿರೋಧಿಸಿ, ಆಫ್ಘಾನಿಸ್ತಾನ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿದರ ಮೇಲೆ ಗುಂಡಿನ ಸುರಿಮಳೆಗೆರೆದಿತ್ತು. ಇದೀಗ ಸ್ವಾತಂತ್ರ್ಯ ದಿನಾಚರಣೆಗೆ ತಾವು ಅಧೀಕೃತಗೊಳಿಸಿದ ತಾಲಿಬಾನ್ ಧ್ವಜ ಹಿಡಿಯದೇ ಆಫ್ಘಾನಿಸ್ತಾನ ಧ್ವಜ ಹಿಡಿದವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಸಹಾಯ ಮಾಡಿ, ನಮ್ಮನ್ನು ಕಾಪಾಡಿ: ಅಮೆರಿಕ ಸೇನೆ ಎದುರು ಅಫ್ಘಾನ್ ಮಹಿಳೆಯರ ಕಣ್ಣೀರು!
ಅಸಾದಾಬಾದ್, ಜಲಾಲ್‌ಬಾದ್ ಪ್ರದೇಶದಲ್ಲಿ ಆಫ್ಘಾನಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ರ್ಯಾಲಿ ಮೇಲೆ ತಾಲಿಬಾನ್ ಗುಂಡಿನ ದಾಳಿ ನಡೆಸಿದ್ದಾರೆ. ಇಲ್ಲಿ ಪ್ರಾಣತೆತ್ತವರ ಸಂಖ್ಯೆ ಎಷ್ಟು ಅನ್ನೋದು ಹೊರಬಿದ್ದಿಲ್ಲ. ತಾಲಿಬಾನ್‌ಗಳು ತಾವು ಹತ್ಯೆ ಮಾಡಿದವರ ಸಂಖ್ಯೆಯನ್ನು ಎಂದಿಗೂ ಹೇಳಿಲ್ಲ. ಹತ್ಯೆ ಮಾಡಿದವರ ಸಂಖ್ಯೆ ಎಷ್ಟೆಂದು ಸ್ವತಃ ತಾಲಬಾನ್‌ಗಳಿಗೆ ತಿಳಿದಿಲ್ಲ. ಇತ್ತ ಸರ್ಕಾರದ ಯಾವುದೇ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಮರಣಕ್ಕೆ ಲೆಕ್ಕೆ ಹೇಳುವವರಿಲ್ಲ, ಕೇಳುವವರಿಲ್ಲ ಅನ್ನೋ ಪರಿಸ್ಥಿತಿ ಆಫ್ಘಾನಿಸ್ತಾನದಲ್ಲಿದೆ.
ಅಫ್ಘಾನಿಸ್ತಾನ ಅಲ್ಲೋಲ ಕಲ್ಲೋಲ - ದೇಶ ಬಿಡೋ ಬರದಲ್ಲಿ ಹಸುಗೂಸು ಅನಾಥ
ಇತ್ತ ಗುಂಡಿನ ದಾಳಿ ಮುಂದುವರಿಸಿರುವ ತಾಲಿಬಾನ್‌ಗಳು ಅಮೆರಿಕ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವವರಿಗೆ ಈ ರೀತಿ ಹತ್ಯೆ, ದಾಳಿ ಮುಂದುವರಿಯಲಿದೆ ಎಂದು ತಾಲಿಬಾನ್‌ಗಳು ಗದರಿದ್ದಾರೆ. ಇತ್ತ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಮೆರಿಕ ನಿವಾಸಿಗಳನ್ನು ಸಂಪೂರ್ಣವಾಗಿ ಸುರಕ್ಷಿತ ತಾಣಕ್ಕೆ ಕರೆದೊಯ್ಯುವವರೆಗೆ ಸೇನೆ ವಾಪಸ್ ಕರೆಯೆಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಅಮೆರಿಕ ಹಲವು ಹಂತಗಳಲ್ಲಿ ಆಫ್ಘಾನಿಸ್ತಾನದಿಂದ ಸೇನೆಯನ್ನು ವಾರಸ್ ಕರೆಯಿಸಿಕೊಂಡಿದೆ. ಇದೀಗ ರಾಜಧಾನಿ ಕಾಬೂಲ್‌ನಲ್ಲಿ ಮಾತ್ರ ಅಮೆರಿಕ ಸೇನೆ ಉಳಿದುಕೊಂಡಿದೆ. ಇದು ತಾಲಿಬಾನ್ ಕೆಂಗಣ್ಣಿಗೆ ಗುರಿಯಾಗಿದೆ.
ಯುದ್ಧವಿನ್ನೂ ಮುಗಿದಿಲ್ಲ: ತಾಲಿಬಾನ್ ವಿರುದ್ಧ ಸಿಡಿದೆದ್ದ ಅಫ್ಘನ್ನರು: ಉಗ್ರರಿಂದ ಹಿಂಸಾಚಾರ!
ಆಫ್ಘಾನಿಸ್ತಾನದಲ್ಲಿ ಅಮರಿಕ, ಬ್ರಿಟೀಷ್, ಭಾರತ ಸೇರಿದಂತೆ ಹಲವರು ಸ್ವದೇಶಕ್ಕೆ ಮರಳಲು ಹಾತೊರೆಯುತ್ತಿದ್ದಾರೆ. ಆದರೆ ತಾಲಿಬಾನ್ ಉಗ್ರರ ಕೈಯೊಳಗಿಂದ ಸುರಕ್ಷಿತವಾಗಿ ಅವರನ್ನು ಕರೆತರೆಯುವುದು ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಸತತ ಪ್ರಯತ್ನಗಳು ನಡೆಯುತ್ತಿದೆ.