ಯುದ್ಧವಿನ್ನೂ ಮುಗಿದಿಲ್ಲ: ತಾಲಿಬಾನ್ ವಿರುದ್ಧ ಸಿಡಿದೆದ್ದ ಅಫ್ಘನ್ನರು: ಉಗ್ರರಿಂದ ಹಿಂಸಾಚಾರ!
* ಒಂದೆಡೆ ಶಾಂತಿ ಮಂತ್ರ, ಇನ್ನೊಂದೆಡೆ ಭೀಕರ ದಾಳಿ
* ಅಷ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುವುದಕ್ಕೂ ಮೊದಲೇ ಉಗ್ರರಿಂದ ಹಿಂಸಾಚಾರ: 3 ಬಲಿ, 10 ಮಂದಿಗೆ ಗಾಯ
* ತಾಲಿಬಾನ್ ವಿರುದ್ಧ ಜನರ ಪ್ರತಿಭಟನೆ ಶುರು
* ಹತ್ತಿಕ್ಕಲು ಉಗ್ರರಿಂದ ಗುಂಡು, ಮಹಿಳೆ, ಮಕ್ಕಳ ಮೇಲೂ ದಾಳಿ
ಕಾಬೂಲ್(ಆ,19): ನಮ್ಮ ಹೊಸ ಆಡಳಿತ ಶಾಂತಿಯುತವಾಗಿರಲಿದೆ, ನಾವು ಮಹಿಳೆಯರ ಮೇಲೆ ದಾಳಿ ನಡೆಸಲ್ಲ, ದೇಶದ ಎಲ್ಲಾ ಪ್ರಜೆಗಳಿಗೂ ಕ್ಷಮಾದಾನ ನೀಡಿದ್ದೇವೆ ಎಂದೆಲ್ಲಾ ಹೇಳಿಕೊಂಡಿದ್ದ ಅಷ್ಘಾನಿಸ್ತಾನದ ತಾಲಿಬಾನಿ ಉಗ್ರರು, ಇದೀಗ ಹಿಂಸಾಚಾರದ ತಮ್ಮ ಹಳೆಯ ಚಾಳಿ ಪುನಾರಂಭಿಸಿದ್ದಾರೆ. ದೇಶದಲ್ಲಿ ಅಧಿಕಾರಕ್ಕೆ ಬರುವ ಮೊದಲೇ, ತಾಲಿಬಾನ್-ವಿರೋಧಿ ಪ್ರತಿಭಟನೆ ಹತ್ತಿಕ್ಕುವ ಯತ್ನ ಆರಂಭಿಸಿದ್ದಾರೆ. ಇಂಥ ಯತ್ನದ ವೇಳೆ ಮೂವರು ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದಾರೆ. ಇನ್ನೊಂದೆಡೆ, ಪ್ರಾಣಭೀತಿಯಿಂದ ದೇಶ ತೊರೆಯಲು ಮುಂದಾಗಿದ್ದ ಮಹಿಳೆಯರು, ಮಕ್ಕಳ ಮೇಲೂ ಮಾರಕ ದಾಳಿ ನಡೆಸಿದ್ದಾರೆ.
ಮತ್ತೊಂದೆಡೆ ಮನರಂಜನಾ ಸೇವೆಗಳನ್ನು ಬಹುವಾಗಿ ದ್ವೇಷಿಸುವ ಉಗ್ರರು ಅಮ್ಯೂಸ್‌ಮೆಂಟ್ ಪಾರ್ಕ್ಗೆ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ನಡೆದಿದೆ. ಅಷ್ಟುಸಾಲದೆಂಬಂತೆ ತಾಲಿಬಾನಿ ಆಕ್ರಮಣವನ್ನು ಕಡೆಯ ಹಂತದವರೆಗೂ ಎದೆಗುಂದದೇ ಎದುರಿಸಿದ್ದ ಜಿಲ್ಲಾ ಮಹಿಳಾ ಗವರ್ನರ್ ಒಬ್ಬರನ್ನು ಬಂಧಿಸಿದ್ದಾರೆ. ಈ ಎಲ್ಲಾ ಘಟನೆಗಳು ತಾಲಿಬಾನಿಗಳು ಮಂಗಳವಾರ ಪಠಿಸಿದ ಮಂತ್ರ ಕೇವಲ ತೋರಿಕೆಗಾಗಿರಬಹುದು ಎಂಬ ಸಂಶಯವನ್ನು ದೃಢಪಡಿಸಿವೆ.
ವಿರೋಧಿ ಪ್ರತಿಭಟನೆ:
ಅಷ್ಘಾನಿಸ್ತಾನದ ರಾಜಕಾರಣಿಗಳು ಹಾಗೂ ಸೇನೆ ಉಗ್ರರಿಗೆ ಸುಲಭವಾಗಿ ಶರಣಾಗಿದ್ದರೆ, ಜಲಾಲಾಬಾದ್ ಮತ್ತು ಕಾಬೂಲ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರು ಕಳೆದ ಎರಡು ದಿನಗಳಿಂದ ಸಣ್ಣದಾಗಿ ತಾಲಿಬಾನ್ ವಿರೋಧಿ ಹೋರಾಟ ಆರಂಭಿಸಿದ್ದಾರೆ. ಜಲಾಲಾಬಾದ್‌ನಲ್ಲಿ ಬುಧವಾರ ಕೆಲ ಸ್ಥಳೀಯರು ತಾಲಿಬಾನ್ ಧ್ವಜ ಕಿತ್ತೆಸೆದು, ಆಫ್ಘನ್ ಧ್ವಜ ನೆಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ತಾಲಿಬಾನಿ ಉಗ್ರರು, ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ಚದುರಿಸುವ ಯತ್ನ ಮಾಡಿದ್ದಾರೆ. ಈ ವೇಳೆ ಮೂವರು ನಾಗರಿಕರು ಸಾವನ್ನಪ್ಪಿ, 10 ಜನರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ಕಾಬೂಲ್‌ನಲ್ಲಿ ಮಹಿಳೆಯರ ಗುಂಪೊಂದು ವಿದ್ಯಾಭ್ಯಾಸ, ಮೂಲಭೂತ ಹಕ್ಕು, ಉದ್ಯೋಗದ ಹಕ್ಕನ್ನು ಉಳಿಸುವಂತೆ ಒತ್ತಾಯಿಸಿ ಭಿತ್ತಿಫಲಕ ಹಿಡಿದು ಪ್ರದರ್ಶನ ನಡೆಸಿದೆ.
ಮಹಿಳೆಯರ ಮೇಲೆ ಹಲ್ಲೆ:
ಈ ನಡುವೆ ಪ್ರಾಣಭೀತಿಯಿಂದ ವಿಮಾನ ನಿಲ್ದಾಣದತ್ತ ಓಡುತ್ತಿದ್ದ ಮಹಿಳೆಯರು ಮತ್ತು ಮಕ್ಕಳ ಗುಂಪೊಂದನ್ನು ತಡೆದ ಉಗ್ರರ ಗುಂಪು ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿದೆ. ಈ ದಾಳಿಯಿಂದ ಮಹಿಳೆಯರು ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿರುವ, ರಕ್ತಸಿಕ್ತ ಮಕ್ಕಳನ್ನು ಇತರರು ಎತ್ತಿಹಿಡಿದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮಹಿಳಾ ಗವರ್ನರ್ ಬಂಧನ:
ತಾಲಿಬಾನಿಗಳ ವಿರುದ್ಧ ಕೈಯಲ್ಲಿ ಬಂದೂಕು ಹಿಡಿದು ಕಡೆಯ ಹಂತದವರೆಗೂ ಹೋರಾಡಿ, ಉಗ್ರರಿಗೆ ಸವಾಲು ಎಸೆದಿದ್ದ ಮಹಿಳಾ ಗವರ್ನರ್ ಸಾಲಿಮಾ ಮಝಾರಿ ಎಂಬಾಕೆಯನ್ನು ತಾಲಿಬಾನಿಗಳು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ನಮ್ಮ ವಿರೋಧಿಗಳಿಗೆ ನಾವು ವಿಶೇಷವಾಗಿ ಕ್ಷಮಾದಾನ ನೀಡಿದ್ದೇವೆ ಎಂಬ ಉಗ್ರರ ಘೋಷಣೆ ಬೆನ್ನಲ್ಲೇ ಬಂಧನದ ಸುದ್ದಿ ಹೊರಬಿದ್ದಿದೆ.
ಮನರಂಜನಾ ಪಾರ್ಕ್ಗೆ ಬೆಂಕಿ:
ತಾಲಿಬಾನ್ ದಂಗೆಕೋರರು ಕಾಬೂಲನ್ನು ವಶಪಡಿಸಿಕೊಂಡ ನಂತರ ಅಲ್ಲಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಒಂದರಲ್ಲಿ ಬಂಪರ್ ಕಾರುಗಳನ್ನು ಹತ್ತಿ ಆಟವಾಡಿದ್ದರು. ಆದರೆ ಇದೀಗ ಶಿಬರ್ಗಾನ್ ಎಂಬಲ್ಲಿನ ಅಮ್ಯೂಸೆಮೆಂಟ್ ಪಾರ್ಕ್ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ.