ತಾಲಿಬಾನ್ ಧ್ವಜ ಬೇಡ, ಆಫ್ಘಾನ್ ಧ್ವಜ ಬೇಕು ಎಂದು ಪ್ರತಿಭಟಿಸಿದವರ ಮೇಲೆ ಗುಂಡಿನ ಸುರಿಮಳೆ!
- ತಾಲಿಬಾನ್ ಉಗ್ರರ ವಿರುದ್ಧ ಎದೆಯೊಡ್ಡಿ ನಿಲ್ಲಬೇಕಿದ್ದ ಸರ್ಕಾರವೇ ಪರಾರಿ
- ಆಫ್ಘಾನ್ ಧ್ವಜದ ಬದಲು ತಾಲಿಬಾನ್ ಧ್ವಜ ಹಾರಿಸಿದ ಉಗ್ರರು
- ಆಫ್ಘಾನಿಸ್ತಾನ ರಾಷ್ಟ್ರ ಧ್ವಜ ಸಾಕು ಎಂದು ಪ್ರತಿಭಟಿಸಿದವರ ಮೇಲೆ ಗುಂಡು
ಕಾಬೂಲ್(ಆ.18): ಆಫ್ಘಾನಿಸ್ತಾನದ ಜನತೆಗೆ ಆತಂಕ ಬೇಕ ಎಂದು ಶಾಂತಿಯ ಸಂದೇಶ ಸಾರಿದ್ದ ತಾಲಿಬಾನ್ ಉಗ್ರರು ತಮ್ಮ ಅಸಲಿಯತ್ತು ಪ್ರದರ್ಶಿಸಿದ್ದಾರೆ. ಆಫ್ಘಾನಿಸ್ತಾನವನ್ನು ತೆಕ್ಕೆಗೆ ಪಡೆದುಕೊಂಡಿರುವ ತಾಲಿಬಾನ್ ಉಗ್ರರು, ಇದೀಗ ಆಫ್ಘಾನಿಸ್ತಾನ ರಾಷ್ಟ್ರೀಯ ಧ್ವಜ ಕಿತ್ತು ಹಾಕಿ ತಾಲಿಬಾನ್ ಉಗ್ರರ ಧ್ವಜವನ್ನು ಅಧೀಕೃತ ಎಂದು ಘೋಷಿಸಿದ್ದಾರೆ. ಇದರ ವಿರುದ್ಧ ಪ್ರತಿಭಟಿಸಿದವರ ಮೇಲೆ ತಾಲಿಬಾನ್ ಉಗ್ರರು ಗುಂಡಿನ ಸುರಿಮಳೆಗೈದಿದ್ದಾರೆ.
ನಾವು ಬದಲಾಗಿದ್ದೇವೆ ಎನ್ನುತ್ತಲೇ ಅಫ್ಘಾನ್‌ನಲ್ಲಿ ತಾಲಿಬಾನ್ ಕ್ರೌರ್ಯ, ಪತ್ರಕರ್ತನಿಗೆ ಥಳಿತ
ಆಫ್ಘಾನಿಸ್ತಾನ ಕೈವಶ ಮಾಡಿಕೊಂಡ ಉಗ್ರರು ಇದೀಗ ತಾಲಿಬಾನ್ ಆಡಳಿತ ಒಂದೊಂದೆ ಝಲಕ್ ತೋರಿಸುತ್ತಿದ್ದಾರೆ. ಶರಿಯಾ ಕಾನೂನು ಜಾರಿಯಾಗಲಿದೆ. ಆದರೆ ಕೆಲ ಬದಲಾವಣೆಗಳಿವೆ. ಜನರು ತಮ್ಮ ತಮ್ಮ ಕೆಲಸಗಳಿಗೆ ಮರಳಬಹುದು. ಮಹಿಳೆಯರಿಗೆ ಶಿಕ್ಷಣ, ಆಫ್ಘಾನಿಸ್ತಾನ ಜನತೆಯ ಹಕ್ಕನ್ನು ಗೌರವಿಸಲಾಗುತ್ತದೆ ಎಂದು ತಾಲಿಬಾನ್ ಉಗ್ರರು ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರು. ಆದರೆ ಆಫ್ಘಾನಿಸ್ತಾನ ರಾಷ್ಟ್ರ ಧ್ವಜವನ್ನೇ ಕಿತ್ತೆಸೆದು ತಾಲಿಬಾನ್ ಉಗ್ರರ ಧ್ವಜವನ್ನು ಅಧೀಕೃತ ಎಂದು ಘೋಷಿಸಿದ್ದಾರೆ.
ಆಫ್ಘಾನ್ ಮುಸ್ಲಿಮರನ್ನು ಭಾರತಕ್ಕೆ ಕರೆಸಿಕೊಳ್ಳಿ; ದೇಶದಲ್ಲಿ ಶುರುವಾಯ್ತು ಅಭಿಯಾನ!
ಆಫ್ಘಾನಿಸ್ತಾನ ರಾಷ್ಟ್ರಧ್ವಜ ಬೇಕು, ತಾಲಿಬಾನ್ ಧ್ವಜ ಬೇಡ ಎಂದು ಜಲಾಲ್‌ಬಾದ್‌ನಲ್ಲಿ ಜನ ಪ್ರತಿಭಟನೆ ನಡೆಸಿದ್ದರು. ಆಫ್ಘಾನಿಸ್ತಾನ ರಾಷ್ಟ್ರಧ್ವಜ ಹಿಡಿದು ಪ್ರತಿಭಟನಕಾರರು ಶಾಂತಿಯುತ ಪ್ರತಿಭಟನೆ ಮಾಡಿದ್ದಾರೆ. ತಾಲಿಬಾನ್ ಮುಂದೆ ಮಂಡಿಯೂರಿದವರನ್ನೇ ಬಿಡದ ಉಗ್ರರು ಇನ್ನು ಪ್ರತಿಭಟಿಸಿದವರನ್ನು ಬಿಟ್ಟು ಬಿಡುತ್ತಾರಾ? ಇದೇ ರೀತಿ, ಪ್ರತಿಭಟನೆ ಮಾಡಿದವರ ಮೇಲೆ ತಾಲಿಬಾನ್ ಉಗ್ರರು ಗುಂಡು ಹಾರಿಸಿದ್ದಾರೆ.
ತಾಲಿಬಾನ್ ಉಗ್ರರು ನಡೆಸಿದ ಗುಂಡಿನ ದಾಳಿ ಕುರಿತ ವಿಡಿಯೋವನ್ನು HPC ಎಕ್ಸ್‌ಟರ್ನಲ್ ರಿಲೇಶನ್ ಅಧಿಕಾರಿ ನಜೀಬ್ ನಂಗ್ಯಾಲ್ ಹಂಚಿಕೊಂಡಿದ್ದಾರೆ. ತಾಲಿಬಾನ್ ಗುಂಡಿನ ದಾಳಿಗೆ ಹಲವರು ಪ್ರಾಣ ತೆತ್ತಿದ್ದಾರೆ ಅನ್ನೋ ಮಾಹಿಗಳು ಹೊರಬಿದ್ದಿದೆ. ಆದರೆ ಅಧೀಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಪ್ರತಿಭಟನಾಕಾರರು ಚದುರಿದ್ದಾರೆ. ಪ್ರಾಣ ಉಳಿಸಿಕೊಳ್ಳಲಲು ಓಡಿದ್ದಾರೆ. ತಕ್ಷಣವೇ ಜಲಾಲ್‌ಬಾದ್ ನಗರದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರವೂ ಇಲ್ಲ, ಪೊಲೀಸರು ಇಲ್ಲ. ಎಲ್ಲಾ ತಾಲಿಬಾನ್ ಸಾಮ್ರಾಜ್ಯ.