ಈ ಲೇಖನವು 1931ರ ಚೀನಾ ಪ್ರವಾಹದಂತಹ ಇತಿಹಾಸದ ಅತ್ಯಂತ ವಿನಾಶಕಾರಿ ಪ್ರವಾಹಗಳನ್ನು ವಿವರಿಸುತ್ತದೆ. ನೈಸರ್ಗಿಕ ವಿಕೋಪ, ಮೂಲಸೌಕರ್ಯ ವೈಫಲ್ಯ ಮತ್ತು ಮಾನವಕೃತ ಕಾರಣಗಳಿಂದಾದ ಈ ದುರಂತಗಳು ಲಕ್ಷಾಂತರ ಜನರ ಸಾವಿಗೆ ಕಾರಣವಾದವು. ಈ ಘಟನೆಗಳು ಪರಿಣಾಮಕಾರಿ ಪ್ರವಾಹ ನಿಯಂತ್ರಣ ಮತ್ತು ತುರ್ತು ಸನ್ನದ್ಧತೆಯ ಮಹತ್ವವನ್ನು ಸಾರುತ್ತವೆ.
ನೇಪಾಳದಲ್ಲಿ ನಡೆದ ಹಿಮನದಿ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 1000 ದಾಟಿಗೆ 3600ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಮಾನವ ಇತಿಹಾಸದಲ್ಲಿ ಪ್ರವಾಹಗಳು ಅತ್ಯಂತ ವಿನಾಶಕಾರಿ ಹಾಗೂ ಮಾರಕ ನೈಸರ್ಗಿಕ ವಿಕೋಪಗಳಾಗಿ ಪದೇ ಪದೇ ಸಂಭವಿಸಿವೆ. ಇವು ವಿಶಾಲವಾದ ಸಮುದಾಯಗಳನ್ನು ನಾಶಪಡಿಸಿ, ಫಲವತ್ತಾದ ಕೃಷಿಭೂಮಿ ಹಾಗೂ ಮೂಲಸೌಕರ್ಯಗಳನ್ನು ನೆಲಸಮಗೊಳಿಸುವುದರ ಜೊತೆಗೆ ಕೋಟ್ಯಂತರ ಜನರ ಜೀವಗಳನ್ನು ಬಲಿ ಪಡೆದಿವೆ. 1931 ರಲ್ಲಿ ಚೀನಾದಲ್ಲಿ ಸಂಭವಿಸಿದ ಭೀಕರ ನದಿ ಪ್ರವಾಹದಿಂದ ಹಿಡಿದು, ನೇಪಾಳ ನೀರ್ಗಲ್ಲು ಪ್ರವಾಹದವರೆಗೆ, ಈ ದುರಂತಗಳು ತೀವ್ರ ಹವಾಮಾನ ವೈಪರೀತ್ಯ, ಮೂಲಸೌಕರ್ಯಗಳ ವೈಫಲ್ಯ ಹಾಗೂ ಕೆಲವು ಸಂದರ್ಭಗಳಲ್ಲಿ ಮಾನವನ ತಪ್ಪುಗಳಿಂದ ಉಂಟಾಗುವ ಅಪಾರ ನಷ್ಟವನ್ನು ಜಗತ್ತಿಗೆ ತೋರಿಸಿಕೊಟ್ಟಿವೆ.
ಅತ್ಯಂತ ಭೀಕರ ಪ್ರವಾಹ ಚೀನಾ
ಇತಿಹಾಸದಲ್ಲೇ ಅತ್ಯಂತ ಭೀಕರ ಪ್ರವಾಹ ವಿಪತ್ತು ಎಂದು 1931 ರ ಚೀನಾ ಪ್ರವಾಹವನ್ನು ಪರಿಗಣಿಸಲಾಗಿದೆ. ಈ ವಿಕೋಪವು ಯಾಂಗ್ಜಿ, ಯೆಲ್ಲೋ ಮತ್ತು ಹುವಾಯ್ ನದಿಗಳ ಜಲಾನಯನ ಪ್ರದೇಶಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಸುಮಾರು 10 ಲಕ್ಷದಿಂದ 40 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾರೀ ಹಿಮ ಕರಗುವಿಕೆ, ನಿರಂತರ ತೀವ್ರ ಮಳೆ ಮತ್ತು ಹಲವು ನದಿಗಳಲ್ಲಿ ಒಂದೇ ಬಾರಿಗೆ ಉಂಟಾದ ನೀರಿನ ಹೆಚ್ಚಳದಿಂದ ಮಧ್ಯ ಚೀನಾದ ವಿಶಾಲ ಪ್ರದೇಶಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಹೋದವು.
ಐತಿಹಾಸಿಕ ಪ್ರವಾಹಗಳ ಸಾವಿನ ಸಂಖ್ಯೆಯನ್ನು ನಿಖರವಾಗಿ ಲೆಕ್ಕಹಾಕುವುದು ಕಷ್ಟ. ವಿಶೇಷವಾಗಿ ಶತಮಾನಗಳ ಹಿಂದೆ ಸಂಭವಿಸಿದ ವಿಪತ್ತುಗಳಲ್ಲಿ ನೇರವಾಗಿ ನೀರಿನಲ್ಲಿ ಮುಳುಗಿ ಸತ್ತವರ ಜೊತೆಗೆ, ನಂತರ ಹರಡಿದ ಸಾಂಕ್ರಾಮಿಕ ರೋಗಗಳು, ಹಸಿವು ಮತ್ತು ಸ್ಥಳಾಂತರದಿಂದ ಮೃತಪಟ್ಟವರನ್ನು ಸೇರಿಸಿ ಅಂದಾಜು ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ.
ಚೀನಾದಲ್ಲೇ ಅತೀ ಹೆಚ್ಚು
ಇತಿಹಾಸದಲ್ಲೇ ಅತಿ ಹೆಚ್ಚು ಸಾವುನೋವುಗಳಿಗೆ ಕಾರಣವಾದ ಏಳು ಪ್ರಮುಖ ಪ್ರವಾಹಗಳನ್ನು ಗಮನಿಸುವುದಾದರೆ, 1931 ರ ಚೀನಾ ಪ್ರವಾಹದ ನಂತರ 1887 ರ ಹಳದಿ ನದಿ (ಚೀನಾದ ಎರಡನೇ ಅತೀ ದೊಡ್ಡ ನದಿ) ಪ್ರವಾಹವು ಎರಡನೇ ಅತ್ಯಂತ ವಿನಾಶಕಾರಿ ವಿಪತ್ತಾಗಿದೆ. ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಈ ಪ್ರವಾಹದಲ್ಲಿ ಸುಮಾರು 9 ಲಕ್ಷದಿಂದ 20 ಲಕ್ಷ ಜನರು ಪ್ರಾಣ ಕಳೆದುಕೊಂಡರು. ಭಾರೀ ಮಳೆಯಿಂದಾಗಿ ನದಿಯ ದಂಡೆಗಳು ಒಡೆದು ಸಾವಿರಾರು ಚದರ ಕಿಲೋಮೀಟರ್ ಪ್ರದೇಶ ಜಲಾವೃತಗೊಂಡಿತು.
ಇದಕ್ಕೆ ವ್ಯತಿರಿಕ್ತವಾಗಿ, 1938 ರ ಹಳದಿ ನದಿ (ಹುವಾಂಗ್ ಹೇ) ಪ್ರವಾಹವು ಯುದ್ಧದ ತಂತ್ರವಾಗಿ ಮಾನವಕೃತವಾಗಿ ಸೃಷ್ಟಿಸಲ್ಪಟ್ಟಿತು. ಚೀನಾ-ಜಪಾನೀಸ್ ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ಸೈನಿಕರ ಮುನ್ನಡೆಯನ್ನು ತಡೆಯಲು ಚೀನಾದ ರಾಷ್ಟ್ರೀಯತಾವಾದಿ ಪಡೆಗಳು ಅಣೆಕಟ್ಟುಗಳನ್ನು ತಾವೇ ಭೇದಿಸಿದವು. ಇದರ ಪರಿಣಾಮವಾಗಿ ಹೆನಾನ್, ಅನ್ಹುಯಿ ಮತ್ತು ಜಿಯಾಂಗ್ಸು ಪ್ರಾಂತ್ಯಗಳು ಮುಳುಗಡೆಯಾಗಿ ಸುಮಾರು 5 ಲಕ್ಷದಿಂದ 9 ಲಕ್ಷ ಜನರು ಮೃತಪಟ್ಟರು.
ಇನ್ನು ಯುದ್ಧೇತರ ಹಾಗೂ ಹವಾಮಾನ ಆಧಾರಿತ ದುರಂತಗಳಲ್ಲಿ 1970 ರ ಭೋಲಾ ಚಂಡಮಾರುತವು ಪ್ರಮುಖವಾದದ್ದು. ಪ್ರಬಲ ಉಷ್ಣವಲಯದ ಚಂಡಮಾರುತವು ಗಂಗಾ ನದಿಯ ಮುಖಜ ಭೂಮಿಗೆ (ಅಂದಿನ ಪೂರ್ವ ಪಾಕಿಸ್ತಾನ, ಇಂದಿನ ಬಾಂಗ್ಲಾದೇಶ) ಅಪ್ಪಳಿಸಿದಾಗ ಉಂಟಾದ ಭೀಕರ ಅಲೆಗಳು ತಗ್ಗು ಪ್ರದೇಶಗಳನ್ನು ಆಹುತಿ ತೆಗೆದುಕೊಂಡು ಸುಮಾರು 3 ಲಕ್ಷದಿಂದ 5 ಲಕ್ಷ ಜನರ ಸಾವಿಗೆ ಕಾರಣವಾಯಿತು.
ಮಿಲಿಟರಿ ಮುತ್ತಿಗೆಯ ಭಾಗವಾಗಿ ಸಂಭವಿಸಿದ ಮತ್ತೊಂದು ದುರಂತವೆಂದರೆ 1642 ರ ಕೈಫೆಂಗ್ ಪ್ರವಾಹ. ಹೆನಾನ್ ಪ್ರದೇಶದಲ್ಲಿ ಕೈಫೆಂಗ್ ನಗರದ ಮುತ್ತಿಗೆಯ ಸಮಯದಲ್ಲಿ ಹಳದಿ ನದಿಯ (ಹುವಾಂಗ್ ಹೇ) ಅಣೆಕಟ್ಟುಗಳನ್ನು ಉದ್ದೇಶಪೂರ್ವಕವಾಗಿ ಒಡೆದುಹಾಕಲಾಯಿತು. ಇದರಿಂದಾಗಿ ಸುಮಾರು 3 ಲಕ್ಷ ಜನರು ಬಲಿಯಾದರು.
ಆಧುನಿಕ ತಂತ್ರಜ್ಞಾನದ ಕಾಲದಲ್ಲೂ ಮೂಲಸೌಕರ್ಯ ವೈಫಲ್ಯಕ್ಕೆ ಸಾಕ್ಷಿಯಾದದ್ದು 1975 ರ ಬಂಕಿಯಾವೊ ಅಣೆಕಟ್ಟು ದುರಂತ. ನೀನಾ ಚಂಡಮಾರುತ ತಂದಿತ್ತ ಅತಿಯಾದ ಮಳೆಯಿಂದಾಗಿ ಚೀನಾದ ಬಂಕಿಯಾವೊ ಅಣೆಕಟ್ಟು ಕುಸಿದು, ಕೆಳಭಾಗದಲ್ಲಿದ್ದ ಪ್ರದೇಶಗಳು ಸಂಪೂರ್ಣ ಕೊಚ್ಚಿಹೋದವು. ರೋಗ ಮತ್ತು ಕ್ಷಾಮದಿಂದ ಸಂಭವಿಸಿದ ಸಾವುಗಳನ್ನು ಒಳಗೊಂಡು ಈ ದುರಂತದಲ್ಲಿ 1 ಲಕ್ಷದ 71 ಸಾವಿರದಿಂದ 2 ಲಕ್ಷದ 40 ಸಾವಿರ ಜನರು ಮೃತಪಟ್ಟರೆಂದು ಅಂದಾಜಿಸಲಾಗಿದೆ.
ಅಂತೆಯೇ, 1971 ರ ಉತ್ತರ ವಿಯೆಟ್ನಾಂನ ರೆಡ್ ರಿವರ್ ಡೆಲ್ಟಾ ಪ್ರವಾಹವೂ ಸಹ ತೀವ್ರ ಮಾನ್ಸೂನ್ ಮಳೆ ಮತ್ತು ದುರ್ಬಲಗೊಂಡಿದ್ದ ಅಣೆಕಟ್ಟುಗಳ ವೈಫಲ್ಯದಿಂದ ಸಂಭವಿಸಿ, ಸುಮಾರು 1 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತು.
ಶತಮಾನಗಳ ಹಿಂದೆ ಸಂಭವಿಸಿದ ಇಂತಹ ಪ್ರಕೃತಿ ವಿಕೋಪಗಳನ್ನು ನಿಖರವಾಗಿ ಹೋಲಿಸುವುದು ಕಷ್ಟಕರ. ಏಕೆಂದರೆ ಆ ಕಾಲದಲ್ಲಿ ವಿಶ್ವಾಸಾರ್ಹ ಜನಸಂಖ್ಯಾ ದಾಖಲೆಗಳು, ವೈದ್ಯಕೀಯ ಅಂಕಿಅಂಶಗಳು ಅಥವಾ ದುರಂತ ನಿರ್ವಹಣಾ ವರದಿಗಳು ಲಭ್ಯವಿರಲಿಲ್ಲ. ಬಹುತೇಕ ಪ್ರವಾಹಗಳಲ್ಲಿ ಸಾವುಗಳು ಕೇವಲ ಮುಳುಗುವುದಕ್ಕೆ ಸೀಮಿತವಾಗಿರದೆ, ಬೆಳೆ ನಾಶ, ಕುಡಿಯುವ ನೀರು ಕಲುಷಿತಗೊಳ್ಳುವುದು, ಸಾಂಕ್ರಾಮಿಕ ರೋಗಗಳು ಮತ್ತು ಹಸಿವಿನಿಂದ ಉಂಟಾಗುತ್ತಿದ್ದವು. ಹೀಗಾಗಿ ಈ ಸಂಖ್ಯೆಗಳು ಕೇವಲ ಅಂದಾಜುಗಳಾಗಿದ್ದರೂ, ಇತಿಹಾಸದ ಮೇಲೆ ಅವು ಬೀರಿದ ಗಂಭೀರ ಪರಿಣಾಮವನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ.
ಈ ಭೀಕರ ಘಟನೆಗಳು ಪರಿಣಾಮಕಾರಿ ಪ್ರವಾಹ ನಿಯಂತ್ರಣ ವ್ಯವಸ್ಥೆ, ಮುನ್ನೆಚ್ಚರಿಕೆ ತಂತ್ರಜ್ಞಾನಗಳು, ಬಲವಾದ ಮೂಲಸೌಕರ್ಯ ಮತ್ತು ತುರ್ತು ಸನ್ನದ್ಧತೆಯ ಅಗತ್ಯವನ್ನು ಎತ್ತಿಹಿಡಿಯುತ್ತವೆ. ಅತಿಯಾದ ಮಳೆ, ಚಂಡಮಾರುತ, ಅಣೆಕಟ್ಟುಗಳ ವೈಫಲ್ಯ ಅಥವಾ ಮಾನವನ ಅನಗತ್ಯ ಹಸ್ತಕ್ಷೇಪ ಯಾವುದೇ ಕಾರಣವಿರಲಿ, ಏರುವ ನೀರು ಎಷ್ಟು ವೇಗವಾಗಿ ಮಾನವೀಯ ಬಿಕ್ಕಟ್ಟಾಗಿ ಬದಲಾಗಬಲ್ಲದು ಎಂಬುದಕ್ಕೆ ಈ ಇತಿಹಾಸವೇ ಸಾಕ್ಷಿಯಾಗಿದೆ.


