ಕನ್ನಡಿಗ ಮೂಲದ 22 ವರ್ಷದ ಆದರ್ಶ್‌ ಹಿರೇಮಠ, ತಮ್ಮ 'ಮೆರ್‌ಕೋರ್‌' ಎಐ ಸ್ಟಾರ್ಟಪ್‌ ಮೂಲಕ ವಿಶ್ವದ ಅತಿ ಕಿರಿಯ ಸ್ವ-ನಿರ್ಮಿತ ಬಿಲಿಯನೇರ್‌ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ದಶಕಗಳ ಕಾಲ ಮಾರ್ಕ್‌ ಜಕರ್‌ಬರ್ಗ್‌ ಹೊಂದಿದ್ದ ದಾಖಲೆಯನ್ನು ಮುರಿದಿದ್ದಾರೆ. 

ವಾಷಿಂಗ್ಟನ್‌ (ಡಿ.3): ‘ಮೆರ್‌ಕೋರ್‌’ ಎಂಬ ಎಐ ಸ್ಟಾರ್ಟಪ್‌ ಹುಟ್ಟುಹಾಕಿದ ಕನ್ನಡಿಗ ಆದರ್ಶ್‌ ಹಿರೇಮಠ (22) ವಿಶ್ವದ ಅತಿ ಕಿರಿಯ ಸ್ವ-ನಿರ್ಮಿತ (ಸೆಲ್ಫ್‌ಮೇಡ್‌) ಬಿಲಿಯನೇರ್‌ (1 ಶತಕೋಟಿ ಡಾಲರ್‌- 8800 ಕೋಟಿ ರು) ಗಳಾಗಿದ್ದಾರೆ. ಇನ್ನಿಬ್ಬರು ಸಹಸಂಸ್ಥಾಪಕರೊಂದಿಗೆ ಸೇರಿಕೊಂಡು ಈ ಸಾಧನೆ ಮಾಡಿರುವ ಹಿರೇಮಠ, 23 ವರ್ಷದಲ್ಲಿ ಈ ಪಟ್ಟ ತಮ್ಮದಾಗಿಸಿಕೊಂಡು ದಶಕಗಳ ಕಾಲ ಉಳಿಸಿಕೊಂಡಿದ್ದ ಮೆಟಾ ಸಿಇಒ ಮಾರ್ಕ್‌ ಜಕರ್‌ಬರ್ಗ್‌ ಅವರನ್ನು ಮೀರಿಸಿದ್ದಾರೆ.

ಅಮೆರಿಕದಲ್ಲೇ ಹುಟ್ಟಿ ಬೆಳೆದರೂ ಹೆತ್ತವರು ಕನ್ನಡಿಗರು:

ಆದರ್ಶ್‌ ಅಮೆರಿಕದಲ್ಲೇ ಹುಟ್ಟಿ ಬೆಳೆದವರಾದರೂ ಅವರ ಹೆತ್ತವರು ಕನ್ನಡಿಗರು. ಹಾರ್ವರ್ಡ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿರೇಮಠ, ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿದರು. ಬಳಿಕ ಸ್ನೇಹಿತರಾದ ಸೂರ್ಯ ಮಿಧಾ ಮತ್ತು ಬ್ರೆಂಡನ್‌ ಫೂಡಿ ಅವರೊಂದಿಗೆ ಸೇರಿ ಮೆರ್‌ಕೋರ್‌ ಎಂಬ ಸ್ಟಾರ್ಟಪ್‌ ಅನ್ನು 2023ರಲ್ಲಿ ಶುರು ಮಾಡಿದ್ದರು. 9 ತಿಂಗಳಲ್ಲೇ ಈ ಕಂಪನಿ 89 ಕೋಟಿ ರು. ಆದಾಯು ಪಡೆದುಕೊಂಡಿತ್ತು. ಇನ್ನು 2025ರ ಜೂನ್‌ನಲ್ಲಿ ಮೆಟಾ ಕಂಪನಿಯು ಮೆರ್‌ಕೋರ್‌ ಕಂಪನಿಯಲ್ಲಿನ 1.2 ಲಕ್ಷ ಕೋಟಿ ರು. ಬೆಲೆಯ ಶೇ.49ರಷ್ಟು ಷೇರುಗಳನ್ನು ಖರೀದಿಸಿದ ಬಳಿಕ ಕಂಪನಿಯ ಮಾರುಕಟ್ಟೆ ಮೌಲ್ಯ ಮತ್ತಷ್ಟು ಏರಿಕೆಯಾಗಿತ್ತು. ಈ ನಡುವೆ ಇತ್ತೀಚೆಗೆ ಮೆರ್‌ಕೋರ್‌ ತನ್ನ ಸೇವಾ ವಿಸ್ತರಣೆಗಾಗಿ ಮಾರುಕಟ್ಟೆಯಿಂದ 3 ಲಕ್ಷ ಕೋಟಿ ರು. ಬಂಡವಾಳ ಸಂಗ್ರಹಿಸಿದೆ. ಇದರ ಬಳಿಕ ಕಂಪನಿಯ ಮಾರುಕಟ್ಟೆ ಮೌಲ್ಯ ಇನ್ನಷ್ಟು ಹೆಚ್ಚಾಗಿ, ಕಂಪನಿಯ ಮೂವರೂ ಸಂಸ್ಥಾಪಕರು ಬಿಲಿಯನೇರ್‌ಗಳಾಗಿ ಹೊರಹೊಮ್ಮಿದ್ದಾರೆ.

ಆದರ್ಶ್‌ ಹರ್ಷ:

ಈ ಬಗ್ಗೆ ಮಾತನಾಡಿರುವ ಆದರ್ಶ್‌, ‘ಸಿಲಿಕಾನ್‌ ವ್ಯಾಲಿಯಲ್ಲೇ ಬೆಳೆದ ನಾನು ಚಿಕ್ಕಂದಿನಿಂದಲೇ ಟೆಕಿಗಳಿಂದ ಸುತ್ತುವರೆದಿದ್ದೆ. ಬಳಿಕ ನನ್ನ ಒಲವೂ ಪ್ರಯತ್ನಗಳೂ ಸಹಜವಾಗಿ ಅದೇ ಕ್ಷೇತ್ರದತ್ತ ಹೆಚ್ಚಿತು. ವಿದ್ಯಾಭ್ಯಾಸವನ್ನು ಬಿಡದಿದ್ದರೆ ನಾನಿನ್ನೂ ಕಾಲೇಜಿನಲ್ಲೇ ಇರುತ್ತಿದ್ದೆ. ಸಮಾನಮನಸ್ಕ ಸಹ-ಸಂಸ್ಥಾಪಕರೊಂದಿಗೆ ಸೇರಿಕೊಂಡು, ಯಾವುದೇ ಸ್ಪಷ್ಟ ಗುರಿ ಇಲ್ಲದೆ ಹೊಸ ಆವಿಷ್ಕಾರಕ್ಕೆ ಕೈ ಹಾಕಿ, ಇಂದಿದನ್ನು ಸಾಧಿಸಿದ್ದೇವೆ’ ಎಂದರು.

ಜತೆಗೆ, ಮೆರ್‌ಕೋರ್‌ ಭಾರತದಾದ್ಯಂತ ಕಾರ್ಯಾಚರಣೆಗಳು, ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಗಳನ್ನು ಹೊಂದಿದೆ ಎಂದೂ ಹೇಳಿದರು.