ದಿತ್ವಾ ಚಂಡಮಾರುತದಿಂದ ತತ್ತರಿಸಿದ ಶ್ರೀಲಂಕಾಕ್ಕೆ ಪಾಕಿಸ್ತಾನವು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ಆದರೆ, ಅವಧಿ ಮೀರಿದ ವಸ್ತುಗಳನ್ನು ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪಾಕ್ ನೌಕಾಪಡೆಯು ಹಳೆಯ ಚೀಲಗಳಲ್ಲಿ ಹೊಸ ಅಕ್ಕಿಯನ್ನೇ ತುಂಬಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ.

ಇಸ್ಲಾಮಾಬಾದ್/ಕೊಲಂಬೋ (ಡಿ.3): 400 ಜನರ ಬಲಿಪಡೆದ ಭೀಕರ ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾಗೆ ಪರಿಹಾರ ಸಾಮಗ್ರಿಗಳನ್ನು ಕಳಿಸಿಕೊಡುವ ಧಾವಂತದಲ್ಲಿ ಪಾಕಿಸ್ತಾನವು ಅವಧಿ ಮೀರಿದ (ಎಕ್ಸ್ ಪೈರ್ಡ್) ವಸ್ತುಗಳನ್ನು ಕಳಿಸಿಕೊಟ್ಟಿದೆ ಎಂಬ ಆರೋಪಗಳು ಕೇಳಿಬಂದಿವೆ.

ಇದಕ್ಕೆ ಪೂರಕವಾಗಿ ಎಕ್ಸ್‌ಪೈರಿ ಆಗಿರುವ ತಾರೀಖಿನ ಪರಿಹಾರ ಸಾಮಗ್ರಿಗಳ ಪೊಟ್ಟಣದ ಫೋಟೋ ವೈರಲ್‌ ಆಗಿವೆ. ಈ ಫೋಟೋವನ್ನು ಬೇರಾರೂ ಅಲ್ಲ, ಪಾಕ್‌ ನೌಕಾಪಡೆಯೇ ಬಿಡುಗಡೆ ಮಾಡಿತ್ತು. ಆದರೆ ತಾರೀಖು ಎಕ್ಸ್‌ಪೈರ್‌ ಆಗಿರುವುದು ನಂತರ ಬಹಿರಂಗವಾಗಿದೆ.

ಆರೋಪ ಸುಳ್ಳು- ಪಾಕ್ ನೌಕಾಪಡೆ:

ಆದರೆ ಇದನ್ನು ಪಾಕಿಸ್ತಾನಿ ನೌಕಾಪಡೆ ತಳ್ಳಿಹಾಕಿದೆ. ‘ಶ್ರೀಲಂಕಾಗೆ ಪರಿಹಾರ ಸಾಮಗ್ರಿಗಳನ್ನು ತುರ್ತಾಗಿ ಸಾಗಿಸಲು ಸಾಕಷ್ಟು ಚೀಲಗಳು ಬೇಕಾಗಿದ್ದವು ಮತ್ತು ಹಡಗಿನಲ್ಲಿ ಈಗಾಗಲೇ ಬಾಕಿ ಇದ್ದ ಕೆಲವು ಹಳೆಯ ಖಾಲಿ ಚೀಲಗಳನ್ನೇ ಬಳಸಲಾಯಿತು. ಅವುಗಳ ಮೇಲೆ ಎಕ್ಸ್‌ಪೈರಿ ದಿನಾಂಕ ಇದ್ದರೂ ತಾಜಾ ಅಕ್ಕಿಯನ್ನೇ ಪ್ಯಾಕ್‌ ಮಾಡಿ ರವಾನಿಸಲಾಗಿದೆ. ನಕಲಿ ಸುದ್ದಿಗಳಿಗೆ ಬಲಿಯಾಗಬೇಡಿ’ ಎಂದಿದೆ.f

ಮುಖ್ಯಾಂಶಗಳು:

  • ದಿತ್ವಾ ಚಂಡಮಾರುತದಿಂದ ನೊಂದ ಶ್ರೀಲಂಕನ್ನರಿಗೆ ನೆರವಾಗಲು ಪಾಕ್‌ನಿಂದ ಅಕ್ಕಿ ಸೇರಿ ಆಹಾರ ಸಾಮಗ್ರಿ ಪೂರೈಕೆ
  • ಹೀಗೆ ಪೂರೈಸಿದ ಅಕ್ಕಿ ಬ್ಯಾಗ್‌ಗಳ ಮೇಲೆ ನಮೂದಾದ ದಿನಾಂಕದಲ್ಲಿ ಅದು ಈಗಾಗಲೇ ಅವಧಿ ಮೀರಿದ್ದು ಎಂಬ ಮಾಹಿತಿ
  • ಈ ಬಗ್ಗೆ ಜಾಲತಾಣದಲ್ಲಿ ಆಕ್ರೋಶ. ಆದರೆ, ಅಕ್ಕಿ ಹೊಸದೇ, ಆದರೆ ತುರ್ತು ಕಾರಣ ಹಳೆ ಬ್ಯಾಗಲ್ಲಿ ಪ್ಯಾಕ್‌ ಎಂದು ಪಾಕ್‌ ಸ್ಪಷ್ಟನೆ