ಆಪರೇಷನ್‌ ಸಿಂದೂರ್‌ನಿಂದ ತತ್ತರಿಸಿರುವ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ 2 ಪ್ರತ್ಯೇಕ ದಾಳಿಗಳು ನಡೆದಿದ್ದು, ಅದರಲ್ಲಿ 14 ಪಾಕ್‌ ಸೈನಿಕರು ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ. 

ಇಸ್ಲಾಮಾಬಾದ್‌ (ಮೇ.09): ಆಪರೇಷನ್‌ ಸಿಂದೂರ್‌ನಿಂದ ತತ್ತರಿಸಿರುವ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ 2 ಪ್ರತ್ಯೇಕ ದಾಳಿಗಳು ನಡೆದಿದ್ದು, ಅದರಲ್ಲಿ 14 ಪಾಕ್‌ ಸೈನಿಕರು ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ದಾಳಿಯ ಹೊಣೆಯನ್ನು ಬಲೂಚ್‌ ಲಿಬರೇಷನ್‌ ಆರ್ಮಿ(ಬಿಎಲ್‌ಎ) ಹೊತ್ತುಕೊಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ದಾಳಿಯನ್ನು ಬಿಎಲ್‌ಎನ ವಿಶೇಷ ಯುದ್ಧತಂತ್ರದ ಕಾರ್ಯಾಚರಣೆ ದಳ ರಿಮೋಟ್‌ ಚಾಲಿತ ಸುಧಾರಿತ ಸ್ಫೋಟಕ ಬಳಸಿ ಬೋಲನ್ ಮಾಚ್‌ ಪ್ರದೇಶದಲ್ಲಿ ಸಾಗುತ್ತಿದ್ದ ಪಾಕ್‌ ಸೇನಾ ಬೆಂಗಾವಲು ಪಡೆಯ ಮೇಲೆ ನಡೆಸಿದೆ. ಇದರಲ್ಲಿ 12 ಸೈನಿಕರು ಹತರಾಗಿದ್ದಾರೆ. ಕೆಚ್‌ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳವನ್ನು ಗುರಿಯಾಗಿಸಿ ನಡೆಸಿದ ಇನ್ನೊಂದು ದಾಳಿಯಲ್ಲಿ 2 ಯೋಧರು ಮೃತಪಟ್ಟಿದ್ದಾರೆ.

ರೌಫ್‌ ದಾಳಿಗೆ ಬಲಿ?: ಭಾರತ ನಡೆಸಿದ ಆಪರೇಷನ್‌ ಸಿಂದೂರದಲ್ಲಿ ತನ್ನ 10 ಸಂಬಂಧಿಕರು ಮತ್ತು 4 ಆಪ್ತರನ್ನು ಕಳೆದುಕೊಂಡ ಜೈಷ್-ಎ-ಮೊಹಮ್ಮದ್‌ ಉಗ್ರಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ನ ಸಹೋದರ ಅಬ್ದುಲ್ ರೌಫ್ ಅಜರ್‌ ಕೂಡ ಈ ದಾಳಿಯಲ್ಲಿ ಹತನಾಗಿದ್ದಾನೆ ಎಂದು ವರದಿಯಾಗಿದೆ. ಬಿಜೆಪಿ ಕೂಡ ಈತ ಹತ್ಯೆ ಆಗಿದ್ದಾನೆ ಎಂದು ಟ್ವೀಟ್‌ ಮಾಡಿದೆ. ಇನ್ನೊಂದು ವರದಿ ಪ್ರಕಾರ, ಆತ ತೀವ್ರವಾಗಿ ಗಾಯಗೊಂಡಿದ್ದು, ಪಾಕಿಸ್ತಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದೂ ಹೇಳಲಾಗಿದೆ. ಒಟ್ಟಿನಲ್ಲಿ ರೌಫ್ ಅಜರ್‌ ಸ್ಥಿತಿಯ ಬಗ್ಗೆ ಗೊಂದಲಕಾರಿ ವರದಿಗಳು ಹೊರಬರುತ್ತಿದ್ದು, ಸ್ವತಂತ್ರವಾಗಿ ಯಾರೂ ದೃಢೀಕರಿಸಿಲ್ಲ.

ಭಾರತದ ದಾಳಿಗೆ ಲಾಹೋರ್‌, ಕರಾಚಿ ತತ್ತರ: ಪಾಕ್‌ನಾದ್ಯಂತ ಯುದ್ಧದ ಕಾರ್ಮೋಡ

ಜೈಷ್‌ ಸಂಘಟನೆಯ ಮುಖ್ಯ ಕಚೇರಿಯಿದ್ದ ಬಹಾವಲ್ಪುರದ ಜಾಮಿಯಾ ಮಸೀದಿಯ ಮೇಲೆಯೂ ಭಾರತ ಕ್ಷಿಪಣಿಗಳ ಮಳೆಗೆರೆದಿದ್ದು, ಇದರಲ್ಲಿ ಮಸೂದ್‌ ಅಜರ್‌ನ ಪರಿವಾರದವರು ಮತ್ತು ಆಪ್ತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಜೈಷ್‌ ಉಗ್ರಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ನ ಸಹೋದರನಾಗಿರುವ ರೌಫ್‌, ಅದರ 2ನೇ ಕಮಾಂಡರ್‌ ಆಗಿದ್ದಾನೆ. 1999ರಲ್ಲಿ ಮಸೂದ್‌ ಬಿಡುಗಡೆಗೆ ಆಗ್ರಹಿಸಿ ನಡೆದ ಕಂದಹಾರ್‌ ವಿಮಾನ ಅಪಹರಣದ ಹಿಂದೆ ಇದ್ದ ಈತ, 2001ರ ಸಂಸತ್‌ ದಾಳಿ, 2003ರಲ್ಲಿ ನಡೆದ ನಗರೋಟಾ ಸೇನಾ ಕ್ಯಾಂಪ್‌ ಮೇಲಿನ ದಾಳಿ, 2019ರ ಪುಲ್ವಾಮಾ ದಾಳಿಗಳಲ್ಲೂ ಮಹತ್ವದ ಪಾತ್ರ ವಹಿಸಿದ್ದ. ರೌಫ್‌ ಅಜರ್‌, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಾಂಟೆಡ್‌ ಪಟ್ಟಿಯಲ್ಲಿಯೂ ಇದ್ದಾನೆ.