Women Driving: ಡ್ರೈವಿಂಗ್ ವಿಷ್ಯದಲ್ಲಿ ಮಹಿಳೆ ಜೋಕರ್ ಆಗೋದು ಎಷ್ಟು ಸರಿ?
ಭಾರತದಲ್ಲಿ ದಿನ ದಿನಕ್ಕೂ ರಸ್ತೆ ಅಪಘಾತ ಹೆಚ್ಚಾಗ್ತಿದೆ. ಇದಕ್ಕೆ ಅತಿ ವೇಗದ ಚಾಲನೆ ಮುಖ್ಯ ಕಾರಣ. ಆದ್ರೆ ಈ ಅಪಘಾತವನ್ನು ಲಿಂಗಕ್ಕೆ ಹೋಲಿಸೋದು ತಪ್ಪು. ಮಹಿಳೆ ಚಾಲನೆ ಮಾಡ್ತಿದ್ರೆ ಅಲ್ಲಿ ಯಡವಟ್ಟು ನಿಶ್ಚಿತ ಎನ್ನುವವರಿದ್ದಾರೆ.
ಮಹಿಳೆ ಎಲ್ಲ ಕ್ಷೇತ್ರಕ್ಕೂ ಕಾಲಿಟ್ಟಿದ್ದರೂ ಆಕೆಯನ್ನು ಜನರು ನೋಡುವ ಕಲ್ಪನೆ ಬದಲಾಗಿಲ್ಲ. ಡ್ರೈವಿಂಗ್ ವಿಷ್ಯದಲ್ಲೂ ಇದು ಸತ್ಯ. ಮಹಿಳೆ ಸರಿಯಾಗಿ ಡ್ರೈವಿಂಗ್ ಮಾಡೋದಿಲ್ಲ ಎಂದೇ ಅನೇಕರು ಹೇಳ್ತಾರೆ. ಮಹಿಳೆ ಹಾಗೂ ಡ್ರೈವಿಂಗ್ ಗೆ ಸಂಬಂಧಿಸಿದಂತೆ ಅನೇಕ ಜೋಕ್ ಗಳು ಹರಿದಾಡ್ತಿರುತ್ತವೆ. ಮುಂದೆ ಅಥವಾ ಪಕ್ಕದಲ್ಲಿ ಮಹಿಳಾ ಡ್ರೈವರ್ ಕಾಣಿಸಿಕೊಂಡ್ರೆ ಪುರುಷರು ಅವರನ್ನು ಗೇಲಿಮಾಡೋದೆ ಹೆಚ್ಚು. ಅವರಿಂದಲೇ ಟ್ರಾಫಿಕ್ ಜಾಮ್ ಆಗಿದ್ದು ಎನ್ನುವವೆರೆ ಮಾತನಾಡುವವರಿದ್ದಾರೆ. ನಿಜವಾಗ್ಲೂ ಮಹಿಳೆ ತಪ್ಪಾಗಿ ಡ್ರೈವ್ ಮಾಡ್ತಾಳಾ ಅಥವಾ ಇದೊಂದು ಕಾಲ್ಪನಿಕ ವಿಷ್ಯವಾ ಎನ್ನುವ ಬಗ್ಗೆ ನಾವಿಂದು ಹೇಳ್ತೇವೆ.
ಬಾಲ್ಯದಿಂದ ಕೇಳಿದ ಮಾತು ದೊಡ್ಡವರಾದ್ಮೇಲೂ ಮುಂದುವರೆಯುತ್ತದೆ : ಮಹಿಳೆ (Woman) ಗೆ ಡ್ರೈವಿಂಗ್ (Driving) ಬರೋದಿಲ್ಲ… ಈ ಮಾತನ್ನು ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಹೇಳೋದಿಲ್ಲ. ಇದಕ್ಕೆ ಆತನ ಬಾಲ್ಯವೂ ಕಾರಣವೆಂದ್ರೆ ತಪ್ಪಾಗೋದಿಲ್ಲ. ಬಾಲ್ಯದಿಂದಲೇ ಹೆಣ್ಣು ಮತ್ತು ಗಂಡು ಎಂಬ ಬೇಧ ಶುರುವಾಗಿರುತ್ತದೆ. ಗಂಡು ಮಗುವಿಗೆ ಕಾರ್, ಬೈಕ್ ಆಟಿಕೆ ಬಂದ್ರೆ ಹೆಣ್ಣು ಮಗಳಿಗೆ ಅಡುಗೆ ಸಾಮಗ್ರಿ ಬಂದಿರುತ್ತದೆ. ಚಿಕ್ಕವರಿರುವಾಗ್ಲೇ ಹುಡುಗಿ ಕೈಗೆ ಆಟಿಕೆ ಸಾಮಗ್ರಿ ನೀಡಿರೋದನ್ನು ನೋಡುವ ಹುಡುಗ್ರು, ಬೆಳೆದಂತೆ ಹುಡುಗಿಯರಿಗೆ ವಾಹನ (Vehicle) ಚಲಾಯಿಸಲು ಬರೋದಿಲ್ಲ ಅಥವಾ ಅವರು ಚಲಾಯಿಸಬಾರದು ಎನ್ನುವ ನಿರ್ಧಾರಕ್ಕೆ ಬರ್ತಾರೆ.
ALIA BHATT : ನಟನೆ ಮಾತ್ರವಲ್ಲ ಬ್ಯುಸಿನೆಸ್ ವಿಷ್ಯದಲ್ಲೂ ನಟಿ ಸೂಪರ್ ಹಿಟ್
ಮಹಿಳೆ ಡ್ರೈವಿಂಗ್ ಗೆ ಸಂಬಂಧಿಸಿದಂತೆ ಜನರ ತಲೆಯಲ್ಲಿ ಓಡುತ್ತೆ ಈ ವಿಚಾರ :
• ಗಾಡಿ ರಾಂಗ್ ಸೈಡ್ ನಲ್ಲಿ ಇದೆ ಅಂದ್ರೆ ಡ್ರೈವರ್ ಮಹಿಳೆ ಎಂದು ಕೆಲವರು ಭಾವಿಸ್ತಾರೆ.
• ಮಹಿಳೆಯರಿಗೆ ಡ್ರೈವಿಂಗ್ ನಿಯಮ ತಿಳಿದಿಲ್ಲ ಎಂದುಕೊಳ್ಳುವವರು ಅನೇಕರು.
• ಮಹಿಳೆಗೆ ಸ್ಕೂಟಿ ಮಾತ್ರ ಪರ್ಫೆಕ್ಟ್
• ಬೈಕ್ ಅಥವಾ ಬುಲೆಟ್ ಮಹಿಳೆಗೆ ಚೆನ್ನಾಗಿ ಕಾಣೋದಿಲ್ಲ
• ಮಹಿಳೆ ಕಾರ್ ಚಲಾಯಿಸ್ತಿದ್ದಾಳೆ ಅಂದ್ರೆ ಅಲ್ಲಿ ಟ್ರಾಫಿಕ್ ಜಾಮ್ ಗ್ಯಾರಂಟಿ
• ಬ್ರೇಕ್ ಹಾಕುವ ಬದಲು ಕಾಲು ಕೊಡ್ತಾಳೆ ಮಹಿಳೆ
ಇಷ್ಟೇ ಅಲ್ಲ ಮಹಿಳೆ ಚಾಲನೆ ಬಗ್ಗೆ ಸಾಕಷ್ಟು ಕಲ್ಪನೆಗಳನ್ನು ಜನರು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೀವು ಮಹಿಳಾ ಚಾಲಕಿಯರ ಬಗ್ಗೆ ಸಾಕಷ್ಟು ಜೋಕ್ ಗಳನ್ನು ನೋಡ್ಬಹುದು. ವಾಹನವೊಂದು ತಪ್ಪಾಗಿ ಪಾರ್ಕ್ ಆಗಿದೆ ಅಂದ್ರೆ ಅದನ್ನು ಮಹಿಳೆಯರೇ ಮಾಡಿದ್ದು ಎನ್ನುವವರಿದ್ದಾರೆ. ಬುಲೆಟ್ ಮೇಲೆ ಹುಡುಗಿ ಕಂಡ್ರೆ ಎಲ್ಲರೂ ಕಣ್ಣುಬಿಟ್ಟು ನೋಡ್ತಾರೆ. ಈಗ್ಲೂ ಅನೇಕರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.
Solo Trips: ಮಹಿಳೆಯರ ಸೋಲೋ ಟ್ರಿಪ್ಪಿಗೆ ಈ ಜಾಗ ಬೆಸ್ಟ್
ಡ್ರೈವಿಂಗ್ ನಲ್ಲಿ ಮುಂದಿದ್ದಾರೆ ಮಹಿಳೆಯರು : ಮಹಿಳೆಗೆ ವಾಹನ ಚಲಾಯಿಸೋಕೆ ಬರೋದಿಲ್ಲ ಎಂಬುದು ತಪ್ಪು ಕಲ್ಪನೆ. ದೇಶದಲ್ಲಿ ಅನೇಕ ಮಹಿಳೆಯರು ಬೈಕ್, ಕಾರ್ ಮಾತ್ರವಲ್ಲ ವಿಮಾನ ಓಡಿಸುವ ಕೌಶಲ್ಯ ಹೊಂದಿದ್ದಾರೆ. ಭಾರತದ ರಸ್ತೆಗಳಲ್ಲಿ ಲಕ್ಷಗಟ್ಟಲೆ ಮಹಿಳೆಯರು ಕಾರು, ಬೈಕ್, ಸ್ಕೂಟಿ ಓಡಿಸೋದನ್ನು ನೀವು ನೋಡ್ಬಹುದು. ಏರ್ ಇಂಡಿಯಾದ ಪ್ರಕಾರ ಕಂಪನಿಯ ಒಟ್ಟು ಪೈಲಟ್‌ಗಳಲ್ಲಿ ಶೇಕಡಾ 15ರಷ್ಟು ಮಂದಿ ಮಹಿಳೆಯರಿದ್ದಾರೆ. ಹೈದರಾಬಾದ್ ಮೆಟ್ರೋ ರೈಲಿನಲ್ಲಿ 80 ಮಹಿಳಾ ಲೋಕೋ ಪೈಲಟ್‌ಗಳಿದ್ದು, ಅವರು ತಮ್ಮ ಜೊತೆ ಪ್ರಯಾಣಿಕರ ಸುರಕ್ಷತೆ ಜವಾಬ್ದಾರಿ ಹೊತ್ತಿದ್ದಾರೆ. ಮಹಿಳೆ ಸ್ಟೀರಿಂಗ್ ಸಂಭಾಳಿಸಲು ಸಾಧ್ಯವಿಲ್ಲ ಎಂಬುದು ಕೇವಲ ಮಾತಷ್ಟೆ ಎಂಬುದು ಇದ್ರಿಂದ ಸ್ಪಷ್ಟವಾಗುತ್ತದೆ.
ಅಪಘಾತಕ್ಕೂ ಲಿಂಗಕ್ಕೂ ಸಂಬಂಧವಿಲ್ಲ : ಅಪಘಾತವಾಗ್ಬೇಕೆಂದು ಯಾರೂ ಬಯಸಿರೋದಿಲ್ಲ. ಬೇರೆ ವಾಹನ ಚಾಲಕರ ತಪ್ಪಿನಿಂದ ಮಹಿಳೆಯರ ವಾಹನ ಅಪಘಾತಕ್ಕೀಡಾಗುವ ಸಾಧ್ಯತೆಯಿರುತ್ತದೆ. ವರದಿಯೊಂದರ ಪ್ರಕಾರ, ದೆಹಲಿಯಲ್ಲಿ ಶೇಕಡಾ 8ರಷ್ಟು ಮಹಿಳಾ ಚಾಲಕರಿದ್ದು, ಅಪಘಾತದಲ್ಲಿ ಅವರ ಪಾತ್ರ ಶೇಕಡಾ ಒಂದು ಎಂದು ಸಾರಿಗೆ ಇಲಾಖೆ ಅಂಕಿಅಂಶದಲ್ಲಿ ಹೇಳಲಾಗಿದೆ.