Mothers Day: ಉದ್ಯೋಗ ಮಾಡುವ ತಾಯಂದಿರಿಗೆ ಸಂಶೋಧನೆ ನೀಡಿದ ಖುಷಿ ಸುದ್ದಿ
ಕೆಲಸ, ಮನೆಯ ಒತ್ತಡದಲ್ಲಿ ಮಕ್ಕಳಿಗೆ ನೀಡಲು ಸಮಯ ಸಿಗ್ತಿಲ್ಲ, ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಾಧ್ಯವಾಗ್ತಿಲ್ಲ ಎಂಬ ನೋವು ತಾಯಂದಿರಿಗಿರುತ್ತದೆ. ಆದ್ರೆ ಕೆಲಸ ಮಾಡುವ ಅಮ್ಮಂದಿರುವ ಹೆಚ್ಚು ಟೆನ್ಷನ್ ಮಾಡಿಕೊಳ್ಳಬೇಕಾಗಿಲ್ಲ. ಅವರಿಗೆ ನೆಮ್ಮದಿ ನೀಡುವ ಸುದ್ದಿಯೊಂದಿದೆ.
ಮನೆಯಲ್ಲಿರುವ ಮಹಿಳೆಯರ ಕೆಲಸ ಕಡಿಮೆ ಎಂದಲ್ಲ. ಇಡೀ ದಿನ ಸಂಬಳವಿಲ್ಲದೆ ದುಡಿಯುವ ಗೃಹಿಣಿಯರು ರಾತ್ರಿಯಾಗ್ತಿದ್ದಂತೆ ಸುಸ್ತಾಗ್ತಾರೆ. ಗೃಹಿಣಿಯರಿಗೆ ಹೋಲಿಕೆ ಮಾಡಿದ್ರೆ ದುಡಿಯುವ ಮಹಿಳೆಯರು ದುಪ್ಪಟ್ಟು ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಕಚೇರಿ ಕೆಲಸಗಳನ್ನು ಮಾಡುವ ಜೊತೆಗೆ ಮನೆಯ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳಬೇಕು. ಎಲ್ಲವನ್ನೂ ನಿರ್ವಹಿಸುವಾಗ ಮಹಿಳೆ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳುವುದು ಅನಿವಾರ್ಯ. ಉದ್ಯೋಗದಲ್ಲಿರುವ ಮಹಿಳೆ ಮಕ್ಕಳನ್ನು ಕೂಡ ಸಂಭಾಳಿಸ್ತಾಳೆ. ಇದೇ ಕಾರಣಕ್ಕೆ ಆಕೆ ತನ್ನ ಮಾನಸಿಕ ಸ್ಥಿತಿಯನ್ನು ಬಲವಾಗಿಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಾಳೆ.
ಉದ್ಯೋಗ (Employment), ಮನೆ ಜವಾಬ್ದಾರಿ ಕಾರಣಕ್ಕೆ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗ್ತಿಲ್ಲ ಎನ್ನುವ ತಾಯಂದಿರಿಗೆ ಖುಷಿ ಸುದ್ದಿಯೊಂದಿದೆ. ಈ ತಾಯಂದಿರ ಮಕ್ಕಳು ದೊಡ್ಡವರಾದಾಗ ಹೆಚ್ಚು ಸಂತೋಷ (Happiness) ವಾಗಿರುತ್ತಾರೆ ಎಂದು ಇತ್ತೀಚಿನ ಸಂಶೋಧನೆಯೊಂದು ಸಾಬೀತುಪಡಿಸಿದೆ. ಮನೆಯಲ್ಲಿರುವ ತಾಯಂದಿರ ಮಕ್ಕಳಿಗಿಂತ ಉದ್ಯೋಗದಲ್ಲಿರುವ ತಾಯಂದಿರ ಮಕ್ಕಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಸಂಶೋಧನೆ (Research) ಯಲ್ಲಿ ಹೇಳಲಾಗಿದೆ.
MOTHERS DAY : ಅಮ್ಮನಿಗೆ ಹೀಗ್ ಮಾಡಿದರೆ ಸ್ಪೆಷಲ್ ಫೀಲ್ ಆಗುತ್ತೆ
ಕೆಲಸ ಮಾಡುವ ತಾಯಂದಿರ ಬಗ್ಗೆ ಅಧ್ಯಯನ ಹೇಳೋದೇನು? : ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಸಂಶೋಧಕರು 29 ದೇಶಗಳಲ್ಲಿ 100,000 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಿದೆ. ಇದರಲ್ಲಿ ಭಾರತದ ಮಹಿಳೆಯರೂ ಭಾಗಿಯಾಗಿದ್ದರು. ಕೆಲಸ ಮಾಡುವ ತಾಯಿ, ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತಾಳೆ ಎಂಬುದನ್ನು ಇದ್ರಲ್ಲಿ ಪತ್ತೆ ಮಾಡುವ ಪ್ರಯತ್ನ ನಡೆದಿದೆ. ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆ, ಮನೆಯಲ್ಲಿ, ಮಕ್ಕಳ ಜೊತೆ ಎಷ್ಟು ಸಮಯ ಕಳೆಯಲು ಸಾಧ್ಯವಾಗುತ್ತದೆ ಎಂಬುದನ್ನು ಕೂಡ ಪತ್ತೆ ಮಾಡುವ ಪ್ರಯತ್ನ ನಡೆದಿದೆ. ಮನೆಯಲ್ಲಿಯೇ ಇರುವ ಅಮ್ಮಂದಿರ ಮಕ್ಕಳಿಗಿಂತ ಕೆಲಸ ಮಾಡುವ ತಾಯಂದಿರ ಮಕ್ಕಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಈ ಅಧ್ಯಯನ ಹೇಳಿದೆ. ಇದು ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಇಬ್ಬರ ಮೇಲೂ ಸಮಾನ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಉದ್ಯೋಗದಲ್ಲಿರುವ ತಾಯಂದಿರ ಮಕ್ಕಳು ಅದ್ರಲ್ಲೂ ಹೆಣ್ಣು ಮಕ್ಕಳು ತಮ್ಮನ್ನು ತಾವು ಸ್ವಾವಂಬಿಯಾಗುವ ಪ್ರಯತ್ನ ನಡೆಸುತ್ತಾರಂತೆ.
ಉದ್ಯೋಗಸ್ಥ ಅಮ್ಮಂದಿರೇ ರೋಲ್ ಮಾಡೆಲ್ : ಕೆಲಸ ಮಾಡುವ ಮಹಿಳೆಯರಿಗೆ ಮಕ್ಕಳ ಜೊತೆ ಕಳೆಯಲು ಹೆಚ್ಚಿನ ಸಮಯ ಸಿಗೋದಿಲ್ಲ. ಇದನ್ನು ಮಕ್ಕಳು ಕೂಡ ಅರಿತಿರುತ್ತಾರೆ. ಹಾಗಾಗಿಯೇ ಅವರು ಅಮ್ಮನ ಜೊತೆ ಕ್ವಾಲಿಟಿ ಟೈಂ ಕಳೆಯಲು ಬಯಸ್ತಾರೆ. ಅಮ್ಮ ಸಿಗುವ ಸಮಯವನ್ನು ಸದುಪಯೋಗಪಡಿಸಿಕೊಳ್ತಾರೆ. ಅಮ್ಮನ ಮಾತು, ಆಜ್ಞೆಗಳನ್ನು ಪಾಲಿಸ್ತಾರೆ. ಅಮ್ಮನ ಪ್ರಯತ್ನವನ್ನು ಲಘುವಾಗಿ ಪರಿಗಣಿಸೋದಿಲ್ಲ. ಕ್ರಮೇಣ ಅಮ್ಮನನ್ನು ಅವರು ರೋಲ್ ಮಾಡೆಲ್ ಆಗಿ ನೋಡ್ತಾರೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಮಕ್ಕಳ ಬೆಳವಣಿಗೆ ಮೇಲೆ ಪಾಲಕರು ಗಮನಾರ್ಹ ಪ್ರಭಾವ ಬೀರ್ತಾರೆ. ಉದ್ಯೋಗದಲ್ಲಿರುವ ಪಾಲಕರು, ಮಕ್ಕಳ ಆರ್ಥಿಕ ಅಗತ್ಯವನ್ನು ನೋಡಿಕೊಳ್ತಾರೆ. ಮಕ್ಕಳ ನಿರ್ಧಾರ ಅಥವಾ ಪ್ರಶ್ನೆಗೆ ಹೆಚ್ಚು ಪ್ರಾಯೋಗಿಕವಾಗಿ ಉತ್ತರ ನೀಡ್ತಾರೆ. ಮಕ್ಕಳಿಗೆ ಸಮಯ ನಿರ್ವಹಣೆ ಕೌಶಲ್ಯವನ್ನೂ ಅವರು ಕಲಿಸ್ತಾರೆ.
ಪಿರಿಯಡ್ಸ್ ಸಮಯದಲ್ಲಿ ಜ್ವರ ಬರುತ್ತಾ? ಹಾಗಿದ್ರೆ ಏನ್ ಮಾಡೋದು?
ಆರ್ಥಿಕ ಸ್ವಾವಲಂಬಿ ಪಾಠ : ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಅಧ್ಯಯನದ ಸಂಶೋಧನೆ ಪ್ರಕಾರ, ಕೆಲಸ ಮಾಡುವ ಅಮ್ಮಂದಿರ ಮಕ್ಕಳು, ಮನೆಯಲ್ಲಿರುವ ತಾಯಂದಿರ ಮಕ್ಕಳಿಗಿಂತ ಹೆಚ್ಚು ಸಂಪಾದನೆ ಮಾಡ್ತಾರಂತೆ. ಅವರಿಗಿಂತ ಶೇಕಡಾ 23ರಷ್ಟು ಹೆಚ್ಚು ಸಂಬಳ ಗಳಿಸ್ತಾರಂತೆ. ಇಷ್ಟೇ ಅಲ್ಲದ, ಕೆಲಸ ಮಾಡುವ ತಾಯಿಯ ಮಗ, ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಗೆ ಹೆಚ್ಚು ಬೆಂಬಲ ನೀಡ್ತಾನಂತೆ. ಲಿಂಗ ಸಮಾನತೆಯನ್ನು ಬೆಂಬಲಿಸುತ್ತಾರೆ. ಕೆಲಸ ಮಾಡುವ ತಾಯಿಯ ಮಕ್ಕಳು ಡೇಕ್ ಕೇರ್ ನಲ್ಲಿ ಸಮಯ ಕಳೆಯುವ ಕಾರಣ ಅವರು ಸಾಮಾಜಿಕವಾಗಿ ಬೆರೆಯುವ ಸ್ವಭಾವ ಹೊಂದಿರುತ್ತಾರೆ. ಸಂವಹನ ಕೌಶಲ್ಯ ಅವರಿಗಿರುತ್ತದೆ.