ದೇಶದ ಮೊದಲ ಶ್ರವಣ ದೋಷ ಹೊಂದಿರುವ ವಕೀಲೆ ಸಾರಾ ಸನ್ನಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಏ.8ರಂದು ಕೌಟುಂಬಿಕ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಲಿದ್ದಾರೆ.

ಬೆಂಗಳೂರು (ಏ.5): ದೇಶದ ಮೊದಲ ಶ್ರವಣ ದೋಷ ಹೊಂದಿರುವ ವಕೀಲೆ ಸಾರಾ ಸನ್ನಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಏ.8ರಂದು ಕೌಟುಂಬಿಕ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಲಿದ್ದಾರೆ.

ಸ್ಕಾಟ್ಲೆಂಡ್‌ ಪೌರತ್ವ ಹೊಂದಿರುವ ಪತಿ ಮತ್ತು ಬೆಂಗಳೂರಿನಲ್ಲಿರುವ ಪತ್ನಿಯ ನಡುವೆ ಕೌಟುಂಬಿಕ ವ್ಯಾಜ್ಯ ಉಂಟಾಗಿದ್ದು, ಆ ಸಂಬಂಧ ಪತಿ ವಿರುದ್ಧ ನಗರದ ಬಸವನಗುಡಿ ಠಾಣಾ ಪೊಲೀಸರು ಲುಕ್‌ ಔಟ್‌ ನೋಟಿಸ್ ಜಾರಿ ಮಾಡಿದ್ದಾರೆ. ಅದನ್ನು ರದ್ದುಪಡಿಸಲು ಕೋರಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಪತ್ನಿಯ ಪರವಾಗಿ ಸಾರಾ ಸನ್ನಿ ವಾದ ಮಂಡಿಸಲಿದ್ದಾರೆ.

ಗುರುವಾರ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಹಾಜರಾದ ಸಾರಾ ಸನ್ನಿ ಅವರು, ಪ್ರಕರಣದಲ್ಲಿ ಪತ್ನಿಯ ಪರ ತಾವು ವಾದ ಮಂಡಿಸಲಿದ್ದು, ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಈ ಮನವಿಗೆ ಪ್ರಕರಣದ ಪ್ರತಿವಾದಿಗಳಾದ ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ ಕಾಮತ್‌ ಮತ್ತು ಡೆಪ್ಯುಟಿ ಸಾಲಿಸಿಟರ್‌ ಜನರಲ್ ಎಚ್.ಶಾಂತಿಭೂಷಣ್‌ ಒಪ್ಪಿಗೆ ಸೂಚಿಸಿದರು.

ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಸಾರಾ ಸನ್ನಿ ಅವರಿಗೆ ದುಭಾಷಿ ನೆರವು ನೀಡಲು ಅಗತ್ಯ ವ್ಯವಸ್ಥೆ ಕಲ್ಪಿಸಿ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಅವರಿಗೆ ಸೂಚಿಸಿ ವಿಚಾರಣೆಯನ್ನು ಏ.8ಕ್ಕೆ ನಿಗದಿಗೊಳಿಸಿದೆ.

ಚಂದ್ರಯಾನ ಎಫೆಕ್ಟ್: ಫೋರ್ಬ್ಸ್‌ ಬಿಲಿಯನೇರ್‌ ಶ್ರೀಮಂತರ ಪಟ್ಟಿಯಲ್ಲಿ ಗ ...

ಪ್ರಕರಣವೇನು?: ಮುಂಬೈನ ಥಾಣೆ ಜಿಲ್ಲೆ ಮೂಲದ ಪತಿ 2004ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಸ್ಕಾಟ್ಲೆಂಡ್‌ಗೆ ತೆರಳಿದ್ದರು. ಅಲ್ಲಿಯೇ ಅವರು ಬ್ಯಾಂಕ್‌ ಅಧಿಕಾರಿಯಾಗಿ ನೇಮಕಗೊಂಡು ಉದ್ಯೋಗ ನಿರ್ವಹಿಸುತ್ತಿದ್ದಾರೆ. ಸದ್ಯ ಅವರು ಅಲ್ಲಿನ ಪೌರತ್ವ ಪಡೆದಿದ್ದಾರೆ. 41 ವರ್ಷದ ಅವರಿಗೆ ಈ ಹಿಂದೆಯೇ ಬೇರೊಬ್ಬ ಮಹಿಳೆಯೊಂದಿಗೆ ಮದುವೆಯಾಗಿತ್ತು. ಮೊದಲ ಪತ್ನಿಯಿಂದ ಪತಿ ವಿಚ್ಛೇದನ ಪಡೆದಿದ್ದರು. ಆನ್‌ಲೈನ್ ತಾಣದ ನೆರವಿನಿಂದ ಬೆಂಗಳೂರಿನ 36 ವರ್ಷದ ಮಹಿಳೆಯನ್ನು 2023ರ ಮೇ 21ರಂದು ಎರಡನೇ ವಿವಾಹವಾಗಿದ್ದರು.

ಈ ಮಧ್ಯೆ ಎರಡನೇ ಪತ್ನಿ ಬಸವನಗುಡಿ ಪೊಲೀಸ್‌ ಠಾಣೆಗೆ ದೂರು ನೀಡಿ, ಮದುವೆಯ ರಾತ್ರಿ ಔತಣ ಕೂಟ ನಡೆದಿತ್ತು. ಅಂದು ಪತಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಅವರ ಮೊಬೈಲ್‌ ಫೋನ್‌ಗೆ ಸಂದೇಶವೊಂದು ಬಂದಿತ್ತು. ಅದನ್ನು ಗಮನಿಸಿದಾಗ ಸಂದೇಶ ಕಳುಹಿಸಿದ ಮಹಿಳೆಯು, ಪತಿಯೊಂದಿಗೆ ಲೈಂಗಿಕ ಸಲುಗೆ ಹೊಂದಿರುವುದು ನನ್ನ ಅರಿವಿಗೆ ಬಂದಿತ್ತು ಎಂದು ದೂರಿದ್ದರು.

ಈ ಕುರಿತು ಪ್ರಶ್ನಿಸಿದಾಗ ಪತಿ ನನ್ನೊಂದಿಗೆ ಜಗಳ ಮಾಡಿ ದೈಹಿಕವಾಗಿ ಹಲ್ಲೆ ಸಹ ನಡೆಸಿದರು. ನಂತರ ನನ್ನನ್ನು ವರದಕ್ಷಿಣೆಗಾಗಿ ಪೀಡಿಸಿದರು ಎಂದು ಆರೋಪಿಸಿದ್ದರು. ಪೊಲೀಸರು ದೂರುದಾರ ಮಹಿಳೆಯ ಪತಿ ವಿರುದ್ಧ ಎಫ್‌ಐಆರ್‌ ದಾಖಲಿಸಿ, ದೇಶ ಬಿಟ್ಟು ಹೋಗದಂತೆ ಲುಕ್‌ ಔಟ್‌ ನೋಟಿಸ್ ಜಾರಿಗೊಳಿಸಿದ್ದರು. ಅದನ್ನು ರದ್ದು ಕೋರಿ ದೂರುದಾರೆಯ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಬಸವನಗುಡಿ ಇನ್ಸ್‌ಪೆಕ್ಟರ್‌, ನಗರ ಪೊಲೀಸ್ ಆಯುಕ್ತರು ಮತ್ತು ದೂರುದಾರ ಮಹಿಳೆ (ಅರ್ಜಿದಾರನ ಪತ್ನಿ) ಅವರನ್ನು ಪ್ರತಿವಾದಿಯಾಗಿದ್ದಾರೆ.

ಸಾರಾ ಬೆಂಗಳೂರಿನವರು: ಬೆಂಗಳೂರು ನಿವಾಸಿಯಾದ ಸಾರಾ ಸನ್ನಿ ಅವರು ದೇಶದ ಮೊದಲ ಶ್ರವಣದೋಷ ಹೊಂದಿರುವ ವಕೀಲೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದುಭಾಷಿಯ ನೆರವಿನಿಂದ ಸಂಕೇತ ಭಾಷೆ ಬಳಸಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವೊಂದರ ಸಂಬಂಧ ವಾದ ಮಂಡಿಸಿದರು. ಇದು ದೇಶದ ನ್ಯಾಯಾಂಗ ಇತಿಹಾಸದಲ್ಲಿ ಒಂದು ದಾಖಲೆಯಾಗಿ ಪರಿಗಣಿಸಲ್ಪ ಪಟ್ಟಿದೆ. ಇದೀಗ ಸಾರಾ ಸನ್ನಿ ಕರ್ನಾಟಕ ಹೈಕೋರ್ಟ್‌ನಲ್ಲೂ ವಾದ ಮಂಡಿಸಲಿದ್ದಾರೆ. ಅವರ ವಾದ ಮಂಡನೆಗೆ ಏ.8ರಂದು ಹೈಕೋರ್ಟ್‌ ಹಾಲ್‌-23(ನ್ಯಾ.ನಾಗಪ್ರಸನ್ನ ಅವರ ಪೀಠ) ಸಾಕ್ಷಿಯಾಗಲಿದೆ.