ಡಿಕೆಶಿ ಮಗಳ ಅಂಬರ್ ವ್ಯಾಲಿ ಸ್ಕೂಲಲ್ಲಿ ಬ್ಲೇಡ್ ರನ್ನರ್ ಕಾರ್ಗಿಲ್ ಹೀರೋ ಬಂದಾಗ!
ಡಿಕೆ ಐಶ್ವರ್ಯ, ತಮ್ಮ ಬೆಂಗಳೂರಿನಲ್ಲಿರುವ ಅಂಬರ್ ವ್ಯಾಲಿ ಸ್ಕೂಲ್‌ನಲ್ಲಿ ಕಾರ್ಗಿಲ್ ಯೋಧ ಹಾಗೂ ದೇಶದ ಮೊದಲ ಬ್ಲೇಡ್ ರನ್ನರ್ ಮೇಜರ್ ಡಿ ಪಿ ಸಿಂಗ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿ, ಅವರ ಜತೆಗಿನ ಒಡನಾಟವನ್ನು ಮೆಲುಕು ಹಾಕಿಕೊಂಡಿದ್ದಾರೆ.
ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುತ್ರಿ ಡಿಕೆ ಐಶ್ವರ್ಯ ಆಗಾಗ ತಮ್ಮ ಪ್ರಬುದ್ಧ ನಡೆ ಹಾಗೂ ದಿಟ್ಟ ನಿಲುವುಗಳ ಮೂಲಕ ಸುದ್ದಿಯಾಗುತ್ತಲೇ ಬಂದಿದ್ದಾರೆ. ತಂದೆಯ ಪ್ರಭಾವಳಿ, ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಪಾಸ್ತಿ ಹೊಂದಿದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆಗುರುತು ದಾಖಲಿಸುವತ್ತಾ ಐಶ್ವರ್ಯ ಮುನ್ನಡೆಯುತ್ತಿದ್ದಾರೆ. ಇದೀಗ ಐಶ್ವರ್ಯ, ಕಾರ್ಗಿಲ್ ವೀರ ಯೋಧ, ದೇಶದ ಮೊದಲ ಬ್ಲೇಡ್ ರನ್ನರ್ ಮೇಜರ್ ಡಿ ಪಿ ಸಿಂಗ್ ಅವರನ್ನು ಅಂಬರ್ ವ್ಯಾಲಿ ಸ್ಕೂಲ್‌ನಲ್ಲಿ ಭೇಟಿ ಮಾಡಿದ ಅನುಭವವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಡಿ ಪಿ ಸಿಂಗ್ ಅವರನ್ನು ಅಂಬರ್ ವ್ಯಾಲಿ ಸ್ಕೂಲ್‌ನಲ್ಲಿ ಆಯೋಜಿಸಲಾಗಿದ್ದ ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಅವರನ್ನು ಸ್ವಾಗತಿಸಿದ್ದು ತಮಗೆ ಅತೀವ ಹೆಮ್ಮೆ ಹಾಗೂ ಗೌರವದ ಸಂಗತಿ ಎನಿಸಿತು.
ಅವರ ಶ್ರದ್ಧೆ ಹಾಗೂ ಪರಿಶ್ರಮದ ಜೀವನವು ಪ್ರತಿಯೊಬ್ಬರಿಗೂ ಸ್ಪೂರ್ತಿಯನ್ನು ನೀಡುತ್ತದೆ. ಅವರು ಪ್ರತಿ ಮಗು ಹಾಗೂ ಶಿಕ್ಷಕರ ಜತೆ ವೈಯುಕ್ತಿಕವಾಗಿ ಮಾತನಾಡಿದ ರೀತಿ ನಿಜಕ್ಕೂ ಎಲ್ಲರೂ ಮೆಚ್ಚುವಂತದ್ದು. ಪ್ರತಿಯೊಬ್ಬರಲ್ಲಿರುವ ಸಾಮರ್ಥ್ಯವನ್ನು ಎತ್ತಿ ತೋರಿಸುವ ಅವರ ಗುಣ ನಮ್ಮೆಲ್ಲರಲ್ಲೂ ಹೊಸ ವಿಶ್ವಾಸವನ್ನು ಹುಟ್ಟುಹಾಕಿತು.
ಅವರೊಂದಿಗಿನ ಸಂವಾದವು ನಮ್ಮನ್ನು ಪ್ರೇರೇಪಿಸಿದ್ದು ಮಾತ್ರವಲ್ಲದೇ, ಅಚಲವಾದ ಶ್ರದ್ಧೆಯಿದ್ದರೇ, ಹೇಗೆ ಜೀವನ ಪರಿವರ್ತಿಸಿಕೊಳ್ಳಬಹುದು ಎನ್ನುವುದು ತಿಳಿಸಿದರು. ಸರ್, ನಿಮ್ಮ ಉಪಸ್ಥಿತಿ ನಿಜಕ್ಕೂ ಅವಿಸ್ಮರಣೀಯವಾಗಿ ಉಳಿಯಲಿದೆ. ಯಾವತ್ತೂ ಕೈಚೆಲ್ಲಿ ಕೂರಬಾರದು ಎನ್ನುವ ಹಾಗೂ ಪ್ರತಿಯೊಬ್ಬರಲ್ಲಿಯೂ ಅವರದ್ದೇ ಆದ ಸಾಮರ್ಥ್ಯವಿದೆ ಎನ್ನುವ ನಿಮ್ಮ ಸಂದೇಶ ನೆನಪಿನಲ್ಲಿ ಉಳಿಯಲಿದೆ.
ಮತ್ತೊಮ್ಮೆ ನಿಮಗೆ ಬಿಡುವು ಮಾಡಿಕೊಂಡು ನಮ್ಮ ಶಾಲೆಗೆ ಭೇಟಿ ನೀಡಿ, ನಮ್ಮ ಮಕ್ಕಳಿಗೆ ಆಶೀರ್ವಾದ ಮಾಡಿಕ್ಕೆ ಹಾಗೂ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂತ ಇಂಪ್ಯಾಕ್ಟ್ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಐಶ್ವರ್ಯ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಡಿಕೆಶಿ ಮಗಳ ಶಿಕ್ಷಣ ಪ್ರೀತಿ:
ಐಶ್ವರ್ಯ ಡಿಕೆಎಸ್ ಹೆಗ್ಡೆ ಎಂಬ ಹೆಸರಿನ ಈಕೆಯ ಪ್ರೊಫೈಲ್ ನೋಡಿದರೆ ನೀವು ಒಂದು ಕ್ಷಣ ದಂಗಾಗಿ ಹೋಗುತ್ತೀರಿ. ಅರಳು ಹುರಿದಂತೆ ಇಂಗ್ಲೀಷ್‌ನಲ್ಲಿ ಮಾತನಾಡುವ ಐಶ್ವರ್ಯ, ಶಿಕ್ಷಣ ಹಾಗೂ ಮಹಿಳಾ ಸಬಲೀಕರಣದ ಪ್ರಖರ ಪ್ರತಿಪಾದಕಿ ಕೂಡಾ ಹೌದು. ಡಿಕೆ ಶಿವಕುಮಾರ್ ಅವರ ದೊಡ್ಡ ಶಿಕ್ಷಣ ಸಂಸ್ಥೆಗಳ ಸಾಮ್ರಾಜ್ಯವನ್ನು ಯಾವುದೇ ಕೊರತೆಯಿಲ್ಲದೇ ದಿಟ್ಟವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.