ಕೋವಿಡ್-19 ಇರುವ ಈ ಸಂದರ್ಭದಲ್ಲಿ ಎಲ್ಲರಿಗೂ ಉತ್ತಮ ಆ್ಯಪ್‌‍ಗಳ ಅವಶ್ಯಕತೆ ಇದೆ. ಅದರಲ್ಲೂ ವರ್ಕ್ ಫ್ರಂ ಹೋಂನಲ್ಲಿರುವವರಿಗೆ ವಿಡಿಯೋ ಕಾಲಿಂಗ್ ಫೀಚರ್ ಹೊಂದಿರುವ, ಬಳಸಲು ಸುಲಭವಾಗುವ ಆ್ಯಪ್‌ಗಳು ಬೇಕು. ಈಗ ಹಲವಾರು ಆ್ಯಪ್‌ಗಳು ಈ ನಿಟ್ಟಿನಲ್ಲಿ ಸ್ಪರ್ಧೆಗಿಳಿದಿವೆ. ಜೂಮ್ ಆ್ಯಪ್ ಬೇಗ ಪ್ರಸಿದ್ಧಿ ಪಡೆದರೂ ಅಷ್ಟರಲ್ಲೇ ಸುರಕ್ಷತಾ ದೃಷ್ಟಿಯಿಂದ ಉತ್ತಮ ಆ್ಯಪ್ ಅದಲ್ಲವೆಂಬ ನಿರ್ಧಾರಕ್ಕೆ ಹಲವು ದೇಶಗಳು ಬಂದಿವೆ. ಹಾಗಾದರೆ ಪ್ರೊಫೆಶನಲ್ ಮೀಟಿಂಗ್ ಮತ್ತು ವಿಡಿಯೋ ಕಾನ್ಪರೆನ್ಸ್‌ ಗಳಿಗೆ ಯಾವ ಆ್ಯಪ್ ಬಳಸಬಹುದು? ಅಂಥ ಕೆಲವು ಪ್ರಮುಖ ಆ್ಯಪ್‌ಗಳ ಮಾಹಿತಿ ಇಲ್ಲಿದೆ ನೋಡಿ. 

ಕೊರೋನಾ ವೈರಸ್ ಪರಿಣಾಮ ಲಾಕ್‌ಡೌನ್‌ನಿಂದಾಗಿ ಕಚೇರಿಗಳಿಗೆ ಹೋಗಲಾಗದೇ ವರ್ಕ್ ಫ್ರಂ ಹೋಂ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಶೈಕ್ಷಣಿಕ ಕ್ಷೇತ್ರದಲ್ಲೂ ತಂತ್ರಜ್ಞಾನದ ಬಳಕೆಯನ್ನು ಹೆಚ್ಚು ಮಾಡುವಂತೆ ಮಾಡಿದೆ. ಆನ್‌ಲೈನ್ ತರಗತಿಗಳಿಗಾಗಿ ವಿವಿಧ ಆ್ಯಪ್‌ಗಳನ್ನು ಬಳಕೆಯಾಗುತ್ತಿವೆ. ಈಗ ಪ್ರಶ್ನೆ ಹುಟ್ಟಿಕೊಂಡಿರುವುದು ನಾವು ಬಳಸುವ ಆ್ಯಪ್‌ಗಳು ಎಷ್ಟು ಸೇಫ್ ಎಂಬುದಷ್ಟೇ. 

ಹೌದು. ಭಾರಿ ಬೇಗ ಮುನ್ನೆಲೆಗೆ ಬಂದಿದ್ದ ಜೂಮ್ ಆ್ಯಪ್, ಅಷ್ಟೇ ಬೇಗ ಅಪಖ್ಯಾತಿಗೊಳಗಾಗಿ ಜನತೆಯ ನಂಬಿಕೆಯನ್ನು ಕಳೆದುಕೊಂಡಿತು. ಎಲ್ಲಿ ಈ ಆ್ಯಪ್ ಬಳಸಿದರೆ ಹ್ಯಾಕ್ ಆಗುತ್ತದೆಯೋ ಎಂಬ ಅಳುಕಿನಲ್ಲೇ ಹಲವಾರು ಬಳಕೆದಾರರು ಅದನ್ನು ಡಿಲೀಟ್ ಸಹ ಮಾಡಿಬಿಟ್ಟರು. ಹೀಗಾಗಿ ಯಾವ ಆ್ಯಪ್ ಬಳಸಿದರೆ ಸುರಕ್ಷಿತ ಎಂಬ ಪ್ರಶ್ನೆ ಏಳುವುದು ಸಹಜ. ಈ ಐದು ವಿಡಿಯೋ ಕಾಲಿಂಗ್ ಆ್ಯಪ್‌ಗಳಾದ ಗೂಗಲ್ ಮೀಟ್, ಮೈಕ್ರೋಸಾಫ್ಟ್ ಟೀಮ್ಸ್, ಸ್ಕೈಪ್, ಸ್ಲ್ಯಾಕ್ ಹಾಗೂ ವಾಟ್ಸ್‌ಆ್ಯಪ್‌ಗಳನ್ನು ಬಳಸಿ ಸುರಕ್ಷಿತ ಕಾರ್ಯನಿರ್ವಹಿಸಿ. 

ಇದನ್ನೂ ಓದಿ: ಫೇಸ್ಬುಕ್ - ವಾಟ್ಸಪ್- ಟಿಕ್‌ಟಾಕ್‌ನಲ್ಲಿ ಹೊಸ ಫೀಚರ್‌ಗಳ ಹವಾ!

ಗೂಗಲ್ ಮೀಟ್‌ನಲ್ಲಿ ಮೀಟಿಂಗ್ ಮಾಡಿ
ಗೂಗಲಿ ಇತ್ತಿಚೆಗಷ್ಟೇ ತನ್ನ ಗೂಗಲ್ ಹ್ಯಾಂಗ್‌ಔಟ್ ಮೀಟ್ ಆ್ಯಪ್ ಅನ್ನು ಗೂಗಲ್ ಮೀಟ್ ಎಂದು ಮರುನಾಮಕರಣ ಮಾಡಿ ಬಳಕೆಗೆ ಬಿಟ್ಟಿದೆ. ಗೂಗಲ್ ಆ್ಯಪ್ ಆಗಿರುವ ಕಾರಣ ಇದರ ಅಪ್ಲೀಕೇಶನ್‌ಗಳ ಸುರಕ್ಷತೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇದಕ್ಕೆ ಬೇಕಾಗಿರುವುದಿಷ್ಟೇ, ಗೂಗಲ್‌ನಲ್ಲಿ ಒಂದು ಅಕೌಂಟ್ ಇದ್ದರೆ ಸಾಕು. ಮೀಟಿಂಗ್‌ಗಳಿಗೆ ಈ ಆಪ್‌ ಬಳಸಬಹುದಾಗಿದೆ. ವಿಶೇಷತೆ ಎಂದರೆ ನಮ್ಮ ಜೊತೆ ವಿಡಿಯೋ ಕಾಲಿಂಗ್‌ನಲ್ಲಿ ಕನೆಕ್ಟ್ ಆಗಬೇಕಾದ ವ್ಯಕ್ತಿಯು ಇದೇ ಆಪ್‌ ಅನ್ನು ಬಳಸಲೇಬೇಕೆಂಬ ನಿಯಮವಿಲ್ಲ. ಆ ವ್ಯಕ್ತಿ ಕೇವಲ ಇನ್‌ವೈಟ್ ಲಿಂಕ್‌ ಪಡೆದರೆ ಸಾಕು. ಅಡ್ಮಿನ್ ಕಳಿಸಿದ ಲಿಂಕ್‌ ಉಪಯೋಗಿಸಿಕೊಂಡು ಇಡೀ ಗ್ರೂಪ್ ವಿಡಿಯೋ ಕಾನ್ಪರೆನ್ಸ್ ಮಾಡಬಹುದಾಗಿದೆ. ಗೂಗಲ್ ಮೀಟ್‌ನಿಂದಾಗಿ ಉಳಿದ ಗೂಗಲ್ ಪ್ರಾಡಕ್ಟ್‌‌ಗಳಿಗೂ ಅನುಕೂಲವಾಗಿದೆ.

ಮೈಕ್ರೋಸಾಫ್ಟ್ ಟೀಮ್ಸ್‌ನಲ್ಲಿ ಹಲವು ಅವಕಾಶ
ಮೈಕ್ರೋಸಾಫ್ಟ್ ಟೀಮ್ಸ್ ಈಗ ಇನ್ನೊಂದು ಪ್ರೊಫೆಶನಲ್ ಮೀಟಿಂಗ್ ಆ್ಯಪ್ ಆಗಿದೆ. ಇದು ಚಾಟಿಂಗ್‌ಗೆ ಅನುಕೂಲ ಮಾಡಿಕೊಡುವುದಲ್ಲದೇ ವಿಡಿಯೋ ಕಾನ್ಫರೆನ್ಸ್ ಮತ್ತು 250ಕ್ಕೂ ಹೆಚ್ಚು ಜನರಿಗೆ ವಿಡಿಯೋ ಕಾಲಿಂಗ್‌ನಲ್ಲಿ ಅವಕಾಶ ಕಲ್ಪಿಸಿದೆ. ಇದು ಉಳಿದ ಮೈಕ್ರೋಸಾಫ್ಟ್ ಪ್ರಾಡಕ್ಟ್‌‌ಗಳೊಂದಿಗೆ ಸಂಯೋಜನೆಗೊಂಡಿದೆ. ಜತೆಗೆ ವಿಡಿಯೋ ಕಾಲಿಂಗ್ ಮಧ್ಯದಲ್ಲೇ ಆಫೀಸ್ ಡಾಕ್ಯುಮೆಂಟ್‌ಗಳ ಕೊಲ್ಯಾಬರೇಶನ್‌ಗೂ ಇದರಲ್ಲಿ ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ: ಇನ್ನು ನಿಮಗೆ ವರ್ಕ್ ಫ್ರಂ ಹೋಂ ಫಿಕ್ಸ್?

ಸ್ಕೈಪ್ ಬಳಸಿ ಸೇಫ್ ಆಗಿ
ಪ್ರೊಫೆಶನಲ್ ಮತ್ತು ಕ್ಯಾಶುವಲ್ ವಿಡಿಯೋ ಕಾಲ್‌ಗಳಿಗೆ ಪರಿಚಿತವಾಗಿರುವ ಆ್ಯಪ್ ಸ್ಕೈಪ್. ಅಕೌಂಟ್ ಅನ್ನು ಕ್ರಿಯೇಟ್ ಮಾಡದೆಯೆ ಎಲ್ಲರೊಂದಿಗೂ ಕನೆಕ್ಟ್ ಆಗಲು ಅವಕಾಶ ಮಾಡಿಕೊಟ್ಟಿದ್ದ ಆ್ಯಪ್ ಜೂಮ್, ಈಗ ಸ್ಕೈಪ್ ಅದೇ ಫೀಚರ್‌ ನೀಡಿರುವುದಲ್ಲದೇ ಸುರಕ್ಷತೆಯ ಜತೆಗೆ 50 ಜನರವರೆಗೆ ವಿಡಿಯೊ ಕಾನ್ಫರೆನ್ಸ್‌‌ಗೆ ಅವಕಾಶ ನೀಡಿದೆ.

ಸ್ಲ್ಯಾಕ್‌ನಲ್ಲೂ ಇದೆ ವಿಡಿಯೋ ಫೀಚರಿಂಗ್
ಹಲವಾರು ಕಂಪನಿಗಳು ತಮ್ಮ ದೊಡ್ಡ ಟೀಮ್‌ಗಳನ್ನು ಒಂದೇ ವೇದಿಕೆಯಲ್ಲಿ ಕೆಲಸ ನಿರ್ವಹಿಸುವಂತೆ ಮಾಡಿದ ಪ್ರಸಿದ್ಧ ಆ್ಯಪ್ ಇದಾಗಿದೆ. ಈ ಆ್ಯಪ್ ಅನ್ನು ಹೆಚ್ಚಾಗಿ ಚಾಟಿಂಗ್‌ಗೆ, ಪ್ರಮುಖ ಮೆಸೇಜ್‌ಗಳನ್ನು ಶೇರ್ ಮಾಡಲು ಮತ್ತು ಇತರ ಬೇರೆ ಕಾರ್ಯಗಳಿಗೆ ಬಳಸಲಾಗುತ್ತಿದೆ. ಈ ಆ್ಯಪ್ ವಿಡಿಯೋ ಕಾಲ್‌ ಫೀಚರ್‌ ಅನ್ನು ಹೊಂದಿದೆ ಎಂಬ ಮಾಹಿತಿ ಹಲವು ಬಳಕೆದಾರರಿಗೆ ಇನ್ನೂ ತಿಳಿದಿಲ್ಲ. ಇದನ್ನು ಉಚಿತವಾಗಿ ಬಳಕೆ ಮಾಡುತ್ತಿದ್ದವರು ನಾರ್ಮಲ್ ವಿಡಿಯೋ ಕಾಲ್ ಮಾಡಲು ಸಾಧ್ಯ. ಪ್ರೊಫೆಶನ್‌ಗೆ, ಗ್ರೂಪ್ ಮೀಟಿಂಗ್‌ಗಳಿಗೆ ಬಳಕೆ ಮಾಡಬೇಕೆಂದರೆ ಇದರ ಪ್ರೀಮಿಯಮ್ ಅಕೌಂಟ್‌ ಹೊಂದಿರಬೇಕು.

ಇದನ್ನೂ ಓದಿ: ಡಾರ್ಕ್‌ವೆಬ್‌ನಲ್ಲಿ ಸೇಲಾಯ್ತು ಜೂಮ್ ಪ್ರೈವೇಸಿ!

ವಾಟ್ಸ್‌ಆ್ಯಪ್ ಕೂಡ ಬೆಸ್ಟ್ 
ವಾಟ್ಸ್‌ಆ್ಯಪ್ ಪ್ರೊಫೆಶನಲ್ ಮೀಟಿಂಗ್‌ ದೃಷ್ಟಿಯಿಂದ ಮಾಡಿದ ಆ್ಯಪ್ ಅಲ್ಲದಿದ್ದರೂ ಸಹ ಚಿಕ್ಕ ಟೀಮ್‌ಗಳು ಇದರ ವಿಡಿಯೋ ಕಾಲ್ ಸೌಲಭ್ಯವನ್ನು ಇಲ್ಲಿ ಉಪಯೋಗಿಸಿಕೊಳ್ಳಬಹುದು. ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕಾಲಿಂಗ್ ಸೌಲಭ್ಯವನ್ನು ಒಮ್ಮೆಲೆ 4 ಮಂದಿಯ ಟೀಮ್ ಬಳಸಬಹುದಾಗಿದ್ದರೂ ಅಪ್‌ಗ್ರೇಡ್ ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ. ವಾಟ್ಸ್‌ಆ್ಯಪ್ ಬಳಕೆ ಮಾಡಲು ಸುಲಭ ಮತ್ತು ಬೇರೆ ಆ್ಯಪ್‌ಗಳಿಗೆ ಹೋಲಿಸಿದಲ್ಲಿ ಇದು ಬೇಗ ಕನೆಕ್ಟ್ ಆಗುತ್ತದೆ. ಈವರೆಗೆ ಕೇವಲ 4 ಮಂದಿವರೆಗೆ ಮಾತ್ರ ಇದ್ದ ಆಡಿಯೋ-ವಿಡಿಯೋ ಕಾಲಿಂಗ್ ಸೌಲಭ್ಯವನ್ನು ಹೆಚ್ಚಿನ ಮಂದಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದ್ದು, ಒಮ್ಮೆಲೆ ಎಷ್ಟು ಬಳಕೆದಾರರು ಬಳಸಬಹುದು ಎಂಬ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.