ಜೂಮ್ ಆ್ಯಪ್ ಬಳಕೆದಾರರಿಗೆ ಈ ಮೊದಲೇ ಎಚ್ಚರಿಸಲಾಗಿತ್ತು. ಅಕೌಂಟ್‌ಗಳು ಹ್ಯಾಕ್ ಆಗುತ್ತಿವೆ. ಸ್ವಲ್ಪ ಹುಷಾರು, ಎಚ್ಚರ ತಪ್ಪಿದರೆ ನಿಮ್ಮ ಮಾಹಿತಿಯೂ ಕಳುವಾಗುತ್ತದೆ ಎಂದು. ಆದರೆ, ಬರೋಬ್ಬರಿ 5 ಲಕ್ಷ ಬಳಕೆದಾರರ ಮಾಹಿತಿ ಕಳವಾಗಿದ್ದಲ್ಲದೆ, ಒಬ್ಬೊಬ್ಬ ಬಳಕೆದಾರನ ದತ್ತಾಂಶಗಳು ಕೇವಲ 15 ಪೈಸೆಯಂತೆ ಬಿಕರಿಯಾಗಿದೆ. ಅದೂ ಡಾರ್ಕ್‌ವೆಬ್‌ ಎಂಬ ಕತ್ತಲ ಜಗತ್ತಿನೊಳಗೆ ಇಂಥ ಆತಂಕಗೇಡಿ ಚಟುವಟಿಕೆ ನಡೆದಿದೆ.

ಈ ವಿಡಿಯೋ ಕಾನ್ಫರೆನ್ಸ್ ಆ್ಯಪ್ ನೋಡ ನೋಡುತ್ತಿದ್ದಂತೆ ಬಹಳ ಫೇಮಸ್ ಆಗಿಹೋಯಿತು. ಕೊರೋನಾ ವೈರಸ್ ಎಫೆಕ್ಟ್ ಇದಕ್ಕೆ ಕಾರಣ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುತೇಕ ಎಲ್ಲರಿಗೂ ವರ್ಕ್ ಫ್ರಂ ಹೋಂ ನೀಡಲಾಗಿದ್ದರಿಂದ ಇದರ ಬಳಕೆಯೂ ಹೆಚ್ಚಿತು. ಆದರೆ, ಹೀಗೆ ಇಂಥ ಆ್ಯಪ್ ಗಳನ್ನು ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಯಾರೂ ಚಿಂತಿಸಲಿಲ್ಲ. ಯಾರಿಗೂ ಹೀಗೆ ಮಾಹಿತಿ ಕದಿಯುವ ಮಟ್ಟಕ್ಕೆ ಹೋಗುತ್ತದೆ ಎಂಬ ಅರಿವೂ ಇರಲಿಲ್ಲ. ಅದರಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮಗನ್ನಿಸಿದ ಹಾಗೆ ಬರೆದುಕೊಳ್ಳತೊಡಗಿದರು.  ಇದು ಹ್ಯಾಕರ್ಸ್ ಎಂಬ ದುರುಳರ ಕಣ್ಣಿಗೆ ಬಿದ್ದಿದ್ದೇ ತಡ ಹ್ಯಾಕಿಂಗ್ ಪ್ರಹಸನ ಆರಂಭವಾಗಿ ಈ ಹಂತಕ್ಕೆ ಬಂದು ಮುಟ್ಟಿದೆ.

ಇದನ್ನೂ ಓದಿ: ಕೈಜೋಡಿಸಿದ ಟೆಕ್‌ ದಿಗ್ಗಜರು; ಕೊರೋನಾ ಟ್ರೇಸ್‌ಗೆ ಆ್ಯಪಲ್, ಗೂಗಲ್ ಗೂಗ್ಲಿ!

15 ಪೈಸೆ, ಕೆಲವು ಉಚಿತ!
ಹೌದು. ಹೀಗೆ ಕೆಲ ದಿನಗಳಿಂದ ಹ್ಯಾಕರ್ಸ್‌ಗಳು ಮಾಹಿತಿಯನ್ನು ಕದ್ದಿದ್ದಷ್ಟೇ ಅಲ್ಲದೆ, ವಿಡಿಯೋ ಕಾಲಿಂಗ್ ಮಾಡುವ ಸಂದರ್ಭದಲ್ಲಿ ಅಶ್ಲೀಲ ಚಿತ್ರ, ವಿಡಿಯೋಗಳನ್ನು ಹರಿಬಿಡುತ್ತಿದ್ದರು. ಈಗ ಪ್ರತಿ ಅಕೌಂಟ್‌ನ ಮಾಹಿತಿಯನ್ನು 15 ಪೈಸೆಗೊಂದರಂತೆ ಮಾರಾಟ ಮಾಡಿದ್ದರೆ, ಕೆಲವಷ್ಟನ್ನು ಉಚಿತವಾಗಿ ದೊರೆಯುವಂತೆ ಮಾಡಲಾಗಿದೆ. 
ಇ-ಮೇಲ್, ಪಾಸ್ವರ್ಡ್, ಪರ್ಸನಲ್ ಮೀಟಿಂಗ್ URLs ಮತ್ತು ಹೋಸ್ಟ್‌ಕೀಸ್‌ಗಳು ಮಾರಾಟವಾಗಿವೆ. ಇದರಲ್ಲಿ 290 ಅಕೌಂಟ್‌ಗಳು ವಿಶ್ವವಿದ್ಯಾಲಯಗಳಿಗೆ ಸಂಬಂಧಪಟ್ಟವಾಗಿವೆ. ವಮೌರ್ಂಟ್ ವಿವಿ, ಫ್ಲೋರಿಡಾ ವಿವಿ, ಯೂನಿವರ್ಸಿಟಿ ಆಫ್ ಕೊಲೊರಾಡೋ ಮತ್ತಿತರ ವಿವಿಗಳ ಡೇಟಾಗಳು ಹಾಗೂ ಕೆಲ ಬ್ಯಾಂಕ್ ನ ಮಾಹಿತಿಗಳೂ ಡಾರ್ಕ್‌ವೆಬ್‌ನಲ್ಲಿ ಮಾರಾಟವಾಗಿವೆ. 

ಪಾಸ್ವರ್ಡ್ ಬದಲಿಸಿ
ಹ್ಯಾಕರ್ಸ್‌ಗಳ ದಾಳಿಯಿಂದ ಬಚಾವಾಗಬೇಕೆಂದರೆ ಮೊದಲು ಜೂಮ್ ಖಾತೆಯ ಪಾಸ್ವರ್ಡ್ ಅನ್ನು ಬದಲಾಯಿಸುವಂತೆ ಸಲಹೆಗಳು ಕೇಳಿಬಂದಿವೆ. ಕೆಲವರು ಒಂದೇ ಪಾಸ್ವರ್ಡ್ ಅನ್ನು ಎಲ್ಲ ಸೈಟ್‌ಗಳಿಗೂ ಬಳಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಮಾಹಿತಿಗಳೂ ಹ್ಯಾಕರ್ಸ್‌ಗಳ ಪಾಲಾಗುತ್ತದೆ. ಇದನ್ನು ತಪ್ಪಿಸಲು ಮೊದಲು ಪಾಸ್‌ವರ್ಡ್‌ಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. 

ಇದನ್ನೂ ಓದಿ: ಸುಳ್ಳು ಸಾಂಕ್ರಾಮಿಕಕ್ಕೆ ವ್ಯಾಟ್ಸ್‌ಆ್ಯಪ್ ಗುನ್ನ, ಒಬ್ಬರಿಗೆ ಒಂದೇ ಫಾರ್ವರ್ಡ್!

ಏನಿದು ಡಾರ್ಕ್ ವೆಬ್?
ಹೆಸರೇ ಹೇಳುವಂತೆ ಇದನ್ನು ಕತ್ತಲೆ ಜಗತ್ತು ಎಂದೇ ಹೇಳಬಹುದು. ಇಲ್ಲಿ ನಡೆಯುವುದೆಲ್ಲ ಕಾನೂನುಬಾಹಿರ ಚಟುವಟಿಕೆಗಳೇ. ಸ್ಮಗ್ಲಿಂಗ್, ಶಸ್ತ್ರಾಸ್ತ್ರಗಳ ಡೀಲಿಂಗ್, ಪೋರ್ನ್ ವಿಡಿಯೋಗಳ ಮಾರಾಟ ಹೀಗೆ ಏನೇನು ಅಕ್ರಮಗಳಿವೆಯೋ ಅದರಲ್ಲಿ ಬಹುತೇಕ ಇದರ ಮೂಲಕವೇ ನಡೆಯುತ್ತದೆ. ಇಲ್ಲಿ ಸುಲಭವಾಗಿ ಐಪಿ ಅಡ್ರೆಸ್‌ಗಳನ್ನು ಪತ್ತೆಹಚ್ಚಲಾಗದು. ಈ ಹಿನ್ನೆಲೆಯಲ್ಲಿ ಹೆಚ್ಚಿನವರು ಡಾರ್ಕ್‌ವೆಬ್ ದಾರಿಯನ್ನು ಕಂಡುಕೊಳ್ಳುತ್ತಾರೆ. ಇದನ್ನು ತಡೆಯಲು ಆಯಾ ದೇಶಗಳ ಸರ್ಕಾರಗಳು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ ಎಂಬುದು ದುರಂತ.  

ಇದನ್ನೂ ಓದಿ: ಕೊರೋನಾ ನಿರಾಶ್ರಿತರಿಗೆ ಊಟ, ವಾಸ್ತವ್ಯದ ಜಾಗ ಹೇಳುತ್ತೆ ಗೂಗಲ್!

ಜೂಮ್ ಬಳಕೆದಾರರಾಗಿದ್ದರೆ ಹೀಗೆ ಮಾಡಿ
- ಅನಾಮಿಕರಾಗಿ ನಿಮ್ಮ ವಿಡಿಯೋ ಕಾನ್ಫರೆನ್ಸ್‌ಗೆ ಎಂಟ್ರಿ ಕೊಟ್ಟು ಹ್ಯಾಕ್ ಮಾಡುವ ಪ್ರಕ್ರಿಯೆಗೆ ಜೂಮ್ ಬಾಂಬಿಂಗ್ ಇಲ್ಲವೇ ಫೋಟೋ ಬಾಂಬಿಂಗ್ ಎಂದು ಹೇಳುತ್ತಾರೆ. ಹೀಗಾಗಿ ಈ ರೀತಿ ಅಪರಿಚಿತ ವ್ಯಕ್ತಿಗಳಿಗೆ ಪ್ರವೇಶವನ್ನು ನಿಷೇಧಿಸಿ.
- ಸಾರ್ವಜನಿಕವಾಗಿ (ಪಬ್ಲಿಕ್) ಮೀಟಿಂಗ್ ಇಲ್ಲವೇ ಆನ್‌ಲೈನ್ ತರಗತಿಯನ್ನು ಮಾಡಬಾರದು. 
- ವಿಡಿಯೋ ಮೀಟಿಂಗ್, ಕ್ಲಾಸ್ ರೂಂಗಳನ್ನು ನಡೆಸುವಾಗ ಸಂಬಂಧಪಟ್ಟ ವ್ಯಕ್ತಿಗಳ ಹೊರತುಪಡಿಸಿ ಬೇರೆ ಸಂಬಂಧಪಡದವರಿಗೆ ಹೋಗದಂತೆ ನಿಗಾ ವಹಿಸುವುದು.
- ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನು ಅಡ್ಮಿನ್ ಮಾತ್ರ ನಿರ್ವಹಿಸಬೇಕು. ಸ್ಕ್ರೀನ್ ಶೇರಿಂಗ್ ಬದಲೀ ವ್ಯವಸ್ಥೆ ಮಾಡಿಕೊಳ್ಳುವುದಿದ್ದರೆ ಆಯೋಜಕರು ಮಾತ್ರ ನಿರ್ಧರಿಸಬೇಕು. 
- ಜೂಮ್ ತನ್ನ ಆ್ಯಪ್‌ನ ವರ್ಷನ್‌ನಲ್ಲಿ ಈಚೆಗಷ್ಟೇ ರಿಮೋಟ್ ಕಂಟ್ರೋಲ್ ಹಾಗೂ ಮೀಟಿಂಗ್ ಅಪ್ಲಿಕೇಶನ್‌ಗಳ ಫೀಚರ್‌ಗಳನ್ನು ಪ್ರಸ್ತುತಿಪಡಿಸಿದೆ. ಇದನ್ನು ಬಳಸಿಕೊಳ್ಳಬೇಕು.
"