ಈಗೇನೋ ಕೊರೋನಾ ಇರುವುದರಿಂದ ನಾನು ವರ್ಕ್ ಫ್ರಂ ಹೋಂ ಮಾಡುತ್ತಿದ್ದೇನೆ. ಇನ್ನೇನು ಸದ್ಯದಲ್ಲೇ ಲಾಕ್‌ಡೌನ್ ಸಡಿಲಗೊಳ್ಳಲಿದೆ. ಆಫೀಸಿಗೆ ಲ್ಯಾಪ್‌ಟಾಪ್ ಬ್ಯಾಗ್ ಹೆಗಲೇರಿಸಿಕೊಂಡು ಹೋಗಬಹುದು ಎಂದು ಪ್ಲಾನ್ ಮಾಡಿಕೊಂಡಿದ್ದರೆ ಅಂಥ ಯೋಚನೆಯನ್ನು ಬಿಟ್ಟುಬಿಡಿ. ನಿಮ್ಮ ಇಂಥ ಯೋಚನೆಗಳಿಗೆ ಬ್ರೇಕ್ ಹಾಕಿ, ಈಗ ಮಾಡುತ್ತಿರುವ ಕೆಲಸದ ಮಾದರಿಯನ್ನೇ ಮುಂದುವರಿಸಿಕೊಂಡು ಹೋಗುವ ಚಿಂತನೆಯಲ್ಲಿ ಬಹುತೇಕ ಕಂಪನಿಗಳಿವೆ ಎಂದು ವರದಿಯೊಂದು ಹೇಳಿದೆ. 

ಹೌದು. ಕೊರೋನಾ ಎಂಬ ಸಾಂಕ್ರಾಮಿಕ ಪಿಡುಗು ಒಂದರ್ಥದಲ್ಲಿ ಇಡೀ ವಿಶ್ವವನ್ನೇ ಸ್ತಬ್ಧಗೊಳಿಸಿದ್ದಲ್ಲದೆ, ಬಹುತೇಕ ಎಲ್ಲ ಚಟುವಟಿಕೆಯನ್ನೂ ನಿಲ್ಲಿಸಿತ್ತು. ಇನ್ನು ಐಟಿ-ಬಿಟಿ ಕ್ಷೇತ್ರಗಳಲ್ಲಿ ವರ್ಕ್ ಫ್ರಂ ಹೋಂ ಮೊರೆಹೋಗಿದ್ದರೂ ಬಹುಪಾಲು ಕಂಪನಿಗಳು ಪೂರ್ವ ಸಿದ್ಧತೆಯನ್ನು ಹೊಂದಿಲ್ಲದ ಕಾರಣ ಆರಂಭದಲ್ಲಿ ಕೆಲವು ತೊಂದರೆಗಳನ್ನು ಅನುಭವಿಸಿದವು. ಆದರೆ, ಈಗ ಈ ಸಿಸ್ಟಂ ಅಳವಡಿಸಿಕೊಂಡು ಬಹುತೇಕ ತಿಂಗಳಾಗುತ್ತಾ ಬಂತು. ಇದರ ಲಾಭದ ದೂರಗಾಮಿ ಚಿಂತನೆಯಲ್ಲಿ ಕಂಪನಿಗಳು ತೊಡಗಿವೆ. ಹೀಗಾಗಿ ಕೆಲಸವನ್ನು ನೋಡುವ, ಮಾಡಿಸಿಕೊಳ್ಳುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುತ್ತಿವೆ. ಹೀಗಾಗಿ ಹೊಸ ಮಗ್ಗುಲಿಗೆ ನೌಕರಿಯ ಕಾರ್ಯವೈಖರಿ ಹೊರುಳುತ್ತದೆ ಎಂಬುದು ತಂತ್ರಜ್ಞಾನ ಕ್ಷೇತ್ರದ ಚಿಂತಕರ ಅಭಿಪ್ರಾಯವಾಗಿದೆ. 

ಇದನ್ನೂ ಓದಿ: ಡಾರ್ಕ್‌ವೆಬ್‌ನಲ್ಲಿ ಸೇಲಾಯ್ತು ಜೂಮ್ ಪ್ರೈವೇಸಿ!

ಶೇ.74ರಷ್ಟು ಕಂಪನಿಗಳ ಒಲವು
ಗಾರ್ಟ್ನರ್ ಸರ್ವೇ ಅಧಿಕಾರಿಗಳ ಪ್ರಕಾರ, ಏಪ್ರಿಲ್ ಮೊದಲಾರ್ಧದಲ್ಲೇ ಸುಮಾರು ಶೇ.74ರಷ್ಟು ಕಂಪನಿಗಳು ರಿಮೋಟ್ ವರ್ಕ್ (ವರ್ಕ್ ಫ್ರಂ ಹೋಂ) ಪದ್ಧತಿಯನ್ನು ಕೊರೋನಾ ಗೋಳು ಮುಗಿದ ಮೇಲೆಯೂ ಅಂದರೆ ಶಾಶ್ವತವಾಗಿ ಅಳವಡಿಸಿಕೊಳ್ಳಲು ಒಲವು ತೋರಿವೆ. 

ಆದರೆ, ಇಲ್ಲಿ ಕೆಲವು ಕಂಪನಿಗಳ ಅಗತ್ಯತೆಯನ್ನು ನೋಡಿಕೊಂಡು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಇನ್ನು ವರ್ಕ್ ಫ್ರಂ ಹೋಂ ಜಾರಿಗೊಳಿಸಲು ಈ ಕಂಪನಿಗಳು ವಿಡಿಐ (ವರ್ಚ್ಯುವಲ್ ಡೆಸ್ಕ್ ಟಾಪ್ ಇನ್ಫ್ರಾಸ್ಟ್ರಕ್ಚರ್), ಡಿಎಎಸ್ (ಡಾಸ್ – ಡೆಸ್ಕ್ ಟಾಪ್ ಆ್ಯಸ್ ಎ ಸರ್ವಿಸ್), ಕನೆಕ್ಟಿವಿಟಿ (ಸಂಪರ್ಕ), ನೆಟ್ ವರ್ಕಿಂಗ್, ಕ್ಲೌಡ್ ಆಧಾರಿತ ಸೇವೆಗಳ ಜೊತೆಗೆ ಸಿದ್ಧ ಪ್ರೈವೇಟ್ ನೆಟ್‌ವರ್ಕ್ ಮತ್ತು ಸೆಕ್ಯುರಿಟಿ ಫೈರ್‌ವಾಲ್‌ಗಳ ಮೇಲೆ ಹೂಡಿಕೆ ಮಾಡಬೇಕಿದೆ. 

ತಂತ್ರಜ್ಞಾನಗಳ ಬಳಕೆ ವ್ಯತ್ಯಾಸ
ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಶನ್ (ಐಡಿಸಿ) ಗ್ಲೋಬಲ್ ಐಟಿ ಬೈಯರ್ ಸೆಂಟಿಮೆಂಟ್ ಸರ್ವೇಯೊಂದನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಕಂಡುಬಂದ ಅಂಶವೆಂದರೆ ವರ್ಕ್ ಫ್ರಂ ಹೋಂ ವ್ಯವಸ್ಥೆಯು ಪ್ರದೇಶಗಳಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಇನ್ನು ಕೆಲವು ಭೌಗೋಳಿಕ ಪ್ರದೇಶಗಳನ್ವಯ ತಂತ್ರಜ್ಞಾನಗಳ ಬಳಕೆಯಲ್ಲಿಯೂ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ. 

ಇದನ್ನೂ ಓದಿ: ಸುಳ್ಳು ಸಾಂಕ್ರಾಮಿಕಕ್ಕೆ ವ್ಯಾಟ್ಸ್‌ಆ್ಯಪ್ ಗುನ್ನ, ಒಬ್ಬರಿಗೆ ಒಂದೇ ಫಾರ್ವರ್ಡ್!

ಈಗ ಆರ್ಥಿಕವಾಗಿ ಮುಂದುವರಿದ ದೇಶಗಳಾದ ಉತ್ತರ ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಕಾರ್ಯಸ್ಥಳಗಳನ್ನು ಒದಗಿಸುವ, ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ, ಡೇಟಾ ಅನಾಲಿಟಿಕ್ಸ್ ಸೇರಿ ಕೆಲವು ಸೌಲಭ್ಯಗಳನ್ನು ಒದಗಿಸುವ ಸಾಮರ್ಥ್ಯ ಅಲ್ಲಿರುವ ಉದ್ಯಮಗಳು ಹೊಂದಿವೆ. ಏಷ್ಯಾ-ಪೆಸಿಫಿಕ್ (ಎಪಿಇಜೆ- ಜಪಾನ್ (ಎಪಿಜೆ) ಪ್ರದೇಶವನ್ನು ಹೊರತುಪಡಿಸಿ ಏಷ್ಯಾ ಪೆಸಿಫಿಕ್) ಉದ್ಯಮಗಳು ತಮ್ಮ ವರ್ಚ್ಯುವಲ್ ಕಾರ್ಯಕ್ಷೇತ್ರಗಳು, ರಿಮೋಟ್ ಲರ್ನಿಂಗ್ /ಟ್ರೈನಿಂಗ್ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿವೆ ಎನ್ನಲಾಗಿದೆ. 

ಭಾರತದಲ್ಲೇನು ಪರಿಸ್ಥಿತಿ?
ಭಾರತದಲ್ಲಿ ಹೀಗೆ ವರ್ಕ್ ಫ್ರಂ ಹೋಂ ಮಾಡುವವರಲ್ಲಿ ಪರಿಪೂರ್ಣ ಕಂಪ್ಯೂಟರ್ ಸೆಟಪ್ ಇರುವುದಿಲ್ಲ. ಇಲ್ಲಿ ಕಂಪನಿಗಳಿಗೆ ಸಾಸ್ (software-as-a-service- ಸಾಫ್ಟ್‌ವೇರ್ ಆ್ಯಸ್ ಎ ಸರ್ವಿಸ್) ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಸಂವಹನ, ಸೆಕ್ಯುರಿಟಿ ಮತ್ತು ಆ್ಯಕ್ಸೆಸ್ ಕಂಟ್ರೋಲ್‌ನ ಸಮರ್ಪಕ ಸೇವೆಯನ್ನು ಗ್ರಾಹಕರು ಬಯಸುವುದರಿಂದ ಆ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕಿದೆ. ಭಾರತದಲ್ಲಿ ಇನ್ನೂ ಇಂಥ ವ್ಯವಸ್ಥೆ ಸಂಪೂರ್ಣವಾಗಿ ಇಲ್ಲದಿರುವುದರಿಂದ ಬಹಳಷ್ಟು ಬೇಗ ತಂತ್ರಜ್ಞಾನಗಳ ಅಭಿವೃದ್ಧಿ ಆಗಬೇಕಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.

ಇದನ್ನೂ ಓದಿ: ಕೈಜೋಡಿಸಿದ ಟೆಕ್‌ ದಿಗ್ಗಜರು; ಕೊರೋನಾ ಟ್ರೇಸ್‌ಗೆ ಆ್ಯಪಲ್, ಗೂಗಲ್ ಗೂಗ್ಲಿ!

ಈಗಾಗಲೇ ಐಬಿಎಮ್ ಕ್ಲೌಡ್, ಹೈ-ಸ್ಪೀಡ್ ಫೈಲ್ ಶೇರಿಂಗ್ ಮತ್ತು ಟೀಂ ಕೊಲಾಬ್ರೇಶನ್ ಸೇವೆಗಳನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ 90 ದಿನ ಉಚಿತವಾಗಿ ನೀಡುತ್ತಿದೆ. ಇನ್ನು ಕಾನ್ಫರೆನ್ಸ್ ಅಪ್ಲಿಕೇಶನ್, ಇ-ಮೇಲ್, ಉದ್ದಿಮೆಗಳ ಸೋಷಿಯಲ್ ನೆಟ್‌ವರ್ಕ್‌ಗಳು ಮತ್ತು ಟೀಂ ಕೊಲ್ಯಾಬೊರೇಟೀವ್ ಅಪ್ಲಿಕೇಶನ್‌ಗಳ ಸಹಯೋಗದ 2019ರ ಒಟ್ಟಾರೆ ಮೌಲ್ಯವನ್ನು ಗಮನಿಸುವುದಾದರೆ 18.5 ಬಿಲಿಯನ್ ಡಾಲರ್ ಆಗಿದೆ. ಆದರೆ, ಇದು 2019-2023ರ ಅವಧಿಗೆ ಇದಕ್ಕಿಂತ ಶೇ.13ರಷ್ಟು ಹೆಚ್ಚಳ ಕಾಣಲಿದೆ ಎಂದು ಐಡಿಸಿ ಅಂದಾಜಿಸಿದೆ. ಇನ್ನು ವರ್ಷದಿಂದ ವರ್ಷದ ಅಭಿವೃದ್ಧಿ ಸೂಚ್ಯಂಕವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಕಾನ್ಫರೆನ್ಸ್ ಮತ್ತು ಟೀಂ ಕೊಲ್ಯಾಬೊರೇಟಿವ್ ಅಪ್ಲಿಕೇಶನ್‌ಗಳು ಸುಮಾರು ಶೇ. 15ಕ್ಕೂ ಹೆಚ್ಚು ಪ್ರಗತಿಯನ್ನು ಕಾಣಲಿದೆ. ಹೀಗಾಗಿ ಬಹುತೇಕ ವರ್ಕ್ ಫ್ರಂ ಹೋಂನತ್ತ ಕಂಪನಿಗಳು ಮುಖ ಮಾಡುವ ಸಾಧ್ಯತೆಯೇ ಹೆಚ್ಚು ಎಂದೇ ವಿಶ್ಲೇಷಿಸಲಾಗುತ್ತಿದೆ.