ಚೀನಾ ಮೂಲದ ರೆಡ್ಮಿ, ಜನವರಿ ಮೊದಲ ವಾರದಲ್ಲಿ ಭಾರತದಲ್ಲಿ ತನ್ನ ಹೊಸ 'ರೆಡ್ಮಿ ನೋಟ್ 15 5ಜಿ' ಮತ್ತು ‘ರೆಡ್ಮಿ ಪ್ಯಾಡ್ 2’ ಬಿಡುಗಡೆ ಮಾಡಲಿದೆ. ಈ ಹೊಸ ಸ್ಮಾರ್ಟ್‌ಫೋನ್ 108 ಮೆಗಾಪಿಕ್ಸೆಲ್ ಕ್ಯಾಮೆರಾ, 5520mAh ಬ್ಯಾಟರಿ ಹೊಂದಿದ್ದರೆ, ಪ್ಯಾಡ್ 2 ಸ್ಮಾರ್ಟ್ ಪೆನ್ ಮತ್ತು 9000mAh ಬ್ಯಾಟರಿ ಇರಲಿದೆ.
ನವದೆಹಲಿ (ಡಿ.19): ಚೀನಾ ಮೂಲದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ ರೆಡ್ಮಿ, ಜನವರಿ ಮೊದಲ ವಾರ ಭಾರತದಲ್ಲಿ ‘108 ಮಾಸ್ಟರ್ ಪಿಕ್ಸೆಲ್’ ಟ್ಯಾಗ್‌ಲೈನ್‌ನೊಂದಿಗೆ ತನ್ನ ಹೊಸ ರೆಡ್ಮಿ ನೋಟ್ 15 5ಜಿ ಆವೃತ್ತಿ ಮತ್ತು ನೋಟ್ ಪ್ಯಾಡ್ 2 ಅನ್ನು ಬಿಡುಗಡೆ ಮಾಡಲಿದೆ.
ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಂಪನಿಯ ಪ್ರತಿನಿಧಿ ಸಿದ್ಧಾರ್ಥ್ ಮದನ್, ಈ ಬಗ್ಗೆ ಮಾಹಿತಿ ನೀಡಿದರು. ರೆಡ್ಮಿ ನೋಟ್ 15 5ಜಿ - 108 ಮಾಸ್ಟರ್ ಪಿಕ್ಸೆಲ್ ಆವೃತ್ತಿಯ ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಮುಂದಿನ ತಿಂಗಳು ಮೊದಲ ವಾರ ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ. ಇದಕ್ಕೆ ಪೂರ್ವಭಾವಿಯಾಗಿ ರೆಡ್ಮಿ, ತನ್ನ ಅಧಿಕೃತ X ಪೇಜ್‌ನಲ್ಲಿ ಈ ಫೋನ್‌ನ ಮೊದಲ ಲುಕ್‌ನ ಟೀಸರ್ ಹಂಚಿಕೊಂಡಿದ್ದು, ಫೋನಿನ ಆಕರ್ಷಕ ವಿನ್ಯಾಸ ಸ್ಮಾರ್ಟ್‌ಫೋನ್ ಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ರೆಡ್ಮಿ ನೋಟ್ 15 5ಜಿ:
ಅತ್ಯಧಿಕ ಪಿಕ್ಸೆಲ್ ಕ್ಯಾಮೆರಾ ಸರಣಿ ಈಗ ಹೊಸ ಟ್ರೆಂಡ್ ಆಗುತ್ತಿದ್ದು, ರೆಡ್ಮಿ ಕೂಡ ನಿಬ್ಬೆರಗಾಗುವ ಎಐ ಫೀಚರ್ ಹೊಂದಿರುವ 108 ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಇದರ ಬೆಲೆ 20,000 ರೂ.ಅಸುಪಾಸಿನಲ್ಲಿ ಇರಲಿದೆ ಎಂದು ಹೇಳಲಾಗಿದೆ.
ಇದರ ಮುಂಬದಿಯಲ್ಲಿ 20 ಎಂಪಿ ಕ್ಯಾಮೆರಾ ಇದ್ದು, 4ಕೆ ವಿಡಿಯೋ ರೆಕಾರ್ಡ್ ಸಪೋರ್ಟ್ ಮಾಡುತ್ತದೆ. ಇದು 8 ಜಿಬಿ ರ್‍ಯಾಮ್ ಹಾಗೂ 258 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ 178 ಗ್ರಾಂ ತೂಕ, 7.35 ಎಂಎಂ ದಪ್ಪ ಹೊಂದಿದೆ. ಇದರಲ್ಲಿ 5520 ಎಂಎಎಚ್ ಬ್ಯಾಟರಿ ಇರಲಿದ್ದು, 45 ವ್ಯಾಟ್‌ನ ಚಾರ್ಜರ್ ಕೂಡ ಲಭ್ಯವಿದೆ. 1080*2392 ರೆಸಲ್ಯೂಶ್‌ನ 6.77 ಕರ್ವ್ಡ್ ಡಿಸ್‌ಪ್ಲೇಯನ್ನು ಫೋನ್ ಹೊಂದಿದೆ. ಐಪಿ 66 ರೇಟಿಂಗ್ ಪಡೆದಿದ್ದು, 5.3 ವರ್ಷನ್ ಬ್ಲೂಟೂತ್ ಇದೆ. ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ಪೋನ್ ಬಿಡುಗಡೆಯಾಗಲಿದ್ದು, 5 ವರ್ಷಗಳ ವಾರಂಟಿಯನ್ನು ಹೊಂದಿರಲಿದೆ. ಉತ್ತಮ ಕ್ಯಾಮೆರಾ ಹೊಂದಿರುವ ಫೋನ್ ಖರೀದಿಸಲು ಬಯಸುವವರಿಗೆ ಇದು ಅತ್ಯುತ್ತಮ ಫೋನ್ ಆಗಿರಲಿದ್ದು, ಬಿಡುಗಡೆಯ ನಂತರ ಅಮೆಜಾನ್‌ನಲ್ಲಿ ಲಭ್ಯವಿರುವುದಾಗಿ ಕಂಪನಿ ತಿಳಿಸಿದೆ.
ರೆಡ್ಮಿ ಪ್ಯಾಡ್ 2:
ರೆಡ್ಮಿ ಪ್ಯಾಡ್ 2 ಸ್ಮಾರ್ಟ್ ಪೆನ್‌ನೊಂದಿಗೆ ಬರಲಿದ್ದು, ಡಾಲ್ಬಿ ವಿಷನ್, ಆ್ಯಂಡ್ರಾಯ್ಡ್ 16 ಅಪ್‌ಡೇಟೆಡ್ ವರ್ಷನ್ ಆಗಿರುತ್ತದೆ. 2.5 ಹೈ ಡೆಫಿನೆಷನ್ ಕ್ವಾಲಿಟಿ ಹೊಂದಿದ್ದು, 9000 ಎಂಎಎಚ್ ಬ್ಯಾಟರಿ ಇರಲಿದೆ. 33 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬ್ಯಾಟರಿ ಹಾಗೂ ಸ್ನ್ಯಾಪ್‌ಡ್ರ್ಯಾಗನ್ 7, ಫೋರ್ಥ್ ಜನರೇಶನ್ ಫ್ರೊಸೆಸರ್ ಹೊಂದಿರುತ್ತದೆ. 2.5ಕೆ ಡಿಸ್‌ಪ್ಲೇ, ಕಣ್ಣಿನ ಸುರಕ್ಷತೆ ದೃಷ್ಟಿಯಿಂದ 3 ಹೈ ಸರ್ಟಿಫಿಕೇಶನ್ ಫೇಸ್ ಅನ್‌ಲಾಕ್‌ನೊಂದಿಗೆ ಬರಲಿದೆ.
16 ಜಿಬಿ ರ್‍ಯಾಮ್ 256 ಜಿಬಿ ಸ್ಟೋರೇಜ್ ಹಾಗೂ 2 ಟಿಬಿ ಎಕ್ಸ್‌ಪೆಡಂಬಲ್ ಸ್ಟೋರೇಜ್ ಹೊಂದಿರಲಿದ್ದು, ಕಡಿಮೆ ಬೆಲೆಯಲ್ಲಿ ಟ್ಯಾಬ್ಲೆಟ್ ಹೊಂದಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿರಲಿದೆ ಎಂದು ಕಂಪನಿ ತಿಳಿಸಿದೆ.


