ಗೂಗಲ್ ಲೆನ್ಸ್ ಹೊಂದಿ, ಇನ್ನು ಆಫ್‌ಲೈನ್‌ನಲ್ಲೂ ಭಾಷಾಂತರ ಮಾಡಿ..!
ಇಂಟರ್ನೆಟ್ ಮೂಲಕ ಮಾತ್ರ ಟ್ರಾನ್ಸ್‌ಲೇಶನ್ (ಭಾಷಾಂತರ) ಮಾಡಬೇಕಿದ್ದ ಕಾಲ ಈಗ ಹೋಯಿತು. ಅಂತರ್ಜಾಲ ಇಲ್ಲದೆಯೂ ನೀವಿನ್ನು ಭಾಷಾಂತರ ಮಾಡಬಹುದು. ಆಫ್‌ಲೈನ್‌ನಲ್ಲಿದ್ದರೂ ಸಹ ಎಲ್ಲಿಯೇ ಇದ್ದರೂ ಕೂಡ ತಕ್ಷಣಕ್ಕೆ ನಿಮಗೆ ಬೇಕಾದ ಭಾಷೆಗೆ ಟ್ರಾನ್ಸ್ ಲೇಶನ್ ಅನ್ನು ಮಾಡುವ ಸುವರ್ಣ ಅವಕಾಶವನ್ನು ಖ್ಯಾತ ಟೆಕ್ ದೈತ್ಯ ಗೂಗಲ್ ಒದಗಿಸಿದೆ. ಅದೂ ತನ್ನ ಗೂಗಲ್ ಲೆನ್ಸ್ ಮೂಲಕವಾಗಿದೆ. ಹಾಗಾದರೆ, ಅದರೆ ಆಯ್ಕೆ ಹೇಗೆ ಎಂಬ ಬಗ್ಗೆ ನೋಡೋಣ ಬನ್ನಿ…
ಗೂಗಲ್ ಸಹಿತ ಕೆಲವು ಆ್ಯಪ್‌ಗಳಲ್ಲಿ ಭಾಷಾಂತರ ಸಾಫ್ಟ್‌ವೇರ್ ಬಂದ ಮೇಲೆ ಕೆಲವು ಕೆಲಸಗಳು ಸುಲಭವಾಗಿವೆ. ಹಾಗಂತ ಅವುಗಳ ಅಕ್ಯುರೆಸಿ ಎಷ್ಟು ಎಂಬ ಪ್ರಶ್ನೆ ಬೇರೆ. ಹೀಗಿದ್ದಾಗಲೂ ಬಹಳಷ್ಟು ಸರಿಯಾಗಿಯೇ ಇರುತ್ತವೆ.
ತಂತ್ರಜ್ಞಾನದ ಕೆಲಸದ ಬಗ್ಗೆ ಎಲ್ಲರಿಗೂ ಗೊತ್ತಿರುವಂಥದ್ದೇ ಆಗಿದೆ. ಆದರೆ, ಇಷ್ಟು ದಿನ ಭಾಷಾಂತರ ಮಾಡಬೇಕೆಂದರೆ ಇಂಟರ್ನೆಟ್‌ನ ಸಹಾಯ ಬೇಕೇ ಬೇಕಿತ್ತು. ಒಂದು ವೇಳೆ ಆಫ್‌ಲೈನ್‌ನಲ್ಲಿದ್ದರೆ ನೆಟ್‌ವರ್ಕ್ ಸಿಕ್ಕದ ಪ್ರದೇಶದಲ್ಲಿದ್ದರೆ ಸಾಫ್ಟ್‌ವೇರ್ ಮೂಲಕ ಭಾಷಾಂತರ ಮಾಡುವುದು ಅಸಾಧ್ಯವಾಗಿತ್ತು. ಈಗ ಆ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಲಾಗಿದೆ.
ಇದನ್ನು ಓದಿ: ಕೈಯಲ್ಲಿ ಫೋನ್ ಹಿಡ್ಕೊಂಡು ರೂಮ್‌ನಲ್ಲಿ ಓಡಾಡಿದ್ರೆ ಸಾಕು ಫೋನ್ ಚಾರ್ಜ್!
ಗೂಗಲ್ ಕೊನೆಗೂ ಆನ್‌ಲೈನ್ ಭಾಷಾಂತರ ಸಮಸ್ಯೆಗೆ ಪರಿಹಾರವನ್ನು ಕೊಟ್ಟಿದೆ. ಅದೂ ಗೂಗಲ್ ಲೆನ್ಸ್ ಮೂಲಕ ಎಂಬುದು ವಿಶೇಷ. ಈ ಗೂಗಲ್ ಲೆನ್ಸ್ ಇಷ್ಟು ಸಮಯ ಮುದ್ರಿತ ಅಥವಾ ಇಮೇಜ್ ರೂಪದಲ್ಲಿರುವ ಅಕ್ಷರಗಳನ್ನು ಬಳಕೆ ಫಾಂಟ್‌ಗಳ ರೂಪಕ್ಕೆ ಪರಿವರ್ತಿಸಿ ಟೈಪ್ ಮಾಡುವ ಸಮಯವನ್ನು ತಪ್ಪಿಸಿ ಅನುಕೂಲವನ್ನು ಮಾಡಿಕೊಡುತ್ತಿತ್ತು. ಆದರೆ, ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಆಫ್‌ಲೈನ್ ಇದ್ದರೂ ಸಹ ಭಾಷಾಂತರ ಮಾಡಿ ಕೊಡುವ ಮೂಲಕ ಕ್ರಾಂತಿಕಾರಕ ಹೆಜ್ಜೆಯನ್ನೇ ಇಟ್ಟಿದೆ ಎಂದು ಹೇಳಬಹುದಾಗಿದೆ.
ಈ ನೂತನ ಫೀಚರ್ ಅನ್ನು ಸಾರ್ವಜನಿಕ ಬಳಕೆಮುಕ್ತ ಮಾಡಬೇಕೆಂಬ ನಿಟ್ಟಿನಲ್ಲಿ ಪ್ರಾಜೆಕ್ಟ್ ಅನ್ನು ಕಳೆದೊಂದು ವರ್ಷದಿಂದಲೇ ಕೈಗೆತ್ತಿಕೊಳ್ಳಲಾಗಿತ್ತು. ಕೊನೆಗೂ ಬಳಕೆದಾರರು ಚಾಲಿತ ಇಂಟರ್ನೆಟ್ ಇಲ್ಲದೆಯೇ ಭಾಷಾಂತರವನ್ನು ಗೂಗಲ್ ಲೆನ್ಸ್ ಮೂಲಕ ಮಾಡಿಕೊಳ್ಳಬಹುದೆಂಬ ಶುಭ ಸುದ್ದಿಯನ್ನು ಗೂಗಲ್ ಕೊಟ್ಟಿದೆ. ಹಾಲಿ ಬಳಕೆದಾರರಿಗೆ ಗೂಗಲ್ ಲೆನ್ಸ್‌ನ ಸರ್ವಿಸ್ ಸೈಡ್ ಅಪ್ಡೇಟ್ ಕೇಳಲಿದ್ದು, ಒಮ್ಮೆ ಅಪ್ಡೇಟ್ ಕೇಳಿತು ಎಂದಾದರೆ ನಿಮಗೆ ಆಫ್‌ಲೈನ್ ಮೂಲಕ ಭಾಷಾಂತರ ಮಾಡುವ ಅವಕಾಶ ಲಭಿಸಿದಂತೆ.
ಇದನ್ನು ಓದಿ: ಫೆ.4ಕ್ಕೆ ರಿಯಲ್‌ಮಿ X7 5G ಬಿಡುಗಡೆ; ಇದು ದೇಶದ ಅತ್ಯಂತ ಅಗ್ಗದ 5ಜಿ ಫೋನ್?
ಅಲ್ಲಿ ಸೆಲೆಕ್ಟ್ ಲಾಂಗ್ವೇಜ್ (ಭಾಷೆಯನ್ನು ಆಯ್ಕೆ ಮಾಡಿ) ಆಯ್ಕೆಗೆ ಹೋಗಬೇಕು. ಆ ಸೆಲೆಕ್ಟ್ ಲಾಂಗ್ವೇಜ್ ಸ್ಕ್ರೀನ್‌ನಲ್ಲಿ ನಿಮಗೆ ಬೇಕಾದ ಭಾಷೆಯನ್ನು ನಮೂದಿಸಿ ಆ ಭಾಷೆಯ ಬಲಭಾಗದಲ್ಲಿರುವ ಡೌನ್ಲೋಡ್ ಸಿಂಬಲ್ (ಗುರುತು) ಹತ್ತಿರ ಹೋದರೆ ಟ್ಯಾಪ್ ಟು ಡೌನ್ಲೋಡ್ ಆಯ್ಕೆ ಕಾಣಸಿಗುತ್ತದೆ. ಅದನ್ನು ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಕು.
ಒಮ್ಮೆ ನೀವು ಆ ಲಾಂಗ್ವೇಜ್ ಪ್ಯಾಕ್ ಅನ್ನು ಡೌನ್ಲೋಡ್ ಮಾಡಿಕೊಂಡ ಮೇಲೆ ಚೆಕ್ ಮಾರ್ಕ್ (ಸರಿ ಚಿಹ್ನೆ) ನಿಮಗೆ ಕಾಣಿಸುತ್ತದೆ. ಅಂದರೆ ಅದು ನಿಮಗೆ ಭಾಷಾಂತರಕ್ಕೆ ಸಿದ್ಧವಿದೆ ಎಂಬುದನ್ನು ಖಾತ್ರಿ ಪಡಿಸಿದಂತೆ. ಹೀಗೆ ಡೌನ್ಲೋಡ್ ಲಾಂಗ್ವೇಜ್ ಪ್ಯಾಕ್ ನಿಂದ ನೀವು ಸುಲಭವಾಗಿ ಆಫ್‌ಲೈನ್‌ನಲ್ಲಿಯೇ ಭಾಷಾಂತರ ಮಾಡಿಕೊಳ್ಳಬಹುದು.
ಎಲ್ಲವೂ ಆಟೋಮ್ಯಾಟಿಕ್..!
ಇದು ಒಂದು ರೀತಿಯಲ್ಲಿ ಗೂಗಲ್ ಟ್ರಾನ್ಸ್‌ಲೇಷನ್‌ನಂತಾದರೂ ಸಹ ಅದಕ್ಕಿಂತ ತುಸು ಭಿನ್ನವಾಗಿದೆ. ಗೂಗಲ್ ಲೆನ್ಸ್‌ನಲ್ಲಿ ಮೊದಲು ಫೋಟೋ ಕ್ಲಿಕ್ಕಿಸಿ ಆ ನಂತರ ಭಾಷೆಯನ್ನು ಸೆಲೆಕ್ಟ್ ಅಥವಾ ಆಯ್ಕೆ ಮಾಡಿಕೊಂಡ ಬಳಿಕ ಆ ಅಕ್ಷರಗಳನ್ನು ಕಾಪಿ ಮಾಡಿಕೊಂಡು ಇನ್ನೊಂದು ಕಡೆ ಪೇಸ್ಟ್ ಮಾಡಿಕೊಳ್ಳಬೇಕಿತ್ತು. ಈಗ ನೂತನ ಭಾಷಾಂತರ ಫೀಚರ್‌ನಲ್ಲಿ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಬೇಕೆಂದೇನೂ ಇಲ್ಲ. ಕೇವಲ ಬೇಕಿರುವ ಸಾಲುಗಳ (Text) ಬಳಿ ಕ್ಯಾಮೆರಾವನ್ನು ಹಿಡಿದರೆ ಸಾಕು ಆಟೋಮ್ಯಾಟಿಕ್ ಆಗಿ ಭಾಷಾಂತರವಾಗಿಬಿಡುತ್ತದೆ.
ಇದನ್ನು ಓದಿ: ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ : ಬರಲಿದೆ 5ಜಿ ತಂತ್ರಜ್ಞಾನ
ಗೂಗಲ್ ಲೆನ್ಸ್ ಶೀಟ್‌ನಲ್ಲಿ ಭಾಷಾಂತರ ನೋಟ್
ಸ್ಕ್ರೀನ್‌ಶಾಟ್ ಇಲ್ಲವೇ ಕ್ಯಾಮೆರಾ ಮೂಲಕ ಬೇಕಿರುವ ಸಾಲುಗಳ ಮೇಲೆ ಹಿಡಿದಾಗ ಆಗುವ ಭಾಷಾಂತರದ ಸಾಲುಗಳು ಕೆಳ ಭಾಗದಲ್ಲಿನ ಶೀಟ್‌ನಲ್ಲಿ ಲಭ್ಯವಾಗುತ್ತವೆ. ಅಲ್ಲದೆ, ಆ ಭಾಷಾಂತರದ ನೋಟ್ ಅನ್ನು ಕೂಡಲೇ ನಕಲು ಮಾಡಿಕೊಳ್ಳಲು Copy All ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ COPY ಮಾಡಿಕೊಳ್ಳಬಹುದಾಗಿದೆ.
ಆ್ಯಂಡ್ರಾಯ್ಡ್ ವರ್ಶನ್‌ನಲ್ಲಿ ಲಭ್ಯ
ಗೂಗಲ್ ಲೆನ್ಸ್ ಆ್ಯಂಡ್ರಾಯ್ಡ್ ವರ್ಶನ್‌ನಲ್ಲಿ ಈ ನೂತನ ಫೀಚರ್ ಲಭ್ಯವಿದ್ದು, ಸರ್ವರ್ ವಿಭಾಗದಿಂದಲೇ ನಿಮಗೆ ಅಪ್ಡೇಡ್ ಅವಕಾಶ ಒದಗಿಬರಬೇಕು. ಆದರೆ, ನೀವು ಇತ್ತೀಚಿನ ಆ್ಯಂಡ್ರಾಯ್ಡ್ ವರ್ಶನ್ ಅನ್ನು ಹೊಂದಿದ್ದರೆ ನೂತನ ಫೀಚರ್ ಲಭ್ಯವಾಗುತ್ತದೆ. ಅಲ್ಲದೆ, ನೀವು ಇನ್ನೂ ಹಳೆಯ ವರ್ಶನ್‌ನಲ್ಲಿಯೇ ಇದ್ದರೆ ಮೊದಲು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ.