ಏನಿದು ಮೈ ಲ್ಯಾಂಗ್‌ ಬುಕ್ಸ್‌?

ಕನ್ನಡದ ಪುಸ್ತಕಗಳನ್ನು ಹೊಸ ರೀತಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಓದುಗರಿಗೆ ತಲುಪಿಸುವ ಪ್ರಯತ್ನ. ಇಲ್ಲಿ ಮೂರು ರೀತಿಯಲ್ಲಿ ಅವರು ಪುಸ್ತಕ ಒದಗಿಸುತ್ತಾರೆ. ಒಂದು ಪ್ರಕಟಿತ ಪುಸ್ತಕ. ಜೋಗಿಯವರ ‘ಅಶ್ವತ್ಥಾಮನ್‌’ ಎಂಬ ಕಾದಂಬರಿ ಅವರ ಮೊದಲ ಪ್ರಕಟಿತ ಪುಸ್ತಕ. ಇನ್ನೊಂದು ಇ-ಬುಕ್‌. ಎಲ್ಲರ ಕೈಯಲ್ಲೂ ಮೊಬೈಲ್‌ ಇರುವ ಈ ಹೊತ್ತಿನಲ್ಲಿ ಪ್ರತಿಯೊಬ್ಬರ ಕೈಗೂ ಕನ್ನಡ ಪುಸ್ತಕ ತಲುಪಿಸಬೇಕು ಎಂಬ ಕಾರಣಕ್ಕೆ ಇ-ಬುಕ್‌ ಒದಗಿಸುತ್ತಿದ್ದಾರೆ. ಮತ್ತೊಂದು ಆಡಿಯೋ ಬುಕ್‌. ಅಂದ್ರೆ ಕೇಳು ಪುಸ್ತಕ. ಕತೆ ಓದಲು ಮನಸ್ಸಿಲ್ಲ ಅಥವಾ ಗೊತ್ತಿಲ್ಲದ ಮಂದಿಗೆ ಕತೆ ಕೇಳುವ ಅವಕಾಶವನ್ನು ಈ ಆಡಿಯೋ ಬುಕ್‌ ಒದಗಿಸುತ್ತದೆ. ನೀವು ಮೈ ಲ್ಯಾಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಈ ಮೂರು ಥರದ ಪುಸ್ತಕಗಳು ಲಭ್ಯ. ಆ್ಯಪ್‌ ಫ್ರೀಯಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಗೂಗಲ್‌ ಪೇ ಮೂಲಕ ಪುಸ್ತಕ ಖರೀದಿಸಬಹುದು.

ಕನ್ನಡದಲ್ಲಿ ಓದುಗರಿದ್ದಾರೆಯೇ!

ಕನ್ನಡ ಪುಸ್ತಕ ಓದುಗರು ಇನ್ನೂ ಇದ್ದಾರೆಯೇ, ಇದ್ದರೆ ಯಾಕೆ ಪುಸ್ತಕ ಖರೀದಿಸುತ್ತಿಲ್ಲ ಎಂಬ ಆತಂಕ ಹಲವರಿಗಿದೆ. ಆ ಆತಂಕವನ್ನೇ ಎದುರಾಗಿಟ್ಟುಕೊಂಡು ಮೈ ಲ್ಯಾಂಗ್‌ ಬುಕ್ಸ್‌ ಸಂಸ್ಥೆಯ ಸಿಇಓ ಪವಮಾನ್‌ ಒಂದು ಸಮೀಕ್ಷೆ ಮಾಡಿದ್ದರು. ಈ ಕುರಿತು ಅವರು ಒಂದು ಕುತೂಹಕರ ಮಾಹಿತಿ ಹಂಚಿಕೊಳ್ಳುತ್ತಾರೆ.

ಗ್ರಾಮಭಾರತದ ಮಿತ್ರ, ಈ ಸ್ಮಾರ್ಟ್‌ಫೋನ್ ಬೆಲೆ ಆರೂವರೆ ಸಾವಿರ ಮಾತ್ರ!

- ಸುಮಾರು ಆರು ಕೋಟಿ ಕನ್ನಡಿಗರು ಇದ್ದಾರೆ ಎಂದರೆ ಅದರಲ್ಲಿ ಕನ್ನಡ ಮಾತನಾಡದವರನ್ನು ಬಿಟ್ಟರೆ ಅಂದಾಜು 4.8 ಕೋಟಿ ಮಂದಿ ಸಿಗುತ್ತಾರೆ. ಅದರಲ್ಲಿ ಓದಬಲ್ಲವರು, ಸಾಕ್ಷರರು ಹೆಚ್ಚೂ ಕಡಿಮೆ 3.5 ಕೋಟಿ ಇರಬಹುದು. ಅದರಲ್ಲಿ ಓದುವ ವಯೋಮಿತಿ ಇರುವವರು ಆ ಸಂಖ್ಯೆಯ ಶೇ.60 ರಿಂದ ಶೇ.70 ಮಂದಿ ಇದ್ದಾರೆ. ಈ ಲೆಕ್ಕಾಚಾರ ಇಟ್ಟುಕೊಂಡು ನೋಡಿದರೆ ಎರಡೂವರೆ ಕೋಟಿ ಮಂದಿ ಓದುಗರಿಗೆ ಮೋಸವಿಲ್ಲ. ಇಷ್ಟರಲ್ಲಿ ಇಲ್ಲಿಯವರೆಗೆ ಎಷ್ಟುಮಂದಿ ತಲುಪಿದ್ದೇವೆ ಎಂದು ನೋಡಿದರೆ ತುಂಬಾ ಕಡಿಮೆ. ಒಂದು ಪುಸ್ತಕ ಸಾಮಾನ್ಯವಾಗಿ ಸಾವಿರ ಸಂಖ್ಯೆಯಲ್ಲಿ ಮಾತ್ರ ಮಾರಾಟವಾಗಿರುತ್ತದೆ. ಇದಕ್ಕೆ ಸಮಸ್ಯೆ ಏನು ಅಂತ ನೋಡಿದರೆ ವಿತರಣೆ ವ್ಯವಸ್ಥೆಯಲ್ಲಿ ದೋಷವಿದೆ ಅಂತ ಗೊತ್ತಾಯಿತು.

- ಪುಸ್ತಕ ಓದುಗರನ್ನು ತಲುಪಬೇಕಾದರೆ ಎರಡು ಮಾರ್ಗಗಳಿವೆ. ಒಂದು ಪ್ರಚಾರ, ಮಾಹಿತಿ ಕೊಡುವುದು. ಎರಡು ಪುಸ್ತಕ ಸುಲಭವಾಗಿ ಲಭ್ಯವಾಗುವುದು. ಅದು ಸಾಧ್ಯವಾಗಬೇಕಾದರೆ ಒಂದೋ ದೊಡ್ಡ ಮಟ್ಟದ ದುಡ್ಡು ಸುರಿದು ಪ್ರತೀ ಹಳ್ಳಿಹಳ್ಳಿಯಲ್ಲೂ ಅಂಗಡಿ ತೆರೆಯಬೇಕು. ನಾವು ಸ್ಟಾರ್ಟಪ್‌ ನಂಬಿದವರು. ಕ್ರಿಯಾಶೀಲತೆಯಲ್ಲಿ ನಂಬಿಕೆ ಇಟ್ಟವರು. ಹೊಸ ಕಾಲದಲ್ಲಿ ಹೊಸ ರೀತಿಯಲ್ಲಿ ಹೇಗೆ ಜನರನ್ನು ತಲುಪಬಹುದು ಎಂದು ಯೋಚಿಸಿದಾಗ ಹೊಳೆದಿದ್ದು ಎಲೆಕ್ಟ್ರಾನಿಕ್‌ ಮಾಧ್ಯಮ.

- ನನಗೆ ಇ-ಬುಕ್ಸ್‌ ಇಷ್ಟ. ನಾನು ಪ್ರಯಾಣಿಸುತ್ತಿರುವಾಗ ನನ್ನ ಲೈಬ್ರರಿ ನನ್ನ ಡಿವೈಸ್‌ನಲ್ಲೇ ಇರುತ್ತದೆ. ಹಾಗಾಗಿಯೇ ಮೈ ಲ್ಯಾಂಗ್‌ ಆ್ಯಪ್‌ ಮಾಡಿ, ಆ ಮೂಲಕ ಪುಸ್ತಕ ತಲುಪಿಸುವ ಯೋಚನೆ ಮಾಡಿದೆವು. ನಮ್ಮ ಜನ ಟೆಕ್ನಾಲಜಿಗೆ ಬಹಳ ಬೇಗ ಅಡಾಪ್ಟ್‌ ಆಗುತ್ತಾರೆ. ಕೆಲವು ದೇಶಗಳಲ್ಲಿ ಆರಂಭದಲ್ಲಿ ಕಾಗದ ಇತ್ತು. ಆಮೇಲೆ ಇ-ಮೇಲ್‌ ಬಂತು. ಈಗ ವಾಟ್ಸಪ್‌. ಆದರೆ ನಮ್ಮಲ್ಲಿ ಕಾಗದದಿಂದ ನೇರವಾಗಿ ಇ-ಮೇಲ್‌ ಅಂದ್ರೆ ಏನು ಅಂತ ಗೊತ್ತಿಲ್ಲದೆಯೇ ವಾಟ್ಸಪ್‌ಗೆ ಬಂದವರಿದ್ದಾರೆ. ಮೊಬೈಲ್‌ನಲ್ಲೇ ಪುಸ್ತಕ ಸಿಗುತ್ತದೆ ಎಂದಾದರೆ ಅವರೂ ನಮ್ಮ ಆ್ಯಪ್‌ಗೆ ಬಂದು ಪುಸ್ತಕ ಖರೀದಿ ಮಾಡಲಿದ್ದಾರೆ.

ಮೈ ಲ್ಯಾಂಗ್‌ ಆ್ಯಪ್‌ ಹೀಗಿದೆ!

ಇಲ್ಲಿ ನಿಮಗೆ ಬೇಕಾದ ಪುಸ್ತಕಗಳನ್ನು ಡೌನ್‌ಲೋಡ್‌ ಮಾಡಿದರೆ ಆ ಪುಸ್ತಕಗಳು ನನ್ನ ಪುಸ್ತಕಗಳ ಸಂಗ್ರಹ ಎಂಬು ಪುಟಕ್ಕೆ ಬಂದು ಬೀಳುತ್ತದೆ. ಯಾವುದಾದರೂ ಪುಸ್ತಕದ ಮೇಲೆ ಒತ್ತಿ ಹಿಡಿದು ಸ್ವೈಪ್‌ ಮಾಡಿದರೆ ಪುಟ ತಿರುಗಿಸಬಹುದು. ರಾತ್ರಿ ಹೊತ್ತು ರಾತ್ರಿ ಅಂತ ಸೆಲೆಕ್ಟ್ ಮಾಡಿದರೆ ಕಪ್ಪು ಹಿನ್ನೆಲೆಯಲ್ಲಿ ಬಿಳಿ ಅಕ್ಷರಗಳು ಕಾಣಿಸಿ ಸುಲಭವಾಗಿ ಓದಬಹುದು. ಎಷ್ಟುಬೇಕೋ ಅಷ್ಟುಫಾಂಟ್‌ ಸೈಜನ್ನು ಆಯ್ಕೆ ಮಾಡಿಕೊಂಡು ಆರಾಮಾಗಿ ಓದಬಹುದು.

'ಅದರ' ಚಟ ಇದ್ದವರಿಗೆ ಶಾಕ್; ಟಿಕ್‌ಟಾಕ್‌ನಲ್ಲಿ ಇನ್ಮುಂದೆ ಪೋಲಿ ವರ್ತನೆಗೆ ಕಡಿವಾಣ

ಆಡಿಯೋ ಬುಕ್‌ ಕೇಳುವಾಗ ಒಂದು ಡೈಲಾಗ್‌ ತಪ್ಪಿದರೆ ಸುಲಭವಾಗಿ 10 ಸೆಕೆಂಡ್‌ ಹಿಂದೆ-ಮುಂದೆ ಹೋಗಬಹುದು. ಇಷ್ಟವಾದ ಡೈಲಾಗ್‌ಗೆ ಬುಕ್‌ಮಾರ್ಕ್ ಹಾಕಿದರೆ ಆ ಸಂಭಾಷಣೆ ಯಾವ ಸಮಯದಲ್ಲಿ ಪ್ರಸಾರವಾಗುತ್ತದೆ ಎಂದು ಸೇವ್‌ ಆಗಿರುತ್ತದೆ. ಇವೆಲ್ಲಾ ಫೀಚರ್‌ಗಳಿಂದಾಗಿಯೇ ಈ ಆ್ಯಪ್‌ ಮಜಾ ಅನ್ನಿಸುತ್ತದೆ. ಅಲ್ಲದೇ ಈ ಆ್ಯಪ್‌ನಲ್ಲಿ ಪ್ರತೀ ಮಾಹಿತಿ ಕೂಡ ಕನ್ನಡದಲ್ಲೇ ಇದೆ. ಇದೊಂದು ಅಪ್ಪಟ ಕನ್ನಡದ ಆ್ಯಪ್‌.

ಎಷ್ಟುಜನ ಓದಬಹುದು!

ಯಾರು ತಗೊಂಡಿರುತ್ತಾರೋ ಅವರಷ್ಟೇ ಓದಬಹುದು. ಒಂದು ಮನೆಯಲ್ಲಿ ಇಬ್ಬರು ಓದುವ ಸಾಧ್ಯತೆ ಇರುವುದರಿಂದ ಆ್ಯಪ್‌ಗೆ ಎರಡು ಲಾಗಿನ್‌ ಕೊಡುವ ಥರ ಆಪ್ಷನ್‌ ಕೊಡುವ ಆಲೋಚನೆಯಲ್ಲಿದ್ದಾರೆ. ಆದರೆ ಈ ಪುಸ್ತಕಗಳನ್ನು ಕಾಪಿ ಮಾಡಲು, ಪೈರಸಿ ಮಾಡಲು ಸಾಧ್ಯವಿಲ್ಲ. ಡಿಆರ್‌ಎಂ ಅಂದ್ರೆ ಡಿಜಿಟಲ್‌ ರೈಟ್ಸ್‌ ಮ್ಯಾನೇಜ್‌ಮೆಂಟ್‌ ಎಂಬ ತಂತ್ರಜ್ಞಾನ ಬಳಸುತ್ತಿದ್ದೇವೆ. ಇದರಿಂದ ಕಾಪಿ ಮಾಡಲು ಅಸಾಧ್ಯ ಎಂಬಂತೆ ಇದೆ.

ಗಿಫ್ಟ್‌ ಕೊಡಲು ಸಾಧ್ಯವೇ?

ಸಾಧ್ಯವಿದೆ. ಖರೀದಿ ಮಾಡುವಾಗ ಒಂದು ಕೂಪನ್‌ ಕೋಡ್‌ ಸಿಗುತ್ತದೆ. ಆ ಕೋಡ್‌ ಅನ್ನು ಯಾರಿಗೆ ಗಿಫ್ಟ್‌ ಮಾಡಬೇಕೋ ಅವರಿಗೆ ಮಾಡಿದರೆ ಅವರು ಆ್ಯಪ್‌ ಡೌನ್‌ಲೋಡ್‌ ಮಾಡಿ ಪುಸ್ತಕ ಓದಬಹುದು.

ಯಾರು ಬೇಕಾದರೂ ವಿತರಕರಾಗಬಹುದು!

ವರ್ಚುವಲ್‌ ಬುಕ್‌ ಸ್ಟೋರ್‌ ಎಂಬ ಆಯ್ಕೆ ಇದೆ. ಒಬ್ಯ ವ್ಯಕ್ತಿ ಹತ್ತೋ ಇಪ್ಪತ್ತೋ ರಿಯಾಯಿತಿ ದರದಲ್ಲಿ ಪುಸ್ತಕ ಖರೀದಿಸಬಹುದು. ಅವರ ಗೆಳೆಯರ ಬಳಗಕ್ಕೆ ಕೂಪನ್‌ ಕೋಡ್‌ ಮೂಲಕ ಡಿಜಿಟಲ್‌ ಕಾಪಿ ಮಾರಬಹುದು. ಮೈ ಲ್ಯಾಂಗ್‌ ವೆಬ್‌ಸೈಟ್‌ನಲ್ಲೇ ವ್ಯವಸ್ಥೆ ಇದೆ.

ಇಂದು ಮೈ ಲ್ಯಾಂಗ್‌ ಆ್ಯಪ್‌, ಅಶ್ವತ್ಥಾಮನ್‌ ಪುಸ್ತಕ ಬಿಡುಗಡೆ

ಮಾ.1ರಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವಲ್ಡ್‌ರ್‍ ಕಲ್ಚರ್‌ನಲ್ಲಿ ಮೈ ಲ್ಯಾಂಗ್‌ ಆ್ಯಪ್‌ ಮತ್ತು ಜೋಗಿಯವರ ‘ಅಶ್ವತ್ಥಾಮನ್‌’ ಕಾದಂಬರಿ ಬಿಡುಗಡೆ ಮಾಡಿದ್ದಾರೆ..