ಫೇಸ್‌ಬುಕ್‌ನಲ್ಲಿನ್ನು ಫೋಟೋ ಹೈಡ್ ಮಾಡೋ ಆಪ್ಷನ್, ಮಹಿಳೆಯರಿಗಿದು ವರ!
ಆರ್ಕುಟ್ ನಂತರ ಹೆಚ್ಚು ಪ್ರಸಿದ್ಧಿಗೆ ಬಂದ ಅದೇ ಮಾದರಿಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೇಗದಲ್ಲಿ ಜನಪ್ರಿಯವಾಗಿದ್ದು ಫೇಸ್‌ಬುಕ್. ಆದರೆ, ಇಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್ ನಮಗೆ ಸೇಫ್ ಅಲ್ಲ. ಹಾಕಿದ ಫೋಟೋವನ್ನು ಮಾರ್ಫ್ ಮಾಡಿ ಇನ್ನೇನೋ ಮಾಡಿಬಿಡುತ್ತಾರೆ. ನಮಗೇಕೆ ಆ ಉಸಾಬರಿ ಎಂದು ಹಲವು ಹೆಣ್ಣುಮಕ್ಕಳು ಅಂಜುವುದೂ ಉಂಟು. ಆದರೀಗ ಇದಕ್ಕೊಂದು ಪರಿಹಾರ ಸಿಕ್ಕಿದೆ. ಅದೇನೆಂದು ನೋಡೋಣ ಬನ್ನಿ…
ಫೇಸ್‌ಬುಕ್ ಮಹಿಳೆಯರಿಗೆ ಸೇಫ್ ಅಲ್ಲ ಎಂದು ವಾದಿಸುವುದುಂಟು. ಹಾಗಂತ ಮಹಿಳೆಯರೇನು ಖಾತೆ ತೆರೆಯುವುದರಲ್ಲೇನೂ ಹಿಂದೆ ಬಿದ್ದಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ನಮಗೇನು ಆದೀತು ಎಂಬ ಮಾರ್ಗದಲ್ಲಿ ಬಹುತೇಕ ಮಹಿಳೆಯರು ನಡೆದರೆ, ಉಳಿದ ಕೇಲವೇ ಕೆಲವರು ಮಾತ್ರ ಸೋಷಿಯಲ್ ಮೀಡಿಯಾ ಎಂದರೆ ತುಂಬಾ ಭಯಪಡುತ್ತಾರೆ. ಅದರಲ್ಲೂ ಎಫ್‌ಬಿ ಬಳಸಲು ಹಿಂದೇಟು ಹಾಕುತ್ತಾರೆ. ಎಲ್ಲಿ ತಮ್ಮ ಫೋಟೋಗಳನ್ನು ಡೌನ್‌ಲೋಡ್ ಮಾಡಿ ಏನು ಮಾಡಿಬಿಡುತ್ತಾರೋ ಎನ್ನುವುದು ಅವರ ಆತಂಕಕ್ಕೆ ಕಾರಣ. ಆದರೆ, ಈಗ ಅದಕ್ಕೂ ಫೇಸ್‌ಬುಕ್ ದಾರಿಹುಡುಕಿದೆ.
ಹೌದು. ನಮ್ಮ ಎಚ್ಚರಿಕೆ ನಮಗಿದ್ದರೆ ಸಾಕು, ಸ್ನೇಹಿತರ ಆಯ್ಕೆಯಲ್ಲಿ ಗಮನಹರಿಸಬೇಕು ಎಂದು ಹೇಳುತ್ತಲಿದ್ದರೂ, ಫೇಸ್‌ಬುಕ್‌ಗಳಿಂದ ಫೋಟೋಗಳನ್ನು ಕದ್ದು, ಮಾರ್ಪಡಿಸುವ, ಇಲ್ಲವೇ ಆ ಫೋಟೋಗಳನ್ನು ಜೂಮ್ ಮಾಡಿ ನೋಡುವ, ಡೌನ್‌ಲೋಡ್ ಮಾಡಿಕೊಳ್ಳುವ ಪ್ರವೃತ್ತಿ ಹಲವರಿಗೆ ಇರುತ್ತದೆ. ಇದಕ್ಕೆ ಈಗಾಗಲೇ ಹಲವಾರು ಆಯ್ಕೆಗಳನ್ನು ಕೊಟ್ಟಿರುವ ಫೇಸ್‌ಬುಕ್, ಕೇವಲ ತಮಗೆ ಇಲ್ಲವೇ ಸ್ನೇಹಿತರಿಗೆ ಅಥವಾ ಸ್ನೇಹಿತರ ಸ್ನೇಹಿತರಿಗೆ, ಎಲ್ಲರಿಗೂ ಎಂಬ ಆಯ್ಕೆಯನ್ನು ಬಳಕೆದಾರರಿಗೇ ಬಿಟ್ಟಿರುತ್ತದೆ.
ಇದನ್ನು ಓದಿ: ವಾಟ್ಸ್ಆ್ಯಪ್ ವೆಬ್, ಗೂಗಲ್ ಆ್ಯಪ್‌ನಲ್ಲೀಗ ಡಾರ್ಕ್ ಮೋಡ್ ಆಪ್ಷನ್
ಆದರೆ, ಹೊಸ ಫೀಚರ್ ಏನಪ್ಪಾ ಅಂದರೆ, ಹಾಗೆ ಡೌನ್‌ಲೋಡ್ ಮಾಡಿಕೊಳ್ಳುವುದಿರಲಿ, ನಿಮ್ಮ ಫೋಟೋವನ್ನು ಸ್ನೇಹಿತರಲ್ಲದವರು ಜೂಮ್ ಹಾಕಿ ನೋಡುವಂತೆಯೂ ಇಲ್ಲ. ಅಷ್ಟರಮಟ್ಟಿಗೆ ನಿಮ್ಮ ಫೋಟೋವನ್ನು ಯಾರು ನೋಡಬೇಕು, ಎಷ್ಟು ನೋಡಬೇಕು ಎಂದು ನೀವೇ ನಿರ್ಧರಿಸಬಹುದು. ಅಂದರೆ, ನೋಡುವವರಿಗೆ ನೀವು ಎಂದು ತಿಳಿದರೆ ಸಾಕು, ನಿಮ್ಮ ಫೋಟೋವನ್ನು ಜೂಮ್ ಮಾಡುವುದಾಗಲೀ, ಇಲ್ಲವೇ ಡೌನ್‌ಲೋಡ್ ಮಾಡಿಕೊಳ್ಳುವುದಾಗಲಿ ಮಾಡಲು ಬರುವುದಿಲ್ಲ. ಹೀಗಾಗಿ ಇದನ್ನು ಮಹಿಳೆಯರಿಗಾಗಿಯೇ ಸಿದ್ಧಪಡಿಸಲಾಗಿದ್ದು, ಪ್ರೈವೆಸಿ ಸೆಟ್ಟಿಂಗ್ಸ್ ಜೊತೆ ಇನ್ನೂ ಹಲವು ಫೀಚರ್‌ಗಳನ್ನು ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಪಡೆಯಬಹುದಾಗಿದೆ.
ಪ್ರೊಫೈಲ್ ಲಾಕ್ ಮಾಡೋದು ಹೀಗೆ...
ಪ್ರೊಫೈಲ್ ಲಾಕ್ ಫೀಚರ್ ಅನ್ನು ಎನೇಬಲ್ ಮಾಡಿಕೊಳ್ಳಬೇಕೆಂದರೆ ಮೊದಲು ನೀವು ನಿಮ್ಮ ಪ್ರೊಫೈಲ್ ಪುಟವನ್ನು ಓಪನ್ ಮಾಡಿ, ನಿಮ್ಮ ಹೆಸರಿನ ಕೆಳಗೆ ಕಾಣುವ More ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ Lock Profile ಎಂಬ ಆಯ್ಕೆ ಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ಪ್ರೊಫೈಲ್ ಲಾಕ್ ಆಗಿ ನಿಮ್ಮ ಫೋಟೋ ಅತಿ ಚಿಕ್ಕದಾಗಿ (ಗುರುತಿಸುವಷ್ಟು) ಸ್ನೇಹಿತರಲ್ಲದವರಿಗೆ ಕಾಣುತ್ತದೆ. ಹೀಗಾಗಿ ಅಂಥವರು ಜೂಮ್ ಮಾಡುವುದಾಗಲಿ, ಫೋಟೋವನ್ನು ಶೇರ್ ಮಾಡುವುದಾಗಲಿ ಇಲ್ಲವೇ ಡೌನ್ ಲೋಡ್ ಮಾಡಿಕೊಳ್ಳುವುದಾಗಲಿ ಮಾಡಲು ಬರುವುದಿಲ್ಲ.
ಇದನ್ನು ಓದಿ: ವಾಟ್ಸ್ಆ್ಯಪ್, FB, ಇನ್ಸ್ಟಾಗ್ರಾಮ್‌ನಲ್ಲಿ ಹೊಸ ಫೀಚರ್!
ಅಲ್ಲದೆ, ಟೈಮ್‌ಲೈನ್‌ನಲ್ಲಿರುವ ಫೋಟೋ ಇಲ್ಲವೇ ಪೋಸ್ಟ್ ಅವರಿಗೆ ಕಾಣುವುದೇ ಇಲ್ಲ. ಮೂರು ವರ್ಷದ ಕೆಳಗೆ ಪ್ರೊಫೈಲ್ ಗಾರ್ಡ್ ಎಂಬ ಫೀಚರ್ ಅನ್ನು ಫೇಸ್‌ಬುಕ್ ಪರಿಚಯಿಸಿತ್ತು. ಈ ಫೀಚರ್ ಅನ್ನು ಎನೇಬಲ್ ಮಾಡಿಕೊಂಡಿದ್ದರೆ ಸ್ನೇಹಿತರಲ್ಲದವರಿಗೆ ಪೂರ್ಣಪ್ರಮಾಣದ ಫೋಟೋ ಕಾಣುತ್ತಿತ್ತೇ ವಿನಃ ಅದನ್ನು ಜೂಮ್ ಇಲ್ಲವೇ ಎನ್ಲಾರ್ಜ್ ಮಾಡುವುದಾಗಲಿ ಮಾಡಲು ಬರುತ್ತಿರಲಿಲ್ಲ.
ಭಾರತೀಯರಗೋಸ್ಕರ ಈ ಫೀಚರ್
ಈಗ ನೂತನವಾಗಿ ಪರಿಚಯಿಸಲಾಗಿರುವ ಲಾಕ್ ಪ್ರೊಫೈಲ್ ಫೀಚರ್ ಅನ್ನು ಭಾರತೀಯರಿಗೋಸ್ಕರವೇ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರ ಹಿತದೃಷ್ಟಿಯಿಂದ ಅವರ ಖಾಸಗೀತನವನ್ನು ಕಾಪಾಡಲು ಈ ಕ್ರಮ ಕೈಗೊಂಡಿದ್ದಾಗಿ ಫೇಸ್‌ಬುಕ್ ಹೇಳಿಕೊಂಡಿದೆ. ಹೀಗಾಗಿ ಒಂದೇ ಒಂದು ಇಂತ ಸುಲಭ ವಿಧಾನದಿಂದ ಮಹಿಳೆಯರು ಸುರಕ್ಷತಾ ವಲಯಕ್ಕೆ ಬರಬಹುದು ಎಂದು ಅಭಿಪ್ರಾಯಪಟ್ಟಿದೆ. ಫೇಸ್‌ಬುಕ್ ಅನ್ನು ಮಹಿಳೆಯರು ಅಂಜಿಕೆಯಿಲ್ಲದೆ ಬಳಸಬಹುದಾಗಿದ್ದು, ಇಂತಹ ಫೀಚರ್ ಗಳನ್ನು ಪರಿಚಯಿಸಿದ್ದೇವೆಂಬ ಜಾಗೃತಿಯನ್ನು ಮೂಡಿಸಲು ಫೇಸ್‌ಬುಕ್ ಹೊರಟಿದೆ.
ಇದನ್ನು ಓದಿ: ಕೊರೋನಾ ಫೇಕ್‌ನ್ಯೂಸ್ ಗೆ ವಾಟ್ಸ್ಆ್ಯಪ್ ಚಾಟ್‌ಬಾಟ್ ಬ್ರೇಕ್!